ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏನಿದ್ದರೂ ಇಲ್ಲಿ ಭಾಷೆ, ಗಡಿ ವಿಚಾರವೇ ಪ್ರಮುಖ

ಅಭಿವೃದ್ಧಿಯ ಮಾತಿಲ್ಲ; ಎಂಇಎಸ್‌ ಪ್ರಭಾವದಡಿ ಕನ್ನಡಿಗರ ಕಡೆಗಣನೆ ಆರೋಪ l ಮರಾಠಿಗರೇ ನಿರ್ಣಾಯಕ
Last Updated 16 ಮಾರ್ಚ್ 2018, 19:03 IST
ಅಕ್ಷರ ಗಾತ್ರ

ಮರಾಠಿ ಭಾಷಿಕರ ಪ್ರಾಬಲ್ಯ ಹೊಂದಿರುವ, ಗಡಿ ಮತ್ತು ಭಾಷೆಯ ವಿಷಯದಲ್ಲಿ ಒಂದಿಲ್ಲೊಂದು ತಕರಾರು ತೆಗೆಯುವ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಪ್ರಭಾವ ಇರುವುದರಿಂದಾಗಿ ಬೆಳಗಾವಿ ದಕ್ಷಿಣ ಮತಕ್ಷೇತ್ರ ಪ್ರಮುಖ ಕಣಗಳಲ್ಲಿ ಒಂದು ಎನಿಸಿದೆ.

2008ರಲ್ಲಿ ವಿಧಾನಸಭಾ ಕ್ಷೇತ್ರ ಪುನರ್‌ವಿಂಗಡಣೆ ನಂತರ ರೂಪುಗೊಂಡ ಈ ಕ್ಷೇತ್ರ, ಇದೀಗ 3ನೇ ಚುನಾವಣೆಗೆ ಸಜ್ಜಾಗುತ್ತಿದೆ. ಮೊದಲ ಚುನಾವಣೆಯಲ್ಲಿ ಬಿಜೆಪಿಯ ಅಭಯ ಪಾಟೀಲ ಗೆದ್ದಿದ್ದರು. 2013ರಲ್ಲಿ ಎಂಇಎಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸಂಭಾಜಿ ಪಾಟೀಲ ಚುನಾಯಿತರಾಗಿದ್ದಾರೆ.

‘ಗಡಿ ವಿವಾದ ಹಾಗೂ ಮರಾಠಿಗರ ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ಗೆಲುವಿನ ಪತಾಕೆ ಹಾರಿಸಿದ ಸಂಭಾಜಿ ಪಾಟೀಲ, ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ. ಹಿಂದೆ ಆರಂಭಗೊಂಡಿದ್ದ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುವಂತೆ ನೋಡಿಕೊಂಡಿಲ್ಲ. ಅವರ ಆಸಕ್ತಿಯ ಫಲವಾಗಿ ಅನುಷ್ಠಾನಗೊಂಡಿದ್ದು ಎಂದು ಹೇಳಿಕೊಳ್ಳುವಂಥ ಕಾಮಗಾರಿ ಇಲ್ಲ’ ಎನ್ನುವ ಮಾತುಗಳಿವೆ.

ಇಲ್ಲಿನ ಜನರ ಮಾತಿನಲ್ಲಿ ಮರಾಠಿ ಹಾಗೂ ಹಿಂದಿ ಭಾಷೆ ಹಾಸುಹೊಕ್ಕಾಗಿವೆ. ಮಹಾನಗರಪಾಲಿಕೆಯ 1ರಿಂದ 26 ವಾರ್ಡ್‌ಗಳ ವ್ಯಾಪ್ತಿಯನ್ನು ಒಳಗೊಂಡಿರುವ ಕ್ಷೇತ್ರದಲ್ಲಿ, ಪಾಲಿಕೆಯ ಬಹುತೇಕ ಸದಸ್ಯರು ಎಂಇಎಸ್‌ ಬೆಂಬಲಿತರೇ ಆಗಿದ್ದಾರೆ. ಇದರಿಂದಾಗಿ ಇಲ್ಲಿ ಕನ್ನಡ ಭಾಷಿ
ಕರು ವಾಸಿಸುವ ಸ್ಥಳಗಳಿಗೆ ನಂತರದ ಸ್ಥಾನವನ್ನು ಜನಪ್ರತಿನಿಧಿಗಳು ಕೊಡುತ್ತಿದ್ದಾರೆ ಎಂಬ ಆರೋಪವೂ ಇವೆ.

ತಾವು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಶಾಸಕರು ಅಧಿಕೃತವಾಗಿ ಪತ್ರಿಕಾಗೋಷ್ಠಿ ನಡೆಸಿದ ಉದಾಹರಣೆಯೇ ಇಲ್ಲ! ಕೇಂದ್ರ ಜಾರಿಗೊಳಿಸಿರುವ ‘ಸ್ಮಾರ್ಟ್‌ ಸಿಟಿ’ ಯೋಜನೆ ಅನುಷ್ಠಾನದಲ್ಲಿ ವಿಳಂಬವಾಗಿರುವುದಕ್ಕೆ ಆಕ್ಷೇಪವನ್ನೂ ಅವರು ವ್ಯಕ್ತಪಡಿಸಿಲ್ಲ. ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸುವುದು ಕಡಿಮೆ. ಜನಪರ ಯೋಜನೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗಿಂತ, ಎಂಇಎಸ್‌ನಿಂದ ಆಯೋಜಿಸುವ ಗಡಿ ಅಥವಾ ಭಾಷಾ ವಿವಾದ ಕುರಿತಾದ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಎಲ್ಲ ಜನರ ಅಪೇಕ್ಷೆ–ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ ಎನ್ನುವ ಆರೋಪಗಳಿವೆ.

ಹಿಂದೆ ಜೀವಕಳೆ ಪಡೆದಿದ್ದ ಅನಗೋಳ, ಯಳ್ಳೂರು ಹಾಗೂ ವಡಗಾವಿ ಕೆರೆಗಳು ದುಃಸ್ಥಿತಿಗೆ ತಲುಪಿವೆ. ಅವುಗಳಿಗೆ ಚರಂಡಿ ನೀರು ಸೇರುತ್ತಿರುವುದನ್ನು ತಪ್ಪಿಸುವತ್ತ ಗಮನಹರಿಸಿಲ್ಲ. ರೈಲು ನಿಲ್ದಾಣ ಸಮೀಪದ ರೈಲ್ವೆ ಮೇಲ್ಸೇತುವೆ ಬಳಿಯಿಂದ ಪೀರನವಾಡಿವರೆಗೆ ಆರು ಪಥದ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ, ಅಲ್ಲಲ್ಲಿ ಒತ್ತುವರಿ ತೆರವುಗೊಳಿಸುವ ಕೆಲಸ ನಡೆದಿಲ್ಲ. ಇದರಿಂದ ಸುಗಮ ಸಂಚಾರಕ್ಕೆ ತೊಡಕಾಗಿದೆ. ಕೈಗಾರಿಕಾ ಪ್ರದೇಶಗಳ ಸ್ಥಿತಿಯೂ ಸುಧಾರಿಸಿಲ್ಲ. ಆ ಪ್ರದೇಶದ ಬಹುತೇಕ ಕಡೆಗಳಲ್ಲಿ ರಸ್ತೆ ಸೇರಿದಂತೆ ಕನಿಷ್ಠ ಮೂಲಸೌಲಭ್ಯವೂ ಇಲ್ಲದಂತಾಗಿದೆ. ಕನ್ನಡ ಶಾಲೆಗಳು ದುಃಸ್ಥಿತಿಯಲ್ಲಿದ್ದು ಅವುಗಳನ್ನು ಸುಧಾರಿಸುವ ಕೆಲಸವಾಗಿಲ್ಲ. ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸುವುದಕ್ಕೂ ಶಾಸಕರು ಆದ್ಯತೆ ಕೊಟ್ಟಿಲ್ಲ.

ಮರಾಠಿಗರೇ ನಿರ್ಣಾಯಕ: ಇಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಗಳಿಗೆ ಪೈಪೋಟಿ ನೀಡಬೇಕಾದ ಸ್ಥಿತಿ ಇದೆ. ಅಂದಾಜು 90 ಸಾವಿರ ಮರಾಠಾ ಮತದಾರರಿದ್ದಾರೆ. ಇವರೇ ನಿರ್ಣಾಯಕರೂ ಹೌದು. ಇದನ್ನು ಎಂಇಎಸ್‌ ಬಂಡವಾಳ ಮಾಡಿಕೊಂಡಿದೆ. ನಂತರದ ಸ್ಥಾನದಲ್ಲಿ ನೇಕಾರ (ಅಂದಾಜು 30 ಸಾವಿರ) ಸಮಾಜದವರಿದ್ದಾರೆ. ನೇಕಾರಿಕೆಗೆ ಹೆಸರುವಾಸಿಯಾದ ಇಲ್ಲಿ ಸಿದ್ಧಗೊಳ್ಳುವ ‘ಶಹಾಪುರ ಸೀರೆ’ಗಳು ಖ್ಯಾತಿ ಗಳಿಸಿವೆ. ಆದರೆ, ಅವರು ವಾಸಿಸುವ ಬಡಾವಣೆಗಳು ಸುಧಾರಣೆ ಕಂಡಿಲ್ಲ.

ಸಂಭಾಜಿ ಪಾಟೀಲ ಮತ್ತೊಮ್ಮೆ ಸ್ಪರ್ಧೆಗೆ ಸಿದ್ಧರಾಗುತ್ತಿದ್ದಾರೆ. ಬಿಜೆಪಿಯಿಂದ ಅಭಯ ಪಾಟೀಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆ ಸಮಾಜದ ಮುಖಂಡ, ಕೈಮಗ್ಗ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ. ಲಕ್ಷ್ಮಿನಾರಾಯಣ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಭೂಮಿಕೆ ಸಿದ್ಧಪಡಿಸುತ್ತಿದೆ ಎನ್ನಲಾಗುತ್ತಿದೆ. ಅವರು ಈಗಾಗಲೇ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ.

ಕನ್ನಡಿಗರ ದೂರು–ದುಮ್ಮಾನಕ್ಕೆ ಕಿವುಡು: ‘ಶಾಸಕರು ಜನರ ಕೈಗೆ ಸಿಗುವುದಿಲ್ಲ. ಅನಾರೋಗ್ಯವೂ ಅವರನ್ನು ಕಾಡುತ್ತಿದೆ. ವಡಗಾವಿ, ಖಾಸಬಾಗ್‌, ಭಾರತನಗರ, ದೇವಾಂಗ ನಗರ, ಲಕ್ಷ್ಮಿನಗರದಲ್ಲಿ ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ. ಹೀಗಾಗಿ, ಆ ಭಾಗಕ್ಕೆ ಅನ್ಯಾಯವಾಗಿದೆ. ಮೂಲಸೌಲಭ್ಯಗಳ ಕೊರತೆ ಅನುಭವಿಸುತ್ತಿದ್ದೇವೆ. ಜಾತ್ರೆ, ಗಣಪತಿ ಹಬ್ಬದ ಸಂದರ್ಭದಲ್ಲಿ ಬಂದಿದ್ದು ಬಿಟ್ಟರೆ ಶಾಸಕರು ಜನರ ಸಮಸ್ಯೆಗಳ ನಿವಾರಣೆಗಾಗಿ ಬಂದ ಉದಾಹರಣೆ ಇಲ್ಲ. ಕ್ಷೇತ್ರ ಪ್ರದಕ್ಷಿಣೆ ನಡೆಸಿ ಕುಂದುಕೊರತೆಗಳ ನಿವಾರಣೆಗೆ ಗಮನಹರಿಸಿಲ್ಲ’ ಎನ್ನುವ ದೂರು ವಡಗಾವಿ ನಿವಾಸಿ ಶ್ರೀನಿವಾಸ ತಾಳೂಕರ ಅವರದು.

‘ಮೂರು ವರ್ಷಗಳಿಂದಲೂ ಇಲ್ಲಿದ್ದೇನೆ. ಶಾಸಕರು ಇತ್ತ ಬಂದಿದ್ದನ್ನೇ ಕಂಡಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಎಸ್‌ಪಿಎಂ ರಸ್ತೆ ಬಳಿಯ ನಿವಾಸಿಯೊಬ್ಬರು ಪ್ರತಿಕ್ರಿಯಿಸಿದರು.

‘ಕ್ಷೇತ್ರದಲ್ಲಿನ ಕೊಳೆಗೇರಿಗಳು ಅಭಿವೃದ್ಧಿ ಕಂಡಿಲ್ಲ. ನೇಕಾರಿಕೆ ಮಾಡುತ್ತಿರುವವರ ಸಂಕಷ್ಟಗಳನ್ನು ಆಲಿಸಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ನೇಕಾರ ಸಮಾಜದ ಮುಖಂಡ ಗಜಾನನ ಗುಂಜೇರಿ ಆರೋಪಿಸಿದರು.

ಈ ಎಲ್ಲ ಆರೋಪಗಳಿಗೆ ಶಾಸಕ ಸಂಭಾಜಿ ಪಾಟೀಲ ಏನೆನ್ನುತ್ತಾರೆ, ಅವರು ಹೇಳುವ ಅಭಿವೃದ್ಧಿ ಕಾರ್ಯಗಳೇನು ಎಂಬುದನ್ನು ತಿಳಿಯಲು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ, ಅವರು ಕರೆಯನ್ನೇ ಸ್ವೀಕರಿಸಲಿಲ್ಲ.

***

ಎಂಇಎಸ್‌ ಬೆಂಬಲಿಗರು ಕ್ಷೇತ್ರ ಪ್ರತಿನಿಧಿಸುತ್ತಿರುವುದರಿಂದ ಅನುದಾನ ಸರಿಯಾಗಿ ಹಂಚಿಕೆಯಾಗಿಲ್ಲ. ಮೂಲಸೌಲಭ್ಯಕ್ಕೂ ಪ್ರತಿಭಟನೆ ನಡೆಸುವಂಥ ಸ್ಥಿತಿ ಇದೆ. ಜನರು ಸಾಮರಸ್ಯದಿಂದ ಇದ್ದರೂ, ಕೆಲವು ಮುಖಂಡರು ಭಾಷೆಯ ಹೆಸರಿನಲ್ಲಿ ವಿಷ ಬೀಜ ಬಿತ್ತುವ ಕೆಲಸ ಮುಂದುವರಿಸಿದ್ದಾರೆ.

– ಶ್ರೀನಿವಾಸ ತಾಳೂಕರ, ವಡಗಾವಿ ನಿವಾಸಿ

ನೇಕಾರರ ಸಮಸ್ಯೆಗಳಿಗೆ ಶಾಸಕರು ಸ್ಪಂದಿಸುವುದಿರಲಿ; ನಮ್ಮ ಪ್ರದೇಶಗಳಿಗೆ ಭೇಟಿಯನ್ನೂ ನೀಡಿಲ್ಲ. ಐದು ವರ್ಷಗಳ ಅವಧಿಯಲ್ಲಿ ಈ ಭಾಗದಲ್ಲಿ ನಡೆದ ಸರ್ಕಾರಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿಲ್ಲ.

– ಗಜಾನನ ಗುಂಜೇರಿ, ನೇಕಾರ ಸಮಾಜದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT