ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್: ಭಾರತಕ್ಕೆ ಬಾಂಗ್ಲಾದೇಶ ಸವಾಲು

ಕ್ವಾರ್ಟರ್‌ಫೈನಲ್ ಇಂದು
Last Updated 28 ಜನವರಿ 2022, 19:31 IST
ಅಕ್ಷರ ಗಾತ್ರ

ಒಸ್ಬಾರ್ನ್, ಆ್ಯಂಟಿಗಾ:‌ ಕೋವಿಡ್‌ನಿಂದ ಚೇತರಿಸಿಕೊಂಡು ಪ್ರಮುಖ ಮರಳಿರುವ ಸಂತಸದಲ್ಲಿರುವ ಭಾರತ ತಂಡವು ಶನಿವಾರ ನಡೆಯಲಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಗುಂಪು ಹಂತದಲ್ಲಿ ಐರ್ಲೆಂಡ್ ಎದುರಿನ ಪಂದ್ಯದ ಸಂದರ್ಭಧಲ್ಲಿ ಭಾರತ ತಂಡದ ನಾಯಕ ಯಶ್ ಧುಳ್ ಸೇರಿದಂತೆ ಆರು ಆಟಗಾರರು ಕೊರೊನಾ ಸೋಂಕಿಗೊಳಗಾಗಿದ್ದರು. ಅವರನ್ನು ಪ್ರತ್ಯೇಕವಾಸದಲ್ಲಿರಿಸಲಾಗಿತ್ತು. ಅವರ ಅನುಪಸ್ಥಿತಿಯಲ್ಲಿಯೂ ತಂಡವು ಲೀಗ್ ಪಂದ್ಯಗಳಲ್ಲಿ ಮಿಂಚಿ, ನಾಕೌಟ್ ಹಂತಕ್ಕೆ ಪ್ರವೇಶಿಸಿತ್ತು.

‘ಎಲ್ಲ ಆಟಗಾರರೂ ಚೇತರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಆಡಲು ಫಿಟ್ ಆಗಿರುವ ವಿಶ್ವಾಸವಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಲ್ಕು ಬಾರಿಯ ಚಾಂಪಿಯನ್ ಭಾರತ ತಂಡವು ಇದೀಗ ಮತ್ತೊಮ್ಮೆ ಪ್ರಶಸ್ತಿ ಗೆಲುವಿನತ್ತ ಚಿತ್ತ ನೆಟ್ಟಿದೆ. ಆರಂಭಿಕ ಬ್ಯಾಟ್ಸ್‌ಮನ್ ಅಂಗಕ್ರಿಷ್ ರಘುವಂಶಿ ಮತ್ತು ಆಲ್‌ರೌಂಡರ್ಸ್ ರಾಜ್ ಬಾವಾ ಅಮೋಘ ಲಯದಲ್ಲಿದ್ದಾರೆ. ಎಡಗೈ ಸ್ಪಿನ್ನರ್ ವಿಕ್ಕಿ ಕೌಶಲ್ ಟೂರ್ನಿಯಲ್ಲಿ ಏಳು ವಿಕೆಟ್‌ಗಳನ್ನು ಗಳಿಸಿದ್ದಾರೆ.

ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡವು ನಾಕೌಟ್ ಹಾದಿ ಸುಗಮವಾಗಿರಲಿಲ್ಲ. ಇಂಗ್ಲೆಂಡ್ ವಿರುದ್ಧ ಭಾರಿ ಸೋಲನುಭವಿಸಿತ್ತು. ಆದರೆ, ಕೆನಡಾ ಮತ್ತು ಯುಎಇ ತಂಡಗಳ ವಿರುದ್ಧ ಜಯಿಸಿ ಎಂಟರ ಘಟ್ಟ ಪ್ರವೇಶಿಸಿತ್ತು.

ತಂಡಗಳು: ಭಾರತ: ಯಶ್ ಧುಳ್ (ನಾಯಕ), ಹರ್ನೂರ್ ಸಿಂಗ್, ಅಂಗಕ್ರಿಷ್ ರಘುವಂಶಿ, ಶೇಖ್ ರಶೀದ್, ನಿಶಾಂತ್ ಸಿಂಧು, ಸಿದ್ಧಾರ್ಥ್ ಯಾದವ್, ಅನೀಶ್ವರ್ ಗೌತಮ್, ಮಾನವ ಪರಕ್, ಕೌಶಲ್ ತಾಂಬೆ, ರಾಜವರ್ಧನ್ ಹಂಗರ್ಗೆಕರ್, ವಿಕ್ಕಿ ಓಸ್ವಾಲ್, ಗರ್ವ್ ಸಂಗ್ವಾನ್, ದಿನೇಶ್ ಬಾನಾ, ಆರಾಧ್ಯ ಯಾದವ್, ರಾಜ್ ಬಾವಾ, ವಾಸು ವತ್ಸ್, ರವಿ ಕುಮಾರ್.

ಬಾಂಗ್ಲಾದೇಶ: ರಕಿಬುಲ್ ಹಸನ್ (ನಾಯಕ), ಅಬ್ದುಲ್ಲಾ ಅಲ್ ಮಮೂನ್, ಅರಿಫೂಲ್ ಇಸ್ಲಾಂ, ಮೊಹಮ್ಮದ್ ಫಾಹಿಮ್, ಮಹಫಿಜುಲ್ ಇಸ್ಲಾಂ, ರಿಪೊನ್ ಮಂಡಲ್, ನೈಮುರ್ ರೋಹ್ಮನ್, ತಂಜೀಮ್ ಸಹನ್ ಸಕೀಬ್, ಪಾಂತಿಕ್ ನವ್ರೋಸ್ ನಬೀಲ್, ಐಷ್ ಮೊಲ್ಹಾ, ಅಶಿಕುರು್ ಜಮಾನ್, ಇಫ್ತಿಕಾರ್ ಹುಸೇನ್ ಇಫ್ತಿ, ಎಸ್‌.ಎಂ. ಮೆಹ್ರೂಬ್, ಮುಷ್ಫಿಕ್ ಹಸನ್, ತಹಜೀಬುಲ್ ಇಸ್ಲಾಂ.

ಪಂದ್ಯ ಆರಂಭ: ಸಂಜೆ 6.30

ಸೆಮಿಫೈನಲ್‌ಗೆ ಅಫ್ಗಾನಿಸ್ತಾನ

ಆ್ಯಂಟಿಗಾ: ಅಫ್ಗಾನಿಸ್ತಾನದ ಯುವ ಕ್ರಿಕೆಟಿಗರು ಗುರುವಾರ ಇತಿಹಾಸ ಬರೆದರು.

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ರೋಚಕ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅಫ್ಗಾನಿಸ್ತಾನ 4 ರನ್‌ಗಳಿಂದ ಶ್ರೀಲಂಕಾ ವಿರುದ್ಧ ಜಯಿಸಿತು.ಮೊದಲು ಬ್ಯಾಟಿಂಗ್ ಮಾಡಿದ ಅಫ್ಗನ್ ತಂಡವು 47.1 ಓವರ್‌ಗಳಲ್ಲಿ 134 ರನ್‌ ಗಳಿಸಿ ಆಲೌಟ್ ಆಯಿತು. ಈ ಅಲ್ಪಮೊತ್ತದ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡವನ್ನುಅಫ್ಗನ್ ಬೌಲರ್‌ಗಳು ಕಾಡಿದರು. 46 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟ್ ಆಯಿತು. 46ನೇ ಓವರ್‌ನ ಕೊನೆಯ ಎಸೆತದಲ್ಲಿ ಅಫ್ಗನ್ ತಂಡದ ನವೀದ್ ಜದ್ರಾನ್ ಮತ್ತು ನೇಂಗೆಲಿಯಾ ಖರೊಟೆ ಅವರ ಚುರುಕಿನ ಥ್ರೋನಿಂದಾಗಿ ಟ್ರೆವಿನ್ ಮ್ಯಾಥ್ಯೂ (4 ರನ್) ರನ್‌ಔಟ್ ಆದರು. ಅಫ್ಗನ್ ತಂಡದಲ್ಲಿ ಗೆಲುವಿನ ಸಂಭ್ರಮ ಗರಿಗೆದರಿತು.

ಸಂಕ್ಷಿಪ್ತ ಸ್ಕೋರು: ಅಫ್ಗಾನಿಸ್ತಾನ: 47.1 ಓವರ್‌ಗಳಲ್ಲಿ 134 (ಅಲ್ಲಾ ನೂರ್ 25, ಅಬ್ದುಲ್ ಹದಿ 37, ನೂರ್ ಅಹಮದ್ 30, ವಿನುಜ ರಣಪೂಲ್ 10ಕ್ಕೆ5, ದನುತ್ ವೆಲಾಲ್ಗೆ 36ಕ್ಕೆ3) ಶ್ರೀಲಂಕಾ: 46 ಓವರ್‌ಗಳಲ್ಲಿ 130 (ದುನಿತ್ ವೆಲಾಲ್ಗೆ 34, ರವೀನ್ ಡಿಸಿಲ್ವಾ 21, ಬಿಲಾಲ್ ಸಮಿ 33ಕ್ಕೆ2) ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 4 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT