ಬಾಲ ಕರಾಟೆ ಪ್ರತಿಭೆ ವೀರೇಶ ಮಠ

ಶನಿವಾರ, ಏಪ್ರಿಲ್ 20, 2019
29 °C

ಬಾಲ ಕರಾಟೆ ಪ್ರತಿಭೆ ವೀರೇಶ ಮಠ

Published:
Updated:
Prajavani

ವಿಜಯಪುರ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ, ದೇವರಹಿಪ್ಪರಗಿ ಪಟ್ಟಣದ ವೀರೇಶ ಮಠ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡುವ ಮೂಲಕ, ಕ್ರೀಡಾಲೋಕದ ಭರವಸೆಯ ಬೆಳಕಾಗಿ ಹೊರಹೊಮ್ಮಿದ್ದಾನೆ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಅದನ್ನು ಗುರುತಿಸಿ, ಪ್ರೋತ್ಸಾಹಿಸಿ, ಬೆಳೆಸಿದಾಗ ಮಾತ್ರ ಆ ಪ್ರತಿಭೆ ಪ್ರಜ್ವಲವಾಗಿ ಬೆಳಗಲು ಸಾಧ್ಯ ಎಂಬ ಮಾತಿನಂತೆ, ಡಿಸಿಸಿ ಬ್ಯಾಂಕ್ ಉದ್ಯೋಗಿಯಾಗಿರುವ ದೇವರಹಿಪ್ಪರಗಿಯ ಮೃತ್ಯುಂಜಯ ಮಠ ಎಂಬುವರ ಹಿರಿಯ ಪುತ್ರ ವೀರೇಶ ಮಠ ಒಂಬತ್ತನೇ ವಯಸ್ಸಿನಲ್ಲಿಯೇ, ಕರಾಟೆ ಸಮರ ಕಲೆ ಅಭ್ಯಾಸದಲ್ಲಿ ನಿಷ್ಣಾತನಾಗಿದ್ದಾನೆ.

2018-19ನೇ ಸಾಲಿನ ಡಿಸೆಂಬರ್ 22, 23ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 18ನೇ ಕರಾಟೆ ಬುಡೊಕನ್ ಫೆಡರೇಷನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡು, 9 ವರ್ಷದ ಒಳಗಿನ ಮಕ್ಕಳ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ, ತಾನು ಸದ್ಯ ಕಲಿಯುತ್ತಿರುವ ವಿಜಯಪುರದ ಜೈನ್ ಪಬ್ಲಿಕ್ ಶಾಲೆಗೆ ಕೀರ್ತಿ ತಂದಿದ್ದಾನೆ. ಇದರ ಜತೆಗೆ ಹುಟ್ಟೂರು ದೇವರಹಿಪ್ಪರಗಿಯ ಕೀರ್ತಿಯೂ ಹೆಚ್ಚಿದೆ.

‘ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಅಷ್ಟು ಸುಲಭವಲ್ಲ. ಅದರಲ್ಲೂ ಈಶಾನ್ಯ ಭಾರತದ ಸ್ಪರ್ಧಿಗಳ ವಿರುದ್ಧ ಸೆಣಸುವುದು ಕಷ್ಟದಾಯಕವೇ ಸರಿ. ಈಶಾನ್ಯ ಭಾರತಿಗರು ಶಾರೀರಿಕವಾಗಿ ಬಲಿಷ್ಠರಾಗಿದ್ದು, ಕರಾಟೆಯ ವಿವಿಧ ತಂತ್ರಗಾರಿಕೆಯಲ್ಲಿ ನಿಪುಣರು.

ಇಂಥಹ 20ಕ್ಕೂ ಹೆಚ್ಚು ರಾಜ್ಯಗಳ ಮಕ್ಕಳು, ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕೆ.ಬಿ.ಐ ಕರಾಟೆ ಸ್ಪರ್ಧೆಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಇಂಥ ಕಠಿಣ ಸ್ಪರ್ಧೆಯಲ್ಲಿ ವೀರೇಶ ತನ್ನ ಪ್ರತಿಭೆಯನ್ನು ಒರೆಗೆ ಹಚ್ಚಿ ಪದಕ ವಿಜೇತನಾಗಿದ್ದಾನೆ. ವೀರೇಶ ಸದ್ಯ ಆರೇಂಜ್ ಬೆಲ್ಟ್‌ನಲ್ಲಿ ತರಬೇತಿ ನಿರತನಾಗಿದ್ದು, ಮುಂದೆ ಗ್ರೀನ್‌ವರೆಗೆ ಮುಂದುವರೆಯುತ್ತಾನೆ’ ಎಂಬ ಭರವಸೆ ಕರಾಟೆ ತರಬೇತುದಾರ ಪ್ರೇಮಾನಂದ ನಾಗರೇಶಿ ಅವರದ್ದು.

‘ಕರಾಟೆ ಸ್ಪರ್ಧೆಗಳು ವಯಸ್ಸು, ತೂಕದ ಆಧಾರದ ಮೇಲೆ ನಡೆಯುತ್ತವೆ. ಇಲ್ಲಿ ಯಾವ ಬೆಲ್ಟ್ ಎಂಬುದು ಪರಿಗಣನೆಗೆ ಬರುವುದಿಲ್ಲ ಎಂಬ ವಿಷಯ ತರಬೇತಿದಾರರಿಂದ ತಿಳಿಯಿತು. ಕಳೆದ ಕೆ.ಬಿ.ಐ ಸ್ಪರ್ಧೆಯ ಸಮಯ ವೀರೇಶ ಅಸ್ಸಾಂನ ಸ್ಪರ್ಧಿಯೊಂದಿಗೆ ಗೆದ್ದು ವಿಜಯಿಯಾಗಿದ್ದು, ಅವನ ಕುರಿತು ಭರವಸೆ ಮೂಡಿಸಿದೆ.

ದೇವರಹಿಪ್ಪರಗಿಯಲ್ಲಿ ನುರಿತ ತರಬೇತಿದಾರರ ಕೊರತೆ ಇರುವುದರಿಂದ, ವಿಜಯಪುರದ ಜೈನ್ ಪಬ್ಲಿಕ್ ಶಾಲೆಗೆ ಸೇರಿಸಲಾಗಿದೆ. ಮುಂದೆ ಅವನ ಶೈಕ್ಷಣಿಕ ವಿದ್ಯಾಭ್ಯಾಸದ ಜತೆಗೆ, ಕರಾಟೆ ತರಬೇತಿಗೆ ಹೆಚ್ಚಿನ ಆದ್ಯತೆ ನೀಡುವೆ’ ಎನ್ನುತ್ತಾರೆ ತಂದೆ ಮೃತ್ಯುಂಜಯ ಮಠ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !