ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಆಸೀಸ್ 200ಕ್ಕೆ ಆಲೌಟ್; ಭಾರತದ ಗೆಲುವಿಗೆ ಬೇಕು 70 ರನ್

Last Updated 29 ಡಿಸೆಂಬರ್ 2020, 5:23 IST
ಅಕ್ಷರ ಗಾತ್ರ

ಮೆಲ್ಬರ್ನ್: ಇಲ್ಲಿನ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 200 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಇದರೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಲು ಭಾರತ ಗೆಲುವಿಗಾಗಿ 70 ರನ್ ಗಳಿಸಬೇಕಾದ ಅಗತ್ಯವಿದೆ.

ನಾಲ್ಕನೇ ದಿನದಾಟದಲ್ಲೂ ಆಸೀಸ್ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳನ್ನು ಕಾಡಿದರು. 6 ವಿಕೆಟ್‌ಗೆ 133 ರನ್‌ಗಳೊಡನೆ ಆಟ ಮುಂದುವರಿಸಿದ ಬ್ಯಾಟಿಂಗ್ ಮುಂದುವರಿಸಿದ ಆಸೀಸ್‌ನ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಷ್ಟು ಸುಲಭದಲ್ಲಿ ಸೋಲೊಪ್ಪಿಕೊಳ್ಳುವ ಮನಸ್ಥಿತಿಯಲ್ಲಿರಲಿಲ್ಲ. ಏಳನೇ ವಿಕೆಟ್ ಪಡೆಯಲು ಭಾರತೀಯ ಬೌಲರ್‌ಗಳು ಸಾಕಷ್ಟು ಬೆವರಿಳಿಸಬೇಕಾಯಿತು.

ಕ್ಯಾಮರೂನ್ ಗ್ರೀನ್ ಹಾಗೂ ಪ್ಯಾಟ್ ಕಮಿನ್ಸ್ ಏಳನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಕೊನೆಗೂ ಈ ಜೋಡಿಯನ್ನು ಜಸ್‌ಪ್ರೀತ್ ಬೂಮ್ರಾ ಬೇರ್ಪಡಿಸಿದರು. 103 ಎಸೆತಗಳನ್ನು ಎದುರಿಸಿದ ಕಮಿನ್ಸ್ ಒಂದು ಬೌಂಡರಿ ನೆರವಿನಿಂದ 22 ರನ್ ಗಳಿಸಿದರು.

ಇನ್ನೊಂದೆಡೆ ಯುವ ಬ್ಯಾಟ್ಸ್‌ಮನ್ ಕ್ಯಾಮರೂನ್ ಗ್ರೀನ್ ಸಹ ತಮ್ಮ ಹೋರಾಟವನ್ನು ಮುಂದುವರಿಸಿದರು. ಇವರನ್ನು ಹೊರದಬ್ಬಿದ ಮೊಹಮ್ಮದ್ ಸಿರಾಜ್ ಭಾರತೀಯ ಪಾಳೇಯದಲ್ಲಿ ಮಂದಹಾಸ ಬೀರಿದರು. 146 ಎಸೆತಗಳನ್ನು ಎದುರಿಸಿದ ಗ್ರೀನ್ ಐದು ಬೌಂಡರಿಗಳಿಂದ 45 ರನ್ ಗಳಿಸಿ ಅರ್ಧಶತಕ ವಂಚಿತವಾದರು.

ನಥನ್ ಲಿಯನ್ (3), ಜೋಶ್ ಹ್ಯಾಜಲ್‌ವುಡ್ (10) ಮತ್ತು ಮಿಚೆಲ್ ಸ್ಟಾರ್ಕ್ (14*) ತಮ್ಮಿಂದಾಗುವ ಕೊಡುಗೆಯನ್ನಿತ್ತರು. ಇದರೊಂದಿಗೆ 103.1 ಓವರ್‌ಗಳಲ್ಲಿ 200 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತ ಪರ ಪ್ರಭಾವಿ ಎನಿಸಿಕೊಂಡಿರುವ ಮೊಹಮ್ಮದ್ ಸಿರಾಜ್ ಮೂರು ಮತ್ತು ಜಸ್‌ಪ್ರೀತ್ ಬೂಮ್ರಾ, ಆರ್. ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ ಎರಡುವಿಕೆಟ್‌ಗಳನ್ನು ಕಬಳಿಸಿದರು.

ಈ ಮೊದಲು ಆಸ್ಟ್ರೇಲಿಯಾ 195 ರನ್‌ಗಳಿಗೆ ಉತ್ತರವಾಗಿ ಭಾರತ ತಂಡವು ನಾಯಕ ಅಜಿಂಕ್ಯ ರಹಾನೆ ಆಕರ್ಷಕ ಶತಕ (112) ಹಾಗೂ ರವೀಂದ್ರ ಜಡೇಜ ಅರ್ಧಶತಕದ (57) ಬೆಂಬಲದೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್ ಪೇರಿಸಿತ್ತು. ಈ ಮೂಲಕ 131 ರನ್‌ಗಳ ಮಹತ್ವದ ಮುನ್ನಡೆ ದಾಖಲಿಸಿತ್ತು.

ಇದಕ್ಕೂ ಮೊದಲು ಮೊದಲ ದಿನದಾಟದಲ್ಲಿ ಜಸ್‌ಪ್ರೀತ್ ಬೂಮ್ರಾ (56ಕ್ಕೆ 4), ರವಿಚಂದ್ರನ್ ಅಶ್ವಿನ್ (35ಕ್ಕೆ 3) ಮತ್ತು ಡೆಬ್ಯು ವೇಗಿ ಮೊಹಮ್ಮದ್ ಸಿರಾಜ್ (40ಕ್ಕೆ 2) ನಿಖರ ಬೌಲಿಂಗ್ ನೆರವಿನಿಂದ ಆತಿಥೇಯರನ್ನು 195 ರನ್‌ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT