ಶನಿವಾರ, ಜುಲೈ 24, 2021
26 °C

ಜೋಫ್ರಾ ಮಾಡಿದ್ದು ಗಂಭೀರ ತಪ್ಪು ; ಇಸಿಬಿ ನಿರ್ದೇಶಕ ಆ್ಯಷ್ಲೆ ಗಿಲೆಸ್‌ ಸಿಡಿಮಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮ್ಯಾಂಚೆಸ್ಟರ್‌: ‘ವೇಗದ ಬೌಲರ್‌ ಜೋಫ್ರಾ ಆರ್ಚರ್‌ ಮಾಡಿರುವ ತಪ್ಪು ಗಂಭೀರ ಸ್ವರೂಪದ್ದು. ಜೀವ ಸುರಕ್ಷಾ (ಬಯೊ ಸೆಕ್ಯುರ್‌) ವಾತಾವರಣ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ’ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯ (ಇಸಿಬಿ) ನಿರ್ದೇಶಕ ಆ್ಯಷ್ಲೆ ಗಿಲೆಸ್ ಶುಕ್ರವಾರ ತಿಳಿಸಿದ್ದಾರೆ.

25 ವರ್ಷ ವಯಸ್ಸಿನ ಜೋಫ್ರಾ, ಸೌತಾಂಪ್ಟನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್‌ ಪಂದ್ಯದ ಬಳಿಕ ಬ್ರೈಟನ್‌ನಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ಹೇಳಲಾಗಿದೆ. ಆ ಮೂಲಕ ಅವರು ಜೀವ ಸುರಕ್ಷಾ ನಿಯಮವನ್ನು ಗಾಳಿಗೆ ತೂರಿದ್ದರು. ಹೀಗಾಗಿ ಅವರನ್ನು ವೆಸ್ಟ್‌ ಇಂಡೀಸ್‌ ಎದುರಿನ ಎರಡನೇ ಟೆಸ್ಟ್‌ ಪಂದ್ಯದಿಂದ ಕೈಬಿಡಲಾಗಿತ್ತು.

‘ಆರ್ಚರ್, ಐದು ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿರಲಿದ್ದಾರೆ. ಈ ಅವಧಿಯಲ್ಲಿ ಎರಡು ಬಾರಿ ಕೋವಿಡ್‌ ಪರೀಕ್ಷೆ ಎದುರಿಸಲಿದ್ದಾರೆ. ಎರಡು ವರದಿಗಳ ಫಲಿತಾಂಶ ‘ನೆಗೆಟಿವ್‌’ ಬಂದರಷ್ಟೇ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗುತ್ತದೆ’ ಎಂದು ಇಸಿಬಿ ಹೇಳಿತ್ತು.

‘ಸಣ್ಣ ತಪ್ಪುಗಳಿಗಾಗಿ ಕೆಲವೊಮ್ಮೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆರ್ಚರ್‌ ನಡೆಯಿಂದ ನಮ್ಮ ಯೋಜನೆಗಳೆಲ್ಲಾ ಬುಡಮೇಲಾಗುವ ಅಪಾಯವಿತ್ತು. ಜೊತೆಗೆ ಲಕ್ಷಾಂತರ ರೂಪಾಯಿ ನಷ್ಟವಾಗುವ ಸಾಧ್ಯತೆ ಇತ್ತು’ ಎಂದು ಗಿಲೆಸ್‌ ನುಡಿದಿದ್ದಾರೆ.

‘ತಾವು ಮಾಡಿದ ತಪ್ಪಿನಿಂದ ಇಡೀ ವ್ಯವಸ್ಥೆಯ ಮೇಲೆ ಯಾವ ರೀತಿಯ ದುಷ್ಪರಿಣಾಮ ಉಂಟಾಗಲಿದೆ ಎಂಬುದರ ಅರಿವು ಜೋಫ್ರಾಗೆ ಇದ್ದಂತಿಲ್ಲ. ಅವರಿನ್ನೂ ಚಿಕ್ಕವರು. ಈ ವಯಸ್ಸಿನಲ್ಲಿ ತಪ್ಪುಗಳಾಗುವುದು ಸಹಜ. ಅದನ್ನು ತಿದ್ದಿಕೊಂಡು ಮುಂದೆ ಸಾಗಬೇಕು’ ಎಂದು ಅವರು ಹೇಳಿದ್ದಾರೆ.

‘ಹಿಂದೆಲ್ಲಾ ಆಟಗಾರರು ಪಂದ್ಯ ಮುಗಿದ ನಂತರ ಮನೆಗಳಿಗೆ ಹೋಗುತ್ತಿದ್ದರು. ಅದಕ್ಕೆ ನಮ್ಮ ಅಭ್ಯಂತರವೇನೂ ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಜೀವ ಸುರಕ್ಷಾ ವಾತಾವರಣದಲ್ಲಿ ಟೆಸ್ಟ್‌ ಸರಣಿ ನಡೆಸಲು ನಾವು ಸಾಕಷ್ಟು ಶ್ರಮ ಪಟ್ಟಿದ್ದೇವೆ. ಲಕ್ಷಾಂತರ ರೂಪಾಯಿ ಹಣ ವ್ಯಯಿಸಿದ್ದೇವೆ. ಇದನ್ನೇ ನಂಬಿಕೊಂಡು ಹಲವರು ಬಂಡವಾಳ ಹೂಡಿದ್ದಾರೆ. ಜೋಫ್ರಾ ನಡೆಯಿಂದ ಎಲ್ಲರಿಗೂ ತುಂಬಾ ಬೇಸರವಾಗಿದೆ’ ಎಂದು ಗಿಲೆಸ್‌ ತಿಳಿಸಿದ್ದಾರೆ.

ಜೋಫ್ರಾ ಅವರು ಇಂಗ್ಲೆಂಡ್‌ ಪರ ಒಂದು ಟ್ವೆಂಟಿ–20, 8 ಟೆಸ್ಟ್‌ ಹಾಗೂ 14 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ಮೂರೂ ಮಾದರಿಗಳಿಂದ ಒಟ್ಟು 58 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು