ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಪಾಕ್‌ನಲ್ಲಿ ಬೆಳಗಿದ ರವಿ; ಗೆಲುವಿನ ಸನಿಹ ಭಾರತ

ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್‌: ಕೊಹ್ಲಿ–ಅಶ್ವಿನ್‌ 96 ರನ್‌ಗಳ ಜೊತೆಯಾಟ
Last Updated 15 ಫೆಬ್ರುವರಿ 2021, 14:37 IST
ಅಕ್ಷರ ಗಾತ್ರ

ಚೆನ್ನೈ: ಮಾಂತ್ರಿಕ ಸ್ಪಿನ್ ದಾಳಿ ಮೂಲಕ ಭಾನುವಾರ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳ ಲಯ ತಪ್ಪಿಸಿದ ರವಿಚಂದ್ರನ್ ಅಶ್ವಿನ್ ಅದೇ ಪಿಚ್‌ನಲ್ಲಿ ಸೋಮವಾರ ಮೋಹಕ ಬ್ಯಾಟಿಂಗ್ ಪ್ರದರ್ಶಿಸಿ ಶತಕದ ಸಂಭ್ರಮದ ಅಲೆಯಲ್ಲಿ ತೇಲಾಡಿದರು. ಭಾರತಕ್ಕೆ ಬೃಹತ್ ಮುನ್ನಡೆ ಗಳಿಸಿಕೊಟ್ಟು ಭರ್ಜರಿ ಗೆಲುವಿನ ಭರವಸೆ ಮೂಡಿಸಿದರು.

ಎರಡನೇ ಟೆಸ್ಟ್ ಪಂದ್ಯದಲ್ಲಿ 482 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿರುವ ಪ್ರವಾಸಿ ತಂಡ ಮೂರನೇ ದಿನದಾಟದ ಮುಕ್ತಾಯಕ್ಕೆ 53 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದೆ.

ಐದನೇ ಶತಕ ಸಿಡಿಸಿದ ಅಶ್ವಿನ್ (106; 148 ಎಸೆತ, 14 ಬೌಂಡರಿ, 1 ಸಿಕ್ಸರ್‌) ಮತ್ತು ಸೊಗಸಾದ ಅರ್ಧಶತಕ ಗಳಿಸಿದ ನಾಯಕ ವಿರಾಟ್ ಕೊಹ್ಲಿ (62; 149 ಎ, 7 ಬೌಂ) ಏಳನೇ ವಿಕೆಟ್‌ಗೆ ಸೇರಿಸಿದ 96 ರನ್‌ಗಳ ನೆರವಿನಿಂದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 286 ರನ್ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ ತಂಡಕ್ಕೆ 195 ರನ್‌ಗಳ ಮುನ್ನಡೆ ಲಭಿಸಿತ್ತು.

ಎರಡನೇ ದಿನ ಒಂದು ವಿಕೆಟ್ ಕಳೆದುಕೊಂಡು 54 ರನ್ ಗಳಿಸಿದ್ದ ಕೊಹ್ಲಿ ಬಳಗ ಸೋಮವಾರ ಬೆಳಿಗ್ಗೆ ರನೌಟ್‌ಗಳ ಸುಳಿಯಲ್ಲಿ ಸಿಲುಕಿ ಸಂಕಷ್ಟಕ್ಕೆ ಒಳಗಾಯಿತು. ದಿನದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಒಂದು ರನ್‌ಗಾಗಿ ಓಡಲು ಮುಂದಾಗಿ ವಾಪಸ್ ಬಂದ ಚೇತೇಶ್ವರ್ ಪೂಜಾರ ಅವರ ಬ್ಯಾಟ್‌ ಕ್ರೀಸ್‌ನ ಒಳಗೆ ಸೇರುವ ಮುನ್ನ ನೆಲಕ್ಕೆ ಒತ್ತಿ ಕೈಯಿಂದ ಜಾರಿತು. ಕಾಲು ಮತ್ತು ಕೈಯನ್ನು ಕ್ರೀಸ್‌ ಒಳಗೆ ಇರಿಸಿ ಬಚಾವಾಗಲು ಪ್ರಯತ್ನಿಸುವಷ್ಟರಲ್ಲಿ ಒಲಿ ಪೋಪ್ ಮತ್ತು ವಿಕೆಟ್ ಕೀಪರ್ ಬೆನ್ ಫೋಕ್ಸ್ ಚಾಕಚಕ್ಯತೆ ತೋರಿಸಿ ಆಗಿತ್ತು. ಎರಡು ಓವರ್‌ಗಳ ನಂತರ ರೋಹಿತ್ ಶರ್ಮಾ ರನ್ ಔಟ್ ಆಗಿ ಮರಳಿದರು. ಲೀಚ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕಾಗಿ ಮುನ್ನುಗ್ಗಿದ ರಿಷಭ್ ಪಂತ್ ವಾಪಸ್ ಆಗುವಷ್ಟರಲ್ಲಿ ಬೆನ್ ಫೋಕ್ಸ್ ಬೇಲ್ಸ್ ಎಗರಿಸಿದ್ದರು.

ವಿರಾಟ್ ಕೊಹ್ಲಿ ಜೊತೆ ಅಜಿಂಕ್ಯ ರಹಾನೆ ಮತ್ತು ಅಕ್ಷರ್ ಪಟೇಲ್ ಅಲ್ಪಕಾಲದ ಜೊತೆಯಾಟ ಆಡಿದರು. ನಂತರ ಬಂದ ಅಶ್ವಿನ್ ಆರಂಭದಲ್ಲೇ ಭರ್ಜರಿ ಹೊಡೆತಗಳಿಗೆ ಮುಂದಾದರು. ಹೀಗಾಗಿ ರನ್ ಗಳಿಕೆ ಏರುಗತಿಯಲ್ಲಿ ಸಾಗಿತು. ಮೋಹಕ ಡ್ರೈವ್‌ಗಳ ಮೂಲಕ ಕೊಹ್ಲಿ ಸುಲಭವಾಗಿ ರನ್ ಗಳಿಸಿದರೆ ಸ್ವೀಪ್‌, ಸ್ಕ್ವೇರ್ ಕಟ್ ಮತ್ತು ಪುಲ್ ಶಾಟ್‌ಗಳ ಮೂಲಕ ಅಶ್ವಿನ್ ಮಿಂಚಿದರು.

ಅಶ್ವಿನ್ ಮತ್ತು ಕೊಹ್ಲಿ 177 ಎಸೆತಗಳನ್ನು ಎದುರಿಸಿದರು. ಕೊಹ್ಲಿ ಔಟಾದ ನಂತರ ಕುಲದೀಪ್‌ ಯಾದವ್‌, ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಅವರ ಬೆಂಬಲ ಪಡೆದ ಅಶ್ವಿನ್‌ ಕ್ರೀಸ್‌ನಲ್ಲಿ ನೆಲೆಯೂರಿ ಬೌಲರ್‌ಗಳನ್ನು ಕಂಗೆಡಿಸಿದರು. ಇಶಾಂತ್ ಶರ್ಮಾ ಜೊತೆ 27 ರನ್ ಸೇರಿಸಿದ ಅವರು ಮೊಹಮ್ಮದ್ ಸಿರಾಜ್ ಜೊತೆ 10ನೇ ವಿಕೆಟ್‌ಗೆ 49 ರನ್ ಗಳಿಸಿದರು. ಸಿರಾಜ್ ಅವರನ್ನು ಕ್ರೀಸ್‌ನ ಮತ್ತೊಂದು ತುದಿಯಲ್ಲಿ ಉಳಿಸಿಕೊಂಡು ಶತಕದತ್ತ ಹೆಜ್ಜೆ ಹಾಕಿದ ಅಶ್ವಿನ್‌ 91 ರನ್ ಗಳಿಸಿದ್ದಾಗ ಸಿಕ್ಸರ್ ಎತ್ತಿದರು. ಬೌಂಡರಿ ಮೂಲಕ ಶತಕವನ್ನೂ ಪೂರೈಸಿದರು. ಎರಡು ಸಿಕ್ಸರ್‌ ಮೂಲಕ ಮಿಂಚಿದ ಮೊಹಮ್ಮದ್ ಸಿರಾಜ್ ಸಹ ಆಟಗಾರ ಶತಕ ಗಳಿಸಿದಾಗ ಕುಣಿದು ಕುಪ್ಪಳಿಸಿದರೆ ತಂಡದ ಡ್ರೆಸಿಂಗ್ ಕೊಠಡಿಯಲ್ಲೂ ಸಂಭ್ರಮ ಮೇಳೈಸಿತು.

ತವರು ಅಂಗಣದಲ್ಲಿ ಪಂದ್ಯವೊಂದರಲ್ಲಿ ಐದು ವಿಕೆಟ್ ಗೊಂಚಲು ಮತ್ತು ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ ಎನಿಸಿದ ಅಶ್ವಿನ್ ಒಟ್ಟು ಮೂರು ಬಾರಿ ಐದು ವಿಕೆಟ್ ಮತ್ತು ಶತಕದ ಸಾಧನೆ ಮಾಡಿದ ವಿಶ್ವದ ಎರಡನೇ ಆಟಗಾರ ಆದರು. ಇಂಗ್ಲೆಂಡ್‌ನ ಇಯಾನ್ ಬಾಥಮ್ ಐದು ಬಾರಿ ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT