ಶುಕ್ರವಾರ, ಅಕ್ಟೋಬರ್ 18, 2019
24 °C
ಭಾರತಕ್ಕೆ ಬೆಳ್ಳಿ, ಕಂಚು ಸಿಕ್ಕ ನಂತರ ಮೊದಲ ಕ್ರೀಡಾಕೂಟ

ಕುರಾಶ್‌ ಚಾಂಪಿಯನ್‌ಶಿಪ್‌ ಆರಂಭ: ದಾಖಲೆಯ ನೋಂದಣಿ

Published:
Updated:

‌ಬೆಳಗಾವಿ: ಜಕಾರ್ತದಲ್ಲಿ ಈಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪಿಂಕಿ ಬಲ್ಹಾರ ಬೆಳ್ಳಿ ಹಾಗೂ ಬೆಳಗಾವಿ ಜಿಲ್ಲೆಯ ಮಲಪ್ರಭಾ ಜಾಧವ ಕಂಚಿನ ಪದಕ ಗಳಿಸಿದ ನಂತರ ಇದೇ ಮೊದಲಿಗೆ ಇಲ್ಲಿ ಮಂಗಳವಾರ ಆರಂಭವಾದ ರಾಷ್ಟ್ರಮಟ್ಟದ ಕೆಡೆಟ್‌ ಮತ್ತು ಜೂನಿಯರ್‌ ಕುರಾಶ್ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ ಸಂಖ್ಯೆಯ ಕ್ರೀಡಾಪಟುಗಳು ನೋಂದಾಯಿಸಿದ್ದಾರೆ.

ಭಾರತೀಯ ಕುರಾಶ್ ಸಂಸ್ಥೆ (ಕೆಎಐ), ಕರ್ನಾಟಕ ಕುರಾಶ್‌ ಸಂಸ್ಥೆ ಹಾಗೂ ವಿಟಿಯು ಸಹಯೋಗದಲ್ಲಿ ಮಂಗಳವಾರ ಆರಂಭವಾದ ಚಾಂಪಿಯನ್‌ಶಿಪ್‌ನಲ್ಲಿ ವಿವಿಧ 24 ರಾಜ್ಯಗಳ 950 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ಕಂಚಿನ ‍ಪದಕ ವಿಜೇತೆ ಮಲಪ್ರಭಾ ಉದ್ಘಾಟನಾ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಅವರ ಹೆಸರು ಹೇಳಿದಾಗಲೆಲ್ಲಾ ಸಭಾಂಗಣ ಸಿಳ್ಳೆ, ಚಪ್ಪಾಳೆಗಳಿಂದ ತುಂಬಿ ಹೋಗುತ್ತಿತ್ತು. ಪಟುಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಂಡು, ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

2 ದಿನಗಳ ಕೂಟದಲ್ಲಿ 28 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 400 ಬಾಲಕಿಯರು ಹಾಗೂ 550 ಬಾಲಕರು ಪೈಪೋಟಿ ನೀಡಲಿದ್ದಾರೆ.

‘ಕುರಾಶ್‌ ಕ್ರೀಡೆಗೆ ದೇಶದಲ್ಲಿ ಅಷ್ಟೇನು ಪ್ರಚಾರ ಸಿಕ್ಕಿರಲಿಲ್ಲ. ಆದರೆ, ಪಿಂಕಿ ಹಾಗೂ ಮಲಪ್ರಭಾ ಸಾಧನೆ ತೋರಿದ ನಂತರ ಬಹಳಷ್ಟು ಮಂದಿ ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಸ್ಪರ್ಧಿಗಳು ನೋಂದಾಯಿಸಿದ್ದಾರೆ. ಇದು ಈವರೆಗಿನ ದಾಖಲೆಯಾಗಿದೆ’ ಎಂದು ಕೆಎಐ ತಾಂತ್ರಿಕ ಸಮಿತಿಯ ಕಾರ್ಯದರ್ಶಿ ರವಿವರ್ಮ ತಿಳಿಸಿದರು.

ಉದ್ಘಾಟಿಸಿದ ಕೆಎಐ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಜಗದೀಶ ಟೈಟ್ಲರ್‌ ಮಾತನಾಡಿ, ‘ಹಲವು ವರ್ಷಗಳ ಹಿಂದೆ ಕುರಾಶ್ ಕ್ರೀಡೆ ಬಗ್ಗೆ ಕೇಳಿದವರು ಕೆಲವೇ ಸಂಖ್ಯೆಯಲ್ಲಿದ್ದರು. ಈ ಆಟವನ್ನು ನಾನು ಭಾರತಕ್ಕೆ ತಂದಾಗ ಜುಡೋ ಆಟಗಾರರು ಬಹಳ ಬೇಸರಪಟ್ಟುಕೊಂಡಿದ್ದರು. ಈಚೆಗೆ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಬಾಲಕಿಯರಿಬ್ಬರು ಸಾಧನೆ ತೋರಿದ್ದರಿಂದ ಬಹಳ ಪ್ರಚಾರ ಪಡೆದಿದೆ. ಈ ಆಟವನ್ನು ಏಷ್ಯನ್ ಗೇಮ್ಸ್‌ಗೆ ಸೇರಿಸಿದ್ದು ಕೂಡ ಸಾರ್ಥಕವಾಗಿದೆ. ಇದರಿಂದ ಇತರರಿಗೂ ಪ್ರೇರಣೆ ದೊರೆತಿದೆ’ ಎಂದು ತಿಳಿಸಿದರು.

‘ಮುಂದೆ ನಡೆಯಲಿರುವ ಒಲಿಂಪಿಕ್ಸ್‌ ಹಾಗೂ ಏಷ್ಯನ್‌ ಗೇಮ್ಸ್‌ನಲ್ಲಿ ಮತ್ತಷ್ಟು ಪದಕಗಳು ದೇಶಕ್ಕೆ ದೊರೆಯಲಿವೆ ಎಂಬ ವಿಶ್ವಾಸ ಬಂದಿದೆ. ಇಲ್ಲಿ ಹೆಚ್ಚಿನ ಪಟುಗಳು ಪಾಲ್ಗೊಂಡಿರುವುದು ಈ ಆಟಕ್ಕೆ ಮಾನ್ಯತೆ ದೊರೆಯುತ್ತಿರುವುದರ ಸಂಕೇತ’ ಎಂದು ಹೇಳಿದರು.

ಪಿಂಕಿ ಬಲ್ಹಾರ ಕೋಚ್‌ ಸಮುಂದರ್ ಅವರನ್ನು ಸತ್ಕರಿಸಲಾಯಿತು. ಶಾಸಕ ಅಭಯ ಪಾಟೀಲ, ಕೆಎಐ ಉಪಾಧ್ಯಕ್ಷ ಪ್ರಹ್ಲಾದ್ ಸಿಂಗ್, ಪ್ರಧಾನ ಕಾರ್ಯದರ್ಶಿ ರವಿ ಕಪೂರ್, ಕೋಚ್‌ಗಳಾದ ಜಿತೇಂದ್ರ ಸಿಂಗ್, ತ್ರಿವೇಣಿ, ವಿಟಿಯು ದೈಹಿಕ ಶಿಕ್ಷಣ ನಿರ್ದೇಶಕ ಆರೀಫ್‌ ಆಲಿ ಖಾನ್‌, ವಕೀಲ ಧನರಾಜ್ ಗವಳಿ ಇದ್ದರು.

Post Comments (+)