ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Asia Cup 2023 IND vs BAN: ಬಾಂಗ್ಲಾದೇಶಕ್ಕೆ ಮಣಿದ ಭಾರತ

ಕ್ರಿಕೆಟ್‌: ಮಿಂಚಿದ ಶಕೀಬ್‌, ಮುಸ್ತಫಿಜುರ್‌; ಗಿಲ್‌ ಶತಕ ವ್ಯರ್ಥ
Published 15 ಸೆಪ್ಟೆಂಬರ್ 2023, 18:40 IST
Last Updated 15 ಸೆಪ್ಟೆಂಬರ್ 2023, 18:40 IST
ಅಕ್ಷರ ಗಾತ್ರ

ಕೊಲಂಬೊ: ಶುಭಮನ್‌ ಗಿಲ್‌ ಅವರ ಸೊಗಸಾದ ಶತಕದ ಹೊರತಾಗಿಯೂ ಭಾರತ ತಂಡ, ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಶರಣಾಯಿತು.

ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಾಂಗ್ಲಾ ಆರು ರನ್‌ಗಳಿಂದ ಗೆದ್ದು ಬೀಗಿತು. ಅಂತಿಮ ಪಂದ್ಯ ಜಯಿಸಿ ಭಾನುವಾರದ ಫೈನಲ್‌ಗೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕೆಂಬ ರೋಹಿತ್ ಶರ್ಮಾ ಬಳಗದ ಗುರಿ ಈಡೇರಲಿಲ್ಲ.

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 265 ರನ್‌ ಕಲೆಹಾಕಿತು. ನಾಯಕ ಶಕೀಬ್ ಅಲ್‌ ಹಸನ್ (80 ರನ್‌; 85 ಎ., 4X6, 6X3), ತೌಹೀದ್ ಹೃದಯ್‌ (54 ರನ್‌; 81 ಎ., 4X5, 6X2) ಮತ್ತು ನಸುಮ್‌ ಅಹ್ಮದ್ (44 ರನ್; 45 ಎ.) ತಂಡದ ನೆರವಿಗೆ ನಿಂತರು.

ಸಾಧಾರಣ ಗುರಿ ಬೆನ್ನಟ್ಟಿದ ಭಾರತ, 49.5 ಓವರ್‌ಗಳಲ್ಲಿ 259 ರನ್‌ಗಳಿಗೆ ಅಲೌಟಾಯಿತು. ಗಿಲ್‌ (121 ರನ್; 133 ಎ., 4X8, 6X5) ಅವರ ಶತಕ ಮತ್ತು ಕೊನೆಯಲ್ಲಿ ಅಕ್ಷರ್‌ ಪಟೇಲ್‌ (42 ರನ್; 34 ಎ.) ಅವರು ತೋರಿದ ಹೋರಾಟ ಸಾಕಾಗಲಿಲ್ಲ.

ರೋಹಿತ್‌ (0) ಮತ್ತು ತಿಲಕ್‌ ವರ್ಮಾ (5) ಅವರನ್ನು ಬೇಗನೇ ಕಳೆದುಕೊಂಡ ಭಾರತ ಆರಂಭದಲ್ಲೇ ಆಘಾತ ಅನುಭವಿಸಿತು. ಕೆ.ಎಲ್‌.ರಾಹುಲ್‌ (19 ರನ್‌, 39 ಎ.) ಹಾಗೂ ಇಶಾನ್‌ ಕಿಶನ್‌ (5) ಕೂಡಾ ವಿಫಲರಾದರು.

ಒಂದು ಬದಿಯಲ್ಲಿ ವಿಕೆಟ್‌ ಬೀಳುತ್ತಿದ್ದರೂ, ಗಿಲ್‌ ಲೀಲಾಜಾಲವಾಗಿ ರನ್‌ ಗಳಿಸುತ್ತಿದ್ದರು. ಸೂರ್ಯಕುಮಾರ್ ಜತೆ ಐದನೇ ವಿಕೆಟ್‌ಗೆ 45 ರನ್ ಸೇರಿಸಿದರು. ಸೂರ್ಯಕುಮಾರ್‌ ವಿಕೆಟ್‌ ಪಡೆದ ಶಕೀಬ್‌ ಈ ಜತೆಯಾಟ ಮುರಿದರು. ರವೀಂದ್ರ ಜಡೇಜ (7) ಕೂಡಾ ಬೇಗನೇ ಔಟಾದರು.

44ನೇ ಓವರ್‌ನಲ್ಲಿ ಗಿಲ್‌ ಅವರನ್ನು ಪೆವಿಲಿಯನ್‌ಗಟ್ಟಿದ ಮೆಹದಿ ಹಸನ್‌, ಬಾಂಗ್ಲಾಕ್ಕೆ ಮೇಲುಗೈ ತಂದಿತ್ತರು. ಅಕ್ಷರ್‌ ಮತ್ತು ಶಾರ್ದೂಲ್‌ (11) ಛಲದ ಆಟವಾಡಿದರೂ ಭಾರತಕ್ಕೆ ಗೆಲುವು ಒಲಿಯಲಿಲ್ಲ.

ಇದಕ್ಕೂ ಮುನ್ನ ಟಾಸ್‌ ಗೆದ್ದ ರೋಹಿತ್‌, ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಕಳುಹಿಸಿದರು. ಶಾರ್ದೂಲ್‌ ಠಾಕೂರ್‌ (65ಕ್ಕೆ 3) ಮತ್ತು ಮೊಹಮ್ಮದ್‌ ಶಮಿ (32ಕ್ಕೆ 2) ಅವರ ಆರಂಭಿಕ ದಾಳಿಗೆ ನಲುಗಿದ ಬಾಂಗ್ಲಾ 59 ರನ್‌ ಗಳಿಸುಷ್ಟರಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡಿತು.

ಈ ಹಂತದಲ್ಲಿ ಜತೆಯಾದ ಶಕೀಬ್‌ ಮತ್ತು ತೌಹೀದ್‌ ಅವರು ಐದನೇ ವಿಕೆಟ್‌ಗೆ 101 ರನ್‌ ಸೇರಿಸಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಕೊನೆಯಲ್ಲಿ ನಸುಮ್‌ ಅಹ್ಮದ್‌ ಜವಾಬ್ದಾರಿಯುತ ಆಟವಾಡಿ ಮೊತ್ತವನ್ನು 250ರ ಗಡಿ ದಾಟಿಸಲು ನೆರವಾದರು.

ಈಗಾಗಲೇ ಫೈನಲ್‌ ಪ್ರವೇಶಿಸಿದ್ದ ಭಾರತ ತಂಡ ಈ ಪಂದ್ಯದಲ್ಲಿ ಐದು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ತಿಲಕ್‌ ವರ್ಮಾ ಅವರು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.

ಫೈನಲ್‌ನಲ್ಲಿ ಭಾರತ–ಲಂಕಾ ಪೈಪೋಟಿ: ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಪೈಪೋಟಿ ನಡೆಸಲಿವೆ.

ಗುರುವಾರ ನಡೆದಿದ್ದ ಪಂದ್ಯದಲ್ಲಿ ಲಂಕಾ ತಂಡ ಪಾಕಿಸ್ತಾನ ವಿರುದ್ಧ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿತ್ತು. ಮಳೆಯಿಂದ ತೊಂದರೆಗೊಳಗಾದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಾಕ್‌ ನಿಗದಿತ 42 ಓವರ್‌ಗಳಲ್ಲಿ 7 ವಿಕೆ ಟ್‌ಗಳಿಗೆ 252 ರನ್‌ ಗಳಿಸಿತ್ತು. ಡಕ್ವರ್ಥ್ ಲೂಯಿಸ್‌ ನಿಯಮದಂತೆ ಆತಿಥೇಯರ ಗೆಲುವಿಗೆ 42 ಓವರ್‌ಗಳಲ್ಲಿ 252 ರನ್‌ಗಳ ಗುರಿ ನಿಗದಿಪಡಿಸಲಾಗಿತ್ತು. ಲಂಕಾ ತಂಡ ಎಂಟು ವಿಕೆಟ್‌ ಕಳೆದುಕೊಂಡು ಅಂತಿಮ ಎಸೆತದಲ್ಲಿ ಗೆಲುವು ಒಲಿಸಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 265 (ಶಕೀಬ್‌ ಅಲ್‌ ಹಸನ್ 80, ತೌಹೀದ್‌ ಹೃದಯ್ 54, ನಸುಮ್‌ ಅಹ್ಮದ್‌ 44, ಮೆಹದಿ ಹಸನ್‌ ಔಟಾಗದೆ 29, ತಂಜೀಮ್‌ ಹಸನ್ ಔಟಾಗದೆ 14, ಶಾರ್ದೂಲ್‌ ಠಾಕೂರ್‌ 65ಕ್ಕೆ 3, ಮೊಹಮ್ಮದ್‌ ಶಮಿ 32ಕ್ಕೆ 2, ಪ್ರಸಿದ್ಧ ಕೃಷ್ಣ 43ಕ್ಕೆ 1, ರವೀಂದ್ರ ಜಡೇಜ 53ಕ್ಕೆ 1)

ಭಾರತ: 49.5 ಓವರ್‌ಗಳಲ್ಲಿ 259 (ಶುಭಮನ್‌ ಗಿಲ್‌ 121, ಸೂರ್ಯಕುಮಾರ್ ಯಾದವ್‌ 26, ಅಕ್ಷರ್‌ ಪಟೇಲ್‌ 42, ಮುಸ್ತಫಿಜುರ್‌ ರಹ್ಮಾನ್ 50ಕ್ಕೆ 3, ತಂಜೀಮ್‌ ಹಸನ್ 32ಕ್ಕೆ 2) ಫಲಿತಾಂಶ: ಬಾಂಗ್ಲಾದೇಶಕ್ಕೆ 6 ರನ್‌ ಗೆಲುವು

ರವೀಂದ್ರ ಜಡೇಜಗೆ 200 ವಿಕೆಟ್‌

ಆಲ್‌ರೌಂಡರ್‌ ರವೀಂದ್ರ ಜಡೇಜ (53ಕ್ಕೆ 1) ಅವರು ಈ ಪಂದ್ಯದ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪಡೆದ ಸಾಧನೆ ಮಾಡಿದರು. ಮಾತ್ರವಲ್ಲ ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಮತ್ತು 2 ಸಾವಿರಕ್ಕೂ ಅಧಿಕ ರನ್‌ ಗಳಿಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು. ದಿಗ್ಗಜ ಆಟಗಾರ ಕಪಿಲ್‌ ದೇವ್‌ ಮಾತ್ರ (253 ವಿಕೆಟ್‌ ಮತ್ತು 3783 ರನ್) ಈ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳ ಗಡಿ ದಾಟಿದ ಭಾರತದ ಏಳನೇ ಬೌಲರ್‌ ಎಂಬ ಗೌರವವನ್ನೂ ಎಡಗೈ ಸ್ಪಿನ್ನರ್‌ ತಮ್ಮದಾಗಿಸಿಕೊಂಡರು. ಕಪಿಲ್‌ ದೇವ್‌ ಅಲ್ಲದೆ ಅನಿಲ್‌ ಕುಂಬ್ಳೆ (334 ವಿಕೆಟ್‌) ಜಾವಗಲ್‌ ಶ್ರೀನಾಥ್‌ (315) ಅಜಿತ್‌ ಅಗರ್ಕರ್‌ (288) ಜಹೀರ್‌ ಖಾನ್‌ (269) ಮತ್ತು ಹರಭಜನ್‌ ಸಿಂಗ್‌ (265) ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT