ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಮಾದರಿಗಳ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ‘ದೂಸ್ರಾ’ ಸರದಾರ ಹರಭಜನ್

Last Updated 24 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ನವದೆಹಲಿ: ‘ದೂಸ್ರಾ’ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಎಲ್ಲ ಮಾದರಿಗಳ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯ ಹರಭಜನ್ ಅವರದ್ದು. 1998ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದರು.

‘ಎಲ್ಲ ಉತ್ತಮ ಸಂಗತಿಗಳು ಇವತ್ತು ಮುಕ್ತಾಯವಾಗಿದೆ. ನನಗೆ ಸರ್ವಸ್ವವನ್ನೂ ನೀಡಿದ ಕ್ರಿಕೆಟ್‌ಗೆ ಇವತ್ತು ವಿದಾಯ ಹೇಳುತ್ತಿದ್ದೇನೆ. 23 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಜೊತೆಗೂಡಿದ, ಬೆಂಬಲಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ.ಜಲಂಧರ್‌ನ ಗಲ್ಲಿಗಳಿಂದ ಭಾರತ ಕ್ರಿಕೆಟ್ ತಂಡದ ಟರ್ಬನೇಟರ್ ಆಗಿ ಬೆಳೆದಿದ್ದು ಅತ್ಯಂತ ಸುಂದರವಾದ ಪಯಣ’’ ಎಂದು 41 ವರ್ಷದ ಹರಭಜನ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

‘ಬೇರೆಲ್ಲ ಕ್ರಿಕೆಟಿಗರಂತೆ ನನಗೂ ಭಾರತ ತಂಡದ ಪೋಷಾಕಿನಲ್ಲಿ ವಿದಾಯದ ಪಂದ್ಯ ಆಡಿ ಹೊರಬೀಳುವ ಆಸೆಯಿತ್ತು. ಅದಕ್ಕಾಗಿ ಇಷ್ಟು ವರ್ಷ ಕಾದೆ. ಜೀವನದಲ್ಲಿ ಎಲ್ಲದಕ್ಕೂ ಒಂದು ಕೊನೆಯೆಂಬುದು ಇರುತ್ತದೆ. ಅದಕ್ಕಾಗಿ ನಾನು ಮಾನಸಿಕವಾಗಿ ಸಿದ್ಧನಾಗಿ ನಿರ್ಧರಿಸಿದೆ’ ಎಂದಿದ್ದಾರೆ.

2016ರಿಂದ ಈಚೆಗೆ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಆದರೆ ಐಪಿಎಲ್‌ನಲ್ಲಿ ಅವರು ಆಡಿದ್ದರು. ಹೋದ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್‌ರೈಡರ್ಸ್ ಪರವಾಗಿ ಕೆಲವು ಪಂದ್ಯಗಳಲ್ಲಿ ಆಡಿದ್ದರು.

‘2001ರಲ್ಲಿ ಕೋಲ್ಕತ್ತದಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ್ದೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಆಗಿದ್ದೆ. ಆ ಸರಣಿಯ ಮೂರು ಪಂದ್ಯಗಳಲ್ಲಿ ಒಟ್ಟು 32 ವಿಕೆಟ್‌ ಗಳಿಸಿದ್ದು ಅವಿಸ್ಮರಣೀಯ. 2007ರ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಜಯಿಸಿದ್ದು ಕೂಡ ಬಹಳ ಮಹತ್ವದ ಸಂಗತಿಗಳು. ಆ ಕ್ಷಣಗಳನ್ನು ಬಣ್ಣಿಸಲು ನನ್ನ ಬಳಿ ಪದಗಳಿಲ್ಲ’ ಎಂದು ಹರಭಜನ್ ಹೇಳಿದ್ದಾರೆ.

‘ನನ್ನ ತಂದೆ,ತಾಯಿಯ ಶ್ರಮ ದೊಡ್ಡದು. ಪತ್ನಿ ಗೀತಾಳ ಪ್ರೀತಿಯೂ ನನ್ನ ಸಾಧನೆಗೆ ಶಕ್ತಿಯಾಗಿದೆ. ಗುರುಗಳು ಮತ್ತು ಕುಟುಂಬಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಹೇಳಿದರು.

ವಿವಾದಗಳಲ್ಲಿ ಭಜ್ಜಿ
ಬೆಂಗಳೂರು:
ಆಕ್ರಮಣಶೀಲ ಗುಣದ ಆಟಗಾರ ಹರಭಜನ್ ಸಿಂಗ್ ತಾವು ಭಾರತ ತಂಡದಲ್ಲಿ ಆಡುವ ಸಂದರ್ಭದಲ್ಲಿ ಹಲವು ಬಾರಿ ವಿವಾದಗಳನ್ನು ಮೈಮೇಲೆಳೆದುಕೊಂಡಿದ್ದರು. ಅದರಲ್ಲಿ ಪ್ರಮುಖವಾದದ್ದು ‘ಮಂಕಿ ಗೇಟ್’ ವಿವಾದ.

ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಹರಭಜನ್ ತಮ್ಮನ್ನು ‘ಮಂಗ’ ಎಂದು ಜನಾಂಗೀಯ ನಿಂದನೆ ಮಾಡಿದ್ದಾರೆಂದು ಆ್ಯಂಡ್ರ್ಯೂ ಸೈಮಂಡ್ಸ್ ಆರೋಪಿಸಿದ್ದರು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ವಿವಾದವಾಗಿತ್ತು. ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ರೆಫರಿಗೆ ದೂರು ನೀಡಿದ್ದರು. ವಾದ, ವಿವಾದ ಮತ್ತು ವಿಚಾರಣೆಗಳ ನಂತರ ಕೊನೆಗೂ ಭಜ್ಜಿ ಆರೋಪಮುಕ್ತರಾದರು.

2008ರ ಐಪಿಎಲ್‌ ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದಲ್ಲಿದ್ದ ಹರಭಜನ್ ಪಂಜಾಬ್ ತಂಡದಲ್ಲಿದ್ದ ಎಸ್. ಶ್ರೀಶಾಂತ್ ಅವರ ಕಪಾಳಕ್ಕೆ ಹೊಡೆದಿದ್ದು ಬಹಳ ದೊಡ್ಡ ಸುದ್ದಿಯಾಗಿತ್ತು. ಶ್ರೀಶಾಂತ್ ಅಳುತ್ತಿದ್ದ ಚಿತ್ರಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಪಂದ್ಯದ ನಂತರ ಅಂತಹದ್ದೇನೂ ನಡೆದೇ ಇಲ್ಲ ಎಂದು ಇಬ್ಬರೂ ಆಟಗಾರರು ಹೇಳಿದ್ದರು. ಆದರೆ ಮ್ಯಾಚ್ ರೆಫರಿ ನೀಡಿದ ಸಾಕ್ಷಿಯಿಂದ ಹರ್ಭಜನ್ ಕಪಾಳಮೋಕ್ಷ ಮಾಡಿದ್ದು ಸಾಬೀತಾಗಿತ್ತು. ಅವರಿಗೆ ಶಿಕ್ಷೆ ಕೂಡ ವಿಧಿಸಲಾಗಿತ್ತು.

**
ಅತ್ಯಂತ ಕೌಶಲಪೂರ್ಣ ಆಫ್‌ಸ್ಪಿನ್ನರ್, ದೈವದತ್ತ ಪ್ರತಿಭೆಯಿರುವ ಬ್ಯಾಟ್ಸ್‌ಮನ್ ಆಗಿದ್ದ ಹರಭಜನ್ ಭಾರತ ತಂಡದ ಹಲವು ಜಯಗಳಿಗೆ ಕಾಣಿಕೆ ನೀಡಿದ್ದಾರೆ. ಅವರೊಂದಿಗೆ ಆಡಿದ್ದು ಅತ್ಯಂತ ಸಂತಸದ ಸಂಗತಿ.
– ವಿವಿಎಸ್ ಲಕ್ಷ್ಮಣ್, ಎನ್‌ಸಿಎ ಮುಖ್ಯಸ್ಥ

*
ಭಾರತದಲ್ಲಷ್ಟೇ ಅಲ್ಲ; ವಿಶ್ವದಲ್ಲಿಯೇ ಶ್ರೇಷ್ಠ ಕ್ರಿಕೆಟಿಗರಲ್ಲಿ ಹರಭಜನ್ ಕೂಡ ಒಬ್ಬರು. ಅವರೊಂದಿಗೆ ಆಡಿದ್ದು ನನಗೆ ಲಭಿಸಿದ ದೊಡ್ಡ ಗೌರವ. ನಿಮ್ಮ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ನನಗಿದೆ.
–ಎಸ್‌. ಶ್ರೀಶಾಂತ್, ಕ್ರಿಕೆಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT