ಬೆಂಗಳೂರಿನಾಚೆಗೂ ಇದೇ ಕ್ರಿಕೆಟ್ ಕಂಪು

7

ಬೆಂಗಳೂರಿನಾಚೆಗೂ ಇದೇ ಕ್ರಿಕೆಟ್ ಕಂಪು

Published:
Updated:
Deccan Herald

ತಮ್ಮೂರಿನ ಶಾಲಾ, ಕಾಲೇಜುಗಳ ಮೈದಾನದಲ್ಲಿ ಟೆನಿಸ್‌ ಚೆಂಡಿನೊಂದಿಗೆ ಮೊದಲ ಬಾರಿಗೆ ಕ್ರಿಕೆಟ್‌ ಆಡುವ ಪ್ರತಿ ಹುಡುಗನಿಗೂ ಭಾರತ ತಂಡ ಪ್ರತಿನಿಧಿಸಬೇಕು ಎನ್ನುವ ದೊಡ್ಡ ಆಸೆ ಇರುತ್ತದೆ. ಇದಕ್ಕೆ ತಕ್ಕ ಸೌಲಭ್ಯಗಳು ಎಲ್ಲ ಕಡೆ ಸಿಗುವುದು ಕಷ್ಟ.

ಆದ್ದರಿಂದ ಆಟಗಾರರಿಗೆ ಪ್ರತಿಭೆಯಿದ್ದರೂ ಅವಕಾಶವಿಲ್ಲದಂತಾಗುತ್ತಿದೆ. ಆದರೆ, ಈ ವಿಷಯಕ್ಕೆ ಕರ್ನಾಟಕ ಅಪವಾದದಂತಿದೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ರಾಜ್ಯದಲ್ಲಿ ತನ್ನ ವ್ಯಾಪ್ತಿಯ ಆರೂ ವಲಯಗಳಲ್ಲಿ ನಿರಂತರವಾಗಿ ಕ್ರಿಕೆಟ್ ಟೂರ್ನಿಗಳನ್ನು ನಡೆಸಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವೇದಿಕೆ ಕಲ್ಪಿಸಿದೆ.

ಧಾರವಾಡ, ರಾಯಚೂರು, ಮೈಸೂರು, ತುಮಕೂರು, ಮಂಗಳೂರು ಮತ್ತು ಶಿವಮೊಗ್ಗ ವಲಯಗಳಲ್ಲಿ ಪ್ರತಿ ವರ್ಷ ನೂರಾರು ಕ್ರಿಕೆಟ್ ಪಂದ್ಯಗಳು ನಡೆಯುತ್ತವೆ. 14, 16 ಮತ್ತು 19 ವರ್ಷದ ಒಳಗಿನವರ ವಿಭಾಗದ ಶಾಲಾ ಟೂರ್ನಿಗಳು, ಮೊದಲ ನಾಲ್ಕು ಡಿವಿಷನ್‌ ಮತ್ತು ಅಂತರ ಜಿಲ್ಲಾ ಟೂರ್ನಿಗಳು ಕೂಡ ನಡೆಯುತ್ತವೆ. ಒಂದೇ ಸ್ವಂತ ಕ್ರೀಡಾಂಗಣ ಹೊಂದಿರುವ ರಾಯಚೂರು ವಲಯದಲ್ಲಿಯೇ ವರ್ಷಕ್ಕೆ ಸುಮಾರು 200 ಪಂದ್ಯಗಳು ನಡೆಯುತ್ತವೆ.

ಆದ್ದರಿಂದ ಎಲ್ಲ ವಲಯಗಳು ಸ್ಥಳೀಯ ಕ್ಲಬ್‌ಗಳಿಗೆ ತಾತ್ಕಾಲಿಕ ಪರವಾನಗಿ ನೀಡಿ ಹೆಚ್ಚು ತಂಡಗಳು ಟೂರ್ನಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿವೆ. ರಾಯಚೂರು ವಲಯ ವ್ಯಾಪ್ತಿಯಲ್ಲಿ ಬರುವ ಯಾದಗಿರಿ, ರಾಯಚೂರು, ಕಲಬುರ್ಗಿ, ಬೀದರ್, ಕೊಪ್ಪಳ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿ ವರ್ಷ ಟೂರ್ನಿಗಳು ನಡೆಯುತ್ತವೆ. ವಿವಿಧ ವಯೋಮಿತಿಯೊಳಗಿನ ಟೂರ್ನಿಗಳು ಮತ್ತು ಡಿವಿಷನ್‌ಗಳ ಪಂದ್ಯಗಳನ್ನು ನಡೆಸಲು ಈ ಎಲ್ಲ ಊರುಗಳಲ್ಲಿ ಶಾಲಾ, ಕಾಲೇಜುಗಳು ಮೈದಾನದ ಸೌಲಭ್ಯ ಒದಗಿಸಿ ಬೆಂಬಲ ನೀಡುತ್ತಿವೆ.

ವಲಯ ಮಟ್ಟದಲ್ಲಿ ನಿರಂತರವಾಗಿ ಟೂರ್ನಿ ನಡೆಸಿಕೊಂಡು ಬಂದ ಕಾರಣ ರಾಯಚೂರು ವಲಯದಲ್ಲಿ ಈಗ ಹಲವಾರು ಆಟಗಾರರು ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ರಾಜ್ಯ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ. ಈ ವಲಯ ಹೋದ ವರ್ಷ 14 ವರ್ಷದ ಒಳಗಿನವರ ವಿಭಾಗದಲ್ಲಿ ಚಾಂಪಿಯನ್‌ ಆಗಿತ್ತು. 16 ಮತ್ತು 23 ವರ್ಷದ ಒಳಗಿನವರ ಟೂರ್ನಿಯಲ್ಲಿ ರನ್ನರ್ಸ್‌ ಅಪ್‌ ಆಗಿದೆ. ಈ ವಲಯದ ತಂಡದಲ್ಲಿರುವ ಬಹುತೇಕ ಆಟಗಾರರು ಗ್ರಾಮೀಣ ಪ್ರದೇಶದಿಂದ ಬಂದವರು ಎನ್ನುವುದು ವಿಶೇಷ.

ರಾಜ್ಯ ತಂಡದಲ್ಲಿ ಮಿಂಚುತ್ತಿರುವ ರಾಯಚೂರು ಜಿಲ್ಲೆಯ ದೇವದುರ್ಗದ ಡಿ. ಅವಿನಾಶ, ಸಿಂಧನೂರಿನ ಮನೋಜ ಬಾಂಢಗೆ, ರಾಯಚೂರಿನ ವಿದ್ಯಾಧರ ಪಾಟೀಲ, ಕಲಬುರ್ಗಿಯ ಶಶಿಕುಮಾರ, ಸಹೋದರ ಜೋಡಿ ವಿಜಯರೆಡ್ಡಿ ಹಾಗೂ ತಿಪ್ಪಾರೆಡ್ಡಿ, ಕಲ್ಲೂರಿನ ಶಶಾಂಕ ರೆಡ್ಡಿ, ಕಲಬುರ್ಗಿ ಜಿಲ್ಲೆಯ ಶಹಬಾದ್‌ನ ಆನಂದ ದೊಡ್ಡಮನಿ ಹೀಗೆ ಅನೇಕ ಆಟಗಾರರ ಪ್ರತಿಭೆಗೆ ಸಾಣೆ ಹಿಡಿದಿದ್ದು ವಲಯಮಟ್ಟದಲ್ಲಿ ಕೆಎಸ್‌ಸಿಎ ನಡೆಸುವ ಟೂರ್ನಿಗಳು.

ಗ್ರಾಮೀಣ ಪ್ರದೇಶದಲ್ಲಿ ಟೆನಿಸ್‌ ಚೆಂಡಿನೊಂದಿಗೆ ಆಡುತ್ತಿದ್ದ ಈ ಆಟಗಾರರು, ಕಾಲೇಜು ಶಿಕ್ಷಣದ ಸಲುವಾಗಿ ತಮ್ಮ ಹತ್ತಿರದ ನಗರಗಳಿಗೆ ಬಂದವರು. ಅಲ್ಲಿಂದಲೇ ಟರ್ಫ್‌ ಮೇಲೆ ಆಡುವುದನ್ನು ರೂಢಿಸಿಕೊಂಡಿದ್ದಾರೆ.

‘ವರ್ಷದಿಂದ ವರ್ಷಕ್ಕೆ ಕ್ಲಬ್‌ ಮತ್ತು ವಯೋಮಿತಿಯೊಳಗಿನ ಟೂರ್ನಿಗಳನ್ನು ಹೆಚ್ಚು ನಡೆಸುತ್ತಿರುವ ಕಾರಣ ಗ್ರಾಮೀಣ ಭಾಗದ ಆಟಗಾರರಿಗೆ ಅನುಕೂಲವಾಗಿದೆ. ರಾಜ್ಯ ತಂಡದಲ್ಲಿ ನಮ್ಮ ವಲಯದ ಆಟಗಾರರ ಸಂಖ್ಯೆ ಕೂಡ ಹೆಚ್ಚಿದೆ. ಕೆಎಸ್‌ಸಿಎ ಈಗಿನ ಆಟಗಾರರಿಗೆ ಸಾಕಷ್ಟು ಅವಕಾಶ ನೀಡುತ್ತಿದೆ’ ಎಂದು ರಾಯಚೂರು ವಲಯದ ನಿಮಂತ್ರಕ ಸುಜಿತ್‌ ಬೋಹ್ರಾ ಹೇಳಿದರು.


ಕೆಪಿಎಲ್‌ ಪಂದ್ಯಗಳ ಆಯೋಜನೆಗೆ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣ ಸಜ್ಜಾಗಿದೆ

ಕೆಎಸ್‌ಸಿಎ ನೋಂದಾಯಿತ ಕ್ಲಬ್‌ಗಳು ಹೆಚ್ಚುವರಿಯಾಗಿ ಪಂದ್ಯಗಳನ್ನು ಆಡುತ್ತಿವೆ. ಆಟಗಾರರ ಜೊತೆ ಸ್ಥಳೀಯವಾಗಿ ಅಂಪೈರ್‌ಗಳು ಹಾಗೂ ಸ್ಕೋರರ್‌ಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ರಾಜ್ಯ ಕ್ರಿಕೆಟ್‌ ಸಂಸ್ಥೆ ಪ್ರತಿ ವರ್ಷ ಅಂಪೈರ್‌ಗಳ ಪರೀಕ್ಷೆ ನಡೆಸುತ್ತದೆ. ಗುಣಮಟ್ಟ ಹೆಚ್ಚಿಸಲು ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ರಾಯಚೂರು ವಲಯದಲ್ಲಿ ಈಗ 45 ಅಂಪೈರ್‌ಗಳು ಮತ್ತು 25 ಸ್ಕೋರರ್‌ಗಳು ಇದ್ದಾರೆ. ಇದರಿಂದ ಸ್ಥಳೀಯವಾಗಿ ನಡೆಯುವ ಟೂರ್ನಿಗಳಿಗೆ ಸ್ಥಳೀಯರೇ ಅಂಪೈರಿಂಗ್‌ ಜವಾಬ್ದಾರಿ ನಿಭಾಯಿಸುವ ಅವಕಾಶ ಲಭಿಸುತ್ತಿದೆ.

ಮೈಸೂರು ವಲಯದ ವ್ಯಾಪ್ತಿಯಲ್ಲಿ ಕೆಎಸ್‌ಸಿಎಯಿಂದ ಮಾನ್ಯತೆ ಪಡೆದ 43 ಕ್ಲಬ್‌ಗಳಿವೆ. ವರ್ಷಕ್ಕೆ ಸುಮಾರು 300 ಪಂದ್ಯಗಳು ನಡೆಯುತ್ತವೆ. ನಿಕಿನ್ ಜೋಸ್‌, ಗೌತಮ್‌ ಸಾಗರ್‌, ಎಂ. ದರ್ಶನ್‌, ಕಿಶನ್‌, ಎಂ. ವೆಂಕಟೇಶ, ಸಾತ್ವಿಕ್‌ ಶ್ಯಾಮನೂರು, ಅಭಯ ರಂಗ ಹೀಗೆ ಅನೇಕ ಆಟಗಾರರು ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದಿಂದಲೂ ಆಟಗಾರರು ಬೆಳಕಿಗೆ ಬರುತ್ತಿದ್ದಾರೆ.

ಮೂರು ಕೆಎಸ್‌ಸಿಎ ಕ್ರೀಡಾಂಗಣ ಹೊಂದಿರುವ ಹೆಗ್ಗಳಿಕೆಗೆ ಧಾರವಾಡ ವಲಯದಲ್ಲಿಯೂ ಉತ್ತಮ ಸೌಲಭ್ಯಗಳಿವೆ. ಹುಬ್ಬಳ್ಳಿಯಲ್ಲಿ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣ, ಬೆಳಗಾವಿಯ ಆಟೊ ನಗರದಲ್ಲಿರುವ ಕ್ರೀಡಾಂಗಣ ಮತ್ತು ಗದಗನಲ್ಲಿ ಕ್ರೀಡಾಂಗಣಗಳಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿದೆ.

ವಾಣಿಜ್ಯ ನಗರಿಯಲ್ಲಿ ವಿವಿಧ ಕ್ಲಬ್‌ಗಳ ಕ್ರೀಡಾಂಗಣಗಳು ಇವೆ. ಶಿರೂರು ಲೇ ಔಟ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ‘ಬನ್ಜಿ, ಕಿಮ್ಜಿ‘ ಕ್ರೀಡಾಂಗಣದಲ್ಲಿ ಒಂದೇ ಬಾರಿಗೆ ಎರಡು ಪಂದ್ಯಗಳನ್ನು ಆಯೋಜಿಸಲು ವ್ಯವಸ್ಥೆಯಿದೆ. ಇದೇ ಮೈದಾನದಲ್ಲಿ ಕೆಎಸ್‌ಸಿಎ 16 ವರ್ಷದ ಒಳಗಿನವರ ಶಾಲಾ ಟೂರ್ನಿ ಆಯೋಜಿಸಿದೆ.  ಹುಬ್ಬಳ್ಳಿ ಅಮೂದ್‌ ಕಾಳವೆ, ಧಾರವಾಡದ ಪರೀಕ್ಷಿತ್‌ ವಕ್ಕುಂದ ರಾಜ್ಯ ತಂಡದಲ್ಲಿ ಆಡಿದ್ದಾರೆ. ಈ ವಲಯದಲ್ಲಿ ಕೆಎಸ್‌ಸಿಎ ಸುಮಾರು 350 ಪಂದ್ಯಗಳನ್ನು ನಡೆಸುತ್ತದೆ.

ಮನಸ್ಥಿತಿ ಬದಲಾಗಲಿ: ಪ್ರತಿ ವಲಯದಲ್ಲಿಯೂ ಉತ್ತಮ ಆಟಗಾರರು ಇದ್ದಾರೆ. ಆದರೆ, ಅವರ ಅತಿಯಾದ ನಿರೀಕ್ಷೆಯಿಂದ ಸಾಕಷ್ಟು ಪ್ರತಿಭೆಗಳು ಅರ್ಧದಲ್ಲಿಯೇ ಆಟ ತೊರೆಯುವಂತಾಗಿದೆ.

ಮೊದಲ ಬಾರಿಗೆ ಕ್ರಿಕೆಟ್‌ ಬ್ಯಾಟ್‌ ಹಿಡಿಯವ ಆಟಗಾರ ‘ನಾನು ವಿರಾಟ್‌ ಕೊಹ್ಲಿ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್ ಧೋನಿ’ ಆಗಬೇಕೆಂದು ಆಸೆಪಡುತ್ತಾರೆ. ಆ ಸ್ಥಾನಕ್ಕೆ ಹೋಗಲು ಅವರು ಪಟ್ಟ ಕಷ್ಟ ಮತ್ತು ಬದ್ಧತೆ ಬಗ್ಗೆ ಹೊಸ ಆಟಗಾರರು ಯೋಚಿಸುವುದಿಲ್ಲ.

ಈ ರೀತಿಯ ಅತಿಯಾದ ನಿರೀಕ್ಷೆಯಿಂದಲೇ ಸಾಕಷ್ಟು ಆಟಗಾರರು ವಲಯ ಮಟ್ಟದ ಒಂದಷ್ಟು ಟೂರ್ನಿಗಳಲ್ಲಿ ಆಡಿ ವಿದಾಯ ಹೇಳಿಬಿಡುತ್ತಾರೆ. ಅನುಭವ ಹೆಚ್ಚಿಸಿಕೊಳ್ಳಬೇಕಾದ ವಯಸ್ಸಿನಲ್ಲಿಯೇ ಕ್ರಿಕೆಟ್‌ನಿಂದ ದೂರ ಉಳಿಯುತ್ತಾರೆ.

‘ಇತ್ತೀಚಿನ ವರ್ಷಗಳಲ್ಲಿ ನಮ್ಮ ಶೈಕ್ಷಣಿಕ ವ್ಯವಸ್ಥೆ ಮಕ್ಕಳಿಗೆ ಹೊರೆಯಾಗುತ್ತಿದೆ. ಜೊತೆಗೆ ಪಾಲಕರ ಒತ್ತಡ. ಇದೆಲ್ಲದರ ನಡುವೆ ಮಕ್ಕಳನ್ನು ಕ್ರಿಕೆಟ್‌ ಅಭ್ಯಾಸಕ್ಕೆ ಕಳುಹಿಸುವುದು ಕಡಿಮೆ. ತಂಡದಲ್ಲಿ ಬೇಗನೆ ಸ್ಥಾನ ಸಿಗದಿದ್ದರೆ ಆಟದಿಂದ ದೂರ ಉಳಿಯುತ್ತಾರೆ. ಹೆಚ್ಚು ಕಷ್ಟಪಡದೇ ದೊಡ್ಡ ಸ್ಥಾನಕ್ಕೆ ತಲುಪಬೇಕು ಎಂದು ನಿರೀಕ್ಷೆ ಮಾಡುತ್ತಾರೆ’ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯದ ನಿಮಂತ್ರಕ ಡಿ.ಆರ್‌. ನಾಗರಾಜ್ ಹೇಳುತ್ತಾರೆ.

ಮಂಗಳೂರು ವಲಯದ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳು ನಡೆಯುತ್ತವೆ. ಆದರೆ, ಈ ವಲಯದಲ್ಲಿ ಸ್ವಂತ ಕ್ರೀಡಾಂಗಣವಿಲ್ಲದ ಕಾರಣ ಟೂರ್ನಿಗಳನ್ನು ನಡೆಸಲು ಶಾಲಾ, ಕಾಲೇಜುಗಳ ಸಂಘ ಸಂಸ್ಥೆಗಳ ಮೈದಾನವನ್ನೇ ಅವಲಂಬಿಸಬೇಕಾಗಿದೆ. ಮಂಗಳೂರು ವಲಯದಲ್ಲಿ ಶಾಲಾ ಟೂರ್ನಿಗಳಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಪ್ರತಿ ವರ್ಷ ಪಾಲ್ಗೊಳ್ಳುವ ಆಟಗಾರರ ತಂಡಗಳ ಸಂಖ್ಯೆ ಹೆಚ್ಚುತ್ತಿದೆ.

**

‘ಅಂಪೈರಿಂಗ್‌ ವೃತ್ತಿಯಾಗಿ ಸ್ವೀಕರಿಸಿ’

ಮೊದಲು ಬೇರೊಂದು ಕಡೆ ಕೆಲಸ ಮಾಡಿ ನಂತರ ಸಮಯವಿದ್ದರೆ ಮಾತ್ರ ಕ್ರಿಕೆಟ್‌ ಅಂಪೈರಿಂಗ್ ಮಾಡಲು ಬರುತ್ತಿದ್ದರು. ಈಗ ಇದನ್ನು ವೃತ್ತಿಪರವಾಗಿ ಸ್ವೀಕರಿಸಿದರೆ ಸಾಕಷ್ಟು ಅವಕಾಶಗಳು ಲಭಿಸುತ್ತಿವೆ. ವಲಯ ಟೂರ್ನಿಗಳಲ್ಲಿ ಉತ್ತಮ ನಿರ್ವಹಣೆ ತೋರಿದ ಅಂಪೈರ್‌ಗಳಿಗೆ ಬೆಂಗಳೂರಿನಲ್ಲಿ ಪಂದ್ಯಗಳಲ್ಲಿ ಕೆಲಸ ಮಾಡಲು ಅವಕಾಶ ಕೊಡಲಾಗುತ್ತಿದೆ.

ಅಂಪೈರ್‌ಗಳ ಸಂಖ್ಯೆ ಹೆಚ್ಚಿಸಲು ರಾಜ್ಯ ಅಂಪೈರ್‌ಗಳ ಸಂಸ್ಥೆ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಫೋರಂಗಳನ್ನು ಮಾಡಿಕೊಂಡಿವೆ. ಮೊದಲಾದರೆ ಇದನ್ನೇ ವೃತ್ತಿಯಾಗಿ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಉತ್ತಮ ಗೌರವಧನ ಮತ್ತು ಹೆಚ್ಚು ಪಂದ್ಯಗಳು ಲಭಿಸುವುದರಿಂದ ಅವಕಾಶವೂ ಹೆಚ್ಚು. ಅಂಪೈರಿಂಗ್ ಮಾಡುವ ಜೊತೆ ಗುಣಮಟ್ಟ ಸುಧಾರಣೆಗೂ ಒತ್ತು ಕೊಟ್ಟರೆ ಎತ್ತರಕ್ಕೆ ಬೆಳೆಯಬಹುದು.

–ವಿನಾಯಕ ಕುಲಕರ್ಣಿ, ಅಂಪೈರ್‌

**

ರಾಜಕಾರಣಿಗಳ ಹಸ್ತಕ್ಷೇಪ; ಕ್ರೀಡಾಂಗಣ ಕಾರ್ಯ ನನೆಗುದಿಗೆ

ಆರೂ ವಲಯಗಳಲ್ಲಿ ಇನ್ನಷ್ಟು ಕ್ರೀಡಾಂಗಣಗಳನ್ನು ನಿರ್ಮಿಸಲು ಕೆಎಸ್‌ಸಿಎ ಆಸಕ್ತಿ ಹೊಂದಿದೆ. ಆದರೆ, ಸ್ಥಳೀಯ ರಾಜಕಾರಣಿಗಳ ಅತಿಯಾದ ಹಸ್ತಕ್ಷೇಪದಿಂದಾಗಿ ಮೈದಾನದ ಸೌಲಭ್ಯ ಕಲ್ಪಿಸಲು ಆಗುತ್ತಿಲ್ಲ.

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣ ಮತ್ತು ಹೈಕೋರ್ಟ್‌ ಸನಿಹ ಕ್ರೀಡಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ನಿರ್ಮಾಣವಾಗುವ ಕ್ರೀಡಾಂಗಣ ನಮ್ಮ ಹಿಡಿತದಲ್ಲಿಯೇ ಇರಬೇಕು ಎಂದು ರಾಜಕಾರಣಿಗಳು ಬಯಸುತ್ತಿದ್ದಾರೆ. ಆದರೆ, ಕೆಎಸ್‌ಸಿಎ ಇಂತಿಷ್ಟು ವರ್ಷಕ್ಕೆ ಲೀಸ್‌ ನೀಡಿದರೆ ಅದರ ನಿರ್ವಹಣೆ ನೋಡಿಕೊಳ್ಳುತ್ತದೆ. ಇದಕ್ಕೆ ರಾಜಕಾರಣಿಗಳು ಒಪ್ಪುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ.

‘ವಿಜಯಪುರದಲ್ಲಿ ಕೆಎಸ್‌ಸಿಎ ಮೈದಾನ ನಿರ್ಮಿಸುವ ಯೋಜನೆ ಹೊಂದಿದೆ. ಇದಕ್ಕೆ ಸ್ಥಳೀಯ ರಾಜಕಾರಣಿಗಳು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಬೆಂಬಲ ಎಲ್ಲ ಕಡೆ ಲಭಿಸಿದರೆ ಗ್ರಾಮೀಣ ಭಾಗದಲ್ಲಿ ಕ್ರಿಕೆಟ್‌ ಬೆಳೆಯುವ ವೇಗ ಹೆಚ್ಚಾಗುತ್ತದೆ’ ಎಂದು ಹೆಸರು ಹೇಳಲು ಬಯಸದ ವಲಯ ಕೆಎಸ್‌ಸಿಎ ಸಿಬ್ಬಂದಿಯೊಬ್ಬರು ತಿಳಿಸಿದರು.

ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು ನಾಲ್ಕು ಕ್ರಿಕೆಟ್ ಪಂದ್ಯಗಳು ನಡೆಯುತ್ತವೆ. ಇದರ ಅರ್ಧದಷ್ಟು ಪಂದ್ಯಗಳು ಬೆಂಗಳೂರಿನಲ್ಲಿ ನಡೆದರೆ, ಇನ್ನುಳಿದ ಪಂದ್ಯಗಳು ಬೆಂಗಳೂರು ಹೊರಗೆ ನಡೆಯುತ್ತಿವೆ. ರಾಜ್ಯದಲ್ಲಿ ಕೆಎಸ್‌ಸಿಎ ಮಾನ್ಯತೆ ಪಡೆದ 348 ಕ್ಲಬ್‌ಗಳಿವೆ.

**

‘ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಒತ್ತು’

ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿದ ಸೌಲಭ್ಯಗಳನ್ನು ಒದಗಿಸುವುದು ಮತ್ತು ಅಲ್ಲಿನ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಆದ್ದರಿಂದ ಬಿಸಿಸಿಐ ಟೂರ್ನಿಯ ಪಂದ್ಯಗಳನ್ನು ಕೆಎಸ್‌ಸಿಎ ಬೆಂಗಳೂರಿನಿಂದ ಹೊರಗಡೆಯೇ ಹೆಚ್ಚು ಆಯೋಜಿಸುತ್ತಿದೆ.

ದಾವಣಗೆರೆ, ಹಾಸನ, ಮಂಡ್ಯ, ಮಂಗಳೂರಿನಲ್ಲಿ ಹೊಸ ಕ್ರೀಡಾಂಗಣಗಳನ್ನು ನಿರ್ಮಿಸುವುದು ಸದ್ಯದ ಗುರಿ. ರಾಜ್ಯದ ಎಲ್ಲ ಕಡೆ ಕ್ರೀಡಾಂಗಣ ನಿರ್ಮಿಸಿ ಕ್ರಿಕೆಟಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ನಮ್ಮದು. ಸರ್ಕಾರ ಲೀಸ್‌ ಅನುದಾನದಲ್ಲಿ ಭೂಮಿ ಕೊಟ್ಟರೆ ನಾವು ಮೈದಾನ ನಿರ್ಮಿಸಲು ಸಿದ್ಧರಿದ್ದೇವೆ.

ಕ್ರಿಕೆಟಿಗರ ಅಭಿವೃದ್ಧಿಗೆ ನೀಡುವಷ್ಟೇ ಆದ್ಯತೆಯನ್ನು ಅಂಪೈರ್‌ಗಳು ಮತ್ತು ಸ್ಕೋರರ್‌ಗಳ ಸಂಖ್ಯೆ ಹೆಚ್ಚಿಸಲು ಕೂಡ ನೀಡಲಾಗುತ್ತಿದೆ. ಪ್ರತಿ ವರ್ಷ ಕಲಿಕಾ ಅಂಪೈರ್‌ಗಳಿಗೆ ತರಬೇತಿ ಕೊಡಲಾಗುತ್ತದೆ. ಬಿಸಿಸಿಐ ಎಷ್ಟೇ ಟೂರ್ನಿಗಳನ್ನು ನಡೆಸಲು ಅವಕಾಶ ಕೊಟ್ಟರೂ, ಅದಕ್ಕೆ ತಕ್ಕ ಸೌಲಭ್ಯಗಳು ನಮ್ಮಲ್ಲಿವೆ.

–ಆರ್‌. ಸುಧಾಕರ ರಾವ್‌, ಕೆಎಸ್‌ಸಿಎ ಅಧ್ಯಕ್ಷ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !