ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲು ಗಳಿಸಿದ ಪಾರ್ಟಲು; ಬಿಎಫ್‌ಸಿ ಅಜೇಯ

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: 5ನೇ ಆವೃತ್ತಿಯಲ್ಲಿ ಎಟಿಕೆಗೆ ನಾಲ್ಕನೇ ಸೋಲು
Last Updated 13 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡು ಪಂದ್ಯಗಳಲ್ಲಿ ಸತತ ಡ್ರಾ ಸಾಧಿಸಿದ್ದಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಗೆಲುವಿನ ಲಯಕ್ಕೆ ಮರಳಿತು.ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬಿಎಫ್‌ಸಿ 1–0 ಅಂತರದಿಂದ ಎಟಿಕೆಯನ್ನು ಮಣಿಸಿತು. ಈ ಮೂಲಕ ಐದನೇ ಆವೃತ್ತಿಯಲ್ಲಿ ಅಜೇಯವಾಗಿ ಉಳಿಯಿತು.

ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಬಿಎಫ್‌ಸಿ ನಿರಾತಂಕವಾಗಿ ಆಡಿತು. ಜಯ ಗಳಿಸಿ ಜೆಮ್‌ಶೆಡ್‌ಪುರ ಎಫ್‌ಸಿ ಜೊತೆ ನಾಲ್ಕನೇ ಸ್ಥಾನ ಹಂಚಿಕೊಳ್ಳುವ ಉದ್ದೇಶದೊಂದಿಗೆ ಆಡಿದ ಎಟಿಕೆ ಒತ್ತಡದಲ್ಲಿತ್ತು. ಮೊದಲ ಎರಡು ನಿಮಿಷ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂದಿತು. ಆದರೆ ನಂತರ ಬಿಎಫ್‌ಸಿ ಪೂರ್ಣ ಆಧಿಪತ್ಯ ಸ್ಥಾಪಿಸಿತು.

ಮೂರನೇ ನಿಮಿಷದಲ್ಲಿ ಕೀನ್‌ ಲ್ಯೂವಿಸ್ ಮತ್ತು ಸುನಿಲ್ ಚೆಟ್ರಿ ಹೆಣೆದ ತಂತ್ರದಲ್ಲಿ ಬಿಎಫ್‌ಸಿಗೆ ಮುನ್ನಡೆ ಗಳಿಸುವ ಅವಕಾಶ ಒದಗಿತ್ತು. ಎಡಭಾಗದಲ್ಲಿ ಚೆಂಡನ್ನು ಡ್ರಿಬಲ್ ಮಾಡುತ್ತ ಎದುರಾಳಿಗಳ ಆವರಣಕ್ಕೆ ನುಗ್ಗಿದ ಕೀನ್‌ ಕೊನೆಯ ಕ್ಷಣದಲ್ಲಿ ಚೆಟ್ರಿ ಕಡೆಗೆ ನಿಖರವಾಗಿ ಲಾಫ್ಟ್ ಮಾಡಿದರು. ಚೆಟ್ರಿ ಮಿಂಚಿನ ವೇಗದಲ್ಲಿ ಒದ್ದರು. ಆದರೆ ಚೆಂಡು ಗೋಲ್‌ಕೀಪರ್‌ ಅರಿಂದಂ ಭಟ್ಟಾಚಾರ್ಯ ಅವರ ಗವಸಿನ ಒಳಗೆ ಭದ್ರವಾಯಿತು.

37ನೇ ನಿಮಿಷದಲ್ಲಿ ಬಿಎಫ್‌ಸಿಯ ರಾಹುಲ್ ಭೆಕೆ, ಕೀನ್ ಲ್ಯೂವಿಸ್ ಮತ್ತು ಎರಿಕ್ ಪಾರ್ಟಲು ಹೂಡಿದ ತಂತ್ರ ಫಲಿಸಿತು. ಎಡಭಾಗದಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ರಾಹುಲ್‌ ನಂತರ ಅದನ್ನು ಕೀನ್‌ ಅವರತ್ತ ತಳ್ಳಿದರು. ಎದುರಾಳಿ ತಂಡದ ಆಟಗಾರರ ನಡುವೆ ಚೆಂಡನ್ನು ನಿಯಂತ್ರಿಸಿದ ಕೀನ್‌ ಸರಿಯಾದ ಸಂದರ್ಭದಲ್ಲಿ ಎರಿಕ್‌ ಕಡೆಗೆ ಕ್ರಾಸ್ ಮಾಡಿದರು. ಎತ್ತರಕ್ಕೆ ಜಿಗಿದು ತಲೆಯಲ್ಲಿ ಮನಮೋಹಕವಾಗಿ ಚೆಂಡನ್ನು ಗೋಲುಪೆಟ್ಟಿಗೆಯ ಮೂಲೆಗೆ ನುಗ್ಗಿಸಿ ಎರಿಕ್‌ ಸಂಭ್ರಮಿಸಿದರು. ಗ್ಯಾಲರಿಯಲ್ಲಿ ಖುಷಿಯ ಅಲೆ ಎದ್ದಿತು.

ಬೇಸರ ತಂದ ನೀರಸ ಆಟ:ದ್ವಿತೀಯಾರ್ಧದಲ್ಲಿ ಆಟ ನೀರಸವಾಯಿತು. ಬಿಎಫ್‌ಸಿ ನಿರಂತರ ಆಕ್ರಮಣ ನಡೆಸಿದರೂ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ. ಕೀನ್‌ ಲ್ಯೂವಿಸ್ ಮತ್ತು ಸುನಿಲ್ ಚೆಟ್ರಿ ಪದೇ ಪದೇ ಎದುರಾಳಿ ಗೋಲುಪೆಟ್ಟಿಗೆಯನ್ನು ಗುರಿಯಾಗಿಸಿ ಚೆಂಡನ್ನು ಒದ್ದರೂ ಫಲ ಸಿಗಲಿಲ್ಲ. ಲಭಿಸಿದ ಕೆಲವೇ ಅವಕಾಶಗಳನ್ನು ಎಟಿಕೆ ಕೂಡ ಕೈಚೆಲ್ಲಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT