ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲಿಸಿದ ಕಾಲವು ಕಲಿಸಿದ ಪಾಠವು

Last Updated 29 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಪಾಠ ಕಲಿಸಿದ ‘ಕಾಫಿ’

ಕನ್ನಡಿಗ ಕಣ್ಣೂರು ಲೋಕೇಶ್ ರಾಹುಲ್ ಅವರಿಗೆ ಇದು ಅಗ್ನಿಪರೀಕ್ಷೆಗೆ ಒಡ್ಡಿದ ವರ್ಷವಾಯಿತು. ಆದರೆ ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಪರೀಕ್ಷೆಯಲ್ಲಿ ಪಾಸ್ ಆದರು. ವರ್ಷದ ಆರಂಭದಲ್ಲಿಯೇ ಟಿ.ವಿ ವಾಹಿನಿ ಕಾಫಿ ವಿಥ್ ಕರಣ್ ರಿಯಾಲಿಟಿ ಶೋನಲ್ಲಿ ಹಾರ್ದಿಕ್ ಪಾಂಡ್ಯ ಜೊತೆಗೆ ಭಾಗವಹಿಸಿದ್ದ ರಾಹುಲ್, ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿ ಟೀಕೆಗೊಳಗಾಗಿದ್ದರು. ನ್ಯೂಜಿಲೆಂಡ್ ಎದುರಿನ ಸರಣಿಯ ಎರಡು ಪಂದ್ಯಗಳಿಂದ ಅಮಾನತು ಕೂಡ ಆಗಿದ್ದರು. ಆ ಆಘಾತದಿಂದ ಹೊರಬರಲು ಹರಸಾಹಸಪಟ್ಟರು. ತಪ್ಪಿಗೆ ಕ್ಷಮೆ ಕೋರಿದರು. ಕೆಲವು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದರು. ಆದರೆ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಪುಟಿದೆದ್ದರು. ಬ್ಯಾಟಿಂಗ್‌ನಲ್ಲಿ ರನ್ ಹೊಳೆ ಹರಿಸಿ, ಕೀಪಿಂಗ್‌ನಲ್ಲಿಯೂ ಮಿಂಚಿದರು. ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಶತಕ, ಅರ್ಧಶತಕಗಳ ಮೂಲಕ ತಮ್ಮತನಕ್ಕೆ ಮರಳಿದರು. ಮುಂದಿನ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕತ್ವಕ್ಕೂ ಆಯ್ಕೆಯಾದರು.

ಬೌಂಡರಿ ಕೌಂಟ್ ಮತ್ತು ಇಂಗ್ಲೆಂಡ್‌ ವಿಶ್ವ ವಿಜಯ

ಏಕದಿನ ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ಕಿರೀಟ ಧರಿಸಿತು. ಅತ್ಯಂತ ರೋಚಕವಾಗಿದ್ದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಇಂಗ್ಲೆಂಡ್ ಜಯಿಸಿತು. ಬೆನ್ ಸ್ಟೋಕ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಸೂಪರ್ ಓವರ್ ಹಂತಕ್ಕೆ ಸಾಗಿದ ಈ ಪಂದ್ಯ ಫಲಿತಾಂಶ ನಿರ್ಧಾರವಾಗಿದ್ದು ಬೌಂಡರಿ ಕೌಂಟ್ ನಿಯಮದಿಂದ. ಎರಡೂ ತಂಡಗಳು ಸಮಬಲ ಸಾಧಿಸಿದ್ದವು. ಆಗ ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿದ್ದ ತಂಡವನ್ನು ಜಯಶಾಲಿ ಎಂದು ಘೋಷಿಸಲಾಯಿತು. ಇಂಗ್ಲೆಂಡ್ 22 ಮತ್ತು ನ್ಯೂಜಿಲೆಂಡ್ 14 ಬೌಂಡರಿ ಗಳಿಸಿದ್ದವು. ಇದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಯಿತು. ಅಪರೂಪಕ್ಕೆ ಬಳಕೆಯಾದ ಈ ನಿಯಮ ಸರಿಯಿಲ್ಲ. ಕಿವೀಸ್‌ಗೆ ಅನ್ಯಾಯವಾಯಿತು ಎಂಬ ಟೀಕೆಗಳೂ ಕೇಳಿಬಂದವು. ಆದರೆ ಕೇನ್ ವಿಲಿಯಮ್ಸ್‌ ನಾಯಕತ್ವ ಮತ್ತು ಅವರ ಬಳಗದ ಆಟ ವಿಶ್ವದಾದ್ಯಂತ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿದ್ದು ಸುಳ್ಳಲ್ಲ.

ಧೋನಿ ದೇಶಪ್ರೇಮ ಮತ್ತು ರನ್‌ಔಟ್

ಮಹೇಂದ್ರಸಿಂಗ್ ಧೋನಿ ಅವರು ಇಡೀ ವರ್ಷದಲ್ಲಿ ಆಡಿದ್ದು 18 ಏಕದಿನ ಮತ್ತು ಐದು ಏಕದಿನ ಪಂದ್ಯಗಳಲ್ಲಿ ಮಾತ್ರ. ಆದರೆ ಸರಾಸರಿ ಪ್ರತಿದಿನವೂ ಸುದ್ದಿಯಲ್ಲಿದ್ದರು. ಹೋದ ಜುಲೈ 9ರಂದು ವಿಶ್ವಕಪ್ ಸೆಮಿಫೈನಲ್‌ನಲ್ಲಿ ರನ್‌ ಔಟ್ ಆದ ನಂತರ ಅವರು ಕ್ರಿಕೆಟ್‌ ಅಂಗಳಕ್ಕೆ ಬಂದಿಲ್ಲ. ಅವರು ಆ ಪಂದ್ಯದಲ್ಲಿ ರನ್‌ ಔಟ್ ಆಗುವುದರೊಂದಿಗೆ ಭಾರತದ ವಿಶ್ವಕಪ್ ಗೆಲುವಿನ ಕನಸೂ ಕಮರಿತ್ತು. ಆದರೆ ಆ ಟೂರ್ನಿಯಲ್ಲಿ ಧೋನಿಯ ಗ್ಲೌಸ್ ಕೂಡ ಸದ್ದು ಮಾಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರು ಭಾರತೀಯ ಸೇನೆಯ ಪ್ಯಾರಾಶೂಟ್ ವಿಭಾಗದ ಲಾಂಛನವಿದ್ದ ಕೈಗವಸು ಧರಿಸಿದ್ದರು. ಅದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದ್ದು ಸುದ್ದಿಯಾಗಿತ್ತು. ಫೆಬ್ರುವರಿ ತಿಂಗಳಲ್ಲಿ ಪುಲ್ವಾಮಾದಲ್ಲಿ ಸೇನೆ ಮೇಲೆ ಅತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದವರ ಗೌರವಾರ್ಥ ಮಾರ್ಚ್‌ನಲ್ಲಿ ರಾಂಚಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಒನ್‌ಡೇ ಪಂದ್ಯದಲ್ಲಿ ಮಹಿ ಸೇರಿದಂತೆ ತಂಡದ ಎಲ್ಲರೂ ಆರ್ಮಿ ಕ್ಯಾಪ್ ಧರಿಸಿದ್ದರು. ಇದು ಕೂಡ ಪಾಕ್‌ ಮಂಡಳಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಮಹಿ, ವಿಶ್ವಕಪ್ ಟೂರ್ನಿಯ ನಂತರ ಎರಡು ವಾರ ಸೇನೆಯೊಂದಿಗೆ ಕಾಶ್ಮೀರ ಗಡಿಯಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ತಮ್ಮ ನಿವೃತ್ತಿಯ ಕುರಿತ ಪ್ರಶ್ನೆಗೆ ಧೋನಿ, ‘ಜನವರಿಯವರೆಗೆ ಕಾಯಿರಿ’ ಎಂದು ಹೇಳಿದ್ದಾರೆ. ಇದೇ ವರ್ಷ ನಿವೃತ್ತರಾದ ಯುವರಾಜ್ ಸಿಂಗ್ ಮತ್ತು ಗೌತಮ್ ಗಂಭೀರ್ ಅವರು ಧೋನಿಯನ್ನು ಟೀಕಿಸದೇ ಇರಲಿಲ್ಲ.

ರೋಹಿಟ್‌ಗೆ ಸೂಪರ್ ವರ್ಷ

‘2019ನೇ ವರ್ಷವನ್ನು ಅವಿಸ್ಮರಣೀಯ ಮಾಡೋಣ’ ಎಂದು ಜನವರಿಯ ಆರಂಭದಲ್ಲಿ ರೋಹಿತ್ ಶರ್ಮಾ ತಾವು ತಂದೆಯಾದ ಖುಷಿಯಲ್ಲಿ ಮಾಡಿದ್ದ ಟ್ವೀಟ್ ಇದು. ಮಗಳ ಕಾಲ್ಗುಣವೇ ಇರಬೇಕು. ಈ ವರ್ಷ ಅವರು ಮುಟ್ಟಿದ್ದೆಲ್ಲಾ ಚಿನ್ನವಾಯಿತು. ಹನ್ನೆರಡು ತಿಂಗಳಲ್ಲಿ ರೋಹಿತ್ ಒಟ್ಟು 2442 ರನ್‌ ಗಳಿಸಿದರು. ಹತ್ತು ಶತಕ ಮತ್ತು ಹತ್ತು ಅರ್ಧಶತಕಗಳು ಅದರಲ್ಲಿವೆ. ವಿಶ್ವಕಪ್ ಟೂರ್ನಿಯಲ್ಲಿ ಅವರ ಬ್ಯಾಟಿಂಗ್ ಸರ್ವಶ್ರೇಷ್ಠವಾಗಿತ್ತು. ಒಂಬತ್ತು ಪಂದ್ಯಗಳಿಂದ 648 ರನ್‌ ಸೇರಿಸಿದರು. ಅದರಲ್ಲಿ ಐದು ಶತಕ ಮತ್ತು ಒಂದು ಅರ್ಧಶತಕ ಇದ್ದವು. ಟೆಸ್ಟ್ ಕ್ರಿಕೆಟ್‌ಗೂ ತಾವು ಸೈ ಎಂದು ಸಾಬೀತು ಮಾಡಿದ್ದಾರೆ. ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ ಮೊದಲ ಬಾರಿಗೆ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದರು. 176 ರನ್ ಹೊಡೆದರು. ಇದೇ ಸರಣಿಯ ರಾಂಚಿ ಟೆಸ್ಟ್‌ನಲ್ಲಿ ದ್ವಿಶತಕ ಕೂಡ ಬಾರಿಸಿದರು. ಕ್ರಿಕೆಟ್‌ನಲ್ಲಿ ಒಟ್ಟು 400ಕ್ಕೂ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿಯೂ ಸೇರಿದರು. ಅವರ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡವು ಐಪಿಎಲ್ ಪ್ರಶಸ್ತಿ ಕೂಡ ಗೆದ್ದಿತು. ವಿರಾಟ್ ಕೊಹ್ಲಿಯ ನಾಯಕತ್ವ ಮತ್ತು ಬ್ಯಾಟಿಂಗ್‌ ಎರಡಕ್ಕೂ ಪೈಪೋಟಿ ಒಡ್ಡುತ್ತಲೇ ರೋಹಿತ್ ಮುನ್ನುಗ್ಗುತ್ತಿದ್ದಾರೆ.

ವಿರೂಷ್ಕಾ ಮತ್ತು ಇಂಜಿನಿಯರ್

ನಾಯಕ ವಿರಾಟ್ ಕೊಹ್ಲಿಯವರ ಪತ್ನಿ ಅನುಷ್ಕಾ ಶರ್ಮಾಗೆ ವಿಶ್ವಕಪ್ ಪಂದ್ಯವೊಂದರಲ್ಲಿ ಆಯ್ಕೆ ಸಮಿತಿಯವರ ಚಹಾ ಸರಬರಾಜು ಮಾಡಿದ್ದರು ಎಂದು ಫಾರೂಕ್ ಇಂಜಿನಿಯರ್ ನೀಡಿದ್ದ ಹೇಳಿಕೆಯು ವಿವಾದವಾಯಿತು. ಅನುಷ್ಕಾ ಕೂಡ ಅದಕ್ಕೆ ತಿರುಗೇಟು ಕೊಟ್ಟರು, ಸ್ವಲ್ಪ ದಿನಗಳ ನಂತರ ಟಿವಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ವಿರಾಟ್ ಕೂಡ ಪ್ರತಿಕ್ರಿಯಿಸಿದ್ದರು. ಇಂತಹ ಕೆಲವು ಟೀಕೆ ಟಿಪ್ಪಣಿಗಳನ್ನು ಎದುರಿಸುತ್ತಲೇ ವಿರಾಟ್ ತಮ್ಮ ಆಟ ಮತ್ತು ಗೆಲುವಿನ ಓಟವನ್ನು ನಿರಂತರವಾಗಿಟ್ಟಿದ್ದು ವಿಶೇಷ. ಒಂದೆರಡು ವಾರ ಹೊರತುಪಡಿಸಿದರೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನ ಅಗ್ರಪಟ್ಟ ಕಾಯ್ದುಕೊಂಡರು. ಹತ್ತಾರು ದಾಖಲೆಗಳನ್ನೂ ನುಚ್ಚುನೂರು ಮಾಡಿದರು. ಗಾಯದ ಸಮಸ್ಯೆಯಿಂದ ದೂರ ಉಳಿದು ತಮ್ಮ ಫಿಟ್‌ನೆಸ್ ಶ್ರೇಷ್ಠತೆಯನ್ನು ಬಿಂಬಿಸಿದರು. ಅವರ ನಾಯಕತ್ವದಲ್ಲಿ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಈಗಾಗಲೇ 360 ಅಂಕ ಗಳಿಸಿ ಅಗ್ರಸ್ಥಾನದಲ್ಲಿದೆ. ವಿದೇಶದಲ್ಲಿಯೂ ಟೆಸ್ಟ್ ಗೆದ್ದ ಸಾಧನೆ ಮಾಡಿದೆ. ಆದರೆ ಈ ವರ್ಷವೂ ಅವರು ಅಂತರರಾಷ್ಟ್ರೀಯ ಟಿ20 ಮಾದರಿಯಲ್ಲಿ ಶತಕ ಗಳಿಸಲಿಲ್ಲ. ಐಪಿಎಲ್‌ನಲ್ಲಿ ಅವರ ಆರ್‌ಸಿಬಿ ಪ್ರಶಸ್ತಿಯನ್ನೂ ಜಯಿಸಲಿಲ್ಲ!

ಬಿಸಿಸಿಐನಲ್ಲಿ ದಾದಾ ಪರ್ವ

ಎರಡೂವರೆ ವರ್ಷಗಳ ನಂತರ ಬಿಸಿಸಿಐಗೆ ಚುನಾಯಿತ ಆಡಳಿತ ಮಂಡಳಿಯು ಅಕ್ಟೋಬರ್‌ನಲ್ಲಿ ನೇಮಕವಾಯಿತು. ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅಧ್ಯಕ್ಷರಾದರು. ಕೇಂದ್ರ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಕಾರ್ಯದರ್ಶಿ, ಸಚಿವ ಅನುರಾಗ್ ಠಾಕೂರ್ ಸಹೋದರ ಅರುಣ್‌ಸಿಂಗ್ ಧುಮಾಲ್ ಖಜಾಂಚಿಯಾಗಿದ್ದಾರೆ. ಇದರೊಂದಿಗೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿದ್ದ ಕ್ರಿಕೆಟ್ ಆಡಳಿತ ಸಮಿತಿಯು ವಿಸರ್ಜನೆಗೊಂಡಿತು. ಆದರೆ ಲೋಧಾ ಶಿಫಾರಸುಗಳ ಆಧಾರಿತವಾದ ನಿಯಮಾವಳಿಯ ಪ್ರಮುಖ ಅಂಶಗಳ ಬದಲಾವಣೆಗೆ ಗಂಗೂಲಿ ಪಡೆಯು ಕೈಹಾಕಿದೆ. ತಿದ್ದುಪಡಿಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಇತ್ತ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿಯೂ ಬದಲಾವಣೆಯ ಗಾಳಿ ಬೀಸಿದೆ. ಇಲ್ಲಿ ನಡೆದ ಚುನಾವಣೆಯಲ್ಲಿ ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಅಧ್ಯಕ್ಷರಾಗಿ ಮತ್ತು ಸಂತೋಷ್ ಮೆನನ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಕೆಪಿಎಲ್ ಫಿಕ್ಸಿಂಗ್ ಕಳಂಕ

ಹಲವು ದಶಕಗಳಿಂದ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ದಿಗ್ಗಜ ಆಟಗಾರರನ್ನು ನೀಡಿದ ಕೀರ್ತಿ ಕರ್ನಾಟಕದ್ದು. ಆದರೆ, ಈ ವರ್ಷ ಬೆಳಕಿಗೆ ಬಂದ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟ್ವೆಂಟಿ–20 ಟೂರ್ನಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಹಗರಣದ ಕಳಂಕ ರಾಜ್ಯ ಕ್ರಿಕೆಟ್‌ ರಂಗಕ್ಕೆ ಆಘಾತ ನೀಡಿತು. ಬೆಳಗಾವಿ ಪ್ಯಾಂಥರ್ಸ್‌ ತಂಡದ ಮಾಲೀಕ ಅಶ್ಫಾಕ್ ಅಲಿ ದಾರ್, ಬಳ್ಳಾರಿ ಟಸ್ಕರ್ಸ್ ತಂಡದ ಆಟಗಾರರಾದ ಸಿ.ಎಂ.ಗೌತಮ್, ಅಬ್ರಾರ್ ಖಾಜಿ ಸೇರಿ ಐವರು ಆಟಗಾರರು, ಆಡಳಿತ ಮಂಡಳಿ ಸದಸ್ಯ ಸುಧೀಂದ್ರ ಶಿಂಧೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದರು. ಕಾರ್ಯದರ್ಶಿ ಅವರ ಮನೆ ಮೇಲೆ ಪೊಲೀಸ್ ದಾಳಿಯೂ ನಡೆಯಿತು. ಆಟಗಾರರು, ಕೋಚ್, ಅಂಪೈರ್ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಮಾಡಿದರು. ಹನಿಟ್ರ್ಯಾಪ್‌ ಮೂಲಕ ಫಿಕ್ಸಿಂಗ್ ಜಾಲಕ್ಕೆ ಆಟಗಾರರು ಬಿದ್ದಿರುವ ರಹಸ್ಯವನ್ನು ಪೊಲೀಸರು ಬಹಿರಂಗಗೊಳಿಸಿದರು. ತನಿಖೆ ಇನ್ನೂ ನಡೆಯುತ್ತಿದೆ.

ಕರ್ನಾಟಕ ಜಯದ ‘ಡಬಲ್’

ಸ್ಫೋಟಕ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಈಚೆಗೆ ಚಿತ್ರನಟಿ ಆಶ್ರಿತಾ ಶೆಟ್ಟಿ ಅವರನ್ನು ಮದುವೆಯಾದರು. ಆದರೆ ಅದಕ್ಕೂ ಮುನ್ನ ಅವರ ನಾಯಕತ್ವದ ರಾಜ್ಯ ತಂಡವು, ಕರ್ನಾಟಕದ ಕ್ರಿಕೆಟ್ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಿತು. ತವರಿನಲ್ಲಿಯೇ ನಡೆದ ವಿಜಯ್ ಹಜಾರೆ ಏಕದಿನ ಟ್ರೋಫಿಯನ್ನು ಗೆದ್ದ ತಂಡವು, ಸೂರತ್‌ನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನೂ ಸತತ ಎರಡನೇ ವರ್ಷ ಮುಡಿಗೇರಿಸಿಕೊಂಡಿತು. ಉಭಯ ಟೂರ್ನಿಗಳ ಫೈನಲ್‌ನಲ್ಲಿಯೂ ಕರ್ನಾಟಕವು ತನ್ನ ಸಾಂಪ್ರದಾಯಿಕ ಎದುರಾಳಿ ತಮಿಳುನಾಡು ವಿರುದ್ಧ ಜಯಿಸಿದ್ದು ವಿಶೇಷ. ಎರಡೂ ಟೂರ್ನಿಗಳಲ್ಲಿ ಹೊಸ ಪ್ರತಿಭೆ ದೇವದತ್ತ ಪಡಿಕ್ಕಲ್ ರನ್‌ಗಳ ಹೊಳೆ ಹರಿಸಿದರು. ಅಭಿಮನ್ಯು ಮಿಥುನ್ ದೇಶಿ ಟಿ20 ಮಾದರಿಯಲ್ಲಿ ಒಂದೇ ಓವರ್‌ನಲ್ಲಿ ಐದು ವಿಕೆಟ್ ಕಿತ್ತು ಸಾಧನೆ ಮೆರೆದರು. ರಣಜಿ ಟ್ರೋಫಿ ಮೊದಲ ಪಂದ್ಯದಲ್ಲಿ ಏಕಾಂಗಿ ಹೋರಾಟ ಮಾಡಿ ಕರ್ನಾಟಕ ತಂಡವನ್ನು ಗೆಲ್ಲಿಸಿದ ಶ್ರೇಯ ಕೃಷ್ಣಪ್ಪ ಗೌತಮ್ ಅವರದ್ದಾಯಿತು. ಈ ಪಂದ್ಯಕ್ಕೆ ಮೂರು ದಿನಗಳ ಮುನ್ನವಷ್ಟೇ ಅವರು ಬೆಂಗಳೂರಿನಲ್ಲಿ ಅರ್ಚನಾ ಅವರೊಂದಿಗೆ ವಿವಾಹವಾಗಿದ್ದರು.

ಮಯಂಕ್ ಹೊಳಪು; ರಿಷಭ್ ಪರದಾಟ

ಕರ್ನಾಟಕದ ರನ್‌ ಯಂತ್ರ ಮಯಂಕ್ ಅಗರವಾಲ್ ಈಗ ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅಕ್ಟೋಬರ್ 2ರಂದು ವಿಶಾಖಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ನಲ್ಲಿ, ತಮ್ಮ ಮೊದಲ ಶತಕವನ್ನು ದ್ವಿಶತಕದಲ್ಲಿ ಪರಿವರ್ತಿಸಿದರು. ನಂತರದ ಟೆಸ್ಟ್‌ನಲ್ಲಿಯೂ ಶತಕ ಬಾರಿಸಿದರು. ನವೆಂಬರ್‌ನಲ್ಲಿ ಇಂದೋರ್ ನಲ್ಲಿ ಬಾಂಗ್ಲಾ ಎದುರು ದ್ವಿಶತಕ ಚಚ್ಚಿದರು. ವಿಂಡೀಸ್ ಎದುರಿನ ಏಕದಿನ ಸರಣಿಯಲ್ಲಿ ಸ್ಥಾನ ಪಡೆದರಾದರೂ ಅಂತಿಮ ಹನ್ನೊಂದರಲ್ಲಿ ಕಣಕ್ಕಿಳಿಯುವ ಅವಕಾಶ ಸಿಗಲಿಲ್ಲ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಅವರು ಬೆಂಚ್ ಕಾದಿದ್ದರು. ಆದರೆ ಮಹೇಂದ್ರಸಿಂಗ್ ಧೋನಿಯ ಸ್ಥಾನವನ್ನು ತುಂಬುವ ಸಮರ್ಥ ಎಂದು ಬಿಂಬಿತವಾಗಿದ್ದ ರಿಷಭ್ ಪಂತ್ ಈಗ ಟೀಕಾಕಾರರ ಕೇಂದ್ರಬಿಂದುವಾಗಿದ್ದಾರೆ. ಆರಂಭದಲ್ಲಿ ಚೆನ್ನಾಗಿ ಆಡಿದ ಅವರು ಕೀಪಿಂಗ್ ಮತ್ತುಬ್ಯಾಟಿಂಗ್‌ನಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದಾಗಿ ತಂಡದಿಂದ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಪುಟಿದ ಪಿಂಕ್ ಬಾಲ್

ಪಿಂಕ್ ಬಾಲ್ ಟೆಸ್ಟ್‌ ಅನ್ನು ವಿರೋಧಿಸುತ್ತಲೇ ಬಂದಿದ್ದ ಭಾರತವು ಈ ಬಾರಿ ತನ್ನ ನಿಲುವು ಬದಲಿಸಿತು. ಸೌರವ್ ಗಂಗೂಲಿ ತವರು ಕೋಲ್ಕತ್ತದಲ್ಲಿ ಪಿಂಕ್ ಬಾಲ್ ಟೆಸ್ಟ್ ನಡೆಯಿತು. ಭಾರತ ಮತ್ತು ಬಾಂಗ್ಲಾ ಎರಡೂ ಮೊದಲ ಬಾರಿಗೆ ಹಗಲು–ರಾತ್ರಿ ಟೆಸ್ಟ್‌ನಲ್ಲಿ ಆಡಿದವು. ಎರಡೂವರೆ ದಿನಗಳಲ್ಲಿ ಪಂದ್ಯ ಮುಗಿದು, ಭಾರತ ಗೆದ್ದಿತು. ಪ್ರತಿವರ್ಷ ಈ ಮಾದರಿ ಟೆಸ್ಟ್ ಪಂದ್ಯವನ್ನು ಎಲ್ಲ ನಗರಗಳಲ್ಲಿಯೂ ಆಯೋಜಿಸುವುದಾಗಿ ಗಂಗೂಲಿ ಘೋಷಿಸಿದರು.

ಪೃಥ್ವಿ ಡೋಪಿಂಗ್;ಶಕೀಬ್ ನಿಷೇಧ

ಭಾರತದ ಯುವ ಪ್ರತಿಭೆ ಪೃಥ್ವಿ ಶಾ ಉದ್ದೀಪನ ಮದ್ದು ಸೇವನೆ ಮಾಡಿದ್ದು ಸಾಬೀತಾಗಿ ಎಂಟು ತಿಂಗಳ ನಿಷೇಧ ಅನುಭವಿಸಿದರು. ಅತ್ತ ಪಕ್ಕದ ಬಾಂಗ್ಲಾದೇಶದ ಅಮೋಘ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದ ವಿಷಯ ಮುಚ್ಚಿಟ್ಟ ಕಾರಣಕ್ಕೆ ಎರಡು ವರ್ಷಗಳ ನಿಷೇಧಕ್ಕೊಳಗಾದರು. ವಿಶ್ವಕಪ್ ಟೂರ್ನಿಯಲ್ಲಿ ಅವರು ಅಮೋಘ ಆಟವಾಡಿ ಗಮನ ಸೆಳೆದಿದ್ದರು.

ವಾರ್ನರ್‌, ಸ್ಮಿತ್ ಮರುಜನ್ಮ

ಒಂದು ತಿಂಗಳ ಹಿಂದೆ ಡೇವಿಡ್ ವಾರ್ನರ್ ಇನ್ನೂ 65 ರನ್‌ಗಳನ್ನು ಗಳಿಸಿದ್ದರೆ ಹೊಸದೊಂದು ಇತಿಹಾಸ ರಚನೆಯಾಗುತ್ತಿತ್ತು. ತಮ್ಮ 400 ರನ್‌ಗಳ ದಾಖಲೆ ಮುರಿದ ವಾರ್ನರ್ ಅವರನ್ನು ಅಭಿನಂದಿಸಲು ವಿಮಾನ ಟಿಕೆಟ್ ಬುಕ್ ಮಾಡಿದ್ದ ಬ್ರಯನ್ ಲಾರಾ ಅಡಿಲೇಡ್‌ಗೆ ಬರುತ್ತಿದ್ದರು. ಆದರೆ ಪಾಕಿಸ್ತಾನ ವಿರುದ್ಧದ ಆ ಟೆಸ್ಟ್‌ನಲ್ಲಿ ವಾರ್ನರ್ 335 ರನ್‌ಗಳನ್ನು ಹೊಡೆದಾಗ, ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು. ಏನೇ ಇರಲಿ; ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರಿಗೆ ಈ ವರ್ಷವು ಮರುಜನ್ಮ ನೀಡಿತು. ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಅನುಭವಿಸಿ ಏಪ್ರಿಲ್‌ನಲ್ಲಿ ಕಣಕ್ಕೆ ಮರಳಿದ ಮೇಲೆ ತಮ್ಮ ಸ್ಪೋಟಕ ಬ್ಯಾಟಿಂಗ್ ಮುಂದುವರಿಸಿದರು. ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿ ಬರುವ ಹೀಯಾಳಿಕೆಗಳನ್ನು ಕೇಳಿಕೊಂಡೇ ರನ್‌ಗಳ ರಾಶಿ ಪೇರಿಸುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಮಿತ್ ಏಳು ಸಾವಿರ ರನ್‌ ಪೂರೈಸಿದ ದಾಖಲೆ ಬರೆದರು. ಆ್ಯಷಸ್ ಟೆಸ್ಟ್‌ನ ಸತತ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದರು. ಒಟ್ಟಿನಲ್ಲಿ ಅವರಿಬ್ಬರ ಸ್ಪೋಟಕ ಬ್ಯಾಟಿಂಗ್‌ಗೆ ಚೆಂಡುಗಳು ರೂಪ ಕಳೆದುಕೊಂಡಿದ್ದು ನಿಜ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT