ಶನಿವಾರ, ಮೇ 28, 2022
28 °C
ಎಲ್ಲ ಮಾದರಿಗಳ ಕ್ರಿಕೆಟ್‌ಗೆ ಎಬಿಡಿ ನಿವೃತ್ತಿ; ಐಪಿಎಲ್‌ಗೂ ವಿದಾಯ

ಮಿಸ್ಟರ್ 360 ಡಿಗ್ರಿ ಬೆಂಗಳೂರು ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಿಸ್ಟರ್ 360 ಡಿಗ್ರಿ ಖ್ಯಾತಿಯ ಎಬಿ ಡಿವಿಲಿಯರ್ಸ್‌ ಮತ್ತು ಬೆಂಗಳೂರಿನ ನಂಟಿಗೆ ಒಂದು ದಶಕದ ಕಥೆ ಇದೆ. ದಕ್ಷಿಣ ಆಫ್ರಿಕಾದ ಪ್ರಿಟೊರಿಯಾದಲ್ಲಿ ಜನಿಸಿದ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್‌ ಬೆಂಗಳೂರಿಗರೇ ಆಗಿ ಹೋಗಿದ್ದು ಕ್ರಿಕೆಟ್ ಆಟದ ಪುಸ್ತಕದ ಸುಂದರ ಅಧ್ಯಾಯಗಳಲ್ಲಿ ಒಂದು.

‘ನನ್ನ ಮಗ ಬೆಂಗಳೂರಿನವನೇ ಆಗಿ ಹೋಗಿದ್ದಾನೆ. ಇಲ್ಲಿನ ಜನ ಆತನ ಆಟ, ವ್ಯಕ್ತಿತ್ವವನ್ನು ಮೆಚ್ಚಿಕೊಂಡಿರುವ ರೀತಿ ನೋಡಿ ಹೃದಯ ತುಂಬಿ ಬಂದಿದೆ‘ ಎಂದು ಆರು ವರ್ಷಗಳ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಬಿಡಿಯ ತಾಯಿ. ಪ್ರತಿವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ನಡೆದಾಗಲೂ ಕ್ರಿಕೆಟ್‌ಪ್ರಿಯರ ಎದೆಬಡಿತ ಹೆಚ್ಚಿಸುತ್ತಿದ್ದ ಆಟಗಾರ ಎಬಿಡಿ. ಅಮೋಘ ಅಥ್ಲೀಟ್ ಆಗಿದ್ದ ಅವರ ಬ್ಯಾಟಿಂಗ್ ಶೈಲಿಗೆ ಯಾರೂ ಸಾಟಿಯಿರಲಿಲ್ಲ. ಕ್ರಿಕೆಟ್‌ನ ಯಾವುದೇ ಮಾದರಿ ಇರಲಿ. ತಮ್ಮದೇ ಆದ ಹೊಡೆತಗಳ ಮೂಲಕ ಬೌಲರ್‌ಗಳಿಗೆ ಸಿಂಹಸ್ವಪ್ನರಾಗಿದ್ದರು. ಸಾಂಪ್ರದಾಯಿಕ ಹೊಡೆತಗಳನ್ನು ಆಡುವ ಸಾಮರ್ಥ್ಯ ಅವರಿಗಿತ್ತು. ಆದರೆ ಹೊಸ ನಮೂನೆಯ ಹೊಡೆತಗಳ ಅವಿಷ್ಕರಿಸುತ್ತ ಕ್ರೀಸ್‌ ಮೇಲೆ ಪಾರಮ್ಯ ಸಾಧಿಸಿದವರು.

ಒಂದು ಆಕರ್ಷಕ ವಿಡಿಯೊ ಗೇಮ್ ರೂಪಿಸಬಹುದಾದಂತಹ ಬ್ಯಾಟಿಂಗ್ ಶೈಲಿ ಅವರದ್ದು ಎಂದು ಬಹಳಷ್ಟು ವೀಕ್ಷಕ ವಿವರಣೆಕಾರರು ಶ್ಲಾಘಿಸಿದ್ದಾರೆ. ಫೀಲ್ಡಿಂಗ್‌ನಲ್ಲಿಯೂ ಅವರ ಜಿಮ್ನಾಸ್ಟಿಕ್ ಶೈಲಿಯು ಎಂತಹ ಯುವಕರನ್ನೂ ನಾಚಿಸುವಂತಿತ್ತು. ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಅವರು ಬೌಂಡರಿ ಲೈನ್‌ನಲ್ಲಿ ಮೇಲಕ್ಕೆಗರಿ ಪಡೆದಿದ್ದ ಕ್ಯಾಚ್ ಎಷ್ಟೋ ಕ್ರಿಕೆಟ್‌ಪ್ರೇಮಿಗಳ ಮನೆ, ಮನಗಳಲ್ಲಿ ‘ಭಿತ್ತಿಚಿತ್ರ‘ವಾಗಿ ಉಳಿದುಕೊಂಡಿದೆ. ಅವರ ರಿವರ್ಸ್ ಸ್ವೀಪ್, ವೈಡ್‌ ಆ್ಯಂಗಲ್ ಸೈಡ್ ಡ್ರೈವ್‌ಗಳ ಅಂದ ಚೆಂದಕ್ಕೆ ಸರಿಸಾಟಿಯೇ ಇಲ್ಲ.

ವಿರಾಟ್–ಎಬಿಡಿ ಸ್ನೇಹ: ಅವರ  ಆಟದಷ್ಟೇ ಖ್ಯಾತವಾಗಿರುವುದು ಎಬಿಡಿ ಮತ್ತು ವಿರಾಟ್ ಕೊಹ್ಲಿ ಗೆಳೆತನ. ಇಬ್ಬರೂ ಕ್ರೀಸ್‌ನಲ್ಲಿ ಜೊತೆಗೂಡಿದರೆ ರನ್‌ಗಳ ಹೊಳೆ ಖಚಿತ. ವಿರಾಟ್ ಮತ್ತು ಎಬಿಡಿ ಎರಡು ಸಲ ದ್ವಿಶತಕದ ಜೊತೆಯಾಟವಾಡಿದ್ದಾರೆ. ಈ ಸಾಧನೆ ಮಾಡಿರುವ ಏಕೈಕ ಜೋಡಿ ಇವರದ್ದು. ಅಲ್ಲದೇ ಐದು ಬಾರಿ ಶತಕದ ಜೊತೆಯಾಟವಾಡಿದ್ದಾರೆ.

ತಂಡಕ್ಕೆ ಅಗತ್ಯವಾದಾಗ ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್ ಮಾಡುವ ದಿಟ್ಟ ಆಟಗಾರ ಎಬಿಡಿ. ಆರಂಭಿಕನಾಗಿ ಹೊಸಚೆಂಡು ಎದುರಿಸುತ್ತಿದ್ದ ರೀತಿಯಲ್ಲಿಯೇ ಆರನೇ ಕ್ರಮಾಂಕದಲ್ಲಿ ಹಳೆಯ ಚೆಂಡನ್ನೂ ಚಚ್ಚುತ್ತಿದ್ದರು. ಬಹಳಷ್ಟು ಪಂದ್ಯಗಳಲ್ಲಿ ತಂಡವನ್ನು ಸೋಲಿನ ದವಡೆಯಿಂದ ಸರಾಗವಾಗಿ ಗೆಲುವಿನತ್ತ ಕೊಂಡೊಯ್ದ ರೀತಿಯಿಂದಾಗಿ ‘ಆಪದ್ಭಾಂದವ’ನೆಂಬ ಬಿರುದು ಕೂಡ ಅವರಿಗಿದೆ. ವಿಕೆಟ್ ಕೀಪರ್ ಆಗಿ ನೀಡಿದ ಕಾಣಿಕೆಯೂ ಗಣನೀಯ.

‘ಮೊದಲಿನ ಹುಮ್ಮಸ್ಸು ಈಗ ಮೂಡುತ್ತಿಲ್ಲ. ಇಂತಹ ಹೊತ್ತಿನಲ್ಲಿ ಹೊಸಪ್ರತಿಭೆಗಳಿಗೆ ದಾರಿಬಿಟ್ಟುಕೊಡುವುದು ಸೂಕ್ತ. ತಂಡದ ಎಲ್ಲ ಆಟಗಾರರು, ನೆರವು ಸಿಬ್ಬಂದಿ, ಅಭಿಮಾನಿಗಳ ಪ್ರೀತಿಗೆ ಚಿರಋಣಿಯಾಗಿದ್ದೇನೆ. ಎಲ್ಲವನ್ನೂ ಕೊಟ್ಟ ಕ್ರಿಕೆಟ್‌ ಮೇಲಿನ ಪ್ರೀತಿ ಎಂದೆಂದಿಗೂ ಇರುತ್ತದೆ’ ಎಂದು 37 ವರ್ಷದ ಎಬಿಡಿ ಟ್ವೀಟ್ ಮಾಡಿದ್ದಾರೆ.

2018ರಲ್ಲಿಯೇ  ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಎಬಿಡಿ ಫ್ರ್ಯಾಂಚೈಸಿ ಲೀಗ್‌ಗಳಲ್ಲಿ ಆಡಿದ್ದರು. ವಿಶೇಷವಾಗಿ  ಆರ್‌ಸಿಬಿಯೊಂದಿಗೆ ಉಳಿದುಕೊಂಡಿದ್ದರು.

ಪಟ್ಟಿ

ಮಾದರಿ; ಪಂದ್ಯ; ರನ್; ಶ್ರೇಷ್ಠ; ಶತಕ; ಅರ್ಧಶತಕ; 4; 6

ಟೆಸ್ಟ್; 114; 8765; 278; 22; 46 1024; 64

ಏಕದಿನ; 228; 9577; 176; 25; 53; 840; 204

ಟಿ20; 78; 1672; 79; ––; 10; 140; 60

***

ಐಪಿಎಲ್ ಸಾಧನೆ

ತಂಡ; ಅವಧಿ; ಪಂದ್ಯ; ರನ್; ಶ್ರೇಷ್ಠ; ಶತಕ; ಅರ್ಧಶತಕ; ವಿಕೆಟ್; ಕ್ಯಾಚ್

ಡೆಲ್ಲಿ ಡೇರ್‌ಡೆವಿಲ್ಸ್‌; 2008–10; 28; 671; 105*;1; 3;22

ರಾಯಲ್ ಚಾಲೆಂಜರ್ಸ್ ಬೆಂಗಳೂರು; 2011–21; 156;4491;133*;2;37; 96

***

ಬೌಂಡರಿ: 413

ಸಿಕ್ಸರ್; 251

***

ಆಡಿದ ತಂಡಗಳು

ದಕ್ಷಿಣ ಆಫ್ರಿಕಾ, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಬಾರ್ಬಡಿಸ್ ರಾಯಲ್ಸ್, ಪ್ರಿಟೊರಿಯಾ ಮೆವರಿಕ್ಸ್, ಸೌಥ್ ಆಫ್ರಿಕಾ ಇನ್ವಿಟೇಷನ್ ಇಲೆವನ್, ಟಿಶ್ವೇನ್ ಸ್ಪಾರ್ಟನ್ಸ್, ಲಾಹೋರ್ ಕಲಂದರ್ಸ್, ಮಿಡ್ಲೆಸೆಕ್ಸ್, ಬ್ರಿಸ್ಬೇನ್ ಹೀಟ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು