ಶನಿವಾರ, ಜುಲೈ 2, 2022
20 °C

ರಾಜ್ಯಸಭೆಗೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಹರ್ಭಜನ್ ಸಿಂಗ್?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಭಾರತ ಕ್ರಿಕೆಟ್ ತಂಡದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಹಾದಿಯಲ್ಲೇ ಹರ್ಭಜನ್‌ ಸಹ ಸಾಗುವ ಲಕ್ಷಣ ಗೋಚರಿಸುತ್ತಿದೆ. 

ಪಂಜಾಬ್‌ನಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪ್ರಚಂಡ ಬಹುಮತ ಗಳಿಸಿತ್ತು. ಭಗವಂತ್ ಸಿಂಗ್ ಮಾನ್ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಈ ಮಧ್ಯೆ ಪಂಜಾಬ್‌ನಿಂದ ರಾಜ್ಯಸಭೆಗೆ ಖ್ಯಾತನಾಮರನ್ನು ಕಳುಹಿಸಲು ಎಎಪಿ ನಿರ್ಧರಿಸಿದ್ದು, 41 ವರ್ಷದ ಭಜ್ಜಿ ಹೆಸರು ಮುಂಚೂಣಿಯಲ್ಲಿದೆ.

‘ಪಂಜಾಬ್ ಸಿಎಂ ಸೇರಿದಂತೆ ಎಎಪಿಯ ಅಗ್ರ ನಾಯಕರು ರಾಜ್ಯಸಭೆಗೆ ತಮ್ಮ ಹೆಸರನ್ನು ಪಕ್ಷದಿಂದ ನಾಮನಿರ್ದೇಶನ ಮಾಡುವ ಕುರಿತಂತೆ ಹರ್ಭಜನ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅತ್ಯಂತ ಕುಸಿತ ಕಂಡಿರುವ ಕ್ರೀಡಾ ವಲಯವನ್ನು ಮೇಲೆತ್ತುವ ದೃಷ್ಟಿಯಿಂದ ಹರ್ಭಜನ್ ಸಿಂಗ್ ಅವರನ್ನು ರಾಜ್ಯಸಭೆಗೆ ಕಳುಹಿಸುವುದು ನೂತನ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರ ಇಚ್ಛೆಯಾಗಿದೆ’ಎಂದು ಸಿಂಗ್ ಆಪ್ತರು ಪಿಟಿಐಗೆ ತಿಳಿಸಿದ್ದಾರೆ.

18 ವರ್ಷಗಳ ತಮ್ಮ ಸುದೀರ್ಘ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹರ್ಭಜನ್ ಸಿಂಗ್, ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಒಟ್ಟು 700 ವಿಕೆಟ್ ಉರುಳಿಸಿದ್ದಾರೆ.

ಹರ್ಭಜನ್ ಯಾವಾಗಲೂ ಜನರು ಮತ್ತು ವಿಶೇಷವಾಗಿ ಕ್ರೀಡಾಪಟುಗಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲು ಆಸಕ್ತಿ ಹೊಂದಿದವರಾಗಿದ್ಧಾರೆ. ಸಿಎಂ ಭಗವಂತ್ ಮಾನ್ ಅವರೊಂದಿಗೆ ಉತ್ತಮ ಸ್ನೇಹ ಹೊಂದಿರುವ ಅವರು(ಭಜ್ಜಿ) ಅವಕಾಶ ಸಿಕ್ಕರೆ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ನಿವೃತ್ತಿ ಘೋಷಣೆಗೂ ಮುನ್ನ, ಹರ್ಭಜನ್ ತಮ್ಮ ಮಾಜಿ ಸಹ ಆಟಗಾರ, ಕಾಂಗ್ರೆಸ್‌ನ ಪಂಜಾಬ್ ಘಟಕದ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿ ಮಾಡಿದ್ದರು. ಈ ಭೇಟಿ ಬಳಿಕ ಭಜ್ಜಿ, ಕಾಂಗ್ರೆಸ್ ಪಕ್ಷ ಸೇರಬಹುದು ಎಂಬ ಊಹಾಪೋಹಗಳು ಎದ್ದಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು