ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕಡ್ ಔಟ್‌ ತಡೆಗೆ ‘ಫ್ರೀ ಬಾಲ್’ ಜಾರಿಯೊಂದೇ ದಾರಿ: ಅಶ್ವಿನ್

Last Updated 29 ಜುಲೈ 2020, 9:16 IST
ಅಕ್ಷರ ಗಾತ್ರ

ನವದೆಹಲಿ: ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ವಿವಾದ ಸೃಷ್ಟಿಸಿದ್ದ ‘ಮಂಕಡ್’ ರನ್ ಔಟ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಅಂದು ವಿವಾದಕ್ಕೆ ಕಾರಣರಾಗಿದ್ದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕ, ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರೇ ಈಗ ಚರ್ಚೆಗೆ ನಾಂದಿ ಹಾಡಿದ್ದಾರೆ.

ಕಳೆದ ವರ್ಷ ಮಾರ್ಚ್ 25ರಂದು ಜೈಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಅಶ್ವಿನ್ ಬೌಲಿಂಗ್ ಆ್ಯಕ್ಷನ್ ಪೂರ್ಣಗೊಳಿಸುವುದಕ್ಕೂ ಮೊದಲೇ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ರಾಜಸ್ತಾನ್ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್‌, ಇಂಗ್ಲೆಂಡ್‌ನ ಜೋಸ್ ಬಟ್ಲರ್ ರನ್‌ಗಾಗಿ ಮುಂದೆ ಅಡಿ ಇಟ್ಟಿದ್ದರು. ಆಗ ಅಶ್ವಿನ್ ಬೇಲ್ಸ್ ಬೀಳಿಸಿದ್ದರು. ನಿಯಮದ ಪ್ರಕಾರ ಬಟ್ಲರ್ ಅವರನ್ನು ರನ್ ಔಟ್ ಎಂದು ಘೋಷಿಸಲಾಗಿತ್ತು.

ಬೌಲಿಂಗ್ ಮಾಡುವ ಮೊದಲೇ ನಾನ್‌ಸ್ಟೈಕರ್‌ ಬ್ಯಾಟ್ಸ್‌ಮನ್‌ ಕ್ರೀಸ್ ಬಿಟ್ಟು ದೂರ ಹೋಗುವುದಕ್ಕೆ ಕಡಿವಾಣ ಹಾಕಲು ಕ್ರಮಗಳ ಅಗತ್ಯವಿದೆ ಎಂದು ಅಶ್ವಿನ್ ಹೇಳಿದ್ದಾರೆ. ಇದು ಸರಣಿ ಟ್ವೀಟ್‌ಗಳ ಮೂಲಕ ಚರ್ಚೆಗೆ ಕಾರಣವಾಗಿದೆ.

‘ಇಂಥ ಸಂದರ್ಭದಲ್ಲಿ ಎದುರಾಳಿ ತಂಡದ ಬಳಿಯಿಂದ ಒಂದು ರನ್ ಕಡಿತ ಮಾಡುವ ಅಥವಾ ಬೌಲಿಂಗ್ ಮಾಡುವ ತಂಡಕ್ಕೆ ಒಂದು ‘ಫ್ರೀ ಬಾಲ್’ ನೀಡುವ ನಿಯಮ ಜಾರಿಗೆ ಬರಬೇಕು, ತೀರ್ಪು ನೀಡುವ ಅಧಿಕಾರವನ್ನು ಮೂರನೇ ಅಂಪೈರ್‌ಗೆ ವಹಿಸಬೇಕು’ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

‘ಬೌಲಿಂಗ್ ಆ್ಯಕ್ಷನ್ ಪೂರ್ಣಗೊಳ್ಳುವ ಮೊದಲು ನಾನ್‌ಸ್ಟ್ರೈಕರ್ ಪಾಪಿಂಗ್ ಕ್ರೀಸ್ ಬಿಡುತ್ತಾನೆಯೇ ಎಂಬುದರ ಮೇಲೆ ಕಣ್ಣಿಡಲು ತಂತ್ರಜ್ಞಾನದ ಬಳಕೆಯಾಗಬೇಕು.ಬ್ಯಾಟ್ಸ್‌ಮನ್ ಪದೇ ಪದೇ ಕ್ರೀಸ್ ಬಿಡುತ್ತಾನೆ ಎಂದಾದರೆ ಪ್ರತಿ ಬಾರಿಯೂ ತಂಡದ ರನ್ ಕಡಿತ ಮಾಡಬೇಕು. ‘ಫ್ರಂಟ್‌ಲೈನ್‌‘ನಲ್ಲಿ ಆಗುವ ತಪ್ಪುಗಳಿಗೆ ಈ ರೀತಿ ಕಡಿವಾಣ ಹಾಕಲು ಸಾಧ್ಯ’ ಎಂದು ಅಶ್ವಿನ್ ಹೇಳಿದ್ದಾರೆ.

‘ಫ್ರೀ ಬಾಲ್‘ ಎಂದರೆ ಏನು ಎಂಬುದನ್ನು ಅಶ್ವಿನ್ ವಿವರಿಸಲಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಬಳಸುವ ‘ಫ್ರೀ ಹಿಟ್’ ರೀತಿಯಲ್ಲೇ ಬೌಲರ್‌ಗೆ ಅನುಕೂಲ ಆಗುವ ವಿಧಾನ ಇದಾಗಿರಬಹುದು ಎಂದು ಊಹಿಸಲಾಗಿದೆ. ‘ಫ್ರೀ ಬಾಲ್‌‘ನಲ್ಲಿ ಹೊಡೆದ ರನ್ ಪರಿಗಣಿಸಬಾರದು. ಆದರೆ ಬ್ಯಾಟ್ಸ್‌ಮನ್ ಔಟಾದರೆ ಅದನ್ನು ಮಾನ್ಯ ಮಾಡಬೇಕು ಎಂಬುದು ಅವರ ಉದ್ದೇಶ ಆಗಿರಬೇಕು.

ಏಕದಿನ ಕ್ರಿಕೆಟ್ ವಿಶ್ವಕಪ್‌ನ ಸೂಪರ್ ಲೀಗ್‌ ಟೂರ್ನಿಗಳಲ್ಲಿ ಫ್ರಂಟ್ ಫೂಟ್ ನೋ ಬಾಲ್‌ಗಳ ಮೇಲೆ ಮೂರನೇ ಅಂಪೈರ್ ನಿಗಾ ಇರಿಸಲಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ಎರಡು ದಿನಗಳ ಹಿಂದೆ ತಿಳಿಸಿತ್ತು. ಇದು, ನಾನ್‌ಸ್ಟ್ರೈಕರ್ ಬ್ಯಾಟ್ಸ್‌ಮನ್ ಕ್ರೀಸ್‌ನ ಒಳಗೆಯೇ ಇರುವುದನ್ನು ಖಾತರಿಪಡಿಸಿಕೊಳ್ಳುವುದಕ್ಕೂ ನೆರವಾಗಲಿದೆ ಎಂದು ಅದು ಹೇಳಿತ್ತು.

ಐಪಿಎಲ್‌ನಲ್ಲಿ ಬಟ್ಲರ್ ಅವರನ್ನು ಆ ರೀತಿ ಔಟ್ ಮಾಡಿದ್ದಕ್ಕೆ ಟೀಕೆಗಳು ಕೇಳಿಬಂದಿದ್ದವು. ಅದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದದ್ದು ಎಂದು ಅನೇಕರು ಹೇಳಿದ್ದರು. ಕ್ರಿಕೆಟ್‌ನಂಥ ಆಟದಲ್ಲಿ ಹೀಗೆ ಮಾಡಿದ್ದು ಸರಿಯೇ ಅಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿದ್ದವು. ‘ತಪ್ಪು ನಿರ್ಧಾರಕ್ಕೆ ನಾನು ವಿಕೆಟ್ ಕಳೆದುಕೊಳ್ಳಬೇಕಾಯಿತು‘ ಎಂದು ದೂರಿದ್ದ ಬಟ್ಲರ್ ನಿಯಮಗಳನ್ನು ಬದಲಿಸುವಂತೆ ಒತ್ತಾಯಿಸಿದ್ದರು.

ಬೌಲಿಂಗ್ ಮಾಡುವುದಕ್ಕೂ ಮೊದಲು ನಾನ್‌ಸ್ಟ್ರೈಕರ್ ಕ್ರೀಸ್ ಬಿಟ್ಟರೆ ರನ್ ಔಟ್ ಆಗುವುದಕ್ಕೆ ಮಂಕಡ್ ಔಟ್ ಎಂಬ ಹೆಸರು ಬರಲು ಭಾರತದ ಆಲ್‌ರೌಂಡರ್ ವಿನೂ ಮಂಕಡ್ ಕಾರಣ. 1947ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಆಸ್ಟ್ರೇಲಿಯಾದ ಬಿಲ್ ಬ್ರೌನ್ ಅವರನ್ನು ಮಂಕಡ್ ಎರಡು ಬಾರಿ ಈ ರೀತಿ ಔಟ್ ಮಾಡಿದ್ದರು.

ಟ್ವೀಟ್‌ನಲ್ಲಿ ಮಂಕಡ್ ಅವರನ್ನು ಭಾರತ ಕ್ರಿಕೆಟ್‌ನ ದಿಗ್ಗಜ ಎಂದು ಬಣ್ಣಿಸಿರುವ ಅಶ್ವಿನ್ 1947ರ ಪಂದ್ಯದಲ್ಲಿ ಔಟಾಗುವುದನ್ನು ಬಿಲ್ ಬ್ರೌನ್ ತಪ್ಪಿಸಬಹುದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT