ಬುಧವಾರ, ಅಕ್ಟೋಬರ್ 21, 2020
26 °C

ಚಾಣಾಕ್ಷ ನಾಯಕ ವಾಡೇಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಕ್ರಿಕೆಟ್‌ ಲೋಕ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಅಜಿತ್‌ ವಾಡೇಕರ್‌ ಕೂಡಾ ಒಬ್ಬರು.

ಎಪ್ಪತ್ತರ ದಶಕದಲ್ಲಿ ಭಾರತಕ್ಕೆ ‘ಹ್ಯಾಟ್ರಿಕ್‌’ ಟೆಸ್ಟ್‌ ಸರಣಿ ಗೆದ್ದುಕೊಟ್ಟ ಮೊದಲ ನಾಯಕ ಎಂಬ ಹಿರಿಮೆ ಹೊಂದಿದ್ದ ಅಜಿತ್‌ ಈ ವರ್ಷದ ಆಗಸ್ಟ್‌ 15ರಂದು ನಿಧನರಾದರು. ಆಗ ಅವರಿಗೆ 77 ವರ್ಷ.

ಚುರುಕಿನ ಪಾದಚಲನೆ ಮತ್ತು ಕಲಾತ್ಮಕ ಹೊಡೆತಗಳ ಮೂಲಕ ಎದುರಾಳಿ ಬೌಲರ್‌ಗಳ ಬೆವರಿಳಿಸುತ್ತಿದ್ದ ಅಜಿತ್‌, ಅತ್ಯುತ್ತಮ ‘ಸ್ಲಿಪ್‌ ಫೀಲ್ಡರ್‌’ ಮತ್ತು ಚಾಣಾಕ್ಷ ನಾಯಕನೆಂದೇ ಹೆಸರಾಗಿದ್ದರು.

1971ರ ಮಾತು. ಆಗ ಭಾರತ ತಂಡ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಇಂಗ್ಲೆಂಡ್‌ ಪ್ರವಾಸ ಕೈಗೊಂಡಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದ್ದ ವಾಡೇಕರ್‌ ಬಳಗ, ಮೂರನೇ ಹೋರಾಟದಲ್ಲಿ ಕ್ರಿಕೆಟ್‌ ಜನಕರ ನಾಡಿನ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿತ್ತು. ಇಂಗ್ಲೆಂಡ್‌ ನೆಲದಲ್ಲಿ ಭಾರತ ಗೆದ್ದ ಚೊಚ್ಚಲ ಸರಣಿ ಅದಾಗಿತ್ತು. ವೆಸ್ಟ್‌ ಇಂಡೀಸ್‌ನಲ್ಲೂ ಅಜಿತ್‌ ಪಡೆ ಸರಣಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿತ್ತು. 1972–73ರಲ್ಲಿ ಇಂಗ್ಲೆಂಡ್‌ ತಂಡ ಐದು ಪಂದ್ಯಗಳ ಸರಣಿ ಆಡಲು ಭಾರತ ಪ್ರವಾಸ ಕೈಗೊಂಡಿದ್ದರು. ಅದರಲ್ಲಿ ಭಾರತ ತಂಡ 2–1ರಿಂದ ಸರಣಿ ಗೆದ್ದು ಬೀಗಿದ್ದರು. ಆಗಲೂ ಭಾರತ ತಂಡ ಚುಕ್ಕಾಣಿ ಹಿಡಿದಿದ್ದು ಇದೇ ವಾಡೇಕರ್‌.

ಎಂಜಿನಿಯರ್‌ ಆಗಬೇಕೆಂಬ ಕನಸು ಹೊತ್ತಿದ್ದ ವಾಡೇಕರ್‌, ಕ್ರಿಕೆಟ್‌ ಅಂಗಳಕ್ಕೆ ಕಾಲಿಟ್ಟಿದ್ದು ಆಕಸ್ಮಿಕ. ಭಾರತದ ಹಿರಿಯ ಸ್ಪಿನ್ನರ್‌ ಬಾಳು ಗುಪ್ತೆ ಮತ್ತು ಅಜಿತ್‌ ಒಮ್ಮೆ ಬಸ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದರು. ಈ ವೇಳೆ ಗುಪ್ತೆ ಆಡಿದ ಮಾತುಗಳು ಅಜಿತ್‌ ಅವರಲ್ಲಿ ಕ್ರಿಕೆಟ್‌ ಕುರಿತು ಆಸಕ್ತಿ ಮೊಳೆಯುವಂತೆ ಮಾಡಿತು. ಅಂದೇ ಕ್ರಿಕೆಟಿಗನಾಗಬೇಕೆಂದು ಪಣ ತೊಟ್ಟ ಅಜಿತ್‌, ಸಾಗಿದ ಹಾದಿಯಲ್ಲೆಲ್ಲಾ ಸಾಧನೆಯ ಮೈಲುಗಲ್ಲುಗಳನ್ನು ಸ್ಥಾಪಿಸಿದರು.

1958ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಾಡೇಕರ್‌ಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿದ್ದು ಎಂಟು ವರ್ಷಗಳ ನಂತರ. 1966ರಲ್ಲಿ ಚೊಚ್ಚಲ ಅಂತರರಾಷ್ಟ್ರೀಯ ಟೆಸ್ಟ್‌ ಆಡಿದ ಅವರು ಸಿಕ್ಕ ಅವಕಾಶಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ಭಾರತ ತಂಡದಲ್ಲಿ ಸ್ಥಾನ ಗಟ್ಟಿಮಾಡಿಕೊಂಡರು. ಕ್ರಮೇಣ ಅವರಿಗೆ ನಾಯಕತ್ವದ ಪಟ್ಟವೂ (1971ರಲ್ಲಿ) ಒಲಿಯಿತು. ಈ ಜವಾಬ್ದಾರಿಯನ್ನೂ ಯಶಸ್ವಿಯಾಗಿ ನಿಭಾಯಿಸಿದ ಅವರು ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ದಾರೆ.

1967ರ ಫೆಬ್ರುವರಿಯಲ್ಲಿ ಬಾಂಬೆಯಲ್ಲಿ ನಡೆದಿದ್ದ ಮೈಸೂರು ಎದುರಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯ ಅಜಿತ್‌ ಪಾಲಿಗೆ ಅವಿಸ್ಮರಣೀಯ. ಆ ಹೋರಾಟದಲ್ಲಿ ತ್ರಿಶತಕ (323) ಸಿಡಿಸಿ ದೇಶಿ ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದರು. ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ ಬಳಿಕ ಅವರು ಭಾರತ ಸೀನಿಯರ್‌ ತಂಡ ಮ್ಯಾನೇಜರ್‌ ಆಗಿಯೂ ಕೆಲಸ ಮಾಡಿದ್ದರು. ಅವರ ಸಾಧನೆಗೆ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಗಳು ಸಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು