ಜೋಸೆಫ್‌ ಬೌಲಿಂಗ್‌ ದಾಖಲೆ

ಬುಧವಾರ, ಏಪ್ರಿಲ್ 24, 2019
31 °C
ಮುಂಬೈ ಇಂಡಿಯನ್ಸ್‌ಗೆ ಗೆಲುವು ತಂದುಕೊಟ್ಟ ವಿಂಡೀಸ್‌ ವೇಗಿ

ಜೋಸೆಫ್‌ ಬೌಲಿಂಗ್‌ ದಾಖಲೆ

Published:
Updated:
Prajavani

ಹೈದರಾಬಾದ್‌: ವೆಸ್ಟ್‌ ಇಂಡೀಸ್‌ ತಂಡದ ವೇಗದ ಬೌಲರ್‌ ಅಲಜಾರಿ ಜೋಸೆಫ್‌, ಉಪ್ಪಳದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ಶನಿವಾರ ದಾಖಲೆಗಳ ಒಡೆಯನಾಗಿ ಮೆರೆದರು.

ಜೋಸೆಫ್‌ ಅವರ ಶ್ರೇಷ್ಠ ಬೌಲಿಂಗ್‌ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ಎದುರಿನ ಪಂದ್ಯದಲ್ಲಿ 40 ರನ್‌ಗಳಿಂದ ಜಯಭೇರಿ ಮೊಳಗಿಸಿತು.

ಬ್ಯಾಟಿಂಗ್‌ ಆರಂಭಿಸಿದ ರೋಹಿತ್‌ ಶರ್ಮಾ ಮುಂದಾಳತ್ವದ ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 136ರನ್‌ ದಾಖಲಿಸಿತು. ಕೀರನ್‌ ಪೊಲಾರ್ಡ್‌ (ಔಟಾಗದೆ 46; 26ಎ, 2ಬೌಂ, 4ಸಿ) ಅಬ್ಬರದ ಬ್ಯಾಟಿಂಗ್‌ ಮಾಡಿ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು.

ಈ ಗುರಿಯನ್ನು ಆತಿಥೇಯ ಸನ್‌ರೈಸರ್ಸ್‌ ಸುಲಭವಾಗಿ ಮುಟ್ಟಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಭುವನೇಶ್ವರ್‌ ಕುಮಾರ್‌ ಬಳಗದ ಬ್ಯಾಟ್ಸ್‌ಮನ್‌ಗಳು, ಜೋಸೆಫ್‌ ದಾಳಿಯ ಎದುರು ತರಗೆಲೆಗಳ ಹಾಗೆ ಉದುರಿದ್ದರಿಂದ ಈ ನಿರೀಕ್ಷೆ ಹುಸಿಯಾಯಿತು. ಆತಿಥೇಯರು 17.4 ಓವರ್‌ಗಳಲ್ಲಿ 96ರನ್‌ಗಳಿಗೆ ಆಲೌಟ್‌ ಆದರು.

ಸನ್‌ರೈಸರ್ಸ್‌ ತಂಡ ಐಪಿಎಲ್‌ನಲ್ಲಿ ದಾಖಲಿಸಿದ ಅತೀ ಕಡಿಮೆ ಮೊತ್ತ ಇದಾಗಿದೆ. 2015ರಲ್ಲಿ ಸನ್‌ರೈಸರ್ಸ್‌, ಮುಂಬೈ ವಿರುದ್ಧವೇ 113ರನ್‌ಗಳಿಗೆ ಆಲೌಟ್‌ ಆಗಿತ್ತು. ಅದು ತಂಡದ ಈವರೆಗಿನ ಕಡಿಮೆ ಮೊತ್ತ ಎನಿಸಿತ್ತು.

ಪದಾರ್ಪಣೆ ‍ಪಂದ್ಯದಲ್ಲಿ ಮಿಂಚು: ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಬದಲು ಆಡುವ ಬಳಗದಲ್ಲಿ ಸ್ಥಾನ ಗಳಿಸಿದ್ದ ಜೋಸೆಫ್‌, ಚೊಚ್ಚಲ ಪಂದ್ಯದಲ್ಲೇ ಮೋಡಿ ಮಾಡಿದರು.

12ರನ್‌ ನೀಡಿ 6 ವಿಕೆಟ್‌ ಕಬಳಿಸಿದ ಅವರು ಹೊಸ ಮೈಲುಗಲ್ಲು ಸ್ಥಾಪಿಸಿದರು. ಐಪಿಎಲ್‌ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್‌ ಮಾಡಿದ ಹಿರಿಮೆಗೆ ಜೋಸೆಫ್‌ ಭಾಜನರಾದರು. 2008ರ ಆವೃತ್ತಿಯಲ್ಲಿ ಸೋಹೈಲ್‌ ತನ್ವೀರ್‌ 14ರನ್‌ ನೀಡಿ 6 ವಿಕೆಟ್‌ ಪಡೆದಿದ್ದು ಇದುವರೆಗಿನ ಉತ್ತಮ ಸಾಧನೆ ಎನಿಸಿತ್ತು.

ಐಪಿಎಲ್‌ ಪದಾರ್ಪಣೆ ಪಂದ್ಯದಲ್ಲೇ ಶ್ರೇಷ್ಠ ಬೌಲಿಂಗ್‌ ಮಾಡಿದ ಮೊದಲ ಬೌಲರ್‌ ಎಂಬ ಶ್ರೇಯವೂ ಜೋಸೆಫ್‌ ಅವರದ್ದಾಯಿತು. ಅವರು ಆ್ಯಂಡ್ರ್ಯೂ ಟೈ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು. ಆ್ಯಂಡ್ರ್ಯೂ 2017ರಲ್ಲಿ 17 ರನ್‌ ನೀಡಿ 5 ವಿಕೆಟ್‌ ‍ಪಡೆದಿದ್ದು ಇದುವರೆಗಿನ ಶ್ರೇಷ್ಠ ಸಾಧನೆಯಾಗಿತ್ತು.

ಐಪಿಎಲ್‌ನಲ್ಲಿ ಬೌಲ್‌ ಮಾಡಿದ ಚೊಚ್ಚಲ ಎಸೆತದಲ್ಲೇ ವಿಕೆಟ್‌ ಪಡೆದ ಏಳನೇ ಬೌಲರ್‌ ಎಂಬ ಹಿರಿಮೆಗೂ ಜೋಸೆಫ್‌ ಪಾತ್ರರಾದರು. ಈ ಮೂಲಕ ವಿಲ್ಕಿನ್‌ ಮೋಟಾ, ಟಿ.ಪಿ.ಸುಧೀಂದ್ರ, ಅಲಿ ಮುರ್ತಜಾ, ಅಮಿತ್‌ ಸಿಂಗ್‌, ಇಶಾಂತ್‌ ಶರ್ಮಾ ಮತ್ತು ದ್ವಾರಕ ರವಿತೇಜ ಅವರ ಸಾಲಿಗೆ ಸೇರ್ಪಡೆಯಾದರು.

ಐಪಿಎಲ್‌ನಲ್ಲಿ ಹಾಕಿದ ಚೊಚ್ಚಲ ಓವರ್‌ನಲ್ಲೇ ವಿಕೆಟ್‌ ಮೇಡನ್‌ ಸಾಧನೆ ಮಾಡಿದ ಎರಡನೇ ಬೌಲರ್‌ ಎಂಬ ಸಾಧನೆಯೂ ಜೋಸೆಫ್‌ ಅವರದ್ದಾಯಿತು. ಪ್ಯಾಟ್‌ ಕಮಿನ್ಸ್‌, ಈ ಸಾಧನೆ ಮಾಡಿದ ಮೊದಲ ಬೌಲರ್‌ ಆಗಿದ್ದಾರೆ.

22ರ ಹರೆಯದ ಜೋಸೆಫ್‌, ಸನ್‌ರೈಸರ್ಸ್‌ ತಂಡದ ಡೇವಿಡ್‌ ವಾರ್ನರ್‌ (15), ವಿಜಯ ಶಂಕರ್‌ (5), ದೀ‍ಪಕ್‌ ಹೂಡಾ (20), ರಶೀದ್‌ ಖಾನ್‌ (0), ಭುವನೇಶ್ವರ್‌ ಕುಮಾರ್‌ (2) ಮತ್ತು ಸಿದ್ದಾರ್ಥ್‌ ಕೌಲ್‌ (0) ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 136 (ರೋಹಿತ್‌ ಶರ್ಮಾ 11, ಕ್ವಿಂಟನ್‌ ಡಿ ಕಾಕ್‌ 19, ಇಶಾನ್‌ ಕಿಶನ್‌ 17, ಕೀರನ್‌ ಪೊಲಾರ್ಡ್‌ ಔಟಾಗದೆ 46, ಹಾರ್ದಿಕ್‌ ಪಾಂಡ್ಯ 14; ಸಿದ್ದಾರ್ಥ್‌ ಕೌಲ್‌ 34ಕ್ಕೆ2, ಮೊಹಮ್ಮದ್‌ ನಬಿ 13ಕ್ಕೆ1, ಸಂದೀಪ್‌ ಶರ್ಮಾ 20ಕ್ಕೆ1). ಸನ್‌ರೈಸರ್ಸ್‌ ಹೈದರಾಬಾದ್‌: 17.4 ಓವರ್‌ಗಳಲ್ಲಿ 96 (ಡೇವಿಡ್‌ ವಾರ್ನರ್‌ 15, ಜಾನಿ ಬೇಸ್ಟೊ 16, ಮನೀಷ್‌ ಪಾಂಡೆ 16, ದೀಪಕ್ ಹೂಡಾ 20; ಜಸ್‌ಪ್ರೀತ್‌ ಬೂಮ್ರಾ 16ಕ್ಕೆ1, ರಾಹುಲ್‌ ಚಾಹರ್‌ 21ಕ್ಕೆ2, ಅಲಜಾರಿ ಜೋಸೆಫ್‌ 12ಕ್ಕೆ6).

ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 40 ರನ್‌ ಗೆಲುವು.

ಪಂದ್ಯಶ್ರೇಷ್ಠ: ಅಲಜಾರಿ ಜೋಸೆಫ್‌.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !