ಶನಿವಾರ, ಜುಲೈ 31, 2021
28 °C

ರಾಯುಡು... ಈಗಲೂ ಆಟ ನೋಡು!

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Deccan Herald

ಸುರೇಶ್ ರೈನಾ, ಆರ್.ಪಿ. ಸಿಂಗ್, ದಿನೇಶ್ ಕಾರ್ತಿಕ್, ಇರ್ಫಾನ್ ಪಠಾಣ್ ಇವರೆಲ್ಲ 19 ವರ್ಷದೊಳಗಿನವರ ತಂಡದಲ್ಲಿ ಆಡುತ್ತಿದ್ದಾಗ ಇಂಗ್ಲೆಂಡ್‌ಗೆ ಪ್ರವಾಸಕ್ಕೆ ಹೋಗಿದ್ದರು. ಆಗ ಅವರಿಗೆಲ್ಲ ನಾಯಕ ಆಗಿದ್ದವರು ಅಂಬಟಿ ರಾಯುಡು. 50 ಓವರ್ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ರಾಯುಡು 177 ರನ್ ಗಳಿಸಿದರು.

ವೀಕ್ಷಕ ವಿವರಣೆ ನೀಡುತ್ತಿದ್ದ ಡೇವಿಡ್ ಲಾಯ್ಡ್ ಹೀಗೆಂದಿದ್ದರು: ‘ಯಾವುದಾದರೂ ಕೌಂಟಿ ಆಯ್ಕೆದಾರರು ಈ ಪಂದ್ಯ ನೋಡುತ್ತಿದ್ದರೆ ತಕ್ಷಣಕ್ಕೇ ಈ ಹುಡುಗನನ್ನು ಬುಕ್ ಮಾಡಿಕೊಳ್ಳಿ’. ಮೊನ್ನೆ ಮೊನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರಾಯುಡು 100 ರನ್ ಗಳಿಸಿದಾಗ ಹಳೆಯ ಈ ಘಟನೆ ನೆನಪಾಯಿತು. ಇಷ್ಟಕ್ಕೂ ರಾಯುಡು ನಾಯಕತ್ವದಲ್ಲಿ ಆಡಿದ ಆ ಉಳಿದ ಆಟಗಾರರು ಇವರಿಗಿಂತ ಹೆಚ್ಚೇ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು ವಾಸ್ತವ.

ಮೂವತ್ತೆರಡು ವಯಸ್ಸು ತುಂಬಿದ ರಾಯುಡು ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಮೂರೇ ಶತಕ ಗಳಿಸಲು ಆಗಿರುವುದು. ಅರ್ಧ ಶತಕಗಳ ಖಾತೆಯಲ್ಲಿ ಇರುವುದು ‘ಒಂಬತ್ತು’. ಅದೃಷ್ಟ ಅವರ ಕಡೆಗೆ ಮೊದಲಿನಿಂದಲೂ ಇದ್ದುದು ಕಡಿಮೆ ಎಂದೇ ಆಪ್ತೇಷ್ಟರು ಹೇಳುತ್ತಿರುತ್ತಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಡುವ ಮುಂಬೈ ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಈ ಆಟಗಾರನ ಹೆಸರನ್ನು ‘ಅಂಬವಟಿ ರಾಯುಡು’ ಎಂದು ಹೇಳಿದ್ದೂ ಸುದ್ದಿಯಾಗಿತ್ತು. ಇದು ರಾಯುಡುಗೆ ಹೊಸತೇನಲ್ಲ. ಅನೇಕರು ಅವರ ಹೆಸರನ್ನು ತಪ್ಪಾಗಿ ಉಚ್ಚರಿಸುವುದನ್ನು ಕೇಳಿ ಅಭ್ಯಾಸವಾಗಿದೆ.

2001-02ರಲ್ಲಿ ರಣಜಿ ಕ್ರಿಕೆಟ್ ಆಡಲಾರಂಭಿಸಿದ ಹೊತ್ತಿನಲ್ಲೇ ಅವರು ತಮ್ಮ ಗುರುತು ಮೂಡಿಸುವ ಉತ್ಸಾಹ ತೋರಿದ್ದರು. ಆಂಧ್ರ ಬ್ಯಾಂಕ್ ಪರ ಆಡುವಾಗ ತರಬೇತುದಾರ ಆಗಿದ್ದ ವಿಜಯ್ ಪಾಲ್ ಹೈದರಾಬಾದ್ ತಂಡದ ನಾಯಕ ವೆಂಕಟಪತಿ ರಾಜು ಅವರನ್ನು ಕರೆದರು. ‘ಈ ಹುಡುಗನ ಆಟವನ್ನು ಒಮ್ಮೆ ನೋಡು’ ಎಂದು ಆಹ್ವಾನವಿತ್ತರು. ಜಿಮ್ಖಾನಾದಲ್ಲಿ ಹುಡುಗನ ಆನ್ ಡ್ರೈವ್ ನೋಡಿದ್ದೇ ತಡ, ‘ವಿವಿಎಸ್ ಲಕ್ಷ್ಮಣ್ ತರಹದ ಡ್ರೈವ್ ಇದು’ ಎಂಬ ಉದ್ಗಾರ ವೆಂಕಟಪತಿ ರಾಜು ಬಾಯಿಂದ ಹೊಮ್ಮಿತ್ತು.

ಯಾವ ಜಿಮ್ಖಾನಾ ಮೈದಾನದಲ್ಲಿ ಹುಡುಗನ ಆಟವನ್ನು ವೆಂಕಟಪತಿ ರಾಜು ಮೊದಲು ನೋಡಿದ್ದರೋ, ಅಲ್ಲಿಯೇ ಆಂಧ್ರ ಎದುರಿನ ಪಂದ್ಯದ ಮೊದಲ ಇನಿಂನ್ಸ್‌ನಲ್ಲಿ ರಾಯುಡು 210 ಹಾಗೂ ಎರಡನೇ ಇನಿಂಗ್ಸ್ ನಲ್ಲಿ 159 ಜಮೆ ಮಾಡಿ ತನ್ನ ಬ್ಯಾಟಿಂಗ್ ಬಲ ರುಜುಮಾತು ಮಾಡಿದ್ದು.

ರಾಯುಡು ಕೋಪಿಷ್ಟ. ಪದೇ ಪದೇ ನಿಷೇಧಕ್ಕೆ ಒಳಗಾದದ್ದು, ದಂಡ ಕಟ್ಟಿದ್ದು ಇದೆ. ಬಂಡೆದ್ದು ಇಂಡಿಯನ್ ಕ್ರಿಕೆಟ್ ಲೀಗ್ (ಐಸಿಎಲ್) ಆಡಲು ಹೋದದ್ದೂ ನೆನಪಿರಲಿಕ್ಕೆ ಸಾಕು. ಇಂಥ ಸ್ವಭಾವದ ನಡುವೆಯೂ ಬ್ಯಾಟಿಂಗ್ ವಿಷಯದಲ್ಲಿ ಅವರದ್ದು ಸ್ಥಿತಪ್ರಜ್ಞೆ. ಇನಿಂಗ್ಸ್ ಓಪನ್ ಮಾಡಲು ಕಳುಹಿಸಿದರೂ ಸೈ, ನಡುವಿನ ಕ್ರಮಾಂಕದಲ್ಲಿ ಜಬರದಸ್ತಾಗಿ ಆಡಲೂ ಸೈ. ಏಕದಿನದ ಪಂದ್ಯಗಳಲ್ಲಿ ಅವರ ಸರಾಸರಿ 50ಕ್ಕೂ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ.

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಉತ್ತಮವಾಗಿ ಆಡುತ್ತಿರುವಾಗಲೂ ಅವರಿಗೆ ಅಂತರರಾಷ್ಟ್ರೀಯ ತಂಡದ ಪ್ರವೇಶ ಸಲೀಸಾಗಲಿಲ್ಲ. ಸ್ಪರ್ಧೆ ಅಷ್ಟರ ಮಟ್ಟಿಗೆ ಇತ್ತು. ಬೆಂಚು ಕಾಯುವುದು ಅನಿವಾರ್ಯ ಎನ್ನುವ ಸ್ಥಿತಿ. ಚೆನ್ನಯ ಸೂಪರ್ ಕಿಂಗ್ಸ್ ತಂಡ ಮೂರನೇ ಸಲ ಐಪಿಎಲ್ ಗೆದ್ದಾಗ 16 ಇನಿಂಗ್ಸ್‌ಗಳಲ್ಲಿ 602 ರನ್ ಗಳನ್ನು ಅವರು ಕಲೆಹಾಕಿದ್ದು ಬ್ಯಾಟಿಂಗ್ ಸ್ಥಿರತೆಗೆ ಹಿಡಿದ ಕನ್ನಡಿ.

ಶಕುನ ನಂಬುವ ರಾಯುಡು ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಅವರಿಂದ ಪಡೆದ ಬ್ಯಾಟ್‌ನಲ್ಲಿ ಆಡಿ ಹೆಚ್ಚು ರನ್ ಗಳಿಸಿದ್ದಾಗಿ ಹೇಳಿಕೊಂಡಿದ್ದರು. ಮಹೇಂದ್ರ ಸಿಂಗ್ ದೋನಿ ನಾಯಕತ್ವದಲ್ಲಿ ಕೆಲವು ತಣ್ಣಗಿನ ಪಾಠಗಳನ್ನು ಕೇಳಿ ಖುದ್ದು ತಣ್ಣಗಾದಂತೆ ಕಾಣುತ್ತಿರುವ ರಾಯುಡು ಅವರನ್ನು ರಾಜು ಮೊದಲು ನೋಡಿದ್ದಾಗ 16ರ ಹುಡುಗ. ಈಗ ಅದರ ದುಪ್ಪಟ್ಟು ವಯಸ್ಸಾಗಿರುವಾಗಲೂ ಉತ್ಸಾಹ ನೋಡಿಯಾದರೂ ಅವರ ಕ್ರಿಕೆಟ್ ಪ್ರೀತಿಗೆ ಶರಣೆನ್ನಲೇಬೇಕು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು