ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿವೀಸ್‌ಗೆ ಸರಣಿ ಸೋಲಿನ ಭೀತಿ | ಅಶ್ವಿನ್ ಕೈಚಳಕ; ಜಯದ ಸನಿಹ ಭಾರತ

ಬೃಹತ್ ಗುರಿ ಬೆನ್ನಟ್ಟಿರುವ ಕಿವೀಸ್‌ಗೆ ಸರಣಿ ಸೋಲಿನ ಭೀತಿ; ಭಾರತದ ಗೆಲುವಿಗೆ ಬೇಕು ಇನ್ನೈದು ವಿಕೆಟ್
Last Updated 5 ಡಿಸೆಂಬರ್ 2021, 14:33 IST
ಅಕ್ಷರ ಗಾತ್ರ

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ನ್ಯೂಜಿಲೆಂಡ್ ತಂಡದ ಗಾಯದ ಬರೆ ಎಳೆದರು.

ಇಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ನಲ್ಲಿ ಗೆಲುವಿಗಾಗಿ 540 ರನ್‌ಗಳ ಬೃಹತ್ ಗುರಿ ಬೆನ್ನತ್ತಿರುವ ಪ್ರವಾಸಿ ಬಳಗವು ಅಶ್ವಿನ್ (27ಕ್ಕೆ3) ಸ್ಪಿನ್ ದಾಳಿಯಿಂದಾಗಿ 140 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಪಂದ್ಯದಲ್ಲಿ ಇನ್ನೂ ಎರಡು ದಿನದಾಟ ಬಾಕಿಯಿದ್ದು, ಕಿವೀಸ್ ತಂಡವು ಗೆಲ್ಲಬೇಕಾದರೆ 400 ರನ್‌ಗಳನ್ನು ಗಳಿಸಬೇಕಿದೆ. ಇದು ಕಠಿಣ ಸವಾಲಾಗಲಿದೆ. ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತಿರುವ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಆದ್ದರಿಂದ ಆತಿಥೇಯರಿಗೇ ಜಯದ ಅವಕಾಶ ಹೆಚ್ಚಿದೆ.

ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 325 ರನ್ ಗಳಿಸಿತ್ತು. ಅದೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಸ್ಪಿನ್ನರ್ ಎಜಾಜ್ ಪಟೇಲ್ ಹತ್ತು ವಿಕೆಟ್ ಗಳಿಸಿದ ಐತಿಹಾಸಿಕ ಸಾಧನೆ ಮಾಡಿದ್ದರು. ಆದರೆ ಕಿವೀಸ್‌ ಬ್ಯಾಟರ್‌ಗಳ ಕಳಪೆ ಆಟದಿಂದಾಗಿ ಪಟೇಲ್ ಸಾಧನೆ ಕಳೆಗುಂದಿತು. ಕೇವಲ 62 ರನ್‌ ಗಳಿಸಿದ್ದ ತಂಡವು ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡವು ಮಯಂಕ್ ಅಗರವಾಲ್ (62; 108ಎ) ಮತ್ತು ಪೂಜಾರ (47) ನೀಡಿದ ಉತ್ತಮ ಆರಂಭದಿಂದಾಗಿ 70 ಓವರ್‌ಗಳಲ್ಲಿ 7ವಿಕೆಟ್‌ಗಳಿಗೆ 276 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ನ್ಯೂಜಿಲೆಂಡ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಅಶ್ವಿನ್ ಕೈಚಳಕದಿಂದಾಗಿ ಕೇವಲ 55 ರನ್‌ಗಳಿಗೆ ಮೂರು ವಿಕೆಟ್‌ಗಳು ಪತನವಾದವು. ಆದರೆ ಡೆರಿಲ್ ಮಿಚೆಲ್ (60; 92ಎಸೆತ) ಮತ್ತು ಹೆನ್ರಿ ನಿಕೋಲ್ಸ್‌ (ಬ್ಯಾಟಿಂಗ್ 36) ಅವರು ದಿಟ್ಟ ಹೋರಾಟ ಮಾಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 73 ರನ್ ಸೇರಿಸಿದರು. 35ನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಡೆರಿಲ್ ವಿಕೆಟ್ ಗಳಿಸಿ, ಜೊತೆಯಾಟವನ್ನು ಮುರಿದರು. ಟಾಮ್ ಬ್ಲಂಡೆಲ್ ಖಾತೆ ತೆರೆಯುವ ಮುನ್ನವೇ ರನ್‌ಔಟ್ ಆದರು. ಇದರಿಂದಾಗಿ ಕಿವೀಸ್‌ ಗೆಲುವಿನ ಹಾದಿ ಮತ್ತಷ್ಟು ಕಠಿಣವಾದಂತಾಗಿದೆ.

ಮಯಂಕ್ ಅರ್ಧಶತಕ: ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಮಯಂಕ್ ಎರಡನೇ ಇನಿಂಗ್ಸ್‌ನಲ್ಲಿಯೂ ಅರ್ಧಶತಕ ಗಳಿಸಿದರು. ಕಲಾತ್ಮಕ ಹೊಡೆತಗಳ ಮೂಲಕ ಎದುರಾಳಿ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಿದರು. ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ ಪೂಜಾರ ಅವರೊಂದಿಗೆ 107 ರನ್‌ಗಳನ್ನು ಸೇರಿಸಿದರು.

ಕಳೆದ ಹಲವು ಪಂದ್ಯಗಳಿಂದ ಲಯ ಕಂಡುಕೊಳ್ಳಲು ಪರದಾಡುತ್ತಿರುವ ಪೂಜಾರ ಮೂರು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಶುಭಮನ್ ಗಿಲ್ (47 ರನ್) ಕೂಡ ಅರ್ಧಶತಕದಂಚಿನಲ್ಲಿ ಎಡವಿದರು.

ಏಕಾಗ್ರತೆ ಗಳಿಸಿಕೊಳ್ಳಲು ಹರಸಾಹಸ ಮಾಡಿದ ಕೊಹ್ಲಿ (36; 84ಎ) ರಚಿನ್ ರವೀಂದ್ರ ಅವರ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು. ಆದರೆ, ಆಲ್‌ರೌಂಡರ್ ಅಕ್ಷರ್ ಪಟೇಲ್ ನಿರಾಶೆಗೊಳಿಸಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದ ಅವರು ಭಾನುವಾರ ಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿದರು. 26 ಎಸೆತಗಳಲ್ಲಿ ಅಜೇಯ 41 ರನ್‌ ಗಳಿಸಿದರು. ಮೂರು ಬೌಂಡರಿ, ನಾಲ್ಕು ಸಿಕ್ಸರ್‌ ಸಿಡಿಸಿದರು. ತಂಡವು ಚಹಾ ವಿರಾಮಕ್ಕೂ ಸ್ವಲ್ಪ ಮುನ್ನ ಭಾರತವು ಡಿಕ್ಲೇರ್ ಮಾಡಿಕೊಂಡಿತು.

ಸ್ಪಿನ್ನರ್‌ಗಳ ಸ್ವರ್ಗ: ವಾಂಖೆಡೆ ಅಂಗಣವು ಈ ಪಂದ್ಯದಲ್ಲಿ ಸ್ಪಿನ್ನರ್‌ಗಳ ಪಾಲಿಗೆ ಸ್ವರ್ಗವಾಗಿ ಪರಿಣಮಿಸಿದೆ. ಮೂರು ದಿನಗಳ ಆಟದಲ್ಲಿ ಪತವಾಗಿರುವ ಒಟ್ಟು 32 ವಿಕೆಟ್‌ಗಳ ಪೈಕಿ 28 ಸ್ಪಿನ್ನರ್‌ಗಳ ಪಾಲಾಗಿವೆ.

ಮಧ್ಯಮವೇಗಿ ಮೊಹಮ್ಮದ್ ಸಿರಾಜ್ ಅವರು ಮೊದಲ ಇನಿಂಗ್ಸ್‌ನಲ್ಲಿ ಮೂರು ವಿಕೆಟ್ ಗಳಿಸಿದ್ದಾರೆ. ಇದೇ ಇನಿಂಗ್ಸ್‌ ಹತ್ತು ವಿಕೆಟ್‌ ಸಾಧನೆ ಮಾಡಿದ್ದ ಪಟೇಲ್, ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಗಳಿಸಿದರು.

ಪಿಚ್‌ನಲ್ಲಿ ನಿಧಾನವಾಗಿ ಸಾಗಿ ತಿರುವು ಪಡೆಯುತ್ತಿರುವ ಎಸೆತಗಳನ್ನು ಅಪಾರ ತಾಳ್ಮೆ ಮತ್ತು ಏಕಾಗ್ರತೆಯಿಂದ ಎದುರಿಸಬೇಕಾದ ಸವಾಲು ಬ್ಯಾಟರ್‌ಗಳ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT