ಮಂಗಳವಾರ, ಮಾರ್ಚ್ 2, 2021
31 °C

ಕಾರ್ಲ್‌ಸನ್‌ ಮತ್ತೆ ಚೆಸ್‌ ಕಿಂಗ್‌

ನಾಗೇಶ್‌ ಶೆಣೈ Updated:

ಅಕ್ಷರ ಗಾತ್ರ : | |

Deccan Herald

ನಿರೀಕ್ಷೆಯಂತೆ ಮ್ಯಾಗ್ನಸ್‌ ಕಾರ್ಲ್‌ಸನ್‌ ಸತತ ನಾಲ್ಕನೇ ಬಾರಿ ವಿಶ್ವ ಚೆಸ್‌ ಚಾಂಪಿಯನ್‌ ಪಟ್ಟಕ್ಕೇರಿದ್ದಾರೆ. ಆದರೆ ಈ ಬಾರಿ ಅತ್ಯಂತ ಪ್ರಯಾಸಪಟ್ಟ ಬಳಿಕ. ಅಮೆರಿಕದ ಎದುರಾಳಿ ಫ್ಯಾಬಿಯಾನೊ ಕರುವಾನ ವಿರುದ್ಧ, ವಿಶ್ವ ಚೆಸ್‌ ಫೈನಲ್‌ ಕಂಡ ತೀಕ್ಷ್ಣ ಪೈಪೋಟಿಯಲ್ಲಿ ಗೆದ್ದ ನಂತರ ನಾರ್ವೆಯ ಚೆಸ್‌ ಚತುರ ಹೇಳಿದ್ದು– ‘ಈ ಬಾರಿ ಸೋತಿದ್ದಲ್ಲಿ ಪ್ರಾಯಶಃ ಅದು ನನ್ನ ಕೊನೆಯ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಆಗುತಿತ್ತೇನೋ’.

ಅವರು ಹಾಗೆ ಹೇಳಲು ಕಾರಣವಿತ್ತು. ಫೈನಲ್‌ನ ಎಲ್ಲ 12 ಸುತ್ತಿನ ಆಟಗಳು (ಶಾಸ್ತ್ರೀಯ ಮಾದರಿ) ‘ಡ್ರಾ’ದಲ್ಲಿ ಕೊನೆಗೊಂಡಿದ್ದವು. ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನ 132 ವರ್ಷಗಳ ಇತಿಹಾಸದಲ್ಲಿ ಹೀಗಾಗಿದ್ದು ಇದೇ ಮೊದಲ ಬಾರಿ. ನಿಗದಿ ಪಂದ್ಯಗಳು ಮುಗಿದರೂ ಯಾರೊಬ್ಬರೂ ನಿರ್ಣಾಯಕ ಗೆಲುವು ಸಾಧಿಸದ ಸ್ಥಿತಿ ಎದುರಾದ ಕಾರಣ ನಾಲ್ಕು ರ‍್ಯಾಪಿಡ್‌ ಆಟಗಳನ್ನು (25 ನಿಮಿಷ ಅವಧಿ) ಆಡಿಸಲು ನಿರ್ಧರಿಸಲಾಯಿತು. ಆದರೆ ಇಲ್ಲಿ ಎಂದಿನ ಆತ್ಮವಿಶ್ವಾಸದಿಂದ ಆಡಿದ ಕಾರ್ಲ್‌ಸನ್‌ 3–0 ಯಿಂದ ಗೆದ್ದು ಕೊನೆಗೂ ಚೆಸ್‌ ಜಗತ್ತಿನ ಸಾಮ್ರಾಟ ತಾನೆಂಬುದನ್ನು ತೋರಿಸಿಕೊಟ್ಟರು.‌ 28ನೇ ಹುಟ್ಟುಹಬ್ಬಕ್ಕೆ (ನ. 30) ಎರಡು ದಿನ ಮೊದಲೇ ಸಂಭ್ರಮ ಆಚರಿಸಿದರು.

ಕೇಂದ್ರ ಲಂಡನ್‌ನ ಹಾಲ್‌ಬರ್ನ್‌ ಕಾಲೇಜಿನಲ್ಲಿ ಇತ್ತೀಚೆಗೆ (ನವೆಂಬರ್‌ 9–28) ನಡೆದ ಈ ಬಾರಿಯ ಚಾಂಪಿಯನ್‌ಷಿಪ್‌ ಮೂರು ರ‍್ಯಾಪಿಡ್‌ ಸೇರಿದಂತೆ 15 ಪಂದ್ಯಗಳನ್ನು ಕಂಡವು.

ಆಟಗಾರರು 51 ಗಂಟೆಯ ಅವಧಿಯನ್ನು ಬೋರ್ಡ್‌ ಮುಂದೆ ತಂತ್ರ–ಪ್ರತಿತಂತ್ರಗಳ ಯೋಚನೆಯಲ್ಲಿ ಕಳೆದರು. ಪಂದ್ಯಗಳು ಒಟ್ಟು 773 ನಡೆಗಳನ್ನು ಕಂಡವು. ಇಬ್ಬರೂ ಚೆಸ್‌ ಜಗತ್ತಿನ ಪ್ರಬಲ ಆಟಗಾರರು. ಕಾರ್ಲ್‌ಸನ್‌ ಅವರ ರೇಟಿಂಗ್‌ 2,835. ಎದುರಾಳಿ ಇಟಲಿ ಸಂಜಾತ ಆಟಗಾರ ರೇಟಿಂಗ್‌ನಲ್ಲಿ ಕೇವಲ ಮೂರು ಪಾಯಿಂಟ್‌ ಹಿಂದೆಯಿದ್ದವರು (2,832) ಅಷ್ಟೇ. ಹೀಗಾಗಿ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿತ್ತು. ಚೆಸ್‌ ದಂತಕಥೆ ಬಾಬಿ ಫಿಷರ್‌ ನಂತರ ಅಮೆರಿಕ, 26 ವರ್ಷದ ಕರುವಾನ ಅವರ ಮೂಲಕ ವಿಶ್ವ ಚಾಂಪಿಯನ್‌ ಪಟ್ಟ ನಿರೀಕ್ಷಿಸಿತ್ತು.

ಫೈನಲ್‌ನ ಮೊದಲ ಪಂದ್ಯದಲ್ಲೇ ಸ್ವಲ್ಪ ಅನುಕೂಲಕರ ಸ್ಥಿತಿ ಕಾರ್ಲ್‌ಸನ್‌ಗೆ ಇತ್ತು. ಆದರೆ ಎಲ್ಲರೂ ‘ಯೋಚಿಸಿದ ಕಾರ್ಲ್‌ಸನ್‌’ ರೀತಿ ಅವರು ಆಡದೇ ಪಂದ್ಯ ಕೊನೆಗೆ ಡ್ರಾ ಆಯಿತು. ‘ನಮಗೆ ಗೊತ್ತಿರುವ ಕಾರ್ಲ್‌ಸನ್‌ ಅವರಾಗಿರಲಿಲ್ಲ’ ಎಂದು ಮಾಜಿ ವಿಶ್ವ ಚಾಂಪಿಯನ್‌ (2000–08) ವ್ಲಾದಿಮಿರ್‌ ಕ್ರಾಮ್ನಿಕ್‌ ಅಭಿಪ್ರಾಯಪಟ್ಟರು. ಕಾರ್ಲ್‌ಸನ್‌ನಲ್ಲಿ ಮೊದಲಿನ ಧೈರ್ಯ ಸ್ವಲ್ಪ ಕ್ಷಯಿಸಿದಂತೆ ಕಾಣುತ್ತಿದೆ ಎಂದವರು ಇನ್ನೊಬ್ಬ ಪ್ರಬಲ ಆಟಗಾರರಾಗಿದ್ದ ರಷ್ಯದ ಗ್ಯಾರಿ ಕ್ಯಾಸ್ಪರೋವ್‌. ಗ್ಯಾರಿ 15 ವರ್ಷ ವಿಶ್ವ ಚಾಂಪಿಯನ್‌ ಆಗಿದ್ದವರು.

ಕೊನೆಯ (12ನೇ ಸುತ್ತು) ಪಂದ್ಯದಲ್ಲೂ ಸ್ವಲ್ಪ ಮೇಲುಗೈ ಇದ್ದಿದ್ದು ಕಾರ್ಲ್‌ಸನ್‌ಗೇ. ಆದರೆ ಇಲ್ಲೂ ಅವರು ಸಾಹಸಕ್ಕೆ ಹೋಗಲಿಲ್ಲ. ‘ಫೈನಲ್‌ನ ಕೆಲವು ಪಂದ್ಯಗಳಲ್ಲಿ ಅವಕಾಶಗಳನ್ನು ಬಳಸಿಕೊಳ್ಳಲು ನನಗೇಕೋ ಸಾಧ್ಯವಾಗಲಿಲ್ಲ. ಮುಂದೆ ಆ ನಿಟ್ಟಿನಲ್ಲಿ ಸುಧಾರಿಸಿಕೊಳ್ಳಬೇಕಿದೆ’ ಎಂದು ಅವರು ಒಪ್ಪಿಕೊಂಡರು.‌ ಈ ಎಲ್ಲ ಹಿನ್ನೆಲೆಯೇ ‘ಸೋತಿದ್ದರೆ ಮತ್ತೆ ವಿಶ್ವ ಚಾಂಪಿಯನ್‌ಷಿಪ್‌ ಆಡುತ್ತಿರಲಿಲ್ಲ’ ಎಂಬ ಹೇಳಿಕೆಯ ಕಾರಣ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಕಾರ್ಲ್‌ಸನ್‌ ಮೊದಲ ಬಾರಿ ವಿಶ್ವ ಚೆಸ್ ಕ್ರಮಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದು 2011ರಲ್ಲಿ. ನಂತರ ಯಶಸ್ಸಿನ ದಾರಿಯಲ್ಲಿ ಅವರು ಹಿಂತಿರುಗಿ ನೋಡಿದ್ದು ವಿರಳ. 2014ರ ಮೇ ತಿಂಗಳಲ್ಲಿ ಅವರ ರೇಟಿಂಗ್‌ 2,882 ತಲುಪಿತು. ಇದು ಚೆಸ್ ಜಗತ್ತು ಕಂಡ ಅತ್ಯಧಿಕ ರೇಟಿಂಗ್‌. ‌

ಈ ಹಿಂದೆ ವಿಶ್ವ ಚಾಂಪಿಯನ್‌ ಹಾದಿಯಲ್ಲಿ ಮೊದಲ ಎರಡು ಫೈನಲ್‌ಗಳಲ್ಲಿ ಕಾರ್ಲ್‌ಸನ್‌ ಅವರು ಸೋಲಿಸಿದ್ದು ಭಾರತದ ಅನುಭವಿ ವಿಶ್ವನಾಥನ್‌ ಆನಂದ್‌ ಅವರನ್ನು. ಮೂರನೇ ವಿಶ್ವಚಾಂಪಿಯನ್‌ಷಿಪ್‌ ಸೆಣಸಾಟದಲ್ಲಿ ರಷ್ಯದ ಸೆರ್ಗಿ ಕರ್ಯಾಕಿನ್‌ ವಿರುದ್ಧ ಜಯಗಳಿಸಿದ್ದರು. 

ಕಾರ್ಲ್‌ಸನ್‌ ಅವರಿಂದಾಗಿ ನಾರ್ವೆಯಲ್ಲಿ ಚೆಸ್‌ ಮೊದಲಿಗಿಂತ ಜನಪ್ರಿಯವಾಗಿದೆ. ಈ ದೇಶದ ಜನಸಂಖ್ಯೆ 50 ಲಕ್ಷ. ಇವರಲ್ಲಿ 30 ಲಕ್ಷ ಜನ ಒಂದಲ್ಲ, ಒಂದು ಸಂದರ್ಭದಲ್ಲಿ ಈ ಬಾರಿಯ ಫೈನಲ್‌ ವೀಕ್ಷಿಸಿದ್ದಾರೆ. ಐದು ಲಕ್ಷ ಜನ ನಿಯಮಿತವಾಗಿ ಆನ್‌ಲೈನ್‌ನಲ್ಲಿ ಚೆಸ್‌ ಆಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು