ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಟೀಕೆಗೆ ‘ನುಡಿದಂತೆ ನಡೆ’ ರೂಪಕ ಬಳಕೆ

ಹೊಳಲ್ಕೆರೆ: ಜನಾಶೀರ್ವಾದ ಯಾತ್ರೆಯ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
Last Updated 5 ಏಪ್ರಿಲ್ 2018, 7:33 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಬಿಜೆಪಿಯವರು ದಲಿತರ ಮನೆಗೆ ಹೋಗಿ, ಹೋಟೆಲ್ ಊಟ ತರಿಸಿಕೊಂಡು ತಿಂದು ನಾಟಕವಾಡುತ್ತಾರೆ. ನಾವು ಇಂದಿರಾ ಕ್ಯಾಂಟೀನ್ ಮೂಲಕ ಕಡಿಮೆ ಬೆಲೆಯಲ್ಲಿ ಜನರಿಗೆ ಆಹಾರ ಒದಗಿಸುತ್ತಿದ್ದೇವೆ’ ಎಂದು ರಾಹುಲ್ ಹೇಳಿದರು.ಪಟ್ಟಣದ ಕೊಟ್ರೆ ನಂಜಪ್ಪ ಮೈದಾನದಲ್ಲಿ ಜನಾಶೀರ್ವಾದ ಯಾತ್ರೆಯ ಸಮಾವೇಶದಲ್ಲಿ ಬುಧವಾರ ಅವರು ದಲಿತರು ಹಾಗೂ ಅಲ್ಪಸಂಖ್ಯಾತರನ್ನೇ ಹೆಚ್ಚು ಕೇಂದ್ರೀಕರಿಸಿ ಭಾಷಣ ಮಾಡಿದರು.ಭಾಷಣದಲ್ಲಿ ಬಸವಣ್ಣನವರ ‘ನುಡಿದಂತೆ ನಡೆ’ ತತ್ವವನ್ನು ಸಮರ್ಥ ರೂಪಕವಾಗಿ ಪದೇ ಪದೇ ಬಳಸಿ, ಅದನ್ನೇ ಬಿಜೆಪಿ ವಿರುದ್ಧ ಟೀಕಾಸ್ತ್ರವಾಗಿ ಪ್ರಯೋಗಿಸಿದರು.

‘ಬಸವಣ್ಣನವರ ಮೂರ್ತಿಯ ಎದುರು ಎರಡೂ ಕೈಜೋಡಿಸಿ ನಿಲ್ಲುವ ಮೋದಿ, ‘ನುಡಿದಂತೆ ನಡೆ’ ಎಂಬ ಅವರ ತತ್ವವನ್ನು ಮಾತ್ರ ಪಾಲಿಸಲೇ ಇಲ್ಲ. ಅವರು ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಣ ಹಾಕಲಿ. ರೈತರಿಗೆ ಹೇಳಿದಂತೆ ಕನಿಷ್ಠ ಬೆಂಬಲ ಬೆಲೆ ಕೊಡಲಿ. ವರ್ಷಕ್ಕೆ 2 ಕೋಟಿ ಯುವಕರಿಗೆ ಉದ್ಯೋಗ ಕೊಡಲಿ. ಆಗ ‘ನುಡಿದಂತೆ ನಡೆ’ ತತ್ವವನ್ನು ಸಾಕಾರಗೊಳಿಸಿದಂತಾಗುತ್ತದೆ. ಆದರೆ, ನಾಲ್ಕು ವರ್ಷಗಳಿಂದ ಮೋದಿ ಮಾಡುತ್ತಾ ಬಂದಿರುವುದು ಸುಳ್ಳು ಭಾಷಣ. ಅದರಲ್ಲಿ ಎಷ್ಟು ನಿಜವಾಗಿದೆ ಎನ್ನುವುದನ್ನು ಯಾರಾದರೂ ವಿಶ್ಲೇಷಿಸಬಹುದು’’ ಎಂದು ಲೇವಡಿ ಮಾಡಿದರು.ನೀರಾವರಿ ಸಮಸ್ಯೆ ಎದುರಿಸಿ, ತುಸು ಚೇತರಿಸಿಕೊಂಡಿರುವ ಕ್ಷೇತ್ರ ಹೊಳಲ್ಕೆರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನೀರಾವರಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಮೂರು ಪಟ್ಟು ಹೆಚ್ಚು ಹಣವನ್ನು ವಿನಿಯೋಗಿಸಿದೆ ಎಂದು ರಾಹುಲ್ ಹೇಳಿದ್ದು, ಇಲ್ಲಿನ ಜನರ ನಾಡಿಮಿಡಿತ ಅರಿತು ಮಾತನಾಡಿದಂತೆ ಇತ್ತು.

ಅನುವಾದಕರ ಪರದಾಟ

ಮೈಕ್ ವ್ಯವಸ್ಥೆ ಸರಿ ಇರಲಿಲ್ಲ. ರಾಹುಲ್ ಆಡಿದ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಂಡು ಕನ್ನಡದಲ್ಲಿ ಹೇಳಲು ಬಿ.ಕೆ. ಹರಿಪ್ರಸಾದ್ ಪರದಾಡಿದರು. ಒಮ್ಮೆ ನೀರು ಕುಡಿದರೂ ಅವರಿಗೆ ದಿಕ್ಕು ತೋಚಲಿಲ್ಲ. ವೇದಿಕೆಯ ಒಂದು ತುದಿಯಲ್ಲಿ ಅವರು, ಇನ್ನೊಂದು ತುದಿಯ ಪೋಡಿಯಂನಲ್ಲಿ ರಾಹುಲ್ ಇದ್ದರು. ರಾಹುಲ್ ಇದ್ದ ಕಡೆಗೇ ಸಾಗಿ, ಅವರ ಪಕ್ಕದಲ್ಲೇ ಇನ್ನೊಂದು ಮೈಕ್ ಹಿಡಿದು ಹರಿಪ್ರಸಾದ್ ಅನುವಾದವನ್ನು ಮುಂದುವರಿಸಿದರು.

ರಾಹುಲ್‌ಗೆ ಬೆಳ್ಳಿ ಗದೆ

ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಬೆಳ್ಳಿ ಗದೆ ನೀಡಿ ಗೌರವಿಸಿದರು. ರಾಹುಲ್ ಗದೆಯನ್ನು ಭುಜದ ಮೇಲೆ ಹಿಡಿದು ಛಾಯಾಗ್ರಾಹಕರಿಗೆ ಪೋಸ್ ನೀಡಿದರು.ಮೊದಲ ಬಾರಿಗೆ ಪಟ್ಟಣಕ್ಕೆ ಬಂದ ರಾಹುಲ್‌ ಅವರನ್ನು ಆಂಜನೇಯ ಆತ್ಮೀಯವಾಗಿ ಸನ್ಮಾನಿಸಿದರು. ಗದೆಯನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿಗೆ ನೀಡುವುದಾಗಿ ರಾಹುಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT