ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನೆಯಲ್ಲಿ ಧಾರ್ಮಿಕ ಶಿಕ್ಷಕರ ನೇಮಕದಲ್ಲಿ ಲಂಚ : ಸಿಬಿಐ ತನಿಖೆ ಸುಳಿಯಲ್ಲಿ ಅಧಿಕಾರಿಗಳು

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಧಾರ್ಮಿಕ ಶಿಕ್ಷಕರ ನೇಮಕ ಸೇನೆಯ ಕೆಲವು ಅಧಿಕಾರಿಗಳಿಗೆ ಹಣ ಮಾಡುವ ದಂಧೆಯಾಗಿತ್ತು ಎಂಬ ವಿಚಾರ ಬಯಲಾಗಿದೆ. ಅನಾಮಧೇಯ ದೂರುಗಳ ಆಧಾರದಲ್ಲಿ ನಡೆದ ತನಿಖೆಯು ಕೆಲವು ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಧಾರ್ಮಿಕ ಶಿಕ್ಷಕರಾಗಿ 2013ರಲ್ಲಿ ನೇಮಕವಾದ ಒಂಬತ್ತು ವ್ಯಕ್ತಿಗಳು ಕನಿಷ್ಠ ₹15.55 ಲಕ್ಷದಷ್ಟು ಲಂಚ ನೀಡಿದ್ದಾರೆ. ಈ ಹಣವನ್ನು ಬ್ಯಾಂಕ್‌ ಖಾತೆ ಮೂಲಕವೇ ಪಾವತಿಸಲಾಗಿದೆ. ಹಾಗಾಗಿ ಸೇನೆಯ ಆಂತರಿಕ ತನಿಖಾಧಿಕಾರಿಗಳಿಗೆ ಜಾಲವನ್ನು ಭೇದಿಸುವುದು ಸುಲಭವಾಯಿತು.

ಹೈದರಾಬಾದ್‌ನ ಜನರಲ್‌ ಕಮಾಂಡ್‌ ಕಚೇರಿಯ ದೂರಿನ ಅನ್ವಯ ಸಿಬಿಐ ತನಿಖೆ ಆರಂಭಿಸಿದೆ. ಧಾರ್ಮಿಕ ಶಿಕ್ಷಕರಾಗಿ ನೇಮಕವಾದ ಒಂಬತ್ತು ಮಂದಿ ಮತ್ತು ಸೇನೆಯ ಮೂವರು ಅಧಿಕಾರಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಸೇನೆಯ ಹೊರಗಿನ ಐವರು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಸೇನಾ ಘಟಕದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳನ್ನು ನಡೆಸಲು ಮತ್ತು ಯೋಧರಲ್ಲಿ ಆಧ್ಯಾತ್ಮಿಕ ಸ್ಫೂರ್ತಿ ತುಂಬಲು ಧಾರ್ಮಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಸೇನೆಯ ಆಂತರಿಕ ತನಿಖೆಯು ದೀರ್ಘ ಕಾಲ ನಡೆದಿತ್ತು. ಆರೋಪಿಗಳು ದೇಶದ ವಿವಿಧ ಭಾಗಗಳಿಗೆ ಸೇರಿದವರು. ಅವರ ಬ್ಯಾಂಕ್‌ ಖಾತೆಗಳ ವಿವರಗಳನ್ನು ಪಡೆದುಕೊಳ್ಳುವುದು ಮತ್ತು ನಾಗರಿಕ ಸಮಾಜದ ಸಾಕ್ಷಿಗಳ ವಿಚಾರಣೆ ನಡೆಸುವುದಕ್ಕೆ ಹೆಚ್ಚು ಸಮಯ ತಗುಲಿದೆ. ಹಾಗಾಗಿ ಕಳೆದ ಗುರುವಾರವಷ್ಟೇ ಸೇನೆಯಿಂದ ಸಿಬಿಐಗೆ ದೂರು ಸಲ್ಲಿಕೆಯಾಗಿದೆ.

ಆರಂಭದಲ್ಲಿಯೇ ವಿಘ್ನ: ನೇಮಕಾತಿ ಪ್ರಕ್ರಿಯೆಯ ಆರಂಭದಲ್ಲಿಯೇ ಹಲವು ಅಡ್ಡಿಗಳು ಎದುರಾಗಿದ್ದವು. ಸೇನೆಯಲ್ಲಿ ಧಾರ್ಮಿಕ ಶಿಕ್ಷಕರಾಗಿರುವ ಸುಬೇದಾರ್‌ ಎಂ.ಎನ್‌. ತ್ರಿಪಾಠಿ ಅವರು ನೇರವಾಗಿ ಅಭ್ಯರ್ಥಿಗಳನ್ನು ಸಂಪರ್ಕಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ತ್ರಿಪಾಠಿ ಅವರನ್ನು ಸಂದರ್ಶಕರ ಸಮಿತಿಯಿಂದ ತೆಗೆದು ಹಾಕಲಾಗಿತ್ತು.

ತ್ರಿಪಾಠಿ ಅವರ ಬದಲಿಗೆ ಸತ್ಯಪ್ರಕಾಶ್‌ ಎಂಬ ಧಾರ್ಮಿಕ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಆದರೆ, ಸತ್ಯಪ್ರಕಾಶ್‌ ಮತ್ತು ಇನ್ನೊಬ್ಬ ಧಾರ್ಮಿಕ ಶಿಕ್ಷಕ ಎಂ.ಕೆ. ಪಾಂಡೆ ಅವರ ಮೂಲಕ ನೇಮಕಾತಿ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ತ್ರಿಪಾಠಿ ಯತ್ನಿಸಿದ್ದಾರೆ ಎಂದು ದೂರು ದಾಖಲಾಗಿದೆ.
**
ವಂಚನೆ ವಿಧಾನ 
ಲಂಚ ನೀಡಿದ ಅಭ್ಯರ್ಥಿಗಳ ಪಟ್ಟಿಯನ್ನು ಸಂದರ್ಶನ ಸಮಿತಿಯಲ್ಲಿದ್ದ ಧಾರ್ಮಿಕ ಶಿಕ್ಷಕ ಸತ್ಯಪ್ರಕಾಶ್‌ಗೆ ನೀಡುವುದು. ಈ ಪಟ್ಟಿಯಲ್ಲಿ ಇರುವವರಿಗೆ ಸರಳವಾದ ಪ್ರಶ್ನೆಗಳನ್ನು ಮಾತ್ರ ಕೇಳುವುದು. ಅವರಿಗೆ ಗರಿಷ್ಠ ಅಂಕಗಳನ್ನು ನೀಡಿ ನೇಮಕ ಆಗುವಂತೆ ನೋಡಿಕೊಳ್ಳುವುದು. ಪ್ರಮುಖ ಆರೋಪಿ ತ್ರಿಪಾಠಿಯು ಸತ್ಯಪ್ರಕಾಶ್‌ಗೆ 20 ಅಭ್ಯರ್ಥಿಗಳ ಪಟ್ಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT