ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಷಸ್‌ ಮೂರನೇ ಟೆಸ್ಟ್‌: 67 ರನ್‌ಗಳಿಗೆ ಉರುಳಿದ ಇಂಗ್ಲೆಂಡ್‌

Last Updated 23 ಆಗಸ್ಟ್ 2019, 19:56 IST
ಅಕ್ಷರ ಗಾತ್ರ

ಲೀಡ್ಸ್‌: ಇಂಗ್ಲೆಂಡ್‌ ತಂಡವನ್ನು ಕೇವಲ 67 ರನ್‌ಗಳಿಗೆ ಉರುಳಿಸಿದ ಆಸ್ಟ್ರೇಲಿಯಾದ ವೇಗಿಗಳು, ಆ್ಯಷಸ್‌ ಮೂರನೇ ಟೆಸ್ಟ್‌ನ ಎರಡನೇ ದಿನವಾದ ಶುಕ್ರವಾರ ತಂಡಕ್ಕೆ ಮೇಲುಗೈ ಒದಗಿಸಿದರು. ದಿನದಾಟದ ಕೊನೆಗೆ 6 ವಿಕೆಟ್‌ಗೆ 171 ರನ್‌ ಗಳಿಸಿರುವ ಪ್ರವಾಸಿಗರು ಒಟ್ಟಾರೆ 283 ರನ್‌ಗಳಿಂದ ಮುಂದಿದ್ದಾರೆ.

ಸ್ಟೀವ್‌ ಸ್ಮಿತ್‌ ಗಾಯಾಳಾದ ಕಾರಣ ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಅವಕಾಶ ಪಡೆದಿದ್ದ ಮಾರ್ನಸ್‌ ಲಾಬುಚಾನ್‌ ಅಜೇಯ ಅರ್ಧಶತಕದೊಡನೆ ಮತ್ತೊಮ್ಮೆ ತಂಡದ ನೆರವಿಗೆ ಬಂದರು. 139 ಎಸೆತಗಳನ್ನು ಆಡಿರುವ ಅವರು 5 ಬೌಂಡರಿಗಳೊಂದಿಗೆ 53 ರನ್‌ ಗಳಿಸಿದ್ದು, ತಂಡ ಕುಸಿಯದಂತೆ ನೋಡಿಕೊಂಡರು. ಅವರಿಗೆ ಮ್ಯಾಥ್ಯೂ ವೇಡ್‌ ಮತ್ತು ಟ್ರಾವಿಸ್‌ ಹೆಡ್‌ ಮಧ್ಯಮ ಕ್ರಮಾಂಕದಲ್ಲಿ ಬೆಂಬಲ ನೀಡಿದರು.

1904 ರ ನಂತರ ಇಂಗ್ಲೆಂಡ್‌ ತಂಡವು ಆಸ್ಟ್ರೇಲಿಯಾ ವಿರುದ್ಧ ಎರಡನೇ ಅತಿ ಕಡಿಮೆ ಮೊತ್ತ ದಾಖಲಿಸಿತು. 1948ರಲ್ಲಿ ಇಂಗ್ಲೆಂಡ್‌ 52 ರನ್‌ಗಳಿಗೆ ಉರುಳಿತ್ತು. 2018ರ ನಂತರ ಇಂಗ್ಲೆಂಡ್‌ ನೂರರ ಒಳಗೆ ಆಲೌಟ್‌ ಆಗುತ್ತಿರುವುದು ಇದು ನಾಲ್ಕನೇ ಬಾರಿ.

ಜೊ ಡೆನ್ಲಿ ಗಳಿಸಿದ 12 ರನ್‌ಗಳೇ ಇಂಗ್ಲೆಂಡ್‌ ಪರ ಅತ್ಯಧಿಕ ವೈಯಕ್ತಿಕ ಗಳಿಕೆ ಎನಿಸಿತು. ಜೋಶ್‌ ಹೇಜಲ್‌ವುಡ್‌ 30 ರನ್ನಿಗೆ 5 ವಿಕೆಟ್‌ ಪಡೆದರೆ, ಪ್ಯಾಟ್‌ ಕಮಿನ್ಸ್‌ (32ಕ್ಕೆ3) ಮತ್ತು ಜೇಮ್ಸ್‌ ಪ್ಯಾಟಿನ್ಸನ್‌ (9ಕ್ಕೆ2) ಅವರಿಗೆ ಉತ್ತಮ ಬೆಂಬಲ ನೀಡಿದರು. ಜೇಸನ್‌ ರಾಯ್‌ ಮತ್ತೊಮ್ಮೆ ವಿಫಲರಾದರೆ, ನಾಯಕ ಜೋ ರೂಟ್‌ (0) ಆಡಿದ ಎರಡನೇ ಎಸೆತಕ್ಕೇ ವಿಕೆಟ್ ಕಳೆದುಕೊಂಡರು. ಇಂಗ್ಲೆಂಡ್‌, ಎರಡನೇ ಅವಧಿಯಲ್ಲಿ 23 ಎಸೆತಗಳ ಅಂತರದಲ್ಲಿ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ; ಮೊದಲ ಇನಿಂಗ್ಸ್‌: 179; ಇಂಗ್ಲೆಂಡ್‌: ಪ್ರಥಮ ಇನಿಂಗ್ಸ್‌: 27.5 ಓವರುಗಳಲ್ಲಿ 67 (ಜೋಶ್‌ ಹೇಜಲ್‌ವುಡ್‌ 30ಕ್ಕೆ5, ಪ್ಯಾಟ್‌ ಕಮಿನ್ಸ್‌ 32ಕ್ಕೆ3, ಜೇಮ್ಸ್‌ ಪ್ಯಾಟಿನ್ಸನ್‌ 9ಕ್ಕೆ2); ಆಸ್ಟ್ರೇಲಿಯಾ: ದ್ವಿತೀಯ ಇನಿಂಗ್ಸ್‌: 57 ಓವರುಗಳಲ್ಲಿ 6 ವಿಕೆಟ್‌ಗೆ 171 (ಉಸ್ಮಾನ್‌ ಖ್ವಾಜಾ 53, ಲಾಬುಚಾನ್‌ ಬ್ಯಾಟಿಂಗ್ 53, ಮ್ಯಾಥ್ಯೂ ವೇಡ್‌ 33, ಟ್ರಾವಿಸ್‌ ಹೆಡ್‌ 25; ಸ್ಟುವರ್ಟ್‌ ಬ್ರಾಡ್‌ 34ಕ್ಕೆ2, ಬೆನ್‌ ಸ್ಟೋಕ್ಸ್‌ 33ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT