ಶುಕ್ರವಾರ, ಜನವರಿ 15, 2021
21 °C
ಬಿಸಿಸಿಐ–ಸಿಎ ಜಂಟಿ ತನಿಖೆ ಆರಂಭ: ಒಳಾಂಗಣದಲ್ಲಿ ಊಟ ಮಾಡಿದ ವಿಡಿಯೊ ಬಹಿರಂಗ

ಕೋವಿಡ್ ತಡೆ ಶಿಷ್ಟಾಚಾರ ಉಲ್ಲಂಘನೆ; ಭಾರತದ ಐವರು ಕ್ರಿಕೆಟಿಗರಿಗೆ ಐಸೋಲೇಷನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಕೋವಿಡ್ ತಡೆ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆನ್ನಲಾದ ಭಾರತ ಕ್ರಿಕೆಟ್ ತಂಡದ  ಉಪನಾಯಕ ರೋಹಿತ್ ಶರ್ಮಾ ಸೇರಿ ಐವರು ಆಟಗಾರರಿಗೆ ಪ್ರತ್ಯೇಕವಾಸ ಮಾಡಲು ಸೂಚಿಸಲಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲು ನಿರ್ಧರಿಸಲಾಗಿದೆ.

ಹೊಸ ವರ್ಷ ಸಂಭ್ರಮಾಚರಣೆಯ ವೇಳೆ ರೋಹಿತ್ ಶರ್ಮಾ, ವಿಕೆಟ್‌ಕೀಪರ್ ರಿಷಭ್ ಪಂತ್, ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್, ಮಧ್ಯಮವೇಗಿ ನವದೀಪ್ ಸೈನಿ ಮತ್ತು ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರು ಹೋಟೆಲೊಂದರ ಒಳಾಂಗಣದಲ್ಲಿ ಊಟ ಮಾಡಿದ್ದರೆನ್ನಲಾಗಿದೆ. ಅಭಿಮಾನಿಯೊಬ್ಬರು ಆಟಗಾರರು ಊಟ ಮಾಡುತ್ತಿರುವ ವಿಡಿಯೊವನ್ನು ಶುಕ್ರವಾರ ಟ್ವಿಟರ್‌ನಲ್ಲಿ ಹಾಕಿದ್ದರು.

ಶಿಷ್ಟಾಚಾರದ ಪ್ರಕಾರ ಆಟಗಾರರು ಹೋರಾಂಗಣದಲ್ಲಿರುವ ವ್ಯವಸ್ಥೆಯಲ್ಲಿ ಊಟ ಮಾಡಬೇಕು. ಸಾಮಾಜಿಕ ಅಂತರ ಪಾಲಿಸಬೇಕು. ಒಳಾಂಗಣದಲ್ಲಿ ಮಾಡುವಂತಿಲ್ಲ.

’ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೊದ ಕುರಿತು ಮಾಹಿತಿ ದೊರೆತಿದೆ. ಅದರಲ್ಲಿ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿಯವರು ಹೊಸ ವರ್ಷದ ದಿನ ಮೆಲ್ಬರ್ನ್‌ನಲ್ಲಿ ಒಳಾಂಗಣ ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿರುವುದು ಕಂಡುಬಂದಿದೆ‘  ಎಂದು ಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

’ಆಟಗಾರರು ಹೊರಗಡೆ ಊಟಕ್ಕೆ ತೆರಳಲು  ಅವಕಾಶ ಇದೆ. ಆದರೆ ಅಲ್ಲಿ ಪಾಲಿಸಬೇಕಾದ ಕುರಿತು ನಿಯಮಗಳೂ ಇವೆ. ಅವುಗಳ ಉಲ್ಲಂಘನೆಯಾಗಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕಿದೆ‘ ಎಂದೂ ಉಲ್ಲೇಖಿಸಿದೆ.

’ಉಭಯ ತಂಡಗಳ ವೈದ್ಯರ ಸಲಹೆಯ ಮೇರೆಗೆ ಈ ಐವರು ಆಟಗಾರರನ್ನು ತಂಡದ ಉಳಿದವರಿಂದ ಪ್ರತ್ಯೇಕಿಸಲಾಗಿದೆ. ತರಬೇತಿ ಮತ್ತು ಪ್ರಯಾಣದ ಸಮಯದಲ್ಲಿಯೂ ಇವರಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ‘ ಎಂದು ಸಿಎ ಸ್ಪಷ್ಟಪಡಿಸಿದೆ.

ಅಲ್ಲಗಳೆದಿದ್ದ ಬಿಸಿಸಿಐ: ಶನಿವಾರ ಮಧ್ಯಾಹ್ನ ಈ ವಿಡಿಯೊ ಕುರಿತು ಚರ್ಚೆ ಆರಂಭವಾದಾಗ, ತಮ್ಮ ತಂಡದ ಆಟಗಾರರು ನಿಯಮ ಉಲ್ಲಂಘನೆ ಮಾಡಿಲ್ಲವೆಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದರು.

’ಆಸ್ಟ್ರೇಲಿಯಾದ ಮಾಧ್ಯಮಗಳು ಭಾರತ ತಂಡದ ವಿರುದ್ಧ ಈ ರೀತಿ ಅಪಪ್ರಚಾರ ಮಾಡುತ್ತಿವೆ‘ ಎಂದೂ ಹೇಳಿದ್ದರು.

14 ದಿನಗಳ ಕ್ವಾರಂಟೈನ್ ನಂತರ ಮೂರು ದಿನಗಳ ಹಿಂದಷ್ಟೇ ರೋಹಿತ್, ತಂಡ ಸೇರಿಕೊಂಡಿದ್ದರು. ಶುಕ್ರವಾರ ಉಪನಾಯಕರಾಗಿಯೂ ನೇಮಕವಾಗಿದ್ದರು. ಇದೇ 7ರಂದು  ಮೂರನೇ ಟೆಸ್ಟ್ ನಡೆಯಲಿರುವ ಸಿಡ್ನಿಗೆ ಸೋಮವಾರದಂದು ತಂಡಗಳು ತೆರಳಲಿವೆ.

ಅಭಿಮಾನಿಯ ವಿಡಿಯೊ
ಆಸ್ಟ್ರೇಲಿಯಾದಲ್ಲಿರುವ ಭಾರತ ನವದೀಪ್ ಸಿಂಗ್ ಅವರು ಈ ವಿಡಿಯೊ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

‘ನನ್ನೆದುರಿನ ಟೇಬಲ್‌ನಲ್ಲಿ ರೋಹಿತ್, ನವದೀಪ್, ರಿಷಭ್ ಇದ್ದಾರೆ..’ ಎಂಬ ಶೀರ್ಷಿಕೆ ಹಾಕಿದ್ದರು.

‘ನಾನು ಅವರ ಊಟದ ಬಿಲ್ ಪಾವತಿಸಿದ್ದಕ್ಕೆ ರೋಹಿತ್ ಶರ್ಮಾ ಮತ್ತು ರಿಷಬ್ ಪಂತ್ ಅವರು ಮುಜುಗರಪಟ್ಟು ದುಡ್ಡು ಮರಳಿ ಪಡೆಯುವಂತೆ ಹೇಳಿದರು. ನಾನು ಸಮ್ಮತಿಸಲಿಲ್ಲ. ಇದು ನನ್ನ ಪ್ರೀತಿಯ ಕಾಣಿಕೆಯೆಂದೆ. ರಿಷಭ್ ನನ್ನನ್ನು ಆಲಂಗಿಸಿಕೊಂಡರು. ಹಣ ಮರಳಿ ಪಡೆಯುವಂತೆ ಕೇಳಿಕೊಂಡರು’ ಎಂದು ಸಿಂಗ್ ತಮ್ಮ ಟ್ವೀಟ್‌ನಲ್ಲಿ ಬಿಲ್‌ ಚಿತ್ರದ ಜೊತೆಗೆ ಹಾಕಿದ್ದರು. ಆಲಂಗಿಸಿಕೊಂಡಿರುವ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘನೆಯ ಚರ್ಚೆ ಜೀವ ಪಡೆಯಿತು.

ಆಗ ಎಚ್ಚೆತ್ತ ಅಭಿಮಾನಿಯು ರಿಷಭ್ ತಮ್ಮನ್ನು ಆಲಂಗಿಸಿಕೊಂಡಿಲ್ಲ ಎಂದು ಸ್ಪಷ್ಟಿಕರಣ ನೀಡಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು