ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬ್ಳೆ–ಕೊಹ್ಲಿ ಪ್ರಕರಣದ ಒಳಸುಳಿ ಬಿಚ್ಚಿಟ್ಟ ವಿನೋದ್ ರಾಯ್

’ನಾಟ್ ಜಸ್ಟ್‌ ಎ ನೈಟ್ ವಾಚ್‌ಮ್ಯಾನ್: ಮೈ ಇನಿಂಗ್ಸ್ ವಿಥ್ ಬಿಸಿಸಿಐ’ ಪುಸ್ತಕದಲ್ಲಿ ಉಲ್ಲೇಖ
Last Updated 7 ಏಪ್ರಿಲ್ 2022, 22:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದಲ್ಲಿ ಮುಖ್ಯ ಕೋಚ್ ಆಗಿದ್ದ ತಮ್ಮನ್ನು ‘ಅನುಚಿತ’ವಾಗಿ ನಡೆಸಿಕೊಂಡಿದ್ದರೆಂಬ ಭಾವನೆ ಅನಿಲ್ ಕುಂಬ್ಳೆಯವರಲ್ಲಿತ್ತು. ತಂಡದಲ್ಲಿದ್ದ ಅಹಿತಕರ ವಾತಾವರಣದಿಂದಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಯಿತು. ಅವರು ಅನುಸರಿಸುತ್ತಿದ್ದ ಕಠಿಣ ಶಿಸ್ತಿನ ನಡವಳಿಕೆಯು ತಂಡದಲ್ಲಿ ಅಸಮಾಧಾನ ಮೂಡಲು ಕಾರಣವಾಗಿತ್ತು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಡಳಿತಗಾರರ ಸಮಿತಿಯ ಮಾಜಿ ಮುಖ್ಯಸ್ಥ ವಿನೋದ್ ರಾಯ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ವಿನೋದ್ ರಾಯ್ ಬರೆದ ’ನಾಟ್ ಜಸ್ಟ್‌ ಎ ನೈಟ್ ವಾಚ್‌ಮ್ಯಾನ್: ಮೈ ಇನಿಂಗ್ಸ್ ವಿಥ್ ಬಿಸಿಸಿಐ’ ಪುಸ್ತಕವನ್ನು ರೂಪಾ ಪ್ರಕಾಶನವು ಪ್ರಕಟಿಸಿದೆ. ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ವಯ ರಚಿತವಾದ ನಿಯಮಗಳನ್ನು ಜಾರಿಗೊಳಿಸಲು ಸುಪ್ರೀಂ ಕೋರ್ಟ್‌ನಿಂದ ಆಡಳಿತ ಸಮಿತಿಯನ್ನು ನೇಮಕ ಮಾಡಲಾಗಿತ್ತು. 33 ತಿಂಗಳು ಅಧಿಕಾರದಲ್ಲಿದ್ದ ಸಮಿತಿಯು ತಮ್ಮ ಅನುಭವಗಳನ್ನು ವಿನೋದ್ ರಾಯ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

2017ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಸೋತ ಸಂದರ್ಭದಲ್ಲಿಯೂ ಸಿಒಇ ಆಡಳಿತದಲ್ಲಿತ್ತು. ಆ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು. ವಿವಾದದ ರೂಪವನ್ನೂ ಪಡೆದುಕೊಂಡಿತ್ತು. ಕುಂಬ್ಳೆ ರಾಜೀನಾಮೆ ಕೊಟ್ಟು ಹೊರನಡೆದಿದ್ದರು.

‘ತಂಡದ ನಾಯಕ ಕೊಹ್ಲಿಯೊಂದಿಗೆ ಆಗ ಮಾತನಾಡಿದಾಗ ಕುಂಬ್ಳೆಯವರ ಅತಿ ಕಠಿಣ ಶಿಸ್ತಿನ ನಿಯಮಗಳಿಂದ ಯುವ ಆಟಗಾರರು ಬೆದರಿದ್ದಾರೆಂದು ಹೇಳಿದ್ದರು. ವ್ಯವಸ್ಥಾಪಕ ಮಂಡಳಿಯ ಕೆಲ ಸದಸ್ಯರೂ ಕೂಡ ಕುಂಬ್ಳೆಯವರದ್ದು ಅತಿಯಾದ ಶಿಸ್ತು ಮತ್ತು ಬಿಗಿ ಧೋರಣೆಯಿಂದ ಆಟಗಾರರು ಬೇಸರಗೊಂಡಿದ್ದಾರೆಂದು ಹೇಳಿದ್ದರು. ಅದಾದ ಕೂಡಲೇ ಲಂಡನ್‌ನಲ್ಲಿ ಕ್ರಿಕೆಟ್ ಸಲಹಾ ಸಮಿತಿ (ಸಿಇಸಿ) ನಡೆಸಿದ ತುರ್ತು ಸಭೆಯಲ್ಲಿ ಇಬ್ಬರನ್ನೂ ಪ್ರತ್ಯೇಕವಾಗಿ ಕರೆಸಿ ಮಾತನಾಡಲಾಗಿತ್ತು. ಮೂರು ದಿನಗಳ ಕಾಲ ಚರ್ಚೆಗಳ ನಂತರ ಕುಂಬ್ಳೆಯವರನ್ನು ಮುಖ್ಯ ಕೋಚ್ ಆಗಿ ಮರುನೇಮಕ ಮಾಡಲು ಶಿಫಾರಸ್ಸು ಮಾಡಲಾಗಿತ್ತು. ಆಗ ಸಮಿತಿಯಲ್ಲಿ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಇದ್ದರು’ ಎಂದು ರಾಯ್ ಬರೆದಿದ್ದಾರೆ.

ಆದರೆ, ಕುಂಬ್ಳೆ ಮರುನೇಮಕವಾಗಲಿಲ್ಲ. ಎಲ್ಲವೂ ಕೊಹ್ಲಿಯ ಅಭಿಪ್ರಾಯಗಳಂತೆಯೇ ನಡೆದಿತ್ತು ಎಂಬುದಕ್ಕೆ ನಂತರದ ಬೆಳವಣಿಗೆಗಳೇ ಸಾಕ್ಷಿ.

‘ಇಂಗ್ಲೆಂಡ್‌ನಿಂದ ಮರಳಿದ ನಂತರವೂ ಕುಂಬ್ಳೆಯೊಂದಿಗೆ ದೀರ್ಘ ಚರ್ಚೆ ಮಾಡಿದ್ದೆವು. ಇಡೀ ಪ್ರಕರಣದ ಕುರಿತು ಅವರು ಅತೀವ ಬೇಸರಗೊಂಡಿದ್ದರು. ತಮ್ಮನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಮತ್ತು ನಾಯಕ ಅಥವಾ ತಂಡಕ್ಕೆ ಅತಿಯಾದ ಮಹತ್ವದ ಕೊಟ್ಟಿದ್ದು ಸರಿಯಲ್ಲವೆಂಬ ಭಾವನೆ ವ್ಯಕ್ತಪಡಿಸಿದ್ದರು. ತಂಡದಲ್ಲಿ ಶಿಸ್ತು ಮತ್ತು ವೃತ್ತಿಪರತೆಯನ್ನು ನೆಲೆಗೊಳಿಸುವುದು ಕೋಚ್ ಕೆಲಸ. ತಂಡದಲ್ಲಿ ಎಲ್ಲರಿಗಿಂತಲೂ ಹಿರಿಯ ವ್ಯಕ್ತಿಯೂ ಆಗಿರುವ ತರಬೇತುದಾರರನ್ನು ಗೌರವಿಸಬೇಕೆಂದಿದ್ದರು’ ಎಂದು ವಿನೋದ್ ಬರೆದಿದ್ದಾರೆ.

‘ಪ್ರಕರಣದ ಕುರಿತು ಕೊಹ್ಲಿ ಮತ್ತು ಕುಂಬ್ಳೆಯವರು ಸಾರ್ವಜನಿಕವಾಗಿ ಮೌನವಾಗಿದ್ದದ್ದು ವಿವೇಕಯುತ ನಡವಳಿಕೆಯಾಗಿತ್ತು. ಈ ವಿಷಯವಾಗಿ ಕುಂಬ್ಳೆ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಲಿಲ್ಲ. ಇದು ಅವರ ಪ್ರಬುದ್ಧತೆ ಮತ್ತು ಘನತೆಯನಡವಳಿಕೆಯಾಗಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ದ್ರಾವಿಡ್, ಜಹೀರ್ ನೇಮಕಕ್ಕೆ ತಡೆ

2017ರಲ್ಲಿ ರವಿಶಾಸ್ತ್ರಿ ಭಾರತ ತಂಡದ ಮುಖ್ಯ ಕೋಚ್ ಆಗಿ ನೇಮಕವಾದ ನಂತರ ರಾಹುಲ್ ದ್ರಾವಿಡ್ ಅವರನ್ನು ಬ್ಯಾಟಿಂಗ್ ಮತ್ತು ಜಹೀರ್ ಖಾನ್ ಅವರನ್ನು ಬೌಲಿಂಗ್ ಸಲಹೆಗಾರರನ್ನಾಗಿ ನೇಮಕ ಮಾಡಲು ಬಿಸಿಸಿಐ ಒಲವು ತೋರಿತ್ತು. ಆದರೆ ನಂತರ ಕೈಬಿಡಲಾಯಿತು. ಈ ಕುರಿತು ಕೂಡ ವಿನೋದ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

‘ದ್ರಾವಿಡ್ ಮತ್ತು ಜಹೀರ್ ಬೇರೆ ಹುದ್ದೆಗಳಲ್ಲಿದ್ದಾರೆ. ಆದ್ದರಿಂದ ಅವರು ಈ ಸ್ಥಾನಗಳಿಗೆ ಬರುವುದಿಲ್ಲ ಎಂಬುದು ಗೊತ್ತಿದ್ದೂ ಸಿಒಎ ಏಕೆ ನೇಮಕ ಪತ್ರ ನೀಡಿತ್ತು. ವಾಸ್ತವದಲ್ಲಿ ಕೋಚ್ ಶಾಸ್ತ್ರಿ ತಮಗೆ ಆಪ್ತರಾದವರನ್ನೇ ನೆರವು ಸಿಬ್ಬಂದಿಯನ್ನಾಗಿ ನೇಮಕ ಮಾಡಲು ಆಗ್ರಹಿಸಿದ್ದರು. ಆದ್ದರಿಂದ ಭರತ್ ಅರುಣ್ ಸ್ಥಾನ ಖಚಿತವಾಗಿತ್ತು’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT