ಶನಿವಾರ, ಜನವರಿ 16, 2021
25 °C
ಆಟಗಾರರ ಬೆಂಬಲಕ್ಕೆ ಬಿಸಿಸಿಐ

ಕೋವಿಡ್ ತಡೆ ಶಿಷ್ಟಾಚಾರ ಉಲ್ಲಂಘನೆ ಆರೋಪ: ಐವರು ಆಟಗಾರರ ತರಬೇತಿಗೆ ಇಲ್ಲ ಅಡ್ಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಕೋವಿಡ್ ತಡೆ ಶಿಷ್ಟಾಚಾರ ಉಲ್ಲಂಘನೆಯ ಆರೋಪ ಎದುರಿಸುತ್ತಿರುವ ಭಾರತ ತಂಡದ  ಐವರು ಆಟಗಾರರ ತರಬೇತಿಗೆ ಯಾವುದೇ ರೀತಿಯ ಅಡ್ಡಿಯಿಲ್ಲ. ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಹೊಸವರ್ಷದ ಆಚರಣೆಯ ಅಂಗವಾಗಿ ಊಟಕ್ಕೆ ತೆರಳಿದ್ದಉಪನಾಯಕ ರೋಹಿತ್ ಶರ್ಮಾ, ರಿಷಭ್ ಪಂತ್, ಶುಭಮನ್ ಗಿಲ್, ಪೃಥ್ವಿ ಶಾ ಮತ್ತು ನವದೀಪ್ ಸೈನಿ ಅವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಅವರನ್ನು ಐಸೋಲೇಷನ್‌ (ಪ್ರತ್ಯೇಕವಾಸ) ಗೆ ಒಳಪಡಿಸಲಾಗಿದೆ ಎಂದು ಶನಿವಾರ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿತ್ತು.

ಸಿಡ್ನಿಯಲ್ಲಿ ಇದೇ 7ರಿಂದ ಮೂರನೇ ಟೆಸ್ಟ್ ಪಂದ್ಯ ನಡೆಯಲಿದೆ. ಅದಕ್ಕಾಗಿ ನಾಲ್ಕರಂದು ತಂಡವು ಮೆಲ್ಬರ್ನ್‌ನಿಂದ ಸಿಡ್ನಿಗೆ ತೆರಳಲಿದೆ. ಶನಿವಾರ ಎಂಸಿಜಿಯಲ್ಲಿ ನಡೆದ ಅಭ್ಯಾಸದಲ್ಲಿ ರೋಹಿತ್ ಮತ್ತಿತರರು ಪಾಲ್ಗೊಂಡಿದ್ದರು.

ಒಂದೊಮ್ಮೆ ಆರೋಪ ಸಾಬೀತಾದರೆ ರೋಹಿತ್, ಗಿಲ್ ಮತ್ತು ಪಂತ್ ಅವರಿಗೆ ಮೂರನೇ ಟೆಸ್ಟ್‌ನಲ್ಲಿ ಆಡುವ ಅವಕಾಶವಿಲ್ಲವೇ ಎಂಬ ಪ್ರಶ್ನೆಗೆ ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಯೊಬ್ಬರು, ’ ಆ ಕುರಿತು ಈಗಲೇ ಹೇಳಲಾಗುವುದಿಲ್ಲ. ಪ್ರಕರಣವು ಆ ಹಂತಕ್ಕೆ ಹೋಗುವುದಿಲ್ಲವೆಂಬ ಭರವಸೆ ಇದೆ‘ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪ್ರಕರಣದ ಕುರಿತು ಶನಿವಾರ ಬೆಳಿಗ್ಗೆ ಪ್ರತಿಕ್ರಿಯಿಸಿದ್ದ ಬಿಸಿಸಿಐ ಅಧಿಕಾರಿಯೊಬ್ಬರು ’ನಮ್ಮ ಆಟಗಾರರಿಂದ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಈ ಆರೋಪದಲ್ಲಿ ಹುರುಳಿಲ್ಲ‘ ಎಂದಿದ್ದರು. ಅಲ್ಲದೇ ಯಾವುದೇ ತನಿಖೆ, ವಿಚಾರಣೆ ನಡೆಸುವುದಿಲ್ಲವೆಂದೂ ಹೇಳಿದ್ದರು.

ಆದರೆ, ಸಂಜೆ  ಬಿಸಿಸಿಐನೊಂದಿಗೆ ಜಂಟಿಯಾಗಿ ಈ ಪ್ರಕರಣದ ತನಿಖೆ ನಡೆಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಣೆ ನೀಡಿದೆ.

’ಉಭಯ ತಂಡಗಳ ವೈದ್ಯಕೀಯ ಬಳಗದೊಂದಿಗೆ ಸಮಾಲೋಚನೆ ನಡೆಸಿದ ನಂತರ ಐವರು ಆಟಗಾರರನ್ನು ಪ್ರತ್ಯೇಕವಾಸಕ್ಕೆ ಕಳಿಸಲು ನಿರ್ಣಯಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ತಂಡಗಳ ಉಳಿದ ಆಟಗಾರರು ಮತ್ತು ಸಿಬ್ಬಂದಿಯಿಂದ ಈ ಐವರನ್ನು ಪ್ರತ್ಯೇಕಿಸಲಾಗಿದೆ. ದೂರ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ‘ ಎಂದು ಸಿಎ ಮೂಲಗಳು ತಿಳಿಸಿವೆ.

ಆಟಗಾರರು ತಮ್ಮ ಹೋಟೆಲ್‌ನಿಂದ ಹೊರಗೆ ಹೋಗಿ ಊಟ, ತಿಂಡಿ ಸೇವಿಸಲು ಅವಕಾಶವಿದೆ. ಆದರೆ, ಒಳಾಂಗಣದಲ್ಲಿ ಹೋಗುವಂತಿಲ್ಲ. ಹೊರಾಂಗಣ ವ್ಯವಸ್ಥೆಯಲ್ಲಿ ಪರಸ್ಪರ ಮತ್ತು ಇತರರಿಂದ ಅಂತರ ಕಾಯ್ದುಕೊಂಡು ಆಹಾರ ಸೇವನೆ ಮಾಡಬಹುದು.

’ತಂಡದ ಮ್ಯಾನೇಜರ್ ಮತ್ತು ಶಿಷ್ಟಾಚಾರ ತಿಳಿವಳಿಕೆ ನೀಡುವ ಸಿಬ್ಬಂದಿಯು ಆಟಗಾರರಿಗೆ ಈ ಕುರಿತು ಅರಿವು ಮೂಡಿಸಿದ್ದರೇ ಎಂಬ ಬಗ್ಗೆಯೂ ವಿಚಾರಣೆ ನಡೆಸಲಾಗುತ್ತಿದೆ‘ಎಂದು ಮೂಲಗಳು ತಿಳಿಸಿವೆ.

’ಆಸ್ಟ್ರೇಲಿಯಾದ ಕೆಲವು ಮಾಧ್ಯಮಗಳು ಭಾರತ ತಂಡದ ಆತ್ಮವಿಶ್ವಾಸವನ್ನು ಕದಡಲು ಇಂತಹ ತಿರುಚಿದ ವರದಿಗಳನ್ನು ಮಾಡುತ್ತಿವೆ. ಇದರಿಂದ ತಂಡದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. 2008ರಲ್ಲಿ ಮಂಕಿ ಗೇಟ್ ಪ್ರಕರಣದ ಸಮಯದಲ್ಲಿ ಭಾರತ ತಂಡವು ಒಂದಾಗಿತ್ತು. ಅದೇ ರೀತಿ ಇಲ್ಲಿಯೂ ಸಂಘಟಿತವಾಗಿ ಹೋರಾಡಲಿದೆ‘ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.

ರೋಹಿತ್ ಶರ್ಮಾ  ಆಸ್ಟ್ರೇಲಿಯಾದಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ, ಮೂರು ದಿನಗಳ ಹಿಂದಷ್ಟೇ ತಂಡ ಸೇರಿಕೊಂಡಿದ್ದರು. ಶುಕ್ರವಾರ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿತ್ತು.

ಅಭಿಮಾನಿಯ ವಿಡಿಯೊ..
ಆಸ್ಟ್ರೇಲಿಯಾದಲ್ಲಿರುವ ಭಾರತೀಯ ಅಭಿಮಾನಿ ನವದೀಪ್ ಸಿಂಗ್ ಅವರು ಈ ವಿಡಿಯೊ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದರು.

'ನಾನು ಬಿಲ್ ಪಾವತಿಸಿದ್ದಕ್ಕೆ ರೋಹಿತ್ ಶರ್ಮಾ ದುಡ್ಡು ಮರಳಿ ಪಡೆಯುವಂತೆ ಹೇಳಿದರು. ಇದು ನನ್ನ ಪ್ರೀತಿಯ ಕಾಣಿಕೆಯೆಂದೆ. ರಿಷಭ್ ನನ್ನನ್ನು ಆಲಂಗಿಸಿಕೊಂಡು ದುಡ್ಡು ತೆಗೆದುಕೊಳ್ಳಿ ಎಂದಿದ್ದರು‘ ಎಂದು ಸಿಂಗ್ ತಮ್ಮ ಟ್ವೀಟ್‌ನಲ್ಲಿ ಬಿಲ್‌ ಚಿತ್ರದ ಜೊತೆಗೆ ಸಂದೇಶ ಹಾಕಿದ್ದರು. ಆಲಂಗಿಸಿಕೊಂಡಿರುವ ವಿಷಯವು ನಿಯಮ ಉಲ್ಲಂಘನೆಯ ಚರ್ಚೆಗೆ ಗ್ರಾಸವಾಗಿತ್ತು. ಅದರ ನಂತರ ಅಭಿಮಾನಿಯು ರಿಷಭ್ ತಮ್ಮನ್ನು ಆಲಂಗಿಸಿಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು