ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವಿರುದ್ಧ ನಮ್ಮ ನೆಲ ಬಳಸಲು ಬಿಡೆವು

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಕಠ್ಮಂಡು: ‘ಭಾರತದ ಭದ್ರತೆಯ ವಿಚಾರದಲ್ಲಿ ನೇಪಾಳ ಅತ್ಯಂತ ಸೂಕ್ಷ್ಮವಾದ ಪ್ರದೇಶ. ಭಾರತದ ವಿರುದ್ಧ ನೇಪಾಳದ ನೆಲವನ್ನು ಬಳಸಿಕೊಳ್ಳಲು ನಾವು ಯಾರಿಗೂ ಅವಕಾಶ ಕೊಡುವುದಿಲ್ಲ’ ಎಂದು ನೇಪಾಳ ಪ್ರಧಾನಿ ಕೆ.ಪಿ. ಒಲಿ ಶರ್ಮಾ ಘೋಷಿಸಿದ್ದಾರೆ.

‘ಇದು ಅತ್ಯಂತ ಮಹತ್ವದ ಘೋಷಣೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಒಲಿ ನಡುವಣ ಮಾತುಕತೆ ಫಲ ನೀಡಿದೆ. ನೇಪಾಳದ ಈ ನಿಲುವಿನಿಂದ ನಮಗೆ ತೃಪ್ತಿಯಾಗಿದೆ’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.

‘ಭಾರತ–ನೇಪಾಳ ಗಡಿಯಲ್ಲಿ ಎರಡೂ ದೇಶಗಳ ಜನರ ಸಂಚಾರಕ್ಕೆ ಮುಕ್ತ ಅವಕಾಶವಿದೆ. ಅದು ದುರ್ಬಳಕೆ ಆಗದಂತೆ ನಾವು ಕಟ್ಟೆಚ್ಚರ ವಹಿಸಿದ್ದೇವೆ. ಆದರೂ ಕೆಲವು ಸಮಾಜಘಾತುಕ ಶಕ್ತಿಗಳು ಇದನ್ನು ದುರುಪಯೋಗ ಮಾಡಿಕೊಂಡಿವೆ’ ಎಂದು ಮೋದಿ ಶುಕ್ರವಾರ ಒಲಿ ಜತೆ ನಡೆಸಿದ ಸಭೆಯಲ್ಲಿ ಪ್ರಸ್ತಾಪಿಸಿದ್ದರು.

‘ಮುಕ್ತಗಡಿ ಸಂಚಾರವು ಎರಡೂ ದೇಶಗಳಿಗೆ ಅತ್ಯಗತ್ಯ. ಇದರಿಂದ ಎರಡೂ ಕಡೆಯ ಜನರ ಮಧ್ಯೆ ಸಂಬಂಧ ಗಟ್ಟಿಯಾಗುತ್ತದೆ. ಆ ಮೂಲಕ ಭಾರತ–ನೇಪಾಳದ ಸಂಬಂಧ ವೃದ್ಧಿಯಾಗುತ್ತದೆ’ ಎಂದು ಒಲಿ ಹೇಳಿದ್ದಾರೆ. ನೇಪಾಳ ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ, ಮಾಜಿ ಪ್ರಧಾನಿಗಳಾದ ಪ್ರಚಂಡ ಮತ್ತು ಷೇರ್ ಬಹಾದ್ದೂರ್ ದೇವುಬಾ ಅವರನ್ನು ಅವರನ್ನು ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ನವದೆಹಲಿ ವರದಿ: ‘ಹಿಂದುಗಳ ಪವಿತ್ರ ಕ್ಷೇತ್ರವಾಗಿರುವ ನೇಪಾಳದ ಮುಕ್ತಿನಾಥ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಕೆ.ಪಿ.ಶರ್ಮಾ ಒಲಿ ಪ್ರಧಾನಿಯಾಗಿ ಆಯ್ಕೆ ಆದಾಗಲೇ ಮೋದಿ ಅವರ ನೇಪಾಳ ಭೇಟಿ ನಿಗದಿಯಾಗಿತ್ತು ಎಂದು ವಿಜಯ್ ಗೋಖಲೆ ಸ್ಪಷ್ಟನೆ ನೀಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಮಾತುಕತೆ
‘ಎರಡು ದಿನಗಳ ಅಲ್ಪಾವಧಿಯಲ್ಲಿ ನಡೆಸಿದ ಹಲವು ಮಾತುಕತೆಗಳು ಯಶಸ್ವಿಯಾಗಿವೆ. ಇನ್ನೂ ಹಲವು ವಿಚಾರಗಳನ್ನು ಚರ್ಚಿಸಿ, ಬಗೆಹರಿಸಿಕೊಳ್ಳುವ ಸಲುವಾಗಿ ಸೆಪ್ಟೆಂಬರ್‌ನಲ್ಲಿ ಮಾತುಕತೆ ನಡೆಸಲಾಗುತ್ತದೆ’ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಮಾಹಿತಿ ನೀಡಿದ್ದಾರೆ.

ಕ್ರೀಡೆಗೆ ಒಲವು
‘ಇಂಡಿಯನ್ ಪ್ರೀಮಿಯರ್ ಲೀಗ್‌ ಕ್ರಿಕೆಟ್‌ನಲ್ಲಿ ನೇಪಾಳದ ಒಬ್ಬ ಹುಡುಗ ಆಡುತ್ತಿದ್ದಾನೆ. ಕ್ರಿಕೆಟ್ ಎರಡೂ ದೇಶಗಳನ್ನು ಹತ್ತಿರಕ್ಕೆ ತಂದಿದೆ. ಹೀಗಾಗಿ ನಾವು ನಮ್ಮ ಕ್ರೀಡಾ ಸಂಬಂಧವನ್ನು ಮತ್ತಷ್ಟು ಮುಂದಕ್ಕೆ ತೆಗೆದುಕೊಂಡು ಹೋಗಬೇಕಿದೆ’ ಎಂದು ಮೋದಿ ಹೇಳಿದ್ದಾರೆ.

ನಾವು ಶೆರ್ಪಾ ಆಗುತ್ತೇವೆ
‘ಎವರೆಸ್ಟ್‌ ಏರಲು ಪರ್ವತಾರೋಹಿಗಳಿಗೆ ಶೆರ್ಪಾಗಳು ನೆರವಾಗುತ್ತಾರೆ. ನೀವು ಈಗ ಪ್ರಜಾಪ್ರಭುತ್ವವೆಂಬ ಎವೆರೆಸ್ಟ್‌ನ ತಪ್ಪಲು ತಲುಪಿದ್ದೀರಿ. ಅದರ ತುದಿ ಮುಟ್ಟಲು ನಾವು ನಿಮಗೆ ಶೆರ್ಪಾಗಳಂತೆ ನೆರವು ನೀಡುತ್ತೇವೆ’ ಎಂದು ಮೋದಿ ಹೇಳಿದ್ದಾರೆ.

* ಭಾರತದ ಹಿತಾಸಕ್ತಿಯ ದೃಷ್ಟಿಯಿಂದ ನೇಪಾಳ ಅತ್ಯಂತ ಸೂಕ್ಷ್ಮ ಪ್ರದೇಶ–ಪ್ರಧಾನಿ ಒಲಿ
* ನೇಪಾಳ ಜತೆ ಮಾತುಕತೆ ಫಲಪ್ರದ, ಇದು ಅತ್ಯಂತ ಮಹತ್ವದ ಘೋಷಣೆ–ಭಾರತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT