ಶನಿವಾರ, ಫೆಬ್ರವರಿ 27, 2021
31 °C

ಸರಣಿ ಕೈವಶ ಮಾಡಿಕೊಂಡ ಭಾರತ

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಲಾಡರ್‌ಹಿಲ್, ಅಮೆರಿಕ (ಪಿಟಿಐ): ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಟ್ವೆಂಟಿ–20 ಸರಣಿಯನ್ನು  ಕೈವಶ ಮಾಡಿಕೊಳ್ಳುವುದನ್ನು ತಡೆಯಲು ಮಳೆರಾಯನಿಗೂ ಸಾಧ್ಯವಾಗಲಿಲ್ಲ!

ಭಾನುವಾರ ಇಲ್ಲಿ ನಡೆದ ಸರಣಿಯ ಎರಡನೇ ಪಂದ್ಯವು ಮಳೆಯಿಂದಾಗಿ ಅಪೂರ್ಣವಾಯಿತು. ಆದರೂ ಉತ್ತಮ ಆಟವಾಡಿದ್ದ ಭಾರತ ತಂಡವು 22 ರನ್‌ಗಳಿಂದ (ಡಕ್ವರ್ಥ್‌ ಲೂಯಿಸ್ ನಿಯಮದಡಿ) ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿತು.

ಸೆಂಟ್ರಲ್ ಬ್ರೊವಾರ್ಡ್ ರೀಜನಲ್ ಪಾರ್ಕ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡವು ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಭಾನುವಾರ ರೋಹಿತ್ ಶರ್ಮಾ ಅವರ ಅರ್ಧಶತಕದ ಬಲದಿಂದ ಭಾರತವು ಪಾರಮ್ಯ ಮೆರೆಯಿತು.  ಟಾಸ್ ಗೆದ್ದ ಭಾರತ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 167 ರನ್ ಗಳಿಸಿತು. ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್‌ ತಂಡವು 15.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 98 ರನ್‌ ಗಳಿಸಿತು. ಆಗ ಮಳೆ ಸುರಿದ ಕಾರಣ ಆಟ ನಿಂತಿತು. ವಿಂಡೀಸ್ ಗೆಲುವಿಗೆ 27 ಎಸೆತಗಳಲ್ಲಿ 70 ರನ್‌ಗಳ ಅಗತ್ಯವಿತ್ತು. ಬಹಳ ಹೊತ್ತಾದರೂ ಮಳೆ ನಿಲ್ಲದ ಕಾರಣ ಉತ್ತಮ ರನ್‌ರೇಟ್ ಆಧಾರದಲ್ಲಿ ಭಾರತವನ್ನು ಜಯಶಾಲಿ ಎಂದು ಘೋಷಿಸಲಾಯಿತು. 

ಆರಂಭದಲ್ಲಿಯೇ ಎಡವಿದ ವಿಂಡೀಸ್: ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಅವರು ಆರಂಭದಲ್ಲಿಯೇ ವಿಂಡೀಸ್‌ ತಂಡಕ್ಕೆ ಪೆಟ್ಟು ನೀಡಿದರು. ಎಂಟು ರನ್‌ಗಳಿಗೆ ಎರಡು ವಿಕೆಟ್‌ಗಳು ಪತನವಾದವು. ತಾಳ್ಮೆಯ ಆಟವಾಡಿದ ನಿಕೊಲಸ್ ಪೂರನ್ (19; 34ಎಸೆತ) ಮತ್ತು ಅರ್ಧಶತಕ ಬಾರಿಸಿದ ರೋಮನ್ ಪೊವೆಲ್ (56; 34ಎಸೆತ, 6ಬೌಂಡರಿ, 3ಸಿಕ್ಸರ್) ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದರು. 14ನೇ ಓವರ್‌ನಲ್ಲಿ ಕೃಣಾಲ್ ಪಾಂಡ್ಯ ಎಸೆತವನ್ನು ಪೂರನ್ ಸಿಕ್ಸರ್‌ಗೆ ಎತ್ತಲು ಪ್ರಯತ್ನಿಸಿದರು. ಆದರೆ, ಬೌಂಡರಿ ಲೈನ್ ಅಂಚಿನಲ್ಲಿ ಮನೀಷ್ ಪಾಂಡೆ ಪಡೆದ ಚಾಣಾಕ್ಷ ಕ್ಯಾಚ್‌ನಿಂದಾಗಿ ಔಟಾದರು. ಅದೇ ಓವರ್‌ನಲ್ಲಿ ಪೊವೆಲ್ ಕೂಡ ಎಲ್‌ಬಿಡಬ್ಲ್ಯು ಆದರು.

ರೋಹಿತ್ ಮಿಂಚು: ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ (67; 51ಎಸೆತ, 6ಬೌಂಡರಿ, 3ಸಿಕ್ಸರ್) ಮತ್ತು ಶಿಖರ್ ಧವನ್ (23; 16ಎಸೆತ) ಉತ್ತಮ ಆರಂಭ ನೀಡಿದರು. ಎಂಟು ಓವರ್‌ಗಳಾಗುಷ್ಟರಲ್ಲಿಯೇ ತಂಡದ ಖಾತೆಗೆ 67 ರನ್‌ಗಳು ಹರಿದು ಬರಲು ಇವರಿಬ್ಬರ ಆಟ ಕಾರಣವಾಯಿತು. ‌ಎಂಟನೇ ಓವರ್‌ನಲ್ಲಿ ಶಿಖರ್ ಅವರನ್ನು ಕೀಮೊ ಪಾಲ್ ಅವರು ಔಟ್ ಮಾಡಿದರು.

ಅಗ ಕ್ರೀಸ್‌ಗೆ ಬಂದ ನಾಯಕ ವಿರಾಟ್ ಕೊಹ್ಲಿ (28; 23ಎಸೆತ, 1ಬೌಂಡರಿ, 1ಸಿಕ್ಸರ್) ಕೂಡ ವೇಗವಾಗಿ ರನ್‌ ಗಳಿಸಲು ಪ್ರಯತ್ನಿಸಿದರು. ಶರ್ಮಾ ಮತ್ತು ಕೊಹ್ಲಿ ಜೊತೆಯಾಟದಲ್ಲಿ 48 ರನ್‌ಗಳು ಸೇರಿದವು. ರೋಹಿತ್ ಅವರು ಫುಲ್‌ ಟಾಸ್ ಎಸೆತಗಳಿಗೆ ಸಿಕ್ಸರ್‌ ಹಾದಿ ತೋರಿಸಿದರು. ನಿಧಾನಗತಿಯ ಕಟರ್‌ಗಳಿಗೆ ಬೌಂಡರಿಗೆರೆಯತ್ತ ಕಳಿಸಿದರು. 14ನೇ ಓವರ್‌ನಲ್ಲಿ ಕೊನೆಗೂ  ಥಾಮಸ್ ಯಶಸ್ವಿಯಾದರು. ರೋಹಿತ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಫೀಲ್ಡರ್ ಶಿಮ್ರೊನ್ ಹೆಟ್ಮೆಯರ್‌ಗೆ ಕ್ಯಾಚಿತ್ತರು.

ಯುವ ಆಟಗಾರ ರಿಷಭ್ ಪಂತ್ ತಾವು ಎದುರಿಸಿದ ಐದನೇ ಎಸೆತದಲ್ಲಿ ಥಾಮಸ್ ಹಾಕಿದ ಬೌನ್ಸರ್‌ ಅನ್ನು ಅಪ್ಪರ್ ಕಟ್ ಮಾಡಲು ಯತ್ನಿಸಿ ಕೈಸುಟ್ಟುಕೊಂಡರು. 17ನೇ ಓವರ್‌ನಲ್ಲಿ ಕಾಟ್ರೆಲ್ ಹಾಕಿದ ನೇರ ಎಸೆತದ ವೇಗ ಅರಿಯದ ವಿರಾಟ್ ಕೊಹ್ಲಿ ಬೆಪ್ಪಾದರು. ಮಧ್ಯದ ಸ್ಪಂಪ್ ಮೂರಡಿ ದೂರ ಹೋಗಿ ಬಿದ್ದಿತ್ತು. ಕಾಟ್ರೆಲ್ ಮಿಲಿಟರಿ ಸೆಲ್ಯೂಟ್ ಮಾಡಿ ಸಂಭ್ರಮಿಸಿದರು.

ಗೇಲ್ ದಾಖಲೆ ಮುರಿದ ರೋಹಿತ್

ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಭಾರತದ ರೋಹಿತ್ ಶರ್ಮಾ ಪಾತ್ರರಾದರು. ಫ್ಲಾರಿಡಾದಲ್ಲಿ ಭಾನುವಾರ ವೆಸ್ಟ್ ಇಂಡೀಸ್ ಎದುರು ನಡೆದ ಪಂದ್ಯದಲ್ಲಿ ಅವರು ಒಟ್ಟು ಮೂರು ಸಿಕ್ಸರ್ ಸಿಡಿಸಿದರು. ಇದರೊಂದಿಗೆ ರೋಹಿತ್ ಅವರು ಒಟ್ಟು 106 ಸಿಕ್ಸರ್‌ ಹೊಡೆದ ದಾಖಲೆ ಮಾಡಿದರು. ವಿಂಡೀಸ್‌ನ ಕ್ರಿಸ್‌ ಗೇಲ್ (105) ಅವರ ದಾಖಲೆಯನ್ನು ಮುರಿದರು.

ಹೆಚ್ಚು ಸಿಕ್ಸರ್‌ ಸಿಡಿಸಿದವರು 

ರೋಹಿತ್ ಶರ್ಮಾ(ಭಾರತ)–107

ಕ್ರಿಸ್ ಗೇಲ್(ವಿಂಡೀಸ್)–105

ಮಾರ್ಟಿನ್ ಗಪ್ಟಿಲ್(ನ್ಯೂಜಿಲೆಂಡ್)–103

ಕಾಲಿನ್ ಮನ್ರೊ(ನ್ಯೂಜಿಲೆಂಡ್)–92

ಬ್ರೆಂಡನ್ ಮೆಕ್ಲಮ್(ನ್ಯೂಜಿಲೆಂಡ್)– 91

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು