ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ: ಕೈಮುಗಿದು ಬೇಡಿಕೊಂಡ ಅನಿಲ್ ಕುಂಬ್ಳೆ

Last Updated 28 ಮಾರ್ಚ್ 2020, 2:09 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್ ಸೋಂಕಿನ (ಕೋವಿಡ್–19) ಕುರಿತು ಜಾಗೃತಿ ಮೂಡಿಸುವ ಕಾಯಕದಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ ಸಹ ಕೈಜೋಡಿಸಿದ್ದಾರೆ.

ಕೋವಿಡ್ ಬಗ್ಗೆ ಜಾಗೃತಿಯ ಸಂದೇಶವುಳ್ಳ 1.15 ನಿಮಿಷದ ವಿಡಿಯೊವೊಂದನ್ನು ಅವರು ಶುಕ್ರವಾರ ರಾತ್ರಿ ಟ್ವೀಟ್ ಮಾಡಿದ್ದು, ಜನರು ಮನೆಯಲ್ಲೇ ಇದ್ದು ಸುರಕ್ಷಿತವಾಗಿರುವಂತೆ ಕೈಮುಗಿದು ಬೇಡಿಕೊಂಡಿದ್ದಾರೆ.

‘ಎಲ್ಲರಿಗೂ ನಮಸ್ಕಾರ. ಈ ಕೊರೊನಾ ವೈರಸ್ ಭಾರತಕ್ಕಷ್ಟೇ ಸೀಮಿತವಲ್ಲ. ನಮಗೆಲ್ಲ ತಿಳಿದಿರುವಂತೆ ಇಡೀ ವಿಶ್ವಕ್ಕೇ ಹರಡಿದೆ. ಸೋಷಿಯಲ್ ಡಿಸ್ಟೆನ್ಸಿಂಗ್ (ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ) ಒಂದೇ ನಮ್ಮನ್ನು ಕೊರೊನಾದಿಂದ ಕಾಪಾಡಬಲ್ಲದು. ನಮ್ಮ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಸರ್ಕಾರಿ ಅಧಿಕಾರಿಗಳಿಗೆ ಸ್ಪಂದಿಸೋಣ. ಅವರನ್ನು ಬೆಂಬಲಿಸಿ ಅವರಿಗೆ ಸಹಕಾರ ಕೊಡಬೇಕು ಎಂದಿದ್ದರೆ, ದಯಮಾಡಿ ಮನೆಯಲ್ಲಿ ಇರಿ. ಈ ಲಾಕ್‌ಡೌನ್ ಅವಧಿಯಲ್ಲಿ ನಮ್ಮ ಸರ್ಕಾರ ಏನು ಆದೇಶ ಕೊಟ್ಟಿದೆಯೋ ಅದನ್ನು ಚಾಚೂ ತಪ್ಪದೆ ಪಾಲಿಸಿ. ಕೈಮುಗಿದು ಕೇಳಿಕೊಳ್ತಾ ಇದ್ದೇನೆ, ಎಲ್ಲರೂ ಮನೆಯಲ್ಲೇ ಇರಿ. ಮಕ್ಕಳಿಗೂ ಈಗ ಶಾಲೆಗೆ ರಜೆ ಇದ್ದು, ಹೊರಗಡೆ ಹೋಗಿ ಆಡಬೇಕು ಎನ್ನುತ್ತಾರೆ. ಆದರೆ ದಯಮಾಡಿ ಅವರನ್ನು ಹೊರಗೆ ಕಳುಹಿಸಬೇಡಿ. ನೀವೂ ಎಲ್ಲರೂ ಮನೆಯಲ್ಲೇ ಇರಿ. ನಾವೆಲ್ಲ ಮನೆಯಲ್ಲೇ ಇರೋಣ, ಆರೋಗ್ಯವಾಗಿರೋಣ, ಸುರಕ್ಷಿತವಾಗಿರೋಣ’ ಎಂದು ಕುಂಬ್ಳೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT