ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಣ; ಸಿನಿ ತಾರೆಯರ ರಿಂಗಣ

Last Updated 8 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ಕ್ಷೇತ್ರದಲ್ಲಿ ಜನರ ಮನ ಗೆದ್ದವರು, ರಾಜಕೀಯ ರಂಗ ಪ್ರವೇಶಿಸಿ ಸೋತಿದ್ದುಂಟು. ಬಣ್ಣದ ಬದುಕಿನಲ್ಲಿ ಘಟ್ಟ ಹತ್ತದವರು, ವಿಧಾನಸೌಧದ ಮೆಟ್ಟಿಲೇರುವಲ್ಲಿ ಯಶಸ್ವಿಯಾಗಿದ್ದೂ ಉಂಟು. ಅವೇ ಲೆಕ್ಕಾಚಾರ ಇಟ್ಟುಕೊಂಡು ಈ ಸಲವೂ ಚಿತ್ರರಂಗದ 15ಕ್ಕೂ ಹೆಚ್ಚು ಮಂದಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಮರೆಯಲ್ಲಿ ನಿಂತು ಗಾಂಧಿನಗರವನ್ನು ಆಡಿಸಿದವರೂ ‘ರಾಜಕೀಯ ಚದುರಂಗ’ದಲ್ಲಿ ದಾಳ ಹಾಕಲು ಅಣಿಯಾಗುತ್ತಿದ್ದಾರೆ. ಆದರೆ, ಇವರಲ್ಲಿ ಕೆಲವರಿಗೆ ಪ್ರಮುಖ ಪಕ್ಷಗಳ ಟಿಕೆಟ್‌ ಖಚಿತವಾಗಿದ್ದರೆ, ಇನ್ನು ಕೆಲವರು ಟಿಕೆಟ್ ಪಡೆಯುವುದು ಇನ್ನೂ ಖಚಿತವಾಗಿಲ್ಲ. ಚುನಾವಣಾ ಪೂರ್ವದಲ್ಲಿ ‘ಸಿನಿಮಾ–ರಾಜಕೀಯ’ದ ತಳುಕಿನ ಕುರಿತು ಮುನ್ನೋಟ ಬೀರುವ ಸಣ್ಣ ಯತ್ನ ಇಲ್ಲಿದೆ.

ಲೋಕಸಭೆ ಸದಸ್ಯರಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಸಚಿವರಾಗಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಎರಡು ಪಕ್ಷಗಳಲ್ಲೂ ಕಾಲಿಟ್ಟು, ಈ ಕ್ಷಣದವರೆಗೂ ಕಾಂಗ್ರೆಸ್‌ನಲ್ಲಿ ಇರುವ ಹಿರಿಯ ನಟ ಎಂ.ಎಚ್.ಅಂಬರೀಷ್ ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಆಕಾಂಕ್ಷಿ. ಆದರೆ, ಈವರೆಗೂ ಅವರು ಅರ್ಜಿ ಸಲ್ಲಿಸಿಲ್ಲ.

ಅನೇಕ ಚಿತ್ರಗಳಲ್ಲಿ ನಟಿಸಿರುವ ಉಮಾಶ್ರೀ, ಈಗ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಿಂದ ಗೆದ್ದಿದ್ದ ಇವರಿಗೆ ಈ ಬಾರಿಯೂ ಟಿಕೆಟ್ ಖಾತ್ರಿಯಾಗಿದೆ.

ಮಾಜಿ ಚಿತ್ರನಟರಾಗಿರುವ ಸಿ.ಪಿ. ಯೋಗೇಶ್ವರ್ ಹಾಗೂ ಕುಮಾರ್ ಬಂಗಾರಪ್ಪ ಕ್ರಮವಾಗಿ ಚನ್ನಪಟ್ಟಣ ಮತ್ತು ಸೊರಬ ಕ್ಷೇತ್ರಗಳಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳು. ಇಬ್ಬರಿಗೂ ಟಿಕೆಟ್ ಬಹುತೇಕ ಖಚಿತವಾಗಿದೆ.

ನಿರ್ಮಾಪಕರಾದ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಸಂಸದರಾಗಿ, ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದವರು. ಈಗ ರಾಮನಗರ ಕ್ಷೇತ್ರದ ಶಾಸಕ. ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ. ಈ ಬಾರಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದಾರೆ.

ಮತ್ತೊಬ್ಬ ನಿರ್ಮಾಪಕ ಮುನಿರತ್ನ, ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ. ಈ ಬಾರಿಯೂ ಟಿಕೆಟ್‌ ಗಿಟ್ಟಿಸುವುದು ಖಚಿತ. ಇವರ ಎದುರು ಸ್ಪರ್ಧಿಸಲು ನಾಯಕ ನಟ ಗಣೇಶ್ ಅವರ ಪತ್ನಿ ಶಿಲ್ಪಾ ತಯಾರಿ ನಡೆಸಿದ್ದಾರೆ. ಆದರೆ, ಟಿಕೆಟ್‌ಗಾಗಿ ಇಲ್ಲಿ ಮುನಿರಾಜುಗೌಡ ತೀವ್ರ ಸ್ಪರ್ಧೆ ಒಡ್ಡಿದ್ದಾರೆ. ಇದರ ನಡುವೆ, ನಟ ಹುಚ್ಚ ವೆಂಕಟ್ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.

ಜೆಡಿಎಸ್ ಯುವ ಘಟಕದ ಅಧ್ಯಕ್ಷ, ಆಕಾಶ್ ಆಡಿಯೊ ಮಾಲೀಕ ಮಧು ಬಂಗಾರಪ್ಪ ಸೊರಬ ಕ್ಷೇತ್ರದ ಶಾಸಕ. ಈ ಬಾರಿಯೂ ಅವರಿಗೆ ಟಿಕೆಟ್ ನೀಡುವುದಾಗಿ ಪಕ್ಷ ಘೋಷಿಸಿದೆ. ಇವರ ಅಕ್ಕ ಹಾಗೂ ನಟ ಶಿವರಾಜ್‌ ಕುಮಾರ್ ಅವರ ಪತ್ನಿ ಗೀತಾ, ಜೆಡಿಎಸ್‌ನ ತಾರಾ ಪ್ರಚಾರಕರಾಗಿ ಓಡಾಡುತ್ತಿದ್ದಾರೆ. ಕಳೆದ ಬಾರಿ ಲೋಕಸಭೆ ಚುನಾವಣೆಗೆ ಗೀತಾ ಸ್ಪರ್ಧಿಸಿದ್ದಾಗ, ಪತ್ನಿ ಪರವಾಗಿ ಶಿವರಾಜ್ ಕುಮಾರ್ ಪ್ರಚಾರ ನಡೆಸಿದ್ದರು.

ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ನಟಿ ಭಾವನಾ, ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತಿ ತೋರಿದ್ದಾರೆ. ಅವರು ಅಲ್ಲೇ ಮನೆ
ಯನ್ನೂ ಮಾಡಿದ್ದಾರೆ. ಮಾಜಿ ಸಂಸದರೂ ಆಗಿರುವ ನಟ ಶಶಿಕುಮಾರ್‌, ಅದೇ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ.

ಚಿತ್ರನಟ ಉಪೇಂದ್ರ ತಮ್ಮದೇ ಆದ ‘ಕರ್ನಾಟಕ ಪ್ರಜಾ ಜನತಾ ಪಕ್ಷ’ ಸ್ಥಾಪಿಸಿ ಎಲ್ಲ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿಯುವುದಾಗಿ ಘೋಷಿಸಿದ್ದರು. ಆದರೆ, ಚುನಾವಣೆ ಘೋಷಣೆಯಾದ ಬಳಿಕ ಅವರ ಸದ್ದೇ ಇಲ್ಲದಂತಾಗಿದೆ.

ನಿರ್ಮಾಪಕರಾದ ಸಂದೇಶ್ ಸ್ವಾಮಿ, ಜೆಡಿಎಸ್‌ನಿಂದ ಮೈಸೂರಿನ ನರಸಿಂಹರಾಜ ಕ್ಷೇತ್ರಕ್ಕೆ ಟಿಕೆಟ್ ಬಯಸಿದ್ದರು. ಅಲ್ಲಿ ಟಿಕೆಟ್ ಸಿಗದೇ ಇರುವುದು ಖಚಿತವಾಗುತ್ತಿದ್ದಂತೆ ಪಕ್ಷ ತೊರೆದು, ಬಿಜೆಪಿ ಸೇರಲು ಮುಂದಾಗಿದ್ದಾರೆ. ಆದರೆ, ಬಿಜೆಪಿ ಅವರಿಗೆ ಟಿಕೆಟ್ ಖಚಿತಪಡಿಸಿಲ್ಲ.

‘ಲಹರಿ ರೆಕಾರ್ಡಿಂಗ್ ಕಂಪನಿ’ ಮಾಲೀಕ ಲಹರಿ ವೇಲು ಚಾಮರಾಜಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ತಯಾರಿ ನಡೆಸಿದ್ದಾರೆ. ಆದರೆ, ಪಾಲಿಕೆ ಮಾಜಿ ಸದಸ್ಯ ಬಿ.ವಿ. ಗಣೇಶ್ ತೀವ್ರ ಪೈಪೋಟಿ ಒಡ್ಡಿದ್ದಾರೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT