ಶನಿವಾರ, ಆಗಸ್ಟ್ 20, 2022
21 °C

ವಿಶ್ವದ ಅತಿ ದೊಡ್ಡ ಸ್ಟೇಡಿಯಂನಲ್ಲಿ ಭಾರತ vs ಇಂಗ್ಲೆಂಡ್ ಡೇ-ನೈಟ್ ಟೆಸ್ಟ್

ಎಎನ್‌ಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ವಿಶ್ವದ ಅತಿ ದೊಡ್ಡ ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂ ಗುಜರಾತ್‌ನ ಅಹಮದಾಬಾದ್‌ನಲ್ಲಿ ತಲೆ ಎತ್ತಿರುವುದು ನಿಮಗೆಲ್ಲರಿಗೂ ತಿಳಿದ ವಿಚಾರ. ಇಲ್ಲಿನ ಮೊಟೆರಾ ಸ್ಟೇಡಿಯಂ ನೂತನ ಐಪಿಎಲ್ ತಂಡಕ್ಕೆ ಆತಿಥ್ಯ ತಾಣವಾಗಲಿದೆ ಎಂಬ ಬಗ್ಗೆಯೂ ಮಾಹಿತಿಗಳು ಹೊರಬಂದಿದ್ದವು.

ಈಗ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೊಚ್ಚಲ ಪಂದ್ಯ ಯಾವಾಗ ಆಯೋಜನೆಯಾಗಲಿದೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಇದ್ದ ಕುತೂಹಲಕ್ಕೆ ಕೊನೆಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತೆರೆ ಎಳೆದಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಫೆಬ್ರವರಿ 24ರಂದು ನಡೆಯಲಿರುವ ಡೇ-ನೈಟ್ ಟೆಸ್ಟ್ ಪಂದ್ಯಕ್ಕೆ ಅಹಮದಾಬಾದ್‌ನ ಮೊಟೆರಾ ಕ್ರೀಡಾಂಗಣ ವೇದಿಕೆಯಾಗಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ.

ಇದನ್ನೂ ಓದಿ: 

ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯು 2021 ಫೆಬ್ರವರಿ 7ರಂದು ಆರಂಭವಾಗಲಿದೆ. ಹಾಗೆಯೇ ಡೇ-ನೈಟ್ ಟೆಸ್ಟ್ ಪಂದ್ಯವು ಅಹಮದಾಬಾದ್‌ನ ಮೊಟೆರಾ ಮೈದಾನದಲ್ಲಿ ಫೆಬ್ರವರಿ 24ರಂದು ನಡೆಯಲಿದೆ ಎಂದು ಹೇಳಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸಹ, ಹೊಸ ವರ್ಷದಲ್ಲಿ ಇಂಗ್ಲೆಂಡ್‌ನ ಭಾರತ ಪ್ರವಾಸವನ್ನು ಖಚಿತಪಡಿಸಿದ್ದು, ನಾಲ್ಕು ಟೆಸ್ಟ್, ಐದು ಟ್ವೆಂಟಿ-20 ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ ಎಂದಿದ್ದಾರೆ.

ಐದು ಪಂದ್ಯಗಳ ಟಿ20 ಸರಣಿಯೂ ಮೊಟೆರಾ ಮೈದಾನದಲ್ಲಿ ನಡೆಯಲಿದೆ ಎಂಬುದನ್ನು ಜೈ ಶಾ ತಿಳಿಸಿದ್ದಾರೆ. ಈಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಪಾರ್ಥಿವ್ ಪಟೇಲ್, ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. 

ಇದನ್ನೂ ಓದಿ: 

ಟಿ20 ವಿಶ್ವಕಪ್ ಮುಂದಿನ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿರುವುದರಿಂದ ಟಿ20 ಸರಣಿಗಳಿಗೆ ಹೆಚ್ಚಿನ ಆದ್ಯತೆ ಕೊಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯು ಹೆಚ್ಚಿನ ಮಹತ್ವ ಗಿಟ್ಟಿಸಿದೆ.

ಅಭಿಮಾನಿಗಳಿಗೆ ಅವಕಾಶ?
ಈ ಮಧ್ಯೆ ದೇಶದಲ್ಲಿ ಕೋವಿಡ್ ಮಾನದಂಡಗಳು ಜಾರಿಯಲ್ಲಿರುವುದರಿಂದ ಮೊಟೆರಾ ಸ್ಟೇಡಿಯಂನಲ್ಲಿ ಕ್ರೀಡಾಭಿಮಾನಿಗಳಿಗೆ ಅವಕಾಶ ನೀಡಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 

ಬಾಕ್ಸಿಂಗ್ ಡೇ ಟೆಸ್ಟ್; ದಿನಕ್ಕೆ 30,000 ಟಿಕೆಟ್
ಏತನ್ಮಧ್ಯೆ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ವೀಕ್ಷಕರ ಸಾಮರ್ಥ್ಯವನ್ನು 30,000ಕ್ಕೆ ಏರಿಸಲಾಗಿದೆ ಎಂಬುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟಪಡಿಸಿದೆ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾಕ್ಸಿಂಗ್ ಡೇ ಕ್ರಿಕೆಟ್ ಪಂದ್ಯವು ಡಿಸೆಂಬರ್ 26ರಂದು ಆರಂಭವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು