ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾಕ್ಕೆ ಸುಲಭ ತುತ್ತಾಗುವುದೇ ಅಫ್ಗಾನ್‌?

ಡೇವಿಡ್‌ ವಾರ್ನರ್‌, ಸ್ಟೀವ್ ಸ್ಮಿತ್‌ ಮೇಲೆ ಎಲ್ಲರ ಕಣ್ಣು: ಫಿಂಚ್‌–ನೈಬ್‌ಗೆ ನಾಯಕತ್ವದ ಪರೀಕ್ಷೆ
Last Updated 31 ಮೇ 2019, 19:30 IST
ಅಕ್ಷರ ಗಾತ್ರ

ಲಂಡನ್‌: ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ಈ ಬಾರಿ ಪ್ರಶಸ್ತಿ ಉಳಿಸಿಕೊಳ್ಳುವ ಛಲದಲ್ಲಿದ್ದು ಈ ಹಾದಿಯಲ್ಲಿ ಗೆಲುವಿನ ಮುನ್ನುಡಿ ಬರೆಯಲು ಕಾತರವಾಗಿದೆ.

ಶನಿವಾರ ನಡೆಯುವ ಹೋರಾಟದಲ್ಲಿ ಆ್ಯರನ್‌ ಫಿಂಚ್‌ ಬಳಗವು ಗುಲ್ಬದೀನ್‌ ನೈಬ್‌ ಮುಂದಾಳತ್ವದ ಅಫ್ಗಾನಿಸ್ತಾನ ಎದುರು ಆಡಲಿದ್ದು ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ. ಫಿಂಚ್‌ ಮತ್ತು ನೈಬ್‌ ಇದೇ ಮೊದಲ ಸಲ ವಿಶ್ವಕಪ್‌ನಲ್ಲಿ ತಂಡಗಳನ್ನು ಮುನ್ನಡೆಸುತ್ತಿದ್ದಾರೆ. ಇಬ್ಬರ ನಾಯಕತ್ವದ ಪರೀಕ್ಷೆಗೂ ಈ ಪಂದ್ಯ ವೇದಿಕೆಯಾಗಿದೆ.

ಚೆಂಡು ವಿರೂಪ ಪ್ರಕರಣದಲ್ಲಿ ಭಾಗಿಯಾಗಿ ಒಂದು ವರ್ಷ ನಿಷೇಧ ಶಿಕ್ಷೆ ಪೂರೈಸಿರುವ ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ಮೇಲೆ ಈಗ ಎಲ್ಲರ ಗಮನ ನೆಟ್ಟಿದೆ.

ಎಡಗೈ ಬ್ಯಾಟ್ಸ್‌ಮನ್‌ ವಾರ್ನರ್‌, ಈ ಸಲದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಅತಿ ಹೆಚ್ಚು ರನ್‌ ಗಳಿಸಿದ ಸಾಧನೆ ಮಾಡಿದ್ದರು. ಸ್ಮಿತ್‌ ಅವರು ಹೋದ ವಾರ ನಡೆದಿದ್ದ ಇಂಗ್ಲೆಂಡ್‌ ಎದುರಿನ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಉತ್ತಮ ಲಯದಲ್ಲಿರುವ ಈ ಜೋಡಿ ಅಫ್ಗಾನ್‌ ಬೌಲಿಂಗ್‌ ದಾಳಿಯನ್ನು ದೂಳೀಪಟ ಮಾಡಲು ಉತ್ಸುಕವಾಗಿದೆ.

ಐದು ಬಾರಿ ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡಿರುವ ಆಸ್ಟ್ರೇಲಿಯಾ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ವಾರ್ನರ್‌ ಮತ್ತು ನಾಯಕ ಫಿಂಚ್‌ ಹಾಕಿಕೊಡುವ ಭದ್ರ ಬುನಾದಿಯ ಮೇಲೆ ರನ್‌ ಸೌಧ ನಿರ್ಮಿಸುವ ಸಾಮರ್ಥ್ಯ ಉಸ್ಮಾನ್‌ ಖ್ವಾಜಾ, ಶಾನ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಅಲೆಕ್ಸ್‌ ಕೇರಿ ಅವರಿಗಿದೆ.

ಮಾರ್ಕಸ್‌ ಸ್ಟೊಯಿನಿಸ್‌, ಪ್ಯಾಟ್‌ ಕಮಿನ್ಸ್‌, ಮಿಷೆಲ್‌ ಸ್ಟಾರ್ಕ್‌ ಅವರೂ ರನ್‌ ಹೊಳೆ ಹರಿಸಬಲ್ಲರು. ಇವರನ್ನು ಕಟ್ಟಿಹಾಕಲು ಅಫ್ಗಾನ್‌ ತಂಡದ ಬೌಲರ್‌ಗಳು ಯಾವ ಬಗೆಯ ರಣನೀತಿ ಹೆಣೆಯುತ್ತಾರೆ ಎಂಬ ಕುತೂಹಲ ಗರಿಗೆದರಿದೆ.

ಸ್ಟಾರ್ಕ್‌, ಕೇನ್‌ ರಿಚರ್ಡ್‌ಸನ್‌, ಕಮಿನ್ಸ್‌ ಅವರು ತಂಡದ ವೇಗದ ಬೌಲಿಂಗ್‌ ವಿಭಾಗದ ಶಕ್ತಿಯಾಗಿದ್ದಾರೆ. ಆ್ಯಡಮ್‌ ಜಂಪಾ, ನೇಥನ್‌ ಲಯನ್‌ ಮತ್ತು ಮ್ಯಾಕ್ಸ್‌ವೆಲ್‌ ಅವರು ಸ್ಪಿನ್‌ ಅಸ್ತ್ರಗಳನ್ನು ಪ್ರಯೋಗಿಸಿ ಅಫ್ಗಾನ್‌ ಬ್ಯಾಟ್ಸ್‌ಮನ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

ಅಫ್ಗಾನ್‌ ಕೂಡಾ ಗೆಲುವಿನ ಭರವಸೆಯಲ್ಲಿದೆ.

ವಿಶ್ವಕಪ್‌ ಆರಂಭಕ್ಕೆ ಎರಡು ತಿಂಗಳು ಬಾಕಿ ಇದ್ದಾಗ ತಂಡದಲ್ಲಿ ಹಲವು ಬದಲಾವಣೆ ಮಾಡಲಾಗಿತ್ತು. ಅಸ್ಗರ್‌ ಅಫ್ಗಾನ್‌ ಬದಲು ಗುಲ್ಬದೀನ್‌ ನೈಬ್‌ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ಈ ಕುರಿತು ಟೀಕೆಗಳೂ ವ್ಯಕ್ತವಾಗಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ತಂಡ ಉತ್ತಮ ಸಾಮರ್ಥ್ಯ ತೋರುತ್ತಿದೆ. ನೈಬ್‌ ಪಡೆ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಆಘಾತ ನೀಡಿದ್ದು ಇದಕ್ಕೆ ಸಾಕ್ಷಿ.

ಐಪಿಎಲ್‌ನಲ್ಲಿ ಆಡಿದ ಅನುಭವ ಹೊಂದಿರುವ ರಶೀದ್‌ ಖಾನ್‌, ಮೊಹಮ್ಮದ್‌ ನಬಿ, ಮುಜೀಬ್‌ ಉರ್‌ ರೆಹಮಾನ್‌ ಅವರು ಈ ತಂಡದ ಶಕ್ತಿ ಹೆಚ್ಚಿಸಿದ್ದಾರೆ.

ಮೊಹಮ್ಮದ್‌ ಶೆಹಜಾದ್‌, ಹಜರತ್‌ ಉಲ್ಲಾ ಜಜಾಯ್‌, ರಹಮತ್‌ ಶಾ, ಹಸಮತ್‌ ಉಲ್ಲಾ ಶಾಹಿದಿ ಮತ್ತು ಶಮಿವುಲ್ಲಾ ಶಿನ್ವಾರಿ ಅವರ ಬ್ಯಾಟಿಂಗ್‌ ಬಲವೂ ತಂಡಕ್ಕಿದೆ. ಇವರು ಅಭ್ಯಾಸ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು.ವಿಶ್ವಕಪ್‌ನಲ್ಲಿ ಉಭಯ ತಂಡಗಳು ಒಮ್ಮೆ ಮುಖಾಮುಖಿಯಾಗಿದ್ದು ಆಸ್ಟ್ರೇಲಿಯಾ 1–0 ಗೆಲುವಿನ ದಾಖಲೆ ಹೊಂದಿದೆ.

ಆರಂಭ: ಸಂಜೆ 6ಕ್ಕೆ.

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT