ಬೆಂಗಳೂರು: ಶುಕ್ರವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಚಕತೆ ಮುಗಿಲುಮುಟ್ಟಿತ್ತು. ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ‘ಟ್ರಿಪಲ್ ಸೂಪರ್ ಓವರ್’ ನಲ್ಲಿ ಪಂದ್ಯ ಫಲಿತಾಂಶ ನಿರ್ಧಾರವಾಗಿದ್ದೇ ಇದಕ್ಕೆ ಕಾರಣ. ಈ ಜಿದ್ದಾಜಿದ್ದಿಯಲ್ಲಿ ‘ಹಾಲಿ ಚಾಂಪಿಯನ್’ ಹುಬ್ಬಳ್ಳಿ ಟೈಗರ್ಸ್ ಜಯಿಸಿತು. ದಿಟ್ಟ ಹೋರಾಟ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ಮನಗೆದ್ದಿತು.
ಮೂಲತಃ ಮೈಸೂರಿನವರಾದ ಮನ್ವಂತ್ ಕುಮಾರ್ ಅವರು ಹುಬ್ಬಳ್ಳಿ ಬಳಗದ ವಿಜಯದ ರೂವಾರಿಯಾದರು. ಬೌಲಿಂಗ್‌ನಲ್ಲಿಯೂ ಮಿಂಚಿದ್ದ ಅವರು ಮೂರನೇ ಸೂಪರ್ ಓವರ್‌ನಲ್ಲಿ ಎರಡು ಬೌಂಡರಿ ಹೊಡೆಯುವ ಮೂಲಕ ತಂಡವನ್ನು ಗೆಲ್ಲಿಸಿದರು.
ಮಧ್ಯಾಹ್ನ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಹುಬ್ಬಳ್ಳಿ ತಂಡವು 20 ಓವರ್‌ಗಳಲ್ಲಿ 164 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನಟ್ಟಿದ ಬೆಂಗಳೂರು ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 164 ರನ್ ಗಳಿಸಿತು. ಮಯಂಕ್ (54; 34ಎಸೆತ, 4X9) ಅರ್ಧಶತಕ ಗಳಿಸಿದರು. ಬಲಗೈ ಮಧ್ಯಮವೇಗಿ ಮನ್ವಂತ್ (32ಕ್ಕೆ4) ಮತ್ತು ವಿದ್ವತ್ ಕಾವೇರಪ್ಪ (35ಕ್ಕೆ2) ಅವರ ಉತ್ತಮ ಬೌಲಿಂಗ್ ಮಾಡಿದರು. ಪಂದ್ಯ ಟೈ ಆಯಿತು.
ಮೊದಲ ಸೂಪರ್ ಓವರ್‌ನಲ್ಲಿ ಬೆಂಗಳೂರು ತಂಡವು 1 ವಿಕೆಟ್‌ಗೆ 10 ರನ್ ಗಳಿಸಿತು. ಅದರಲ್ಲಿ ಅನಿರುದ್ಧ ಜೋಶಿ ಒಂದು ಸಿಕ್ಸರ್ ಹೊಡೆದರು. ಅದಕ್ಕುತ್ತರವಾಗಿ ಹುಬ್ಬಳ್ಳಿ ತಂಡವೂ ಅಷ್ಟೇ ರನ್ ಗಳಿಸಿತು. ಮನೀಷ್ ಪಾಂಡೆ ಒಂದು ಸಿಕ್ಸರ್ ಗಳಿಸಿದರು. ಇದರಿಂದಾಗಿ ಈ ಓವರ್ ಟೈ ಆಯಿತು.
ಎರಡನೇ ಸೂಪರ್ ಓವರ್ ಆಡಿಸಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ 8 ರನ್ ಮಾ್ರ ಗಳಿಸಿತು. ಆದರೆ ಗುರಿ ಬೆನ್ನಟ್ಟಿದ ಬೆಂಗಳೂರು ತಂಡಕ್ಕೆ ವಿದ್ವತ್ ಅಡ್ಡಗಾಲಾದರು. ಮೊದಲ ಎಸೆತದಲ್ಲಿ ಚೇತನ್ ಅವರು ಬೌಂಡರಿ ಗಳಿಸಿದರು. ಆದರೆ ನಂತರ ಐದು ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಇದರಿಂದಾಗಿ ಮತ್ತೆ ಸಮಬಲವಾಯಿತು.
ಮೂರನೇ ಸೂಪರ್ ಓವರ್ ಮತ್ತಷ್ಟು ರೋಚಕವಾಯಿತು. ಏಕೆಂದರೆ ಈ ಓವರ್ ಶುರುವಾದಾಗ ರಾತ್ರಿ 7.30 ದಾಟಿತ್ತು. 7ಕ್ಕೆ ಆರಂಭವಾಗಬೇಕಿದ್ದ ದಿನದ ಇನ್ನೊಂದು ಪಂದ್ಯ ವಿಳಂಬವಾಗಿತ್ತು. ಆದ್ದರಿಂದ ಜಯಿಸಲು ಉಭಯ ತಂಡಗಳಿಗೆ ಇದು ಕೊನೆ ಅವಕಾಶವಾಗಿತ್ತು. ಇಲ್ಲದಿದ್ದರೆ ಪಂದ್ಯ ಟೈ ಎಂದು ಘೋಷಿಸುವ ಸಾಧ್ಯತೆ ಇತ್ತು.
ಅದರೆ ಮನ್ವಂತ್ ಇದಕ್ಕೆ ಅವಕಾಶ ಕೊಡಲಿಲ್ಲ. ಈ ಓವರ್ ಬೌಲಿಂಗ್ ಮಾಡಿದ ಅವರು ಮೊದಲ ಐದು ಎಸೆತಗಳಲ್ಲಿ ಆರು ರನ್ ಕೊಟ್ಟಿದ್ದರು. ಒಂದು ವಿಕೆಟ್ ಕೂಡ ಪಡೆದಿದ್ದರು. ಆದರೆ ಕೊನೆಯ ಎಸೆತದಲ್ಲಿ ಶುಭಾಂಗ್ ಸಿಕ್ಸರ್‌ಗೆತ್ತಿದರು. ಇದರಿಂದಾಗಿ 12 ರನ್‌ಗಳ ಮೊತ್ತ ದಾಖಲಾಯಿತು. ಮನೀಷ್ ಜೊತೆಗೆ ಬ್ಯಾಟಿಂಗ್‌ಗೆ ಬಂದ ಮನ್ವಂತ್ ಕ್ರಾಂತಿಕುಮಾರ್ ಅವರ ಎರಡನೇ ಎಸೆತ ಮತ್ತು ಕೊನೆಯ ಎಸೆತದಲ್ಲಿ ಒಂದೊಂದು ಬೌಂಡರಿ ಗಳಿಸಿ ಹುಬ್ಬಳ್ಳಿಗೆ ಗೆಲುವಿನ ಕಾಣಿಕೆ ನೀಡಿದರು.
ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 164 (ಮೊಹಮ್ಮದ್ ತಹಾ 31, ಮನೀಷ್ ಪಾಂಡೆ 33, ಅನೀಶ್ವರ್ ಗೌತಮ್ 30, ಮನ್ವಂತ್ ಕುಮಾರ್ 27, ಲವೀಶ್ ಕುಮಾರ್ 17ಕ್ಕೆ5, ಕ್ರಾಂತಿಕುಮಾರ್ 33ಕ್ಕೆ2) ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 164 (ಮಯಂಕ್ ಅಗರವಾಲ್ 54, ನಿರಂಜನ್ ನಾಯಕ 19, ಸೂರಜ್ ಅಹುಜಾ 26, ನವೀನ್ ಎಂ.ಜಿ 23, ವಿದ್ವತ್ ಕಾವೇರಪ್ಪ 35ಕ್ಕೆ2, ಎಲ್. ಮನ್ವಂತ್ ಕುಮಾರ್ 32ಕ್ಕೆ4, ಎಲ್.ಆರ್. ಕುಮಾರ್ 33ಕ್ಕೆ1) ಫಲಿತಾಂಶ: ಪಂದ್ಯ ಟೈ. ಹುಬ್ಬಳ್ಳಿ ಟೈಗರ್ಸ್‌ಗೆ 3ನೇ ಸೂಪರ್ ಓವರ್‌ನಲ್ಲಿ ಜಯ. ಪಂದ್ಯದ ಆಟಗಾರ: ಮನ್ವಂತ್ ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.