ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕಿಗಳ ವೀಕೆಂಡ್ ಹಳ್ಳಿ ಲೈಫು!

Last Updated 13 ಜೂನ್ 2018, 19:30 IST
ಅಕ್ಷರ ಗಾತ್ರ

ಸುಜಯ್ ರಾಮಸಾಗರ

ಮೂರು ಹೊತ್ತು ಎ.ಸಿ. ಗಾಳಿ ಸೇವಿಸುತ್ತಿದ್ದ ಅವರ ಪಪ್ಪುಸಗಳು ಹಸಿಮಣ್ಣಿನ ಘಮಲು ಬೆರೆತ ಹೊಸ ಗಾಳಿಯ ಪ್ರವೇಶದಿಂದ ಮುದಗೊಂಡಿದ್ದವು. ಕೀಬೋರ್ಡು-ಮೌಸುಗಳ ಮೇಲಷ್ಟೇ ಹರಿದಾಡುತ್ತಿದ್ದ ಅವರ ಕೈಗಳಿಗೆ ಮಣ್ಣು ಮೆತ್ತಿಕೊಂಡಿತ್ತು. ಕೆಪಚಿನೋ ಹೀರುತ್ತಿದ್ದ ಅವರ ನಾಲಗೆಗಳ ರಸಧಾತುಗಳು ಬೆಲ್ಲ ಹಾಕಿ ಕಲಾಯಿಸಿದ ಬೇಲದ ಹಣ್ಣಿನ ಪಾನಕ ಸವಿದು ಪುಳಕಗೊಂಡಿದ್ದವು. ಆ ಬಾತು-ಈ ಬಾತು ತಿಂದು ತಿಂದು ಬಾತುಕೊಂಡಿದ್ದ ಅವರ ಜಠರಗಳಿಗೆ ಕೊತ್ತಲಸಿನ ಕಾಯಿಯ ತಾಳದ ಸಂಭ್ರಮ ತಂದಿತ್ತು. ಜಗಮಗ ಲೈಟುಗಳನ್ನೇ ಕಾಣುತ್ತಿದ್ದ ಕಣ್ಣಪಾಪೆಗಳಿಗೆ ಹಸಿರ ಕಡಲನ್ನೇ ಕಂಡ ಆನಂದ. ಆ್ಯಪಲ್ಲು, ಸಾಮ್ಸಂಗುಗಳಲ್ಲೇ ಕಾಲಕಳೆಯುತ್ತಿದ್ದ ಮಕ್ಕಳ ಕೈಯಲ್ಲಿ ಸಬ್ಬಸಿಗೆ, ಕೊತ್ತಂಬರಿ ಬೀಜದ ಕಾಳುಗಳು!

ಬೆಂಗಳೂರಿನ ಐ.ಟಿ. ಕಂಪನಿಯೊಂದರ ಸಿಬ್ಬಂದಿ ಗುಬ್ಬಿ ತಾಲ್ಲೂಕಿನ ಮೂಗನಹುಣಸೆಯಲ್ಲಿ ಕೃಷಿ - ಪರಿಸರ ಪ್ರವಾಸದೊಂದಿಗೆ ವಾರಾಂತ್ಯದ ರಜೆ ಕಳೆಯುವಾಗ ಕಂಡ ದೃಶ್ಯಗಳಿವು. ಬೆಂಗಳೂರಿನ ಐಡಿಎಫ್ ಸಂಸ್ಥೆ ಹಾಗೂ ಆ ಸಂಸ್ಥೆಯ ನಿರ್ದೇಶನದಲ್ಲಿ ರೈತರೇ ಸ್ಥಾಪಿಸಿಕೊಂಡಿರುವ ಗುಬ್ಬಿ ಚನ್ನಬಸವೇಶ್ವರ ಫಾರ್ಮರ್ಸ್‌ ಪ್ರೊಡ್ಯೂಸರ್ ಕಂಪನಿ ಸಹಯೋಗದಲ್ಲಿ ಈ ಕೃಷಿ- ಪರಿಸರ ಪ್ರವಾಸವನ್ನು ಆಯೋಜಿಸಲಾಗಿತ್ತು.

ಬೆಂಗಳೂರಿನಿಂದ ಹೊರಟು ಗುಬ್ಬಿ ತಾಲ್ಲೂಕಿನ ಮೂಗನಹುಣಸೆ ತಲುಪಿದ ಕೆ.ಪಿ.ಐ.ಟಿ ಕಂಪನಿಯ ಐ.ಟಿ. ಮಂದಿಗೆ ಊರಿನ ಹನುಮನ ಗುಡಿಯಲ್ಲಿ ಬೆಲ್ಲ ಹಾಕಿ ಕಲಾಯಿಸಿದ ಬೇಲದ ಹಣ್ಣಿನ ಪಾನಕದಿಂದ ಸ್ವಾಗತ. ಐ.ಟಿ. ಮಂದಿ ಮತ್ತು ಹಳ್ಳಿ ಮಂದಿ ಪರಸ್ಪರ ಪರಿಚಯ ಮಾಡಿಕೊಂಡ ನಂತರದ ಮೊದಲ ಕೆಲಸ, ಬುಟ್ಟಿ ಹೊತ್ತು ಮಾವು ಕೀಳಲು ಹೊರಟಿದ್ದು!

ಮಾವು ಕೀಳಲು ಹೊರಟವರನ್ನು ‘ಸ್ವಲ್ಪ ನಿಲ್ಲಿ, ಮಾವು ಕೀಳೋದು ಗೊತ್ತಾ' ಎಂದು ರೈತರಾದ ಪುಟ್ಟಸ್ವಾಮಿ ಮತ್ತು ಸಿದ್ದರಾಜು ಪ್ರಶ್ನಿಸಿದರು. ಪರಸ್ಪರ ಮುಖ ನೋಡಿಕೊಂಡ ಐ.ಟಿ. ಮಂದಿ, ಮುಖಭಾವದಲ್ಲಿ ‘ಇಲ್ಲ’ ಎಂದು ತೋರಿಸಿದರು. ನಂತರ 'ಮಾವಿನ ಕಾಯಿಯನ್ನು, ಕೊಯ್ಯುವಾಗ ಕಾಯಿಗೆ ಗಾಯವಾಗದಂತೆ ಎಚ್ಚರವಹಿಸಬೇಕು' ಎನ್ನುತ್ತಾ ಮಾವು ಕೀಳುವ ಪಾಠ ಹೇಳಿದರು ರೈತರು. ಅವರ ಪಾಠ ಅಷ್ಟಕ್ಕೇ ನಿಲ್ಲಲಿಲ್ಲ. ‘ನೋಡಿ, ಮಾವು ಕಿತ್ತ ನಂತರ ತೊಟ್ಟಿನಿಂದ ರಸ ಬರುತ್ತದೆ. ಆ ರಸ ಎಳೆ ಮಕ್ಕಳ ಚರ್ಮದ ಮೇಲೆ ಬಿದ್ದರೆ ಸುಟ್ಟುಬಿಡುತ್ತದೆ. ಹಾಗಾಗಿ, ಮಾವು ಕಿತ್ತ ಕೂಡಲೇ, ತೊಟ್ಟನ್ನು ಹುಲ್ಲಿನ ಮೇಲೆ ಉಜ್ಜಿ. ಸ್ವಲ್ಪ ಸಮಯ ನೆಲದ ಮೇಲೆ ಬಿಡಿ. ನಂತರ ಬುಟ್ಟಿಗೆ ತುಂಬಿಸಿಕೊಳ್ಳಿ’ ಎಂದು ರೈತರು ಮಾರ್ಗದರ್ಶನ ನೀಡಿದರು. ಪಾಠ ಕೇಳಿ ಬುಟ್ಟಿ ಹೊತ್ತು ಕೆಲವರು ಬಸವರಾಜು ತೋಟದತ್ತ, ಇನ್ನು ಕೆಲವರು ಸಿದ್ದರಾಜು ತೋಟದ ಕಡೆ ಹೊರಟರು.

ತೋಟದ ಒಳಹೊಕ್ಕ ಐ.ಟಿ. ಮಂದಿಗೆ ಮರದಲ್ಲಿ ಭರಪೂರ ಮಾವನ್ನು ಕಂಡು ಅಚ್ಚರಿ. ‘ಅಯ್ಯೋ ಮಾವಿನ ಹಣ್ಣುಗಳಲ್ಲಿ ಇಷ್ಟೊಂದು ವೆರೈಟಿ ಇದೆಯಾ’ ಎಂದು ಕುತೂಹಲದಿಂದ ಕೇಳುತ್ತಿದ್ದರು. ಅಲ್ಲೇ ಇದ್ದ ರೈತರು ಮರಗಳತ್ತ ಕೈ ತೋರುತ್ತಾ ‘ನೋಡಿ, ಇದು ಸೇಂದೂರ, ಅದು ಬಾದಾಮಿ, ಆ ಕಡೆ ಉದ್ದಕ್ಕೆ ಇದೆಯಲ್ಲಾ ಅದು ತೋತಾಪುರಿ, ಅದರ ಪಕ್ಕದಲ್ಲೇ ಇದೆಯಲ್ಲಾ ಅದು ಬಗನಪಲ್ಲಿ’ ಎಂದು ಪರಿಚಯಿಸುತ್ತಾ, ಅವರಲ್ಲಿದ್ದ ತಳಿ ಬಗೆಗಿನ ಅಚ್ಚರಿಯನ್ನು ಮತ್ತಷ್ಟು ಉದ್ದೀಪಿಸಿದರು.

ಮಾವಿನ ತಳಿ ಕಥೆ ಕೇಳುತ್ತಾ, ರೈತರೊಂದಿಗೆ ಹರಟೆ ಹೊಡೆಯುತ್ತಾ ತಮಗೆ ಬೇಕಾದ ಹಣ್ಣುಗಳನ್ನು ಮರಗಳಿಂದ ಕಿತ್ತು ಬುಟ್ಟಿಗೆ ತುಂಬಿಸಿಕೊಂಡರು ಟೆಕಿಗಳು. ಹಣ್ಣು ಬುಟ್ಟಿಗಿಳಿಸುತ್ತಿರುವ ವೇಳೆಯಲ್ಲಿ ಐಡಿಎಫ್ ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ್ ಶೆಣೈ, ಮಾವಿನ ಸಸಿಗಳನ್ನು ಕಸಿ ಮಾಡುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಹಣ್ಣನ್ನು ಕೀಳುತ್ತಾ, ಕಸಿ ಪಾಠ ಕೇಳುತ್ತಾ, ನೆಲದಲ್ಲಿ ಹಣ್ಣಾಗಿ ಬಿದ್ದಿದ್ದ ಮಾವನ್ನು ಚಪ್ಪರಿಸುತ್ತಾ, ಸೆಲ್ಫೀ ತೆಗೆದುಕೊಳ್ಳುತ್ತಾ, ಗೈರು ಹಾಜರಾದ ಸಹೋದ್ಯೋಗಿಗಳಿಗೆ ಫೋನ್ ಮಾಡಿ ಹೊಟ್ಟೆ ಉರಿಸುತ್ತಾ ಸಂಭ್ರಮಿಸಿದರು.

‘ಇಷ್ಟೊಂದು ಮಾವಿನ ವೈವಿಧ್ಯ ನೋಡಿಯೇ ಇರಲಿಲ್ಲ’ ಅಂತ ಜಾರ್ಖಂಡಿನ ಮನಿಷಾ ನಾಗ್ ಅಚ್ಚರಿ ವ್ಯಕ್ತಪಡಿಸಿದರೆ, ಪಕ್ಕದಲ್ಲಿದ್ದ ತಮಿಳುನಾಡಿನ ಸತೀಶ್, ‘ಕಸಿ ಮಾಡುವುದು ಒಂದು ರೀತಿ ಪ್ರಕೃತಿ ವಿಸ್ಮಯವೇ ಸರಿ’ ಎಂದು ಹುಬ್ಬು ಮೇಲೇರಿಸಿದರು. ಸೇಂದೂರ, ಬಾದಾಮಿ, ತೋತಾಪುರಿ ಕಿತ್ತು ಬುಟ್ಟಿ ತುಂಬಿಸಿಕೊಂಡ ಟೆಕಿಗಳನ್ನು ಪುಟ್ಟರಾಜು ತಮ್ಮ ತೋಟದ ಆಮ್ಲೆಟ್ ತಳಿಯ (ಉಪ್ಪಿನಕಾಯಿಗೆ ಬಳಸುವ ದೊಡ್ಡ ಗಾತ್ರದ ಮಾವಿನ ತಳಿ) ಮರದತ್ತ ಕೊಂಡೊಯ್ದರು.

ತೆಂಗಿನ ಕಾಯಿ ಗಾತ್ರದ ಆಮ್ಲೆಟ್ ತಳಿಯ ಮಾವನ್ನು ಕಂಡು ಬೆರಗಾದ ಪ್ರವಾಸಿಗರು, ‘ಇದೇನಿದು ಈ ಮಾವು ಸಿಹಿ ಕುಂಬಳಕಾಯಿ ಗಾತ್ರದಲ್ಲಿದೆಯಲ್ಲ’ ಎಂದು ಅಚ್ಚರಿಯಿಂದ ಪ್ರಶ್ನಿಸಿದರು. ಪ್ರವಾಸಕ್ಕೆ ಬಂದಿದ್ದ ರೇವತಿ ಹಾಗೂ ಸತೀಶ್, ತಮ್ಮ ತಮ್ಮ ಅಮ್ಮಂದಿರಿಗೆ ದೂರವಾಣಿ ಕರೆ ಮಾಡಿ, ‘ಇಲ್ಲಿ ಉಪ್ಪಿನಕಾಯಿ ಹಾಕುವ ಮಾವಿನ ತಳಿ ಸಿಕ್ಕಿದೆ. ಮನೆಗೆ ತಗೊಂಡು ಬರ್ಲಾ, ಉಪ್ಪಿನಕಾಯಿ ಹಾಕಬಹುದು’ ಎಂದು ಹೇಳಿದರು. ನಂತರ ಒಂದಿಷ್ಟು ಕಾಯಿಯನ್ನು ಬುಟ್ಟಿಗೆ ತುಂಬಿಸಿಕೊಂಡು ಹೊರಟರು.

ನೆತ್ತಿ ಸುಡುವವರೆಗೆ ಮಾವು ಕೀಳುತ್ತಾ, ತೋಟವನ್ನೆಲ್ಲಾ ಸುತ್ತಿ ದಣಿವಾಗಿದ್ದವರಿಗೆ ಹಳ್ಳಿಯಲ್ಲಿ ತಯಾರಿಸಿದ್ದ ಬಿಸಿ ಬಿಸಿ ಮುದ್ದೆ, ಹಲಸಿನಕಾಯಿ ಹುಳಿ, ಮಾವಿನಕಾಯಿಯ ಚಿತ್ರಾನ್ನ, ಪಾಯಸ, ನೀರುಮಜ್ಜಿಗೆಯ ಹಬ್ಬದೂಟ ಕಾಯುತ್ತಿತ್ತು. ಊಟ ಮುಗಿಸಿದ ನಂತರ ಮತ್ತೆ ತೋಟದ ಚಟುವಟಿಕೆ ಮುಂದುವರಿಸಿದ ಪ್ರವಾಸಿಗರು, ಈ ಬಾರಿ, ಗುದ್ದಲಿ, ಸಲಿಕೆ ಹಿಡಿದು ಸೊಪ್ಪು, ತರಕಾರಿ ಬೆಳೆಯಲು ಬೇಕಾದಂತಹ ಮಡಿ ತಯಾರಿಕೆಗೆ ಸಜ್ಜಾದರು. ಮಣ್ಣು ಅಗೆದು, ಹೆಂಟೆ ಹೊಡೆದು, ಗೊಬ್ಬರ ಎರಚಿ ಮೂಲಂಗಿ, ಪಾಲಕ್, ಸಬ್ಬಸಿಗೆ ಸೊಪ್ಪಿನ ಬೀಜಗಳನ್ನು ಬಿತ್ತಿದರು. 'ಕಟಾವಿಗೆ ಬಂದ ನಂತರ ಇವುಗಳ ಫೋಟೊ ತೆಗೆದು ನಮಗೆ ಕಳುಹಿಸಿ' ಎಂದು ರೈತರಾದ ಪ್ರಭುದೇವ್ ಮತ್ತು ಸುಜಾತ ಅವರಲ್ಲಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಜಾತ, 'ಇನ್ನೊಂದು ಇಪ್ಪತ್ತು ದಿನ ಬಿಟ್ಟು ಬಂದುಬಿಡಿ. ನೀವೇ ಕಟಾವು ಮಾಡಿಕೊಂಡು ಹೋಗಬಹುದು' ಎಂದರು.

ಈ ನಡುವೆ ಕೆಲವರು ಅಡಿಕೆ ಪಟ್ಟೆಯಿಂದ ತಟ್ಟೆ ತಯಾರಿಸುವ ಯಂತ್ರದ ಬಳಿ ನಿಂತರು. ಅಡಿಕೆ ಹಾಳೆ ಬಳಸಿ ಯಂತ್ರದಿಂದ ಅಡಿಕೆ ತಟ್ಟೆ ತಯಾರಿಸುವ ಕುರಿತು ಸುಜಾತ ಹೇಳಿಕೊಟ್ಟರು. ಅವರಿಗೆಲ್ಲ ಕ್ಷಣಕಾಲ ಸುಜಾತ ತರಬೇತುದಾರರಾದರು. ಸುಜಾತ ಹೇಳಿಕೊಟ್ಟ ವಿಧಾನದಲ್ಲಿ ಯಂತ್ರಬಳಸಿ ಅಡಿಕೆ ಪಟ್ಟೆ ತಯಾರಿಸಿದರು. ಆ ತಟ್ಟೆಗಳನ್ನು ಹಿಡಿದು ಕ್ಯಾಮೆರಾಗೆ ಪೋಸ್ ಕೊಡುತ್ತಿದ್ದವರಿಗೆ ಇತರರು 'ಏನೋ ವಿಂಬಲ್ಡನ್ ಗೆದ್ದ ರೀತಿಯಲ್ಲಿ ಪೋಸ್ ಕೊಡ್ತಿದಿಯಾ' ಅಂತ ಕಿಚಾಯಿಸುತ್ತಿದ್ದರು.

ಈ ಕೃಷಿ ಪ್ರವಾಸದಲ್ಲಿ ತೋಟದ ಚಟುವಟಿಕೆಗಳ ಜತೆಗೆ, ಸ್ಥಳೀಯ ಉತ್ಪನ್ನಗಳನ್ನು ಬಳಸಿಕೊಂಡು ದೇಸಿ ಆಹಾರ ತಯಾರಿಸುವ ತರಬೇತಿ ನೀಡಲಾಯಿತು. ಶ್ರೀಕಾಂತ ಶೆಣೈ ಮಾವಿನ ಅಪ್ಪೆಸಾರು ತಯಾರಿಸುವುದನ್ನು ತೋರಿಸಿಕೊಟ್ಟರು. ಅಲ್ಲೆ ತಯಾರಿಸಿದ ಅಪ್ಪೆಸಾರನ್ನು ಬಾಳೆ ದೊನ್ನೆಗೆ ಸುರಿದುಕೊಂಡು ಪ್ರವಾಸಿಗರೆಲ್ಲರೂ ಚಪ್ಪರಿಸಿದರು. ಪ್ರವಾಸಕ್ಕೆ ಬಂದ ದೊಡ್ಡವರು ಚಟುವಟಿಕೆಗಳಲ್ಲಿ ತೊಡಗಿಕೊಂಡರೆ, ಅವರೊಂದಿಗೆ ಬಂದಿದ್ದ ಮಕ್ಕಳು, ಸ್ಥಳೀಯ ಹಳ್ಳಿ ಮಕ್ಕಳೊಂದಿಗೆ ಬೆರೆತು ಆಟವಾಡಿದರು. ಕೆಲವರು ಚಕ್ಕಡಿ, ಟ್ರ್ಯಾಕ್ಟರ್ ಏರಿದರು. ಇನ್ನೂ ಕೆಲವು ಮಕ್ಕಳು ಹಸು-ಕರುಗಳನ್ನು ಮುಟ್ಟಿ ಸಂಭ್ರಮಿಸಿದರು. ಹಾಲು ಕರೆದು ಸೇವಿಸಿದರು. ಜೇನು ಪೆಟ್ಟಿಗೆಯಿಂದ ತೆಗೆದ ತಾಜಾ ಜೇನು ತುಪ್ಪ ಸವಿದರು.

‘ಪ್ರತಿದಿನ ನಾಲ್ಕು ಗೋಡೆಗಳ ಮಧ್ಯೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ನಮಗೆ ಇದೊಂದು ಹೊಸ ಅನುಭವ. ಹಳ್ಳಿಯ ಸೊಗಡನ್ನು ಸವಿಯುವ ಸದವಕಾಶ' ಎಂಬುದು ದಿನಪೂರ್ತಿ ಮಣ್ಣಿನ ಮಕ್ಕಳೊಂದಿಗೆ ಬೆರೆತವ ಐ.ಟಿ. ಉದ್ಯೋಗಿಗಳ ಒಕ್ಕೊರಲ ಅಭಿಪ್ರಾಯವಾಗಿತ್ತು.

‘ಮೈಕೈ ಮಣ್ಣು ಮಾಡಿಕೊಂಡು ಕೈತೋಟ ಮಾಡುವುದು, ಅಡಿಕೆ ಪಟ್ಟೆಯಿಂದ ತಟ್ಟೆ ತಯಾರು ಮಾಡುವುದನ್ನು ಕಲಿಯುವ ರೋಮಾಂಚನ. ಇಷ್ಟೊಂದು ಜಾತಿಯ ಮಾವು ನೋಡಿದ್ದಂತೂ ಇದೇ ಮೊದಲು' ಎಂದು ರೈತರಿಗೂ ಹೇಳುತ್ತಾ, ತಮ್ಮೊಡನೆ ಪರಸ್ಪರ ಅನುಭವ ಹಂಚಿಕೊಂಡರು. 'ಹಲಸಿನ ಕಾಯಿಯಿಂದ ಸಾಂಬಾರು ಮಾಡಬಹುದೆಂದು ಇಲ್ಲಿಯೇ ತಿಳಿಯಿತು. ಕೃಷಿಕರ ಬದುಕನ್ನು ಅರಿಯಲು ಇದೊಂದು ಒಳ್ಳೆಯ ಮಾರ್ಗ’ ಎನ್ನುತ್ತಾ ವಾಪಸ್ ಬೆಂಗಳೂರಿನತ್ತ ಹೊರಡಲು ಅಣಿಯಾದರು.

ಹಾಗೆ ಹೊರಟವರ ಮನದಲ್ಲಿ ಕೃಷಿ ಚಟುವಟಿಕೆಗಳ ಅನುಭವಗಳು ಮೆಲುಕು ಹಾಕುತ್ತಿದ್ದರೆ, ಕೈಯಲ್ಲಿ ತಾವೇ ಮರಗಳಿಂದ ಕೊಯ್ಲು ಮಾಡಿದ 350 ಕೆ.ಜಿ ಮಾವಿನ ಹಣ್ಣು, ರೈತರ ಕಂಪನಿಯಿಂದ ಖರೀದಿಸಿದ ಎಳನೀರು, ಹಲಸು, ಹುಣಸೆ ಹಣ್ಣು, ಪಪ್ಪಾಯ, ಸಾವಯವ ತರಕಾರಿ, ತುಪ್ಪ, ಗ್ರಾಮದ ಮಹಿಳೆಯರೇ ಸ್ವಚ್ಛಗೊಳಿಸಿ ಪ್ಯಾಕ್ ಮಾಡಿದ್ದ ರಾಗಿ, ಅಕ್ಕಿ ಹಪ್ಪಳ ಸೇರಿದಂತೆ ಹಲವು ಉತ್ಪನ್ನಗಳಿದ್ದವು. ⇒

ಕೃಷಿ -ಪರಿಸರ ಪ್ರವಾಸದ ಹಿನ್ನೆಲೆ
ಇನಿಶಿಯೇಟಿವ್ ಫಾರ್ ಡೆವಲಪ್‌ಮೆಂಟ್ ಫೌಂಡೇಷನ್ (ಐಡಿಎಫ್) ಸಂಸ್ಥೆಯ ಮಾರ್ಗದರ್ಶನದಲ್ಲಿ ಸ್ಥಾಪಿತವಾಗಿರುವ ಗುಬ್ಬಿ ಚನ್ನಬಸವೇಶ್ವರ ಫಾರ್ಮರ್ಸ್‌ ಪ್ರೊಡ್ಯೂಸರ್ ಕಂಪನಿ, ರೈತರೇ ಆರಂಭಿಸಿರುವ ಸಂಸ್ಥೆ. ಇದರಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಸದಸ್ಯರಾಗಿರುತ್ತಾರೆ. ಇಂಥ ರೈತರು ಸುಸ್ಥಿರ ಕೃಷಿ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗಿದೆ.

‘ರೈತ ಮತ್ತು ಗ್ರಾಹಕರ ನಡುವಿರುವ ಮಧ್ಯವರ್ತಿ ಕೊಂಡಿಗಳನ್ನು ಕಳಚಿ ಗ್ರಾಹಕರು ನೇರವಾಗಿ ರೈತರಿಂದ ಉತ್ಪನ್ನಗಳನ್ನು ಖರೀದಿಸುವುದಕ್ಕಾಗಿ ಈ ಪ್ರವಾಸವನ್ನು ವೇದಿಕೆಯಾಗಿ ಬಳಸಲಾಗುತ್ತಿದೆ’ ಎಂದು ಐಡಿಎಫ್ ಸಂಸ್ಥೆ ಮುಖ್ಯಸ್ಥ ಶ್ರೀಕಾಂತ್ ಶೆಣೈ ಅಭಿಪ್ರಾಯಪಡುತ್ತಾರೆ.

‘ನಾವು ಸೇವಿಸುವ ಆಹಾರ ಹೇಗೆ ಉತ್ಪಾದನೆಯಾಗುತ್ತದೆ. ಅದನ್ನು ಬೆಳೆಯುವ ರೈತರ ಸಂಕಷ್ಟಗಳೇನು ಎಂಬುದನ್ನು ತಿಳಿಸುವುದು ಈ ಪ್ರವಾಸದ ಉದ್ದೇಶ’ ಎಂದು ಸಂಸ್ಥೆಯ ಮತ್ತೊಬ್ಬ ಮುಖ್ಯಸ್ಥ ವಿ.ಎನ್.ಸಾಲಿಮಠ ವಿವರಿಸುತ್ತಾರೆ.

ಅಂದಹಾಗೆ ಈ ಪ್ರವಾಸದಲ್ಲಿ ಬೆಂಗಳೂರಿನ ಕೆ.ಪಿ.ಐ.ಟಿ ಕಂಪನಿಯಲ್ಲಿರುವ ಕರ್ನಾಟಕ, ಜಾರ್ಖಂಡ್, ಒಡಿಶಾ, ತಮಿಳುನಾಡು ಮೂಲದ 20ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT