ಆತಿಥೇಯರನ್ನು ಕಾಡಿದ ಅಶ್ವಿನ್‌

7
ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌: ರೂಟ್‌–ಜಾನಿ ಶತಕದ ಜೊತೆಯಾಟ

ಆತಿಥೇಯರನ್ನು ಕಾಡಿದ ಅಶ್ವಿನ್‌

Published:
Updated:
Deccan Herald

ಬರ್ಮಿಂಗ್‌ಹ್ಯಾಮ್‌: ಸಾವಿರನೆ ಟೆಸ್ಟ್‌ ಪಂದ್ಯದಲ್ಲಿ ಜಯದ ಮಹಲು ಕಟ್ಟುವ ಕನಸಿನಲ್ಲಿರುವ ಇಂಗ್ಲೆಂಡ್‌ ತಂಡಕ್ಕೆ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಮೊದಲ ದಿನವೇ ಬಲವಾದ ಪೆಟ್ಟು ನೀಡಿದರು.

ಅಶ್ವಿನ್‌ ಸ್ಪಿನ್‌ ಅಸ್ತ್ರಕ್ಕೆ ನಿರುತ್ತರವಾದ ಜೋ ರೂಟ್‌ ಪಡೆ ಭಾರತದ ಎದುರಿನ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಸಾಧಾರಣ ಮೊತ್ತಕ್ಕೆ ಕುಸಿಯಿತು.

ಎಜ್‌ಬಾಸ್ಟನ್‌ ಅಂಗಳದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡ ದಿನದಾಟದ ಅಂತ್ಯಕ್ಕೆ 88 ಓವರ್‌ಗಳಲ್ಲಿ 9 ವಿಕೆಟ್‌ಗೆ 285ರನ್‌ ದಾಖಲಿಸಿತು.

25 ಓವರ್‌ ಬೌಲ್‌ ಮಾಡಿದ ಅಶ್ವಿನ್‌, 60 ರನ್‌ ನೀಡಿ ನಾಲ್ಕು ವಿಕೆಟ್‌ ಉರುಳಿಸಿದರು.

ನಡೆಯದ ಕುಕ್‌ ಆಟ: ಬ್ಯಾಟಿಂಗ್‌ ಆರಂಭಿಸಿದ ಆತಿಥೇಯರಿಗೆ ಆರಂಭಿಕ ಸಂಕಷ್ಟ ಎದುರಾಯಿತು.  ಅಲಸ್ಟೇರ್‌ ಕುಕ್‌ 28 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 13ರನ್‌ ಗಳಿಸಿ ಅಶ್ವಿನ್‌ಗೆ ವಿಕೆಟ್‌ ನೀಡಿದರು.

ನಂತರ ಕೀಟನ್‌ ಜೆನ್ನಿಂಗ್ಸ್‌ (42; 98ಎ, 4ಬೌಂ) ಮತ್ತು ನಾಯಕ ರೂಟ್‌ (80; 156ಎ, 9ಬೌಂ) ತಾಳ್ಮೆಯ ಆಟಕ್ಕೆ ಒತ್ತು ನೀಡಿದರು.  ಹೀಗಾಗಿ 16ನೇ ಓವರ್‌ನಲ್ಲಿ ಇಂಗ್ಲೆಂಡ್‌ ‘ಅರ್ಧಶತಕ’ ಪೂರೈಸಿತು.

ಭಾರತದ ಬೌಲರ್‌ಗಳ ಯಾರ್ಕರ್‌, ಬೌನ್ಸರ್‌ ಮತ್ತು ದೂಸ್ರಾ ಎಸೆತಗಳನ್ನು ಈ ಜೋಡಿ ದಿಟ್ಟತನದಿಂದಲೇ ಎದುರಿಸಿತು.   ಇದರಿಂದಾಗಿ ಭೋಜನ ವಿರಾಮದ ವೇಳೆಗೆ ತಂಡದ ಖಾತೆಗೆ 83 ರನ್‌ಗಳು ಸೇರ್ಪಡೆಗೊಂಡವು.

ವಿರಾಮದ ನಂತರ ಮೊಹಮ್ಮದ್‌ ಶಮಿ ಭಾರತದ ಪಾಳಯದಲ್ಲಿ ಸಂತಸ ಮೇಳೈಸುವಂತೆ ಮಾಡಿದರು. 36ನೇ ಓವರ್‌ನಲ್ಲಿ ಜೆನ್ನಿಂಗ್ಸ್‌ ಅವರನ್ನು ಬೌಲ್ಡ್‌ ಮಾಡಿದ ಶಮಿ, 40ನೇ ಓವರ್‌ನಲ್ಲಿ ಡೇವಿಡ್‌ ಮಲಾನ್‌ (8; 14ಎ, 1ಬೌಂ) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.

ರೂಟ್‌–ಬೇಸ್ಟೊ ಆಟ: ನಂತರ ನಾಯಕ ರೂಟ್‌ ಮತ್ತು ವಿಕೆಟ್‌ ಕೀಪರ್‌ ಜಾನಿ ಬೇಸ್ಟೊ (70; 88ಎ, 9ಬೌಂ) ಕೊಹ್ಲಿ ಪಡೆಯ ಬೌಲರ್‌ಗಳನ್ನು ಕಾಡಿದರು. ಆರಂಭದಲ್ಲಿ ಒಂದೊಂದು ರನ್‌ ಗಳಿಸುತ್ತಾ ಸಾಗಿದ ಈ ಜೋಡಿ ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಉಕ್ಕಿ ಹರಿಯುವಂತೆ ಮಾಡಿತು.

ಇಶಾಂತ್‌ ಶರ್ಮಾ ಬೌಲ್‌ ಮಾಡಿದ 43ನೇ ಓವರ್‌ನ ಐದನೆ ಎಸೆತದಲ್ಲಿ ಒಂದು ರನ್‌ ಗಳಿಸಿ ಅರ್ಧಶತಕ ಪೂರೈಸಿದ ರೂಟ್‌, ಶತಕದ ಹಾದಿಯಲ್ಲಿ ಎಡವಿದರು. 80ರನ್‌ ಗಳಿಸಿದ್ದ ವೇಳೆ ಅವರು ರನ್‌ಔಟ್‌ ಆದರು. ಇದರೊಂದಿಗೆ 104 ರನ್‌ಗಳ ನಾಲ್ಕನೆ ವಿಕೆಟ್‌ ಜೊತೆಯಾಟಕ್ಕೆ ತೆರೆ ಬಿತ್ತು.

ನಂತರ ಅಶ್ವಿನ್‌ ಕೈಚಳಕ ತೋರಿದರು. ಬೆನ್‌ ಸ್ಟೋಕ್ಸ್‌ (21; 41ಎ, 2ಬೌಂ) ಮತ್ತು ಜೋಸ್‌ ಬಟ್ಲರ್‌ (0) ಅವರನ್ನು ಔಟ್‌ ಮಾಡಿದ ಅವರು ಭಾರತ ಮೇಲುಗೈ ಸಾಧಿಸಲು ನೆರವಾದರು. ಇಶಾಂತ್‌ ಶರ್ಮಾ ಮತ್ತು ಮೊಹಮ್ಮದ್‌ ಶಮಿ ಕೂಡಾ ಇಂಗ್ಲೆಂಡ್‌ ತಂಡದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌: ಮೊದಲ ಇನಿಂಗ್ಸ್, 88 ಓವರ್‌ಗಳಲ್ಲಿ 9 ವಿಕೆಟ್‌ಗೆ 285 (ಕೀಟನ್‌ ಜೆನ್ನಿಂಗ್ಸ್‌ 42, ಜೋ ರೂಟ್‌ 80, ಜಾನಿ ಬೇಸ್ಟೊ 70, ಬೆನ್‌ ಸ್ಟೋಕ್ಸ್‌ 21, ಸ್ಯಾಮ್‌ ಕರನ್‌ ಬ್ಯಾಟಿಂಗ್‌ 24; ಉಮೇಶ್‌ ಯಾದವ್‌ 56ಕ್ಕೆ1, ಆರ್‌.ಅಶ್ವಿನ್‌ 60ಕ್ಕೆ4, ಮೊಹಮ್ಮದ್‌ ಶಮಿ 64ಕ್ಕೆ2, ಇಶಾಂತ್‌ ಶರ್ಮಾ 46ಕ್ಕೆ1).

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !