ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ: ಲಂಕಾಗೆ ಸಾಟಿಯಾಗುವುದೇ ಬಾಂಗ್ಲಾ

7
ಪ್ರಶಸ್ತಿಗಾಗಿ ಆರು ತಂಡಗಳ ಪೈ‍ಪೋಟಿ

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ: ಲಂಕಾಗೆ ಸಾಟಿಯಾಗುವುದೇ ಬಾಂಗ್ಲಾ

Published:
Updated:
Deccan Herald

ದುಬೈ: ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಆರನೇ ಟ್ರೋಫಿಯ ಮೇಲೆ ಕಣ್ಣಿಟ್ಟಿರುವ ಶ್ರೀಲಂಕಾ ಮತ್ತು ಚೊಚ್ಚಲ ಪ್ರಶಸ್ತಿ ಜಯದ ಹುಮ್ಮಸ್ಸಿನಲ್ಲಿರುವ ಬಾಂಗ್ಲಾದೇಶ ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿವೆ.

ಶನಿವಾರ ನಡೆಯುವ ‘ಬಿ’ ಗುಂಪಿನ ಹೋರಾಟಕ್ಕೆ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಮೈದಾನದಲ್ಲಿ ವೇದಿಕೆ ಸಿದ್ಧಗೊಂಡಿದೆ.

ಸಿಂಹಳೀಯ ನಾಡಿನ ತಂಡ 1986, 1997, 2004, 2008 ಮತ್ತು 2014ರಲ್ಲಿ ನಡೆದ ಟೂರ್ನಿಗಳಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ಬಾಂಗ್ಲಾ ತಂಡ 2012 ಮತ್ತು 2016ರಲ್ಲಿ ರನ್ನರ್ಸ್‌ ಅಪ್‌ ಆಗಿತ್ತು.

ಈ ವರ್ಷದ ಜನವರಿಯಲ್ಲಿ ನಡೆದಿದ್ದ ತ್ರಿಕೋನ ಏಕದಿನ ಕ್ರಿಕೆಟ್‌ ಸರಣಿಯ ಫೈನಲ್‌ನಲ್ಲಿ ಲಂಕಾ ತಂಡ ಬಾಂಗ್ಲಾದೇಶವನ್ನು ಮಣಿಸಿ ‍ಪ್ರಶಸ್ತಿ ಜಯಿಸಿತ್ತು. ಫೆಬ್ರುವರಿಯಲ್ಲಿ ನಡೆದಿದ್ದ ಟೆಸ್ಟ್‌ ಮತ್ತು ಟ್ವೆಂಟಿ–20 ಕ್ರಿಕೆಟ್‌ ಸರಣಿಗಳಲ್ಲೂ ಲಂಕಾ ಪ್ರಾಬಲ್ಯ ಮೆರೆದಿತ್ತು.

ಆದರೆ, ನಿದಾಹಸ್‌ ಟ್ರೋಫಿಯಲ್ಲಿ ಬಾಂಗ್ಲಾದೇಶ, ಶ್ರೀಲಂಕಾಕ್ಕೆ ತಿರುಗೇಟು ನೀಡಿತ್ತು. ಹೀಗಾಗಿ ಏಂಜೆಲೊ ಮ್ಯಾಥ್ಯೂಸ್‌ ಪಡೆ ಶನಿವಾರದ ಹೋರಾಟವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ಅನುಭವಿಗಳಾದ ದಿನೇಶ್‌ ಚಾಂಡಿಮಲ್‌ ಮತ್ತು ಧನುಷ್ಕಾ ಗುಣತಿಲಕ ಅವರು ಗಾಯದಿಂದಾಗಿ ಟೂರ್ನಿಗೆ ಅಲಭ್ಯರಾಗಿದ್ದಾರೆ. ಸ್ಪಿನ್ನರ್‌ ಅಖಿಲ ಧನಂಜಯ ಕೂಡಾ ಮೊದಲ ಎರಡು ಪಂದ್ಯಗಳಲ್ಲಿ ಆಡುತ್ತಿಲ್ಲ. ಹೀಗಾಗಿ ಲಂಕಾ ತಂಡ ಅಲ್ಪ ಒತ್ತಡದಲ್ಲಿದೆ. ಇವರ ಅನುಪಸ್ಥಿತಿ ಕಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಇತರರ ಮೇಲಿದೆ.

ನಾಯಕ ಮ್ಯಾಥ್ಯೂಸ್‌, ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿಯಲ್ಲಿ ಆಲ್‌ರೌಂಡ್‌ ಆಟ ಆಡಿ ಗಮನ ಸೆಳೆದಿದ್ದರು. ಅವರು ಬಾಂಗ್ಲಾ ಎದುರು ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ವಿಕೆಟ್‌ ಕೀಪರ್‌ ನಿರೋಷನ್‌ ಡಿಕ್ವೆಲ್ಲಾ, ಉ‍ಪುಲ್‌ ತರಂಗ ಮತ್ತು ಕುಶಾಲ್‌ ಪೆರೇರಾ ಅವರು ರನ್‌ ಮಳೆ ಸುರಿಸುವ ವಿಶ್ವಾಸದಲ್ಲಿದ್ದಾರೆ.

ಅನುಭವಿ ವೇಗಿ ಲಸಿತ್‌ ಮಾಲಿಂಗ ಬೌಲಿಂಗ್‌ನಲ್ಲಿ ತಂಡದ ಆಧಾರಸ್ತಂಭವಾಗಿದ್ದಾರೆ. ದಿಲ್ರುವಾನ ಪೆರೇರಾ ಮತ್ತು ಸುರಂಗ ಲಕ್ಮಲ್‌ ಅವರ ಮೇಲೂ ಭರವಸೆ ಇಡಬಹುದಾಗಿದೆ.

ವಿಶ್ವಾಸದಲ್ಲಿ ಬಾಂಗ್ಲಾ: ಮಷ್ರಫೆ ಮೊರ್ತಜ ಸಾರಥ್ಯದ ಬಾಂಗ್ಲಾ ತಂಡ ಲಂಕಾಗೆ ಆಘಾತ ನೀಡಲು ಕಾಯುತ್ತಿದೆ. ಈ ತಂಡ 1995ರ ನಂತರ ಮೊದಲ ಸಲ ಯುಎಇಯಲ್ಲಿ ಪಂದ್ಯ ಆಡುತ್ತಿದೆ.

ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಗೆಲುವಿನ ಸಿಹಿ ಅನುಭವಿಸಿರುವ ಬಾಂಗ್ಲಾದ ‘ಹುಲಿಗಳು’ ವಿಶ್ವಾಸದಿಂದ ಬೀಗುತ್ತಿದ್ದಾರೆ.

ಆರಂಭಿಕರಾದ ತಮಿಮ್‌ ಇಕ್ಬಾಲ್‌ ಮತ್ತು ಲಿಟನ್‌ ದಾಸ್‌ ಅವರು ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡುವ ಹುಮ್ಮಸ್ಸಿನಲ್ಲಿದ್ದಾರೆ. ಇದರ ಮೇಲೆ ರನ್‌ ಗೋಪುರ ಕಟ್ಟಲು ಅನುಭವಿಗಳಾದ ಶಕೀಬ್‌ ಅಲ್‌ ಹಸನ್‌, ಮುಷ್ಫಿಕರ್‌ ರಹೀಮ್‌, ಮಹಮದುಲ್ಲಾ ಮತ್ತು ಮೊಸಾದೆಕ್‌ ಹೊಸೇನ್‌ ಕಾಯುತ್ತಿದ್ದಾರೆ.

ಮೊರ್ತಜ, ಮೆಹದಿ ಹಸನ್‌, ರುಬೇಲ್‌ ಹೊಸೇನ್‌ ಮತ್ತು ಮುಸ್ತಾಫಿಜರ್‌ ರಹಮಾನ್‌ ಅವರು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.

 **

ಸೆಪ್ಟೆಂಬರ್‌ 15–28: ಈ ಬಾರಿಯ ಟೂರ್ನಿ ನಡೆಯುವ ಅವಧಿ

13: ಟೂರ್ನಿಯಲ್ಲಿ ನಡೆಯುವ ಒಟ್ಟು ಪಂದ್ಯಗಳು

**

ಯಾವ ಗುಂಪಿನಲ್ಲಿ ಯಾರು?

ಎ: ಭಾರತ, ಪಾಕಿಸ್ತಾನ, ಹಾಂಕಾಂಗ್‌

ಬಿ: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಗಾನಿಸ್ತಾನ

**

ಪಂದ್ಯ ನಡೆಯುವ ಕ್ರೀಡಾಂಗಣಗಳು

ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣ (ದುಬೈ)

ಆಸನ ಸಾಮರ್ಥ್ಯ: 25,000

ನಡೆಯುವ ಪಂದ್ಯ: 8

**

ಶೇಖ್‌ ಜಾಯೆದ್‌ ಕ್ರೀಡಾಂಗಣ (ಅಬುಧಾಬಿ)

ಆಸನ ಸಾಮರ್ಥ್ಯ: 20,000

ನಡೆಯುವ ಪಂದ್ಯ: 5

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !