ಗುರುವಾರ , ಜೂನ್ 24, 2021
23 °C

ಕೋವಿಡ್‌: ಸಂಕಷ್ಟದಲ್ಲಿರುವವರಿಗೆ ಸಿ.ಕೆ.ವಿನೀತ್‌ ನೆರವಿನ ಹಸ್ತ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫುಟ್‌ಬಾಲ್ ಅಂಗಣದಲ್ಲಿ ಚುರುಕಿನ ಪಾದಚಲನೆಯ ಮೂಲಕ ಎದುರಾಳಿ ತಂಡದ ಆಟಗಾರರನ್ನು ಕಂಗೆಡಿಸುವ ಭಾರತ ತಂಡದ ಆಟಗಾರ ಸಿ.ಕೆ.ವಿನೀತ್ ಮಾನವೀಯತೆ ಮೆರೆದು ಈಗಾಗಲೇ ಗಮನ ಸೆಳೆದಿದ್ದಾರೆ. ಈಗ ಕೋವಿಡ್ ಪೀಡಿತರಿಗೆ ನೆರವಾಗಲು ಮುಂದಾಗಿದ್ದಾರೆ.

ವಿನೀತ್ ಅವರು ತಮ್ಮ ಸಾಮಾಜಿಕ ತಾಣಗಳ ಖಾತೆಗಳನ್ನು ಬಳಸಿಕೊಂಡು ಸಮಾನಮನಸ್ಕರನ್ನು ಒಗ್ಗೂಡಿಸಿ ತೊಂದರೆಗೆ ಸಿಲುಕಿದವರಿಗೆ ನೆರವಾಗುತ್ತಿದ್ದಾರೆ.

‘ನಾವೆಲ್ಲ ಮನುಷ್ಯರು. ಇತರರು ಸಂಕಷ್ಟದಲ್ಲಿದ್ದಾಗ ಅವರಿಗೆ ನೆರವು ನೀಡಬೇಕಿದೆ. ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಲು ಮುಂದಾಗಬೇಕಿದೆ. ಹಿಂದಿನ ಕೆಲವು ವರ್ಷಗಳಲ್ಲಿ ಫುಟ್‌ಬಾಲ್ ಆಟಗಾರರು, ವ್ಯವಸ್ಥಾಪಕರು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡವೊಂದನ್ನು ಸಾಮಾಜಿಕ ತಾಣಗಳ ಮೂಲಕ ಸ್ಥಾಪಿಸಲು ಸಾಧ್ಯವಾಗಿದೆ. ಅದು ಈಗ ಬಲಿಷ್ಠವಾಗಿದೆ. ಅದರ ಮೂಲಕ ನೆರವು ನೀಡಲಾಗುವುದು’ ಎಂದು  ಎಸ್‌ಸಿ ಈಸ್ಟ್ ಬೆಂಗಾಲ್ ತಂಡದ ಸ್ಟ್ರೈಕರ್ ಆಗಿರುವ ಕೇರಳದ ವಿನೀತ್ ತಿಳಿಸಿದ್ದಾರೆ.

‘ಆಮ್ಲಜನಕ ಪೂರೈಕೆಗೆ ಸಹಾಯ ಮತ್ತು ರಕ್ತಬ್ಯಾಂಕ್‌ಗಳಿಗೆ ನೆರವು ನೀಡುವುದರ ಜೊತೆಯಲ್ಲಿ ಲಸಿಕೆ ಹಾಕಲು ಹೋಗುವ ಮುನ್ನ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು, ಸಾರ್ವಜನಿಕರು ಕೂಡ ಸಹಾಯ ಹಸ್ತ ಚಾಚಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಕೇರಳದ ಕಣ್ಣೂರು ನಿವಾಸಿಯಾದ ವಿನೀತ್ ಕಳೆದ ವರ್ಷ ರಾಷ್ಟ್ರದಾದ್ಯಂತ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಕೋವಿಡ್‌ ಸಹಾಯವಾಣಿ ಕೇಂದ್ರದಲ್ಲಿ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸಿದ್ದರು. 

‘ಇದು ಸಾಮಾಜಿಕ ಕಾರ್ಯವಲ್ಲ, ಎಲ್ಲವನ್ನೂ ನೀಡಿದ ಸಮಾಜಕ್ಕಾಗಿ ನಾಗರಿಕನೆಂಬ ನೆಲೆಯಲ್ಲಿ  ಮಾಡಬೇಕಾದ ಕರ್ತವ್ಯ. ನನ್ನನ್ನು ಒಬ್ಬ ಫುಟ್‌ಬಾಲ್ ಆಟಗಾರನಾಗಿ ಮಾತ್ರ ಜನರು ಕಾಣಬೇಕೆಂದು ಬಯಸುವುದಿಲ್ಲ. ಹೊಸ ಯೋಜನೆಗಳ ಮೂಲಕ ಸಮಾಜದ ಮನಸ್ಥಿತಿಯನ್ನು ಬದಲಿಸಲು ಮುಂದಾಗಬೇಕು ಎಂಬುದು ನನ್ನ ಉದ್ದೇಶ’ ಎಂದು ವಿನೀತ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು