ಕ್ರಿಕೆಟ್: ಭಾರತ ‘ಎ’ ತಂಡಕ್ಕೆ ರೋಚಕ ಜಯ

7
ಗೆಲುವಿನ ದಡ ಸೇರಿಸಿದ ಅಂಕಿತ್ ಭಾವ್ನೆ

ಕ್ರಿಕೆಟ್: ಭಾರತ ‘ಎ’ ತಂಡಕ್ಕೆ ರೋಚಕ ಜಯ

Published:
Updated:
Deccan Herald

ಬೆಂಗಳೂರು: ಜಯ ಗಳಿಸಲು ಲಭಿಸಿದ ಪುಟ್ಟ ಅವಕಾಶವನ್ನು ಭಾರತ ‘ಎ’ ತಂಡವು ಬಿಟ್ಟುಕೊಡಲಿಲ್ಲ. ಛಲ ಮತ್ತು ದಿಟ್ಟತನದಿಂದ ಆಡಿದ ಶ್ರೇಯಸ್ ಅಯ್ಯರ್ ಬಳಗವು 6 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ‘ಎ’ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು. 

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ  ‘ಟೆಸ್ಟ್‌’ ಪಂದ್ಯವು ಮಂಗಳವಾರ ದಿನದಾಟದ ಅಂತ್ಯಕ್ಕೆ ಕುತೂಹಲಕರ ಘಟ್ಟ ತಲುಪಿತು. ನಾಲ್ಕು ಗಂಟೆ ಸುಮಾರಿಗೆ ಮಳೆ ಮೋಡಗಳು ದಟ್ಟೈಸಿ,  ಬೆಳಕು ಮರೆಯಾಗುತ್ತಿತ್ತು. ಆಗ ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತ ‘ಎ’ ತಂಡದ ಮುಂದೆ 55 ರನ್‌ಗಳ ಗುರಿಯನ್ನು ಮುಟ್ಟುವ ಸವಾಲು ತಂಡದ ಮುಂದಿತ್ತು. ಮೇಲ್ನೋಟಕ್ಕೆ ಸಣ್ಣ ಮೊತ್ತದಂತೆ ಕಂಡರೂ ಕಡಿಮೆ ಸಮಯದಲ್ಲಿ ಸಾಧಿಸುವುದು ಕಷ್ಟವಾಗಿತ್ತು. ಆದರೆ, 6.2 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಜಯಿಸಿತು. ಅಂಕಿತ ಭಾವ್ನೆ (ಅಜೇಯ 28; 18ಎಸೆತ, 3ಬೌಂಡರಿ) ಮತ್ತು ಆರ್. ಸಮರ್ಥ್ (ಅಜೇಯ 5; 4 ಎಸೆತ) ಅವರ ದಿಟ್ಟ ಆಟವು ಗೆಲುವಿಗೆ ಕಾರಣವಾಯಿತು. 

ಸೋಲು ತಪ್ಪಿಸಿಕೊಳ್ಳುವ ಛಲದಲ್ಲಿದ್ದ ಪ್ರವಾಸಿ ತಂಡದ ನಾಯಕ ಮಿಚೆಲ್ ಮಾರ್ಷ್ ‘ಚಾಣಾಕ್ಷ’ ಫೀಲ್ಡಿಂಗ್ ತಂತ್ರವನ್ನು ಅನುಸರಿಸಿದರು. ಮೂವತ್ತು ಯಾರ್ಡ್‌ ವೃತ್ತದೊಳಗೆ ಇಬ್ಬರು ಫೀಲ್ಡರ್‌ಗಳು ಮಾತ್ರ ಇದ್ದರು. ಉಳಿದವರೆಲ್ಲರೂ ಬೌಂಡರಿಗೆರೆಯ ಬಳಿ ನಿಯೋಜಿತರಾಗಿದ್ದರು. ಇದರಿಂದಾಗಿ ಬೌಂಡರಿ, ಸಿಕ್ಸರ್‌ಗಳನ್ನು ಗಳಿಸುವುದು ಸುಲಭವಾಗಿರಲಿಲ್ಲ. ವೇಗಿಗಳಾದ ಮೈಕೆಲ್ ನೆಸೆರ್  ಮತ್ತು ಕ್ರಿಸ್ ಟ್ರೆಮೆನ್  ಉತ್ತಮ ದಾಳಿಯನ್ನು ಎದುರಿಸುವುದು ಕೂಡ ಸವಾಲಿನದಾಗಿತ್ತು. ಆದ್ದರಿಂದ ನಾಯಕ ಶ್ರೇಯಸ್ ಅಯ್ಯರ್ ಅವರು ಶುಭಮನ್ ಗಿಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿದರು. ಆದರೆ ಮೊದಲ ಓವರ್‌ನಲ್ಲಿ ಶ್ರೇಯಸ್ ಅಯ್ಯರ್ ಕ್ಲೀನ್‌ ಬೌಲ್ಡ್‌ ಆದರು. ಎರಡನೇ ಓವರ್‌ನಲ್ಲಿ ಗಿಲ್ ಕೂಡ ಅದೇ ರೀತಿ ಔಟಾದರು. ಅಬ್ಬರದ ಆಡುವ ಕೆ. ಗೌತಮ್ ಕ್ರೀಸ್‌ಗೆ ಬಂದರು. ಆದರೆ ಅವರೂ ಮೂರನೇ ಓವರ್‌ನ ಮೊದಲ ಎಸೆತದಲ್ಲಿ ಔಟಾದರು. ಇದರಿಂದಾಗಿ ಕೇವಲ 11 ರನ್‌ಗೆ ಮೂರು ವಿಕೆಟ್‌ಗಳು ಪತನವಾದವು.

ನಂತರ ಬಂದ ಕೋನಾ ಶ್ರೀಕರ ಭರತ್ ಅವರು ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಗಳಿಸಿ ಒತ್ತಡವನ್ನು ಕಡಿಮೆ ಮಾಡಿದರು. ಆದರೆ ನಾಲ್ಕನೇ ಓವರ್‌ನಲ್ಲಿ ಅವರು ಕ್ರಿಸ್ ಟ್ರೆಮೆನ್ ಎಸೆತದಲ್ಲಿ ಔಟಾದರು.ಭರತ್ ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದ್ದರು.

ಇನ್ನೊಂದು ಬದಿಯಲ್ಲಿದ್ದ ಅಂಕಿತ್ ಭಾವ್ನೆ ಅವರೊಂದಿಗೆ ಸೇರಿದ ಆರ್. ಸಮರ್ಥ್ ಅವರೊಡಗೂಡಿ  ಚೆಂದದ ಆಟವಾಡಿದರು. ಒಂದು ಮತ್ತು ಎರಡು ರನ್‌ಗಳನ್ನು ಗಳಿಸುವತ್ತ ಹೆಚ್ಚು ಗಮನ ನೀಡಿದರು. ಅವಕಾಶ ಸಿಕ್ಕಾಗ ಬೌಂಡರಿ ಬಾರಿಸಿದರು. ಆರನೇ ಓವರ್‌ನಲ್ಲಿ 17 ರನ್‌ಗಳನ್ನು ಸೂರೆ ಮಾಡಿದರು. ಇದರಿಂದಾಗಿ ಪ್ರವಾಸಿ ಬಳಗದ ಯೋಜನೆ ವಿಫಲವಾಯಿತು.

ತಾಳ್ಮೆಗೆ ಸಂದ ಫಲ: ಪಂದ್ಯದ ಮೂರನೇ ದಿನವಾದ ಸೋಮವಾರ ಭಾರತ ‘ಎ’ ತಂಡವು ಮೊದಲ ಇನಿಂಗ್ಸ್‌ನಲ್ಲಿ 159  ರನ್‌ಗಳ ಮುನ್ನಡೆ ಸಾಧಿಸಿತ್ತು. ಸಂಜೆ ಎರಡನೇ ಇನಿಂಗ್ಸ್‌ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡವು 14 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡು 36 ರನ್‌ ಗಳಿಸಿತ್ತು. ಕೊನೆಯ ದಿನವಾದ ಮಂಗಳವಾರ ಇಡೀ ದಿನ ಬ್ಯಾಟಿಂಗ್ ಮಾಡಿ ಡ್ರಾ ಮಾಡಿಕೊಳ್ಳುವ ಇರಾದೆಯಲ್ಲಿತ್ತು. ಅದಕ್ಕೆ ತಕ್ಕಂತೆ ಟ್ರಾವಿಸ್ ಹೆಡ್‌ ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್‌ ಅವರು ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಇದರಿಂದಾಗಿ ಊಟದ ವಿರಾಮದವರೆಗೂ ಒಂದೂ ವಿಕೆಟ್ ಪತನವಾಗಲಿಲ್ಲ.

ಆದರೆ ತಾಳ್ಮೆಗೆಡದ ಆತಿಥೇಯ ಬೌಲರ್‌ಗಳು ಎರಡನೇ ಅವಧಿಯಲ್ಲಿ ಸಿಹಿಫಲ ಪಡೆದರು. ಎಡಗೈ ಸ್ಪಿನ್ನರ್‌ಗಳಾದ ಶಾಬಾಜ್ ನದೀಂ ಮತ್ತು ಕುಲದೀಪ್ ಯಾದವ್ ಅವರು ಹೆಡ್ ಮತ್ತು ಹ್ಯಾಂಡ್ಸ್‌ಕಂಬ್ ವಿಕೆಟ್ ಗಳಿಸಿದರು.  ಆಮೇಲೆ ಬಂದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸುವ ಅವಸರಕ್ಕೆ ಕೈ ಹಾಕಲಿಲ್ಲ. ಹೆಚ್ಚು ಎಸೆತಗಳನ್ನು ಆಡಿ ಸಮಯವನ್ನು ವ್ಯಯಿಸುವತ್ತ ಚಿತ್ತ ನೆಟ್ಟರು. ಆದರೂ ಬೌಲರ್‌ಗಳೂ ಛಲ ಬಿಡದೇ ವಿಕೆಟ್ ಕಬಳಿಸಿದರು. ರಜನೀಶ್ ಗುರುಬಾನಿ ಮಾತ್ರ ಎರಡು ಓವರ್ ಹಾಕಿ ವಿಶ್ರಾಂತಿ ಪಡೆದರು.

ಸ್ಕೋರು

ಮೊದಲ ಇನಿಂಗ್ಸ್‌

ಆಸ್ಟ್ರೇಲಿಯಾ ’ಎ’  346

ಭಾರತ ಎ 505

ಎರಡನೇ ಇನಿಂಗ್ಸ್

ಆಸ್ಟ್ರೇಲಿಯಾ ಎ

213 (102.5 ಓವರ್‌ಗಳಲ್ಲಿ)

ಟ್ರಾವಿಸ್ ಹೆಡ್ ಸಿ ಸಮರ್ಥ್ ಬಿ ಶಾಬಾಜ್ ನದೀಂ 47

ಪೀಟರ್ ಹ್ಯಾಂಡ್ಸ್‌ಕಂಬ್ ಸಿ ಶಾಬಾಜ್ ನದೀಂ ಬಿ ಕುಲದೀಪ್ ಯಾದವ್ 56

ಮಾರ್ನಸ್ ಲಾಬುಚಾನ್ ಸಿ ಶುಭಮನ್ ಗಿಲ್ ಬಿ ದೀಪಕ್ ಚಾಹರ್ 00

ಮಿಚೆಲ್ ಮಾರ್ಷ್ ಬಿ ಕೃಷ್ಣಪ್ಪ ಗೌತಮ್ 36

ಆಷ್ಟನ್ ಅಗರ್ ಸ್ಟಂಪ್ಡ್ ಭರತ್ ಬಿ ಕುಲದೀಪ್ ಯಾದವ್ 03

ಮೈಕೆಲ್ ನೆಸೆರ್  ಎಲ್‌ಬಿಡಬ್ಲ್ಯು ಬಿ ಗೌತಮ್ 17

ಕ್ರಿಸ್ ಟ್ರೆಮೆನ್ ಸಿ ಸಮರ್ಥ್ ಬಿ ದೀಪಕ್ ಚಹಾರ್ 01

ಮಿಚೆಲ್ ಸ್ಟೆಪ್ಸನ್ ಸಿ ಚಾಹರ್ ಬಿ ಕುಲದೀಪ್ ಯಾದವ್ 03

ಬ್ರೆಂಡನ್ ಡಾಜೆಟ್ ಔಟಾಗದೆ 01

 
ಇತರೆ:  26 (ನೋಬಾಲ್ 4, ಬೈ 19)

ವಿಕೆಟ್ ಪತನ: 3–116 (ಹೆಡ್; 51.3), 4–117 (ಮಾರ್ನಸ್; 52.5), 5–160 (ಪೀಟರ್: 64.3), 6–166 (ಆಷ್ಟನ್; 66.6), 7–197 (ಮಾರ್ಷ್; 82.3), 8–206 (ಕ್ರಿಸ್; 96.2),9–211 (ಮೈಕೆಲ್; 101.4), 10–213 (ಮಿಚೆಲ್; 102.5).

ಬೌಲಿಂಗ್

ದೀಪಕ್ ಚಾಹರ್ 10–1–30–2, ಶಾಬಾಜ್ ನದೀಂ 41–17–67–2, ಕೃಷ್ಣಪ್ಪ ಗೌತಮ್ 27–14–39–3, ಕುಲದೀಪ್ ಯಾದವ್ 22.5–7–46–3, ರಜನೀಶ್ ಗುರುಬಾನಿ 2–0–9–0.

ಭಾರತ ‘ಎ’

4ಕ್ಕೆ 55 (6.2 ಓವರ್‌ಗಳಲ್ಲಿ)

ಶ್ರೇಯಸ್ ಅಯ್ಯರ್ ಬಿ ಮೈಕೆಲ್ ನೆಸೆರ್ 03

ಶುಭಮನ್ ಗಿಲ್ ಬಿ ಕ್ರಿಸ್ ಟ್ರೆಮೆನ್ 04

ಅಂಕಿತ್ ಭಾವ್ನೆ ಔಟಾಗದೆ 28

ಕೃಷ್ಣಪ್ಪ ಗೌತಮ್ ಸಿ ಕರ್ಟಿಸ್ ಪ್ಯಾಟರ್ಸನ್ ಬಿ ಮೈಕೆಲ್ ನೆಸೆರ್ 01

ಶ್ರೀಕರ್ ಭರತ್  ಸಿ ಮೈಕೆಲ್ ನೆಸೆರ್  ಬಿ ಕ್ರಿಸ್ ಟ್ರೆಮೆನ್  12

ಆರ್. ಸಮರ್ಥ್ ಔಟಾಗದೆ 05

ಇತರೆ: 02 (ವೈಡ್ 1, ಲೆಗ್‌ಬೈ 1)

ವಿಕೆಟ್ ಪತನ: 1–4 (ಅಯ್ಯರ್; 0.5), 2–10 (ಗಿಲ್; 1.5), 3–11(ಗೌತಮ್; 2.1), 4–25 (ಭರತ್; 3.5),

ಬೌಲಿಂಗ್

ಮೈಕೆಲ್ ನೆಸೆರ್ 3.2–0–28–2, ಕ್ರಿಸ್ ಟ್ರೆಮೆನ್ 3–0–26–2.

ಫಲಿತಾಂಶ: ಭಾರತಕ್ಕೆ 6 ವಿಕೆಟ್‌ಗಳ ಜಯ. ಸರಣಿಯಲ್ಲಿ 1–1ರಿಂದ ಸಮಬಲ

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !