ಮಂಗಳವಾರ, ಮಾರ್ಚ್ 2, 2021
27 °C
ಅಪ್ಪ ಗಜಾನನ ಮೋರೆ ಅಂತರಾಳ

ಸಹನೆಯೇ ರೋನಿತ್ ಆಸ್ತಿ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

‘ತನ್ನ ಹಾದಿಯನ್ನು ತಾನೇ ರೂಪಿಸಿಕೊಂಡ ಹುಡುಗ. ನಾವು ಯಾವುದಕ್ಕೂ ಅಡ್ಡಿಪಡಿಸಲಿಲ್ಲ. ಆತ ದಾರಿ ತಪ್ಪಲಿಲ್ಲ. ಎದೆಗುಂದಲಿಲ್ಲ. ತನ್ನ ಜೀವನವನ್ನು ತಾನೇ ರೂಪಿಸಿಕೊಂಡ. ಈಗ ಯಶಸ್ಸಿನ ಮೊದಲ ಮೆಟ್ಟಿಲು ಹತ್ತಿದ್ದಾನೆ. ಮುಂದೆಯೂ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ’– ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ವಿಕೆಟ್ ಪಡೆದ ಮಧ್ಯಮವೇಗಿ ರೋನಿತ್ ಮೋರೆ ಅವರ ಅಪ್ಪ ಗಜಾನನ ಮೋರೆ ಅವರ ಮಾತುಗಳಿವು. ಅವರ ನುಡಿಗಳಲ್ಲಿ ಆರ್ದ್ರತೆ ಮತ್ತು ಹೆಮ್ಮೆ ಮೇಳೈಸಿದ್ದವು.

‘ಕುಂದಾನಗರಿ’ ಬೆಳಗಾವಿಯಲ್ಲಿ  ಗಜಾನನ ಮೋರೆ ಉದ್ಯಮಿಯಾಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಣಜಿ ಸೆಮಿಫೈನಲ್‌ನ ಮೊದಲ ಇನಿಂಗ್ಸ್‌ನಲ್ಲಿ ರೋನಿತ್ ಐದು ವಿಕೆಟ್‌ಗಳನ್ನು ಗಳಿಸಿದ ಮಾರನೇ ದಿನ ಅವರು ತಮ್ಮ ಪತ್ನಿ ಸರಿತಾ ಮತ್ತು ದೊಡ್ಡ ಮಗ ನಿಖಿಲ್ ಅವರೊಂದಿಗೆ ಪಂದ್ಯ ನೋಡಲು ಬಂದಿದ್ದರು. ಈ ಋತುವಿನಲ್ಲಿ ಒಟ್ಟು 37 ವಿಕೆಟ್ ಕಬಳಿಸಿದ ರೋನಿತ್ ಬೆಳೆದು ಬಂದ ದಾರಿಯ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ಈ ಋತುವಿನಲ್ಲಿ ರೋನಿತ್ ಕರ್ನಾಟಕದ ಪರ ಅತಿ ಹೆಚ್ಚು ವಿಕೆಟ್‌ ಗಳಿಸಿರುವ ಬೌಲರ್‌ ಆಗಿದ್ದಾರೆ. ಅವರ ಈ ಸಾಧನೆಯ ಹಿಂದಿನ ಗುಟ್ಟೇನು?

–ಯಾವುದೇ ಪರಿಸ್ಥಿತಿಯಲ್ಲಿಯೂ ಸೋಲು ಒಪ್ಪಿಕೊಳ್ಳದ ಮನೋಭಾವ ರೋನಿತ್‌ನದ್ದು. ಅಂದುಕೊಂಡಿದ್ದನ್ನು ಸಾಧಿಸುವವರೆಗೆ ಬಿಡುವ ಮಾತೇ ಇಲ್ಲ. ಅದಕ್ಕಾಗಿ ಎಲ್ಲ ತ್ಯಾಗಕ್ಕೂ ಆತ ಸಿದ್ಧ. ಈ ವರ್ಷ ಆತನಿಗೆ ಅವಕಾಶ ಸಿಕ್ಕಿದ್ದು ಮತ್ತು ಅದನ್ನು ಅವನು ಸಮರ್ಥವಾಗಿ ಬಳಸಿಕೊಂಡಿದ್ದರ ಹಿಂದೆ ಬಹಳಷ್ಟು ಪರಿಶ್ರಮದ ಹಾದಿ ಇದೆ. 2012–13ರಲ್ಲಿ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಮಾಡಿದ್ದ ರೋನಿತ್ ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ತಂಡದಲ್ಲಿ ಅನುಭವಿ ಬೌಲರ್‌ಗಳಾದ ವಿನಯಕುಮಾರ್, ಮಿಥುನ್, ಶರತ್, ಅರವಿಂದ್ ಅವರು ಮಿಂಚುತ್ತಿದ್ದ ದಿನಗಳವು. ಅದರಲ್ಲಿಯೇ ಯಾರಾದರೂ ಗಾಯಗೊಂಡಾಗ ರೋನಿತ್ ಅವಕಾಶ ಪಡೆಯುತ್ತಿದ್ದ. ಈ ಬಾರಿಯ ಟೂರ್ನಿಗೂ ಮುನ್ನದ ಆರು ವರ್ಷಗಳಲ್ಲಿ ಅವನಿಗೆ ಲಭಿಸಿದ್ದು   2 ಪಂದ್ಯಗಳು. ಗಳಿಸಿದ್ದು  29 ವಿಕೆಟ್‌ಗಳನ್ನು. ಆದರೆ ಈ ವರ್ಷ ಸಿಕ್ಕ ಎಂಟು ಪಂದ್ಯಗಳಿಂದ  ಈಗ 37 ವಿಕೆಟ್‌ ಗಳಿಸಿದ. ಅದರಲ್ಲಿ ನಾಲ್ಕು ಸಲ ಐದು ವಿಕೆಟ್‌ಗಳ ಗೊಂಚಲು ಪಡೆದ ಸಾಧನೆ ಮಾಡಿದ್ದಾನೆ. 

ಹಿನ್ನಡೆ ಮತ್ತು ವೈಫಲ್ಯಗಳ ಒತ್ತಡವನ್ನು ರೋನಿತ್ ನಿಭಾಯಿಸುವ ಬಗೆ ಹೇಗೆ?

ರೋನಿತ್ ಹತ್ತು ವರ್ಷ ಕುಟುಂಬದಿಂದ ದೂರವಿದ್ದು ಅಭ್ಯಾಸ ಮಾಡಿದ್ದಾನೆ. ತಂಡಕ್ಕೆ ಆಯ್ಕೆಯಾಗದ ಸಂದರ್ಭದಲ್ಲಿ, ಆಟದಲ್ಲಿ ಹಿನ್ನಡೆಯಾದಾಗ ನಿರಾಶನಾಗುವುದಿಲ್ಲ. 2015ರಲ್ಲಿ ಆತನಿಗೆ ಸವಾಲು ಎದುರಾಗಿತ್ತು. ಹಿಮಾಚಲ ಪ್ರದೇಶ ತಂಡಕ್ಕೆ ಸೇರಿದ್ದ. ಆದರೆ ಗಾಯದ ಕಾರಣದಿಂದ ಆಡಲು ಸಾಧ್ಯವಾಗಲಿಲ್ಲ. ಅದರ ನಂತರದ ವರ್ಷದಲ್ಲಿ ಕರ್ನಾಟಕಕ್ಕೆ ಮರಳಿದ. ಕೆಎಸ್‌ಸಿಎ ಕೂಡ ವಿಶ್ವಾಸವಿಟ್ಟು ತಂಡದಲ್ಲಿ ಸ್ಥಾನ ಕೊಟ್ಟಿತು. ಅದನ್ನು ರೋನಿತ್ ಉಳಿಸಿಕೊಂಡಿದ್ದಾನೆ.

ರೋನಿತ್ ಕ್ರಿಕೆಟ್‌ ಆಡಲು ಆರಂಭಿಸಿದ್ದು ಯಾವಾಗ ಮತ್ತು ಅದರ ಕುರಿತ ಬದ್ಧತೆ ಹೇಗೆ?

–ನಾನು  ವಿದ್ಯಾರ್ಥಿಯಾಗಿದ್ದಾಗ ಕ್ರಿಕೆಟ್ ಆಡುತ್ತಿದ್ದೆ. ನನ್ನ ದೊಡ್ಡ ಮಗ ನಿಖಿಲ್ ಮತ್ತು ರೋನಿತ್ ಕೂಡ ಆಡಲಾರಂಭಿಸಿದರು. ಶಾಲಾಮಟ್ಟದಲ್ಲಿ ರೋನಿತ್  ಓದು ಮತ್ತು ಕ್ರಿಕೆಟ್‌ ಎರಡರಲ್ಲೂ ಉತ್ತಮ ಸಾಧನೆ ಮಾಡಿದ. ನಿಖಿಲ್ ಎಂಬಿಎ ಮಾಡಿ ಉತ್ತಮ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾನೆ. ರೋನಿತ್ ಕ್ರಿಕೆಟ್ ಅನ್ನೇ ಆಯ್ಕೆ ಮಾಡಿಕೊಂಡ.   ಎಂಆರ್‌ಎಫ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವ ಅವಕಾಶ ಪಡೆದು, ಮೆಕ್‌ಗ್ರಾ ಅವರಂತಹ ದಿಗ್ಗಜರ ಮಾರ್ಗದರ್ಶನ ಗಳಿಸಿದೆ. ತಂಡದಿಂದ ಕೈಬಿಟ್ಟಾಗ ದೃತಿಗೆಡುವುದಿಲ್ಲ. ಬದಲಿಗೆ ಹೆಚ್ಚು ಹೆಚ್ಚು ಅಭ್ಯಾಸ ಮಾಡಿ ಫಿಟ್ ಆಗುತ್ತಾನೆ. ಈಗಂತೂ ಫಿಟ್‌ನೆಸ್‌ಗಾಗಿ ಹೆಚ್ಚಿನ ಮಹತ್ವ ನೀಡುತ್ತಿದ್ದಾನೆ. ಐದಾರು ವರ್ಷದ ಹಿಂದೆ ತೆಳ್ಳಗಿದ್ದ ರೋನಿತ್ ಈಗ ಇಲ್ಲಿ ಕೆಲವಾರು ಟ್ರೇನರ್‌ಗಳ ಮಾರ್ಗದರ್ಶನದಲ್ಲಿ ಉತ್ತಮ ಮೈಕಟ್ಟು ಗಳಿಸಿದ್ದಾನೆ.  ಬೆಳಿಗ್ಗೆ ಮೂರು ಮತ್ತು ಸಂಜೆ ಮೂರು ತಾಸುಗಳ ಕ್ರಿಕೆಟ್‌ ಅಭ್ಯಾಸ ಮತ್ತು ಫಿಟ್‌ನೆಸ್‌ಗಾಗಿ ಮೀಸಲು.

ನಿಮಗೆ ರೋನಿತ್ ಆಡಿದ ಯಾವ ಪಂದ್ಯ ಇಷ್ಟ?

– ಡಿವಿಷನ್‌ ನಲ್ಲಿ ಆಡುವ ಪಂದ್ಯಗಳನ್ನು ನೋಡುತ್ತಿದ್ದೆ. ಆದರೆ ರಣಜಿ ನೋಡಿದ್ದು ಕಡಿಮೆ. ಈ ವರ್ಷ ಬೆಳಗಾವಿಯಲ್ಲಿ  ನಡೆದಿದ್ದ ಮುಂಬೈ ಎದುರಿನ ಪಂದ್ಯವನ್ನು ನೋಡಿದ್ದೆ. ಅದರಲ್ಲಿ ಐದು ವಿಕೆಟ್ ಪಡೆದಿದ್ದ. ಅದರ ನಂತರ ಈ (ಸೆಮಿ) ಪಂದ್ಯದಲ್ಲಿಯೂ ಚೆನ್ನಾಗಿ ಆಡಿದ್ದಾನೆ. ಅದಕ್ಕಾಗಿ ನಿನ್ನೆ ರಾತ್ರಿ ಹೊರಟು ಈಗ ಇಲ್ಲಿಗೆ ಬಂದಿದ್ದೇವೆ. ದೂರದಿಂದ ಏಕೆ ಬರುತ್ತೀರಿ. ಟಿವಿಯಲ್ಲಿ ನೋಡಿ ಎಂದು ರೋನಿತ್ ಯಾವಾಗಲೂ ಹೇಳುತ್ತಾನೆ.

ಹತ್ತು ವರ್ಷ ಕುಟುಂಬದಿಂದ ದೂರವೇ ಇದ್ದ. 2013ರಲ್ಲಿ ರಣಜಿ ಅವಕಶ ಸಿಕ್ಕಿತ್ತು.  2015-16ರಲ್ಲಿ ಹಿಮಾಚಲ ಪ್ರದೇಶಕ್ಕೆ ಹೋಗಿದ್ದ. ಅಲ್ಲಿ ಆಡಲು ಯೋಜಿಸಿದ್ದ. ಆದರೆ ಆ ಸಂದರ್ಭದಲ್ಲಿ ಗಾಯವಾಗಿತ್ತು. ಮರಳಿ ಬಂದ. ನಂತರದ ವರ್ಷದಲ್ಲಿ ಕೆಎಸ್‌ಸಿಎಗೆ ಮರಳಿದ. ಸಂಸ್ಥೆಯೂ ಆತನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿತು.

ಆಮ್ಮನ ಅಡುಗೆ ಇಷ್ಟ; ಆದರೆ ಡಯಟ್‌?

‘ರೋನಿತ್‌ಗೆ ನಮ್ಮ ಬೆಳಗಾವಿಯಲ್ಲಿ ರೂಢಿಗತವಾಗಿ ಬಂದಿರುವ ತಿನಿಸುಗಳೆಂದರೆ ಇಷ್ಟ. ಮೋದಕ ಎಂದರೆ ಪ್ರಾಣ. ಆದರೆ ಇತ್ತೀಚೆಗೆ ಡಯಟ್‌ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ. ಆಲೀವ್‌ ಎಣ್ಣೆಯಲ್ಲಿಯೇ ಪದಾರ್ಥಗಳನ್ನು ಸಿದ್ಧಪಡಿಸಬೇಕು. ಎಲ್ಲವೂ ಹಿತ ಮಿತ’ ಎಂದು ತಾಯಿ ಸರಿತಾ ಮೋರೆ ಹೇಳುತ್ತಾರೆ.

‘ಚಿಕ್ಕವನಿದ್ದಾಗಿನಿಂದ ಛಲಗಾರ. ಓದು ಮತ್ತು ಆಟದಲ್ಲಿ ಎರಡರಲ್ಲಿಯೂ ಉತ್ತಮವಾಗಿಯೇ ಇದ್ದ. ನಮಗೆ ಯಾವಾಗಲೂ ಬೇಸರ ಮೂಡಿಸಿಲ್ಲ. ತಾನು ಒತ್ತಡದಲ್ಲಿದ್ದರೂ ನಮ್ಮ ಮುಂದೆ ಹೇಳುವುದಿಲ್ಲ. ಎಲ್ಲವನ್ನೂ ತಾನೇ ಪರಿಹರಿಸಿಕೊಳ್ಳುತ್ತಾನೆ.  ಸ್ವಯಂಪ್ರೇರಣೆಯೊಂದಿಗೆ ಮೇಲೆಳುತ್ತಾನೆ’ ಎಂದು ಭಾವುಕರಾಗುತ್ತಾರೆ.

‘ಅವನಿಗೆ ಎಂಜಿನಿಯರಿಂಗ್ ಶಿಕ್ಷಣ ಕೊಡಿಸುವ ಆಸೆ ಇತ್ತು. ಮಾಡಿಸುವ ಆಸೆ ಇತ್ತು. ಆದರೆ, ಆತ ಕ್ರಿಕೆಟ್‌ನಲ್ಲಿಯೇ ಸಾಧನೆ ಮಾಡಲು ಕಾಮರ್ಸ್‌ ಪದವಿ ಆಯ್ಕೆ ಮಾಡಿಕೊಂಡ. ಅಂದುಕೊಂಡಂತೆ ಯಶಸ್ಸಿನ ಹಾದಿಯಲ್ಲಿದ್ದಾನೆ. ನಾವು ಯಾವತ್ತೂ ಆತನಿಗೆ ಓದಿನ ಕುರಿತು ಒತ್ತಡ ಹೇರಿಲ್ಲ. ಆತನಿಗೆ ಕ್ರಿಕೆಟ್‌ ಎಂದರೆ ಮೊದಲ ಆದ್ಯತೆ, 2015ರಲ್ಲಿ ಅವನ ಅಣ್ಣನ ಮದುವೆ ಇತ್ತು. ಹಿಂದಿನ ರಾತ್ರಿ ಬಂದು, ಮದುವೆ ಮುಗಿದ ದಿನವೇ ರಾಜ್‌ಕೋಟ್‌ನಲ್ಲಿ ಪಂದ್ಯ ಆಡಲು ತೆರಳಿದ್ದ. ಅಷ್ಟರ ಮಟ್ಟಿಗೆ ಆತ ಬದ್ಥೆಯಿರುವ ಹುಡುಗ’ ಎಂದು ಹೇಳಿದ ಸರಿತಾ ಅವರ ಕಂಗಳಲ್ಲಿ ಹೆಮ್ಮೆಯ ಹನಿಗಳು ಫಳಗುಟ್ಟಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.