ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಮೈಸೂರು ವಿ.ವಿ ಹೆಜ್ಜೆಗುರುತು

ಅಖಿಲ ಭಾರತ ಅಂತರ ವಿವಿ ಕ್ರಿಕೆಟ್‌
Last Updated 10 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಶತಮಾನದ ಇತಿಹಾಸ ಹೊಂದಿರುವ ಮೈಸೂರು ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಗ್ಗುರುತು ಮೂಡಿಸಿರುವ ಜತೆಗೆ ಕ್ರೀಡೆಯಲ್ಲೂ ಹೆಸರು ಮಾಡಿದೆ. ಅಖಿಲ ಭಾರತ ಅಂತರ ವಿ.ವಿ ಕ್ರಿಕೆಟ್‌ ಟೂರ್ನಿಯಲ್ಲಿ ‘ರನ್ನರ್‌ ಅಪ್‌’ ಸ್ಥಾನ ಪಡೆದದ್ದು ಮೈಸೂರು ವಿವಿಯ ಇತ್ತೀಚಿನ ಸಾಧನೆ.

ಭುವನೇಶ್ವರದ ಕೆಐಐಟಿ ವಿ.ವಿ ಆಶ್ರಯದಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಮೈಸೂರು ವಿವಿ ತಂಡ ಅಮೃತಸರದ ಗುರುನಾನಕ್ ದೇವ್ ವಿವಿ ಎದುರು ಪರಾಭವಗೊಂಡಿತ್ತು. 130 ರನ್‌ಗಳಿಂದ ಗೆದ್ದಿದ್ದ ಗುರುನಾನಕ್ ವಿವಿ ಚಾಂಪಿಯನ್‌ ಆಗಿತ್ತು. ಟ್ರೋಫಿ ಗೆಲ್ಲುವಲ್ಲಿ ವಿಫಲವಾದರೂ ಮೈಸೂರು ವಿವಿ ತಂಡ ನೀಡಿದ ಪ್ರದರ್ಶನ ಮೆಚ್ಚುಗೆಗೆ ಪಾತ್ರವಾಗಿದೆ.

ರೋಹಿಂಗ್ಟನ್‌ ಬಾರಿಯಾ ಟ್ರೋಫಿಗಾಗಿ ನಡೆಯುವ ಅಖಿಲ ಭಾರತ ಕ್ರಿಕೆಟ್ ಟೂರ್ನಿಯಲ್ಲಿ ಮೈಸೂರು ವಿವಿ ಕೊನೆಯದಾಗಿ 2006–07 ರಲ್ಲಿ ಫೈನಲ್‌ ಪ್ರವೇಶಿಸಿತ್ತು. ಅಂದು ಅಂತಿಮ ಹೋರಾಟದಲ್ಲಿ ಮದ್ರಾಸ್‌ ವಿವಿ ಎದುರು ಪರಾಭವಗೊಂಡಿತ್ತು. 12 ವರ್ಷಗಳ ಬಿಡುವಿನ ಬಳಿಕ ಫೈನಲ್‌ ಪ್ರವೇಶಿಸಲು ಯಶಸ್ವಿಯಾಗಿದ್ದು ತಂಡದ ಸಾಧನೆ ಎನಿಸಿದೆ.

ಮೈಸೂರು ವಿ.ವಿ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರ ಪ್ರದೇಶದ ಜೌನ್‌ಪುರದ ವೀರ್‌ ಬಹಾದೂರ್‌ ಸಿಂಗ್‌ ಪೂರ್ವಾಂಚಲ್‌ ವಿಶ್ವವಿದ್ಯಾಲಯವನ್ನು 28 ರನ್‌ಗಳಿಂದ ಮಣಿಸಿತ್ತು.

ಮೊದಲು ಬ್ಯಾಟ್‌ ಮಾಡಿದ್ದ ಮೈಸೂರಿನ ತಂಡ ನಿಗದಿತ 45 ಓವರ್‌ಗಳಲ್ಲಿ 8 ವಿಕೆಟ್‌ಗೆ 230 ರನ್‌ ಗಳಿಸಿದ್ದರೆ, ಎದುರಾಳಿ ತಂಡ 40 ಓವರ್‌ಗಳಲ್ಲಿ 201 ರನ್‌ಗಳಿಗೆ ಆಲೌಟಾಗಿತ್ತು. ಆರಂಭಿಕ ಆಟಗಾರ ಬಿ.ಧೀಮಂತ್‌ ಮತ್ತು ಎಂ.ವೆಂಕಟೇಶ್ ಅವರು ಅರ್ಧಶತಕ ಗಳಿಸಿ ಮೈಸೂರು ತಂಡಕ್ಕೆ ಆಸರೆಯಾಗಿದ್ದರು.

ಆದರೆ ಫೈನಲ್‌ನಲ್ಲಿ ತಂಡದ ಬ್ಯಾಟಿಂಗ್‌ ವಿಭಾಗ ಕೈಕೊಟ್ಟಿತ್ತು. ಮೊದಲು ಬ್ಯಾಟ್‌ ಮಾಡಿದ್ದ ಗುರುನಾನಕ್‌ ವಿವಿ ತಂಡ 45 ಓವರ್‌ಗಳಲ್ಲಿ 7 ವಿಕೆಟ್‌ಗೆ 275 ರನ್‌ ಗಳಿಸಿದ್ದರೆ, ಮೈಸೂರು ವಿವಿ 35 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟಾಗಿತ್ತು.

‘ಚಾಂಪಿಯನ್‌ ಆಗುವ ಅವಕಾಶ ಕಳೆದುಕೊಂಡರೂ ತಂಡದ ಒಟ್ಟಾರೆ ಸಾಧನೆ ತೃಪ್ತಿ ನೀಡಿದೆ. ಕಳೆದ ಕೆಲ ವರ್ಷಗಳಲ್ಲಿ ತಂಡದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ’ ಎಂದು ಕೋಚ್‌ ಮನ್ಸೂರ್‌ ಅಹ್ಮದ್ ಅವರು ಪ್ರತಿಕ್ರಿಯಿಸಿದ್ದಾರೆ.

‘ಎಲ್ಲ ಆಟಗಾರರ ಸಂಘಟಿತ ಪ್ರಯತ್ನದಿಂದ ಈ ಹಂತಕ್ಕೆ ಏರಲು ಸಾಧ್ಯವಾಗಿದೆ. ಯಶಸ್ಸಿನ ಶ್ರೇಯ ಪ್ರತಿಯೊಬ್ಬ ಆಟಗಾರನಿಗೆ ಸಲ್ಲಬೇಕು’ ಎಂಬುದು ಮ್ಯಾನೇಜರ್‌ ಎಚ್‌.ಎಸ್‌.ಕೃಷ್ಣಕುಮಾರ್ ಅವರ ಹೇಳಿಕೆ.

ಮೈಸೂರಿನ ಮಹಾರಾಜ ಕಾಲೇಜು, ಮಹಾಜನ ಕಾಲೇಜು, ಮಾನಸಗಂಗೋತ್ರಿಯ ಪಿಜಿಎಸ್‌ಸಿ, ಸೇಪಿಯಂಟ್‌ ಕಾಲೇಜು ಮತ್ತು ಟಿಟಿಎಲ್‌ ಕಾಲೇಜಿನ ವಿದ್ಯಾರ್ಥಿಗಳು ಮೈಸೂರು ವಿವಿ ತಂಡದ ಪರ ಆಡಿದ್ದರು. ಮದನ್ ಮೋಹನ್‌ ಅವರು ತಂಡವನ್ನು ಮುನ್ನಡೆಸಿದ್ದರು.

ಶಿವಮೊಗ್ಗದಲ್ಲಿ ನಡೆದಿದ್ದ ದಕ್ಷಿಣ ವಲಯ ಅಂತರ ವಿವಿ ಟೂರ್ನಿಯಲ್ಲಿ ‘ರನ್ನರ್‌ ಅಪ್‌’ ಆಗುವ ಮೂಲಕ ಅಖಿಲ ಭಾರತ ಟೂರ್ನಿಗೆ ಅರ್ಹತೆ ಪಡೆದುಕೊಂಡಿತ್ತು. ಕರ್ನಾಟಕದಿಂದ ಬೆಂಗಳೂರಿನ ಜೈನ್‌ ವಿ.ವಿ ತಂಡ ಕೂಡಾ ಅರ್ಹತೆ ಪಡೆದುಕೊಂಡಿತ್ತು. ಜೈನ್‌ ವಿವಿ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಪರಾಭವಗೊಂಡಿತ್ತು.

1960 ರಿಂದ ಪ್ರಶಸ್ತಿ ಜಯಿಸಿಲ್ಲ

ಮೈಸೂರು ವಿ.ವಿ ತಂಡ ಅಖಿಲ ಭಾರತ ಅಂತರ ವಿವಿ ಕ್ರಿಕೆಟ್‌ ಟೂರ್ನಿಯಲ್ಲಿ 1960–61 ರಲ್ಲಿ ಕೊನೆಯದಾಗಿ ಪ್ರಶಸ್ತಿ ಗೆದ್ದುಕೊಂಡಿತ್ತು. ಅದಕ್ಕೂ ಮುನ್ನ ಎರಡು ಸಲ ಚಾಂಪಿಯನ್‌ ಆಗಿತ್ತು. 1960ರ ಬಳಿಕ ಒಮ್ಮೆಯೂ ಟ್ರೋಫಿ ಜಯಿಸಿಲ್ಲ. 2006–07 ರಲ್ಲಿ ‘ರನ್ನರ್‌ ಅಪ್‌’ ಮತ್ತು 2003–04 ರಲ್ಲಿ ಮೂರನೇ ಸ್ಥಾನ ಪಡೆದುಕೊಂಡಿತ್ತು. ಮೈಸೂರು ವಿವಿ ಹೊರತುಪಡಿಸಿ ಬೆಂಗಳೂರು ವಿವಿ ಮತ್ತು ಜೈನ್‌ ವಿವಿ ತಂಡಗಳು ಮಾತ್ರ ರೋಹಿಂಗ್ಟನ್‌ ಬಾರಿಯಾ ಟ್ರೋಫಿ ಗೆಲ್ಲುವಲ್ಲಿ ಯಶ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT