ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡು ವಿರೂಪ ಹುನ್ನಾರದ ಮಾಹಿತಿ ಇರಲಿಲ್ಲ: ಆಸ್ಟ್ರೇಲಿಯಾದ ಬೌಲರ್‌ಗಳು

ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಹೇಳಿಕೆಗೆ ವಿವರಣೆ: ಮಾಜಿ ಆಟಗಾರರ ಮೇಲೆ ಆಕ್ರೋಶ
Last Updated 18 ಮೇ 2021, 11:16 IST
ಅಕ್ಷರ ಗಾತ್ರ

ಸಿಡ್ನಿ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದಲ್ಲಿ ನಡೆದ ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ತಮಗೆ ಮಾಹಿತಿಯೇ ಇರಲಿಲ್ಲ ಎಂದು ಆಸ್ಟ್ರೇಲಿಯಾದ ಪ್ರಮುಖ ಬೌಲರ್‌ಗಳು ಹೇಳಿಕೆ ನೀಡಿದ್ದಾರೆ. ಚೆಂಡು ವಿರೂಪಗೊಳಿಸುವ ಹುನ್ನಾರದ ಬಗ್ಗೆ ತಂಡದ ಬೌಲರ್‌ಗಳಿಗೆ ಮಾಹಿತಿ ಇತ್ತು ಎಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಕ್ಯಾಮರಾನ್ ಬ್ಯಾಂಕ್ರಾಫ್ಟ್‌ ಹೇಳಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ.

ವೇಗಿಗಳಾದ ಪ್ಯಾಟ್ ಕಮಿನ್ಸ್‌, ಜೋಶ್ ಹ್ಯಾಜಲ್‌ವುಡ್‌, ಮಿಷೆಲ್ ಸ್ಟಾರ್ಕ್‌ ಮತ್ತು ಸ್ಪಿನ್ನರ್‌ ನೇಥನ್ ಲಯನ್ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ಬ್ಯಾಂಕ್ರಾಫ್ಟ್ ಹೇಳಿಕೆ ನಿರಾಧಾರ ಎಂದು ಸ್ಪಷ್ಟನೆ ನೀಡಲಾಗಿದೆ. ಕೆಲವು ಪತ್ರಕರ್ತರು ಮತ್ತು ಮಾಜಿ ಆಟಗಾರರಿಂದ ತಂಡದ ಸಮಗ್ರತೆಗೆ ಧಕ್ಕೆಯಾಗಿದೆ. ಆಧಾರ ಇಲ್ಲದ ಆರೋಪಗಳಿಗೆ ಶೀಘ್ರದಲ್ಲೇ ಉತ್ತರ ಕಂಡುಕೊಳ್ಳದೇ ಇದ್ದರೆ ಭವಿಷ್ಯದಲ್ಲಿ ದುಷ್ಪರಿಣಾಮ ಉಂಟಾಗಲಿದೆ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ.

‘2018ರಲ್ಲಿ ಕೇಪ್‌ಟೌನ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೆಂಡಿನ ಮೇಲೆ ಸ್ಯಾಂಡ್‌ಪೇಪ್‌ನಿಂದ ಉಜ್ಜುವ ಹುನ್ನಾರದ ಬಗ್ಗೆ ಇತರ ಬೌಲರ್‌ಗಳಿಗೂ ಮಾಹಿತಿ ಇತ್ತು’ ಎಂದು ‘ದಿ ಗಾರ್ಡಿಯನ್‌’ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಬ್ಯಾಂಕ್ರಾಫ್ಟ್ ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಪ್ರಕರಣದ ಬಗ್ಗೆ ಸಮರ್ಪಕವಾಗಿ ತನಿಖೆ ಮಾಡುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲವಾಗಿದೆ ಎಂದು ಮಾಜಿ ಆಟಗಾರರಾದ ಮೈಕೆಲ್ ಕ್ಲರ್ಕ್‌ ಮತ್ತು ಆ್ಯಡಂ ಗಿಲ್‌ಕ್ರೈಸ್ಟ್‌ ದೂರಿದ್ದರು.

ಫೀಲ್ಡಿಂಗ್ ಮಾಡುತ್ತಿದ್ದ ಬ್ಯಾಂಕ್ರಾಫ್ಟ್‌ ಹಳದಿ ಬಣ್ಣದ ಸ್ಯಾಂಡ್‌ಪೇಪರ್‌ನ ತುಂಡೊಂದನ್ನು ಪ್ಯಾಂಟಿನ ಜೇಬಿನಲ್ಲಿ ಅಡಗಿಸಿಡುವ ದೃಶ್ಯ ಕ್ಯಾಮರಾಗಳಲ್ಲಿ ಸೆರೆಯಾಗುವುದರೊಂದಿಗೆ ಪ್ರಕರಣ ಬಯಲಾಗಿತ್ತು. ಅಂದು ತಂಡದ ನಾಯಕರಾಗಿದ್ದ ಸ್ಟೀವ್ ಸ್ಮಿತ್ ಮತ್ತು ಉಪನಾಯಕರಾಗಿದ್ದ ಡೇವಿಡ್ ವಾರ್ನರ್‌ ಅವರನ್ನು ತಲಾ ಒಂದು ವರ್ಷ ನಿಷೇಧಿಸಲಾಗಿತ್ತು. ಬ್ಯಾಂಕ್ರಾಫ್ಟ್ ಮೇಲೆ ಒಂಬತ್ತು ತಿಂಗಳ ನಿಷೇಧ ಹೇರಲಾಗಿತ್ತು. ಡ್ಯಾರೆನ್ ಲೆಹ್ಮನ್ ಕೋಚ್ ಹುದ್ದೆ ತೊರೆದಿದ್ದರು.

ಹೊಸ ಮಾಹಿತಿ ಏನೂ ಇಲ್ಲ: ಬ್ಯಾಂಕ್ರಾಫ್ಟ್‌

ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಬಳಿ ಹೊಸ ಮಾಹಿತಿ ಏನೂ ಇಲ್ಲ ಎಂದು ಕ್ಯಾಮರಾನ್ ಬ್ಯಾಂಕ್ರಾಫ್ಟ್ ಕ್ರಿಕೆಟ್ ಆಸ್ಟ್ರೇಲಿಯಾಗೆ ತಿಳಿಸಿದ್ದಾರೆ. ಸಂದರ್ಶನದಲ್ಲಿ ಅವರು ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿತ್ತು.

‘ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವ ಬ್ಯಾಂಕ್ರಾಫ್ಟ್ ಸೋಮವಾರ ರಾತ್ರಿಯೇ ಉತ್ತರ ನೀಡಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಹಂಚಿಕೊಳ್ಳಲು ವಿಶೇಷವಾಗಿ ಯಾವ ಮಾಹಿತಿಯೂ ಇಲ್ಲ ಎಂದಿದ್ದಾರೆ’ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT