ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಶ್ರೀಲಂಕಾ ಎರಡನೇ ಟಿ20 ಪಂದ್ಯ ಇಂದು

Last Updated 25 ಫೆಬ್ರುವರಿ 2022, 20:25 IST
ಅಕ್ಷರ ಗಾತ್ರ

ಧರ್ಮಶಾಲಾ: ಲಖನೌನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ತಮಗೆ ಸಿಕ್ಕ ಅವಕಾಶದಲ್ಲಿ ಸಾಮರ್ಥ್ಯ ಸಾಬೀತುಪಡಿಸಿದರು.

ಇಬ್ಬರೂ ಬ್ಯಾಟರ್‌ಗಳ ಅಬ್ಬರದ ಅರ್ಧಶತಕಗಳ ಬಲದಿಂದ ಶ್ರೀಲಂಕಾ ಎದುರಿನ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿದೆ. ಶನಿವಾರ ಹಿಮಾಚಲಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಸರಣಿಯ ಕೊನೆಯ ಮತ್ತು ಮೂರನೇ ಪಂದ್ಯವು ಭಾನುವಾರ ಇಲ್ಲಿಯೇ ನಡೆಯಲಿದೆ.

ಸತತ ಎರಡು ದಿನಗಳಲ್ಲಿ ಪಂದ್ಯಗಳು ಇರುವುದರಿಂದ ಕೆಲವು ಆಟಗಾರರಿಗೆ ವಿಶ್ರಾಂತಿ ಮತ್ತು ಯುವಪ್ರತಿಭೆಗಳಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಮಾರ್ಚ್‌ 4ರಿಂದ ಆರಂಭವಾಗುವ ಟೆಸ್ಟ್ ಸರಣಿಯಲ್ಲಿ ಆಡುವ ಪ್ರಮುಖ ಆಟಗಾರರಿಗೆ ಇಲ್ಲಿ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ.ಆರಂಭಿಕ ಬ್ಯಾಟರ್‌ ಆಗಿ ಇಶಾನ್ ಮತ್ತು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಗೈರಿನಲ್ಲಿ ಶ್ರೇಯಸ್ ಮಿಂಚಿರುವುದು ನಾಯಕ ರೋಹಿತ್ ಶರ್ಮಾ ಅವರಲ್ಲಿ ಸಂತಸ ಹೆಚ್ಚಿಸಿದೆ.

ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಗೂ ಕ್ರಮಾಂಕದಲ್ಲಿ ಬಡ್ತಿ ನೀಡಲು ನಿರ್ಧರಿಸಿದ್ದಾರೆ.

‘ಅವರ ಅನುಭವ ಮತ್ತು ಪ್ರತಿಭೆಯಿಂದ ಬಹಳಷ್ಟು ನಿರೀಕ್ಷೆಗಳಿವೆ. ಅವರು ಇನ್ನೂ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ಹೆಚ್ಚು ರನ್‌ ಗಳಿಸಬೇಕು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡಕ್ಕೆ ಅವರಿಂದ ಬಹಳಷ್ಟು ಉತ್ತಮ ಕಾಣಿಕೆ ಲಭಿಸಲಿದೆ‘ ಎಂದು ರೋಹಿತ್, ಜಡೇಜ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

ಲಖನೌ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದರು. ಆದರೆ, ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಲಭಿಸಲಿಲ್ಲ. ಇಲ್ಲಿ ಅವರು ಅವಕಾಶಕ್ಕಾಗಿ ಕಾದಿದ್ದಾರೆ.

ಪದಾರ್ಪಣೆ ಮಾಡಿದ್ದ ದೀಪಕ್ ಹೂಡಾ ವಿಕೆಟ್ ಗಳಿಸುವಲ್ಲಿ ಸಫಲರಾಗಿರಲಿಲ್ಲ. ಆದರೆ ಅವರಿಗೆ ಮತ್ತೊಂದು ಅವಕಾಶ ಸಿಗುವುದು ಖಚಿತ. ಅವರೊಂದಿಗೆ ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಕೂಡ ಆಡುವುದು ಬಹುತೇಕ ಖಚಿತ.

ಆದರೆ ಪ್ರವಾಸಿ ಬಳಗವು ಸರಣಿಯಲ್ಲಿ ಜಯದ ಆಸೆ ಉಳಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು. ಅನುಭವದ ಕೊರತೆ ಇರುವ ಲಂಕಾ ಬೌಲರ್‌ಗಳು ಶಿಸ್ತಿನ ದಾಳಿ ನಡೆಸುವ ಅನಿವಾರ್ಯತೆ ಇದೆ. ಆತಿಥೇಯರ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಲು ವಿಶೇಷ ತಂತ್ರಗಾರಿಕೆ ರೂಪಿಸುವ ಒತ್ತಡದಲ್ಲಿ ನಾಯಕ ದಸನ್ ಶನಕಾ ಕೂಡ ಇದ್ದಾರೆ.

ಲಂಕಾ ತಂಡದ ಬ್ಯಾಟಿಂಗ್ ಕೂಡ ದುರ್ಬಲವಾಗಿದೆ. ಲಖನೌನಲ್ಲಿ ಆರಂಭಿಕ ಕ್ರಮಾಂಕದ ಆಟಗಾರರು ವೈಫಲ್ಯ ಅನುಭವಿಸಿದ್ದರು. ಮಧ್ಯಮಕ್ರಮಾಂಕದ ಚರಿತಾ ಅಸಲಂಕಾ ಅರ್ಧಶತಕ ಗಳಿಸಿದ್ದರು. ಅವರೊಂದಿಗೆ ಉಳಿದ ಬ್ಯಾಟರ್‌ಗಳೂ ರನ್‌ಗಳ ಕಾಣಿಕೆ ನೀಡಿದರೆ ಮಾತ್ರ ಜಯದ ಕನಸು ನನಸಾಗಬಹುದು. ತವರಿನಲ್ಲಿ ಸತತ ಹತ್ತು ಟಿ20 ಪಂದ್ಯಗಳಲ್ಲಿ ಜಯಿಸಿರುವ ಭಾರತದ ಓಟಕ್ಕೆ ತಡೆಯೊಡ್ಡಬಹುದು.

ತಂಡಗಳು:

ಭಾರತ: ರೋಹಿತ್ ಶರ್ಮಾ (ನಾಯಕ), ಜಸ್‌ಪ್ರೀತ್ ಬೂಮ್ರಾ (ಉಪನಾಯಕ), ಋತುರಾಜ್ ಗಾಯಕವಾಡ, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್‌ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ರವಿ ಬಿಷ್ಣೋಯಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್.

ಶ್ರೀಲಂಕಾ: ದಸುನ್ ಶನಕಾ (ನಾಯಕ),ಚರಿತ ಅಸ್ಲಂಕಾ (ಉಪನಾಯಕ), ಪಥುಮ್ ನಿಸಾಂಕ, ಕುಶಾಲ ಮೆಂಡಿಸ್, ದಿನೇಶ್ ಚಾಂಡಿಮಲ್, ಧನುಷ್ಕಾ ಗುಣತಿಲಕ, ಕಮಿಲ್ ಮಿಶ್ರಾ, ಜೆನಿತ್ ಲಿಯಾಂಗೆ, ಚಾಮಿಕಾ ಕರುಣಾರತ್ನೆ, ದುಷ್ಮಂತ ಚಾಮೀರಾ, ಲಾಹಿರು ಕುಮಾರ, ಬಿನುರಾ ಫರ್ನಾಂಡೊ, ಶಿರನ್ ಫರ್ನಾಂಡೊ, ಮಹೀಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ ಜಯವಿಕ್ರಮ, ಆಶಿಯನ್ ಡೆನಿಯಲ್.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT