ಸಾಧನೆಯ ಹಾದಿಯಲ್ಲಿ ಅಥ್ಲೆಟಿಕ್ ಪಟು ಅಮರ

7
ಮಗನ ಕ್ರೀಡಾ ಸಾಧನೆಗೆ ಪ್ರೇರಕ ಶಕ್ತಿಯಾಗಿರುವ ಅಪ್ಪ

ಸಾಧನೆಯ ಹಾದಿಯಲ್ಲಿ ಅಥ್ಲೆಟಿಕ್ ಪಟು ಅಮರ

Published:
Updated:
Prajavani

ದೇವರಹಿಪ್ಪರಗಿ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಕೃಷಿ ಕುಟುಂಬದ ಅಮರ ತುಂಬಗಿ, ವಿದ್ಯಾರ್ಥಿ ದಿಸೆಯಲ್ಲೇ ತನ್ನ ಕ್ರೀಡಾ ಪ್ರತಿಭೆಯ ಮೂಲಕ, ರಾಜ್ಯ ಮಟ್ಟದ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಭರವಸೆ ಮೂಡಿಸಿದ್ದಾನೆ.

ಪಟ್ಟಣದ ಪ್ರಗತಿಪರ ರೈತ ಮಲ್ಲಣ್ಣ -ಸವಿತಾ ತುಂಬಗಿ ದಂಪತಿ ಮಗನಾದ ಅಮರ, ತನ್ನ ಕ್ರೀಡಾ ಚಟುವಟಿಕೆಗಳ ಮೂಲಕ ತಾನು ಕಲಿಯುತ್ತಿರುವ ಕ್ರೀಡಾ ಶಾಲೆಗೂ ಕೀರ್ತಿ ತಂದಿದ್ದಾನೆ.

ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿರುವ ಈತ, 2018-19ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆಯ 14-17 ವರ್ಷ ವಯೋಮಿತಿ ಗುಂಪಿನ 100 ಮೀ. ಓಟ ಹಾಗೂ ಉದ್ದ ಜಿಗಿತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ.

2018-19 ನೇ ಸಾಲಿನ ರಾಮದುರ್ಗ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟದಲ್ಲಿ 200 ಮೀ. ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.

‘ನನ್ನ ಕ್ರೀಡಾ ಸಾಧನೆ ಗುರುತಿಸಿದ ಶಾಲೆಯ ದೈಹಿಕ ಶಿಕ್ಷಣಾಧಿಕಾರಿಗಳಾದ ಗೋಪಾಲ್ ಹಾಗೂ ಆರ್.ಕೆ.ಪಡತಾರೆ 2017-18ನೇ ಸಾಲಿನಲ್ಲಿ ವಿಶಾಖಪಟ್ಟಣಂನಲ್ಲಿ ಹಾಗೂ 2018-19ನೇ ಸಾಲಿನಲ್ಲಿ ತಿರುಪತಿಯಲ್ಲಿ ಜರುಗಿದ ರಾಷ್ಟ್ರಮಟ್ಟದ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದರು.’

‘ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಅಂತರ್ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಿ, ಕೊಂಚದರಲ್ಲೇ ತೃತೀಯ ಸ್ಥಾನದಿಂದ ವಂಚಿತನಾದೆ. ಈ ಸಮಯದಲ್ಲಿ ನಿರುತ್ಸಾಹನಾಗಿ ಕ್ರೀಡೆಯ ಕುರಿತು ಅನ್ಯ ಮನಸ್ಕನಾಗಿದ್ದ ನನಗೆ ದೈಹಿಕ ಶಿಕ್ಷಣಾಧಿಕಾರಿ ಗೋಪಾಲ, ಪಡತಾರೆ ಸರ್ ಹಾಗೂ ನನ್ನ ತಂದೆ ಪುನಃ ವಿಶ್ವಾಸ ತುಂಬಿ ಹೆಚ್ಚಿನ ತರಬೇತಿ ಪಡೆಯಲು ವ್ಯವಸ್ಥೆ ಮಾಡಿದರು.

ಈ ವರ್ಷ ನಾನು ಖಂಡಿತವಾಗಿಯೂ 100 ಮೀ. ಓಟ ಹಾಗೂ ಉದ್ದ ಜಿಗಿತದಲ್ಲಿ ಮೊದಲೆರಡು ಸ್ಥಾನ ಪಡೆಯುವೆ ಎಂಬ ವಿಶ್ವಾಸ ನನ್ನದಾಗಿದೆ’ ಎನ್ನುತ್ತಾನೆ ಅಮರ ತುಂಬಗಿ.

‘ನಾನು ಮೂಲತಃ ಕೃಷಿಕ. ನನ್ನ ಮಗನಾದರೂ ಶಿಕ್ಷಣವಂತನಾಗಿ ಅಧಿಕಾರಿಯಾಗಲಿ ಎಂಬ ಆಸೆಯಿಂದ ಇಲ್ಲಿನ ಶಾಲೆಗೆ ಸೇರಿಸಿದೆ. ಆದರೆ ಮಗ ಆಟೋಟಗಳಲ್ಲಿ ಮುಂದಿರುವ ವಿಷಯ ತಿಳಿಯಿತು. ಅವನ ಪ್ರತಿಭೆಗೆ ಅಡ್ಡಿಯಾಗದೆ ಅವನನ್ನು ಒಳ್ಳೆಯ ಕ್ರೀಡಾಪಟುವನ್ನಾಗಿ ಮಾಡಬೇಕೆಂದು ನಿರ್ಧರಿಸಿದ್ದೇನೆ.

ಚಂದರಗಿ ಕ್ರೀಡಾ ಶಾಲೆಯಲ್ಲಿ 10ನೇ ತರಗತಿಯವರೆಗೆ ಮಾತ್ರ ಅವಕಾಶವಿದ್ದು, ಅಮರನ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಲು ನಿರ್ಧರಿಸಿ ಸ್ಫೋರ್ಟ್ಸ್‌ ಅಥಾರಿಟಿ ಆಫ್ ಇಂಡಿಯಾದ ಹಾಸ್ಟೆಲ್‌ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಯತ್ನಿಸಲಾಗುತ್ತಿದೆ. ಇಲ್ಲಿ ಅವಕಾಶ ದೊರೆತದ್ದೇ ಆದಲ್ಲಿ ಮಗನ ಕ್ರೀಡಾ ಜೀವನ ಉಜ್ವಲವಾಗಲಿದೆ.

ಇಲ್ಲಿ ಅವಕಾಶ ಸಿಗದಿದ್ದರೆ ಬೆಂಗಳೂರು ಅಥವಾ ಮೂಡಬಿದರೆಯ ಆಳ್ವಾಸ್‌ ಶಾಲೆಯಲ್ಲಿ ಮಗನಿಗೆ ಅವಕಾಶ ಕಲ್ಪಿಸಿ, ಅಥ್ಲೆಟಿಕ್ಸ್‌ನಲ್ಲಿ ಹೆಚ್ಚಿನ ತರಬೇತಿ ಪಡೆಯಲು ವ್ಯವಸ್ಥೆ ಮಾಡುತ್ತೇನೆ’ ಎಂದು ಅಮರ ತಂದೆ ಮಲ್ಲಣ್ಣ ತುಂಬಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !