ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ವರ್ಷದ ಕ್ರಿಕೆಟಿಗ: ಆರ್. ಅಶ್ವಿನ್ ನಾಮನಿರ್ದೇಶನ

Last Updated 28 ಡಿಸೆಂಬರ್ 2021, 13:02 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್ ತಂಡದ ಅನುಭವಿ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಐಸಿಸಿ ಟೆಸ್ಟ್ ಕ್ರಿಕೆಟಿಗ ವಾರ್ಷಿಕ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಈ ಪ್ರಶಸ್ತಿಗಾಗಿ ಒಟ್ಟು ನಾಲ್ವರ ಹೆಸರುಗಳನ್ನು ಪಟ್ಟಿ ಮಾಡಲಾಗಿದ್ದು ಅದರಲ್ಲಿ 35 ವರ್ಷದ ಅಶ್ವಿನ್ ಕೂಡ ಒಬ್ಬರಾಗಿದ್ದಾರೆ.

ಈ ವರ್ಷದಲ್ಲಿ ಅವರು ಎಂಟು ಟೆಸ್ಟ್‌ಗಳಲ್ಲಿ 52 ವಿಕೆಟ್‌ಗಳನ್ನು 16.23ರ ಸರಾಸರಿಯಲ್ಲಿ ಗಳಿಸಿದ್ದಾರೆ. ಅಲ್ಲದೇ 337 ರನ್‌ಗಳನ್ನೂ ಗಳಿಸಿದ್ದಾರೆ. ಅದರಲ್ಲಿ ಒಂದು ಶತಕವೂ ಸೇರಿದೆ.

ಈ ಪ್ರಶಸ್ತಿ ಪೈಪೋಟಿಯಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ನ್ಯೂಜಿಲೆಂಡ್ ವೇಗಿ ಕೈಲ್ ಜೆಮಿಸನ್ ಮತ್ತು ಶ್ರೀಲಂಕಾದ ಆರಂಭಿಕ ಬ್ಯಾಟರ್ ದಿಮುತ ಕರುಣಾರತ್ನೆ ಅವರೂ ಇದ್ದಾರೆ.

ಜನವರಿ 24ರಂದು ವಿಜೇತರ ಹೆಸರನ್ನು ಘೋಷಿಸಲಾಗುವುದು.

‘ಭಾರತದ ಪಂದ್ಯವಿಜಯೀಗಳಲ್ಲಿ ಒಬ್ಬರಾಗಿರುವ ಆರ್. ಅಶ್ವಿನ್ 2021ರಲ್ಲಿ ಅಮೋಘವಾಗಿ ಆಡಿದ್ದಾರೆ. ಚಾಣಾಕ್ಷ ಸ್ಪಿನ್ ಬೌಲರ್ ಆಗಿರುವ ಅಶ್ವಿನ್ ಬ್ಯಾಟಿಂಗ್‌ನಲ್ಲಿಯೂ ತಂಡದ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿರುವುದು ಗಮನಾರ್ಹ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ವರ್ಷದ ಆರಂಭದಲ್ಲಿ ಅಶ್ವಿನ್ ಸಿಡ್ನಿ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಎದುರು 128 ಎಸೆತಗಳಲ್ಲಿ 29 ರನ್‌ ಗಳಿಸಿದ್ದರು. ಹನುಮವಿಹಾರಿಯೊಂದಿಗೆ ಅವರ ತಾಳ್ಮೆಯ ಜೊತೆಯಾಟದಿಂದಾಗಿ ಆ ಪಂದ್ಯದಲ್ಲಿ ಭಾರತವು ಸೋಲು ತಪ್ಪಿಸಿಕೊಂಡಿತ್ತು. ಐತಿಹಾಸಿಕ ಡ್ರಾ ದಾಖಲಾಗಿತ್ತು.

ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಅವರು ಒಟ್ಟು 32 ವಿಕೆಟ್‌ಗಳನ್ನು ಗಳಿಸಿದ್ದರು. 189 ರನ್‌ಗಳನ್ನೂ ಗಳಿಸಿದ್ದರು.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿಯೂ ಅವರು ನಾಲ್ಕು ವಿಕೆಟ್ ಗಳಿಸಿದ್ದರು. ಅದರ ನಂತರ ನಡೆದಿದ್ದ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳಲ್ಲಿಯೂ ಅವರಿಗೆ ಕಣಕ್ಕಿಳಿಯುವ ಅವಕಾಶ ಲಭಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT