ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎಯಿಂದ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್: ಆಗಸ್ಟ್‌ 7ರಿಂದ ಆರಂಭ

ಇದು ಫ್ರ್ಯಾಂಚೈಸಿ ಲೀಗ್ ಅಲ್ಲ; ಕೆಎಸ್‌ಸಿಎ ಚುಟುಕು ಕ್ರಿಕೆಟ್ ಟೂರ್ನಿ
Last Updated 16 ಜುಲೈ 2022, 14:30 IST
ಅಕ್ಷರ ಗಾತ್ರ

ಬೆಂಗಳೂರು:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯನ್ನು ಆಗಸ್ಟ್ 7ರಿಂದ 26ರವರೆಗೆ ಆಯೋಜಿಸಲಿದೆ.

ಆದರೆ ಇದು ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯ ಫ್ರ್ಯಾಂಚೈಸಿ ಲೀಗ್ ಅಲ್ಲ. ಪ್ರಾಯೋಜಕತ್ವ ಆಧಾರಿತ ಟಿ20 ಟೂರ್ನಿಯಾಗಿದೆ. ಆಟಗಾರರ ಆಯ್ಕೆಯೂ ಹರಾಜು ಪ್ರಕ್ರಿಯೆ ಮೂಲಕ ನಡೆಯುವುದಿಲ್ಲ. ಡ್ರಾಫ್ಟ್‌ ಪದ್ಧತಿಯ ಮೂಲಕ ನಡೆಯಲಿದೆ. ಟೂರ್ನಿಯ ಆಯೋಜನೆ ಸಂಪೂರ್ಣ ಹೊಣೆಯು ಕೆಎಸ್‌ಸಿಎದ್ದೇ ಆಗಲಿದೆ.

ಶನಿವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ನೂತನ ಟೂರ್ನಿಯ ಟ್ರೋಫಿಯನ್ನು ಕೆಎಸ್‌ಸಿಎ ಅಧ್ಯಕ್ಷ ರೋಜರ್ ಬಿನ್ನಿ ಟ್ರೋಫಿಯನ್ನು ಅನಾವರಣಗೊಳಿಸಿದರು.

‘ಕ್ರಿಕೆಟ್‌ನ ಹೊಸ ಮಾದರಿಗಳ ಟೂರ್ನಿಗಳನ್ನು ಆಯೋಜಿಸುವಲ್ಲಿ ರಾಜ್ಯ ಸಂಸ್ಥೆಯು ಸದಾ ಮುಂಚೂಣಿಯಲ್ಲಿದೆ. 2009ರಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಆರಂಭಿಸಲಾಗಿತ್ತು. ಒಟ್ಟು ಎಂಟು ಆವೃತ್ತಿಗಳು ಯಶಸ್ವಿಯಾಗಿ ನಡೆದವು. ಆದರೆ ಕೋವಿಡ್ ಕಾರಣದಿಂದಾಗಿ ಕಳೆದ ಮೂರು ವರ್ಷಗಳಿಂದ ಟಿ20 ಲೀಗ್ ಆಯೋಜನೆಯಾಗಿಲ್ಲ. ಗ್ರಾಮಾಂತರ ಭಾಗದ ಆಟಗಾರರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ’ ಎಂದು ಭಾರತ ತಂಡದ ಮಾಜಿ ಆಟಗಾರರೂ ಆಗಿರುವ ಬಿನ್ನಿ ಹೇಳಿದರು.

ಆರು ತಂಡಗಳು ಕಣಕ್ಕೆ

ರಾಜ್ಯದ ಆರು ಕ್ರಿಕೆಟ್ ವಲಯಗಳಿಂದ ತಲಾ ಒಂದು ತಂಡವು ಆಡಲಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರಿನ ತಂಡಗಳು ಆಡಲಿವೆ.

‘35 ವರ್ಷ ವಯೋಮಿತಿಯೊಳಗಿನ ಹಾಗೂ ಕೆಎಸ್‌ಸಿಎ ನೋಂದಾಯಿತ ಆಟಗಾರರು ಈ ಟೂರ್ನಿಯಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ. ರಾಜ್ಯ, ರಾಷ್ಟ್ರ ತಂಡಗಳನ್ನು ಪ್ರತಿನಿಧಿಸಿದವರು ಮತ್ತು ನಿವೃತ್ತರಾದವರಿಗೂ ಈ ನಿಯಮ ಅನ್ವಯಿಸಲಿದೆ. ನಾಲ್ಕು ಗುಂಪುಗಳಲ್ಲಿ ಆಟಗಾರರನ್ನು ವಿಂಗಡಿಸಲಾಗುವುದು. ಎ ಗುಂಪಿನಲ್ಲಿ ಭಾರತ ತಂಡದಲ್ಲಿ ಆಡಿದವರು, ಬಿ ಗುಂಪಿನಲ್ಲಿ ರಾಜ್ಯ ತಂಡ ಪ್ರತಿನಿಧಿಸಿದವರು, ಸಿ ಗುಂಪಿನಲ್ಲಿ 19, 24, 25 ವರ್ಷದೊಳಗಿನ ರಾಜ್ಯ ತಂಡವನ್ನು ಪ್ರತಿನಿಧಿಸಿದವರು ಹಾಗೂ ಇನ್ನುಳಿದ ಆಟಗಾರರು ಡಿ ಗುಂಪಿನಲ್ಲಿ ಇರುವರು’ ಎಂದು ಕೆಎಸ್‌ಸಿಎ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದರು.

‘ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ನಿಯಮಗಳು ಈ ಟೂರ್ನಿಗೂ ಅನ್ವಯಿಸಲಿವೆ. ಲೀಗ್, ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಉದ್ಘಾಟನೆಯು ಮೈಸೂರಿನಲ್ಲಿ ನಡೆಯಲಿದ್ದು ಒಟ್ಟು 18 ಪಂದ್ಯಗಳು ಅಲ್ಲಿ ನಡೆಯಲಿವೆ. ಫೈನಲ್ ಪಂದ್ಯವು ಬೆಂಗಳೂರಿನಲ್ಲಿ ನಡೆಯುವುದು’ ಎಂದರು.

‘ತಂಡಗಳ ಆಯ್ಕೆ, ಕೋಚ್‌ ಮತ್ತು ನೆರವು ಸಿಬ್ಬಂದಿ ನಿಯೋಜನೆ ಇತ್ಯಾದಿ ಹೊಣೆಗಳನ್ನ ಕೆಎಸ್‌ಸಿಎ ನಿಭಾಯಿಸಲಿದೆ. ರೋಜರ್‌ ಬಿನ್ನಿ ನೇತೃತ್ವದ ಕ್ರಿಕೆಟ್ ಸಮಿತಿಯು ಮುಖ್ಯ ಕೋಚ್‌ಗಳು, ಸಹಾಯಕ ಕೋಚ್ ಮತ್ತು ಆಯ್ಕೆ ಸಮಿತಿಯನ್ನು ನೇಮಕ ಮಾಡಿದೆ. ಇವುಗಳಲ್ಲಿ ಅನುಭವಿ ಮತ್ತು ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿರುವ ಆಟಗಾರರು ಇದ್ದಾರೆ. ಬಿಗ್‌ಬ್ಯಾಷ್ ಲೀಗ್ ಮಾದರಿ ಅನುಸರಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT