ಗುರುವಾರ , ಜನವರಿ 23, 2020
20 °C
ಫಿಟ್‌ನೆಸ್‌ ಪರೀಕ್ಷೆಗೆ ನಡೆಸಲು ಎನ್‌ಸಿಎ ನಿರಾಕರಿಸಿದೆ

ಬೂಮ್ರಾ ಫಿಟ್‌ನೆಸ್ ಪರೀಕ್ಷೆಗೆ ನಕಾರ: ದ್ರಾವಿಡ್ ಜೊತೆ ಮಾತಾಡುವೆ ಎಂದ ಗಂಗೂಲಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಭಾರತ ಕ್ರಿಕೆಟ್‌ ತಂಡದ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರ ಫಿಟ್‌ನೆಸ್‌ ಪರೀಕ್ಷೆಗೆ ನಿರಾಕರಿಸಿದ್ದರ ಕುರಿತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅಧ್ಯಕ್ಷ ರಾಹುಲ್‌ ದ್ರಾವಿಡ್‌ ಜೊತೆ ಮಾತನಾಡುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ.

‘ಇದಕ್ಕೆ ನಿಖರ ಕಾರಣ ಏನು ಎಂಬುದನ್ನು ತಿಳಿಯುತ್ತೇನೆ. ಪ್ರತಿಯೊಬ್ಬ ಅಂತರರಾಷ್ಟ್ರೀಯ ಕ್ರಿಕೆಟಿಗನಿಗೂ ಎನ್‌ಸಿಎಯಲ್ಲಿ ಆದ್ಯತೆ ಸಿಗಬೇಕು. ನಾನು ಅಧಿಕಾರಕ್ಕೇರಿದ ಕೆಲವು ತಿಂಗಳ ಬಳಿಕ ಹೀಗಾಗಿದೆ. ರಾಹುಲ್‌ ದ್ರಾವಿಡ್ ಜೊತೆಗೆ ಮಾತನಾಡುತ್ತೇನೆ. ಇದುವರೆಗೆ ಕೆಲವು ಸಲ ಮಾತ್ರ ನಾವಿಬ್ಬರು ಭೇಟಿಯಾಗಿದ್ದೇವೆ. ಸಮಸ್ಯೆ ಏನು ಎಂಬುದನ್ನು ಅರ್ಥಮಾಡಿಕೊಂಡು ಬಗೆಹರಿಸುತ್ತೇವೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿಸಿಸಿಐನಲ್ಲಿ  ‘ದಾದಾ ಗಿರಿ’ ಶುರು

‘ಗಾಯಾಳಾಗಿದ್ದ ಬೂಮ್ರಾ ಅವರನ್ನು ವಿಶ್ರಾಂತಿಗೆ ಕಳುಹಿಸಲಾಗಿತ್ತು. ಆಗ ನಾನು ಅಧಿಕಾರದಲ್ಲಿರಲಿಲ್ಲ ಮತ್ತು ಆಗ ಏನಾಗಿತ್ತು ಎಂಬುದೂ ನನಗೆ ತಿಳಿದಿಲ್ಲ. ಆದರೆ, ಎನ್‌ಸಿಎ ಇರುವುದೇ ಭಾರತದ ಕ್ರಿಕೆಟಿಗರಿಗಾಗಿ. ಪ್ರತಿಯೊಂದೂ ಎನ್‌ಸಿಎ ಮೂಲಕವೇ ನಡೆಯಬೇಕು’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೂ ಮುನ್ನ (ಸೆಪ್ಟೆಂಬರ್ ತಿಂಗಳಲ್ಲಿ) ಬೂಮ್ರಾ ಅವರ ಬೆನ್ನು ಮೂಳೆ ಮುರಿದಿರುವುದು ತಿಳಿದು ಬಂದಿತ್ತು. ಹೀಗಾಗಿ ಅವರು ಸುದೀರ್ಘ ಎರಡು ತಿಂಗಳ ವಿಶ್ರಾಂತಿ ಬಳಿಕ ಅಭ್ಯಾಸಕ್ಕೆ ಮರಳಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯದ ವೇಳೆ ಅವರು ವಿಶಾಖಪಟ್ಟಣದಲ್ಲಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದರು.

ಇದನ್ನೂ ಓದಿ: ಜಸ್‌ಪ್ರೀತ್‌ ಬೂಮ್ರಾಗೆ ಗಾಯ; ಟೆಸ್ಟ್‌ಗೆ ಅಲಭ್ಯ

ಆದರೆ, ಅವರಿಗೆ ಫಿಟ್‌ನೆಸ್‌ ಪರೀಕ್ಷೆ ನಡೆಸಲು ಎನ್‌ಸಿಎ ನಿರಾಕರಿಸಿದೆ. ಈ ಸಂಬಂಧ ಬೂಮ್ರಾ ತಂಡದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಗಾಯಗೊಂಡಿದ್ದ ಸಂದರ್ಭದಲ್ಲಿ ಬೂಮ್ರಾ ವೈಯಕ್ತಿಕ ತಜ್ಞರ ಸಲಹೆ ಮೇರೆಗೆ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಅವರಿಗೆ ಫಿಟ್‌ನೆಸ್‌ ಪರೀಕ್ಷೆ ನಡೆಸಲು ಎನ್‌ಸಿಯ ನಿರಾಕರಿಸಿದೆ ಎಂದೂ ವರದಿಗಳಾಗಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು