ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಸ್ಬೇನ್‌ ಟೆಸ್ಟ್‌: ಗೆಲುವಿನತ್ತ ಆಸ್ಟ್ರೇಲಿಯಾ ದಾಪುಗಾಲು

ಮಾರ್ನಸ್‌ ಲಾಬುಚಾನ್‌ ಭರ್ಜರಿ ಶತಕ
Last Updated 23 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಬ್ರಿಸ್ಬೇನ್‌, ಆಸ್ಟ್ರೇಲಿಯಾ (ಎಎಫ್‌ಪಿ): ಬ್ಯಾಟ್‌ನಿಂದಲೂ, ಚೆಂಡಿನಿಂದಲೂ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯಾ ತಂಡ ಮೊದಲ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿತು. ಶನಿವಾರ, ಮೂರನೇ ದಿನದ ಆಟದ ನಂತರ ಆತಿಥೇಯರು 1–0 ಮುನ್ನಡೆ ಹಾದಿಯಲ್ಲಿ ‌‌ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

ಡೇವಿಡ್‌ ವಾರ್ನರ್‌ (154) ಅವರ ನಂತರ ಮಾರ್ನಸ್‌ ಲಾಬುಚಾನ್‌ (185) ಕೂಡ ಭರ್ಜರಿ ಶತಕ ದಾಖಲಿಸಿ, ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 580 ರನ್‌ಗಳ ಭಾರಿ ಮೊತ್ತ ಪೇರಿಸಲು ನೆರವಾದರು. ಪಾಕ್‌ ಮೊದಲ ಇನಿಂಗ್ಸ್‌ನಲ್ಲಿ 240 ರನ್‌ ಗಳಿಸಿತ್ತು.

ಮೂರನೇ ದಿನದಾಟ ಮುಗಿದಾಗ ಪ್ರವಾಸಿ ತಂಡ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 64 ರನ್‌ ಗಳಿಸಿ ಕುಂಟುತಿತ್ತು. ಆಸ್ಟ್ರೇಲಿಯಾಕ್ಕೆ ಮತ್ತೆ ಬ್ಯಾಟಿಂಗ್‌ ಮಾಡಿಸಬೇಕಾದರೆ ಪಾಕ್‌ ಇನ್ನೂ 276 ರನ್‌ ಗಳಿಸಬೇಕಾಗಿದೆ.

ವಾರ್ನರ್‌ ಅವರನ್ನು ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಡಿಸಿ ಔಟ್‌ ಮಾಡುವ ಮೂಲಕ, 16 ವರ್ಷದ ವೇಗಿ ನಸೀಮ್‌ ಷಾ ಟೆಸ್ಟ್‌ನಲ್ಲಿ ಮೊದಲ ವಿಕೆಟ್‌ ಪಡೆದರು. ಕ್ರೀಸ್‌ಗೆ ಬಂದ ಇನ್ನೊಬ್ಬ ಅಪಾಯಕಾರಿ ಆಟಗಾರ ಸ್ಟೀವನ್‌ ಸ್ಮಿತ್‌ ಬೌಂಡರಿಯೊಡನೆ ಇನಿಂಗ್ಸ್‌ ಆರಂಭಿಸಿದಾಗ ಪಾಕ್‌ ಪಾಳಯ ಢವಗುಟ್ಟಿತ್ತು. ಆದರೆ ಲೆಗ್‌ ಸ್ಪಿನ್ನರ್‌ ಯಾಸಿರ್‌ ಷಾ ಅವರನ್ನು ಬೌಲ್ಡ್‌ ಮಾಡಿದರು. ವಿಶೇಷ ಎಂದರೆ ಆರು ಟೆಸ್ಟ್ ಪಂದ್ಯಗಳಲ್ಲಿ ಏಳನೇ ಬಾರಿ ಸ್ಮಿತ್‌ ಅವರನ್ನು ಯಾಸಿರ್‌ ಬಲೆಗೆ ಕೆಡವಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ಆ್ಯಷಸ್‌ ಸರಣಿಯ ಎರಡನೇ ಟೆಸ್ಟ್‌ನಲ್ಲಿ ಸ್ಟೀವನ್‌ ಸ್ಮಿತ್‌ ಗಾಯಾಳಾಗಿ ಟೆಸ್ಟ್‌ ಇತಿಹಾಸದ ಮೊದಲ ‘ಕಂಕಷನ್‌ ಸಬ್‌ಸ್ಟಿಟ್ಯೂಟ್‌’ ಆಗಿದ್ದ ಲಾಬುಚಾನ್‌ ನಾಲ್ಕು ಅರ್ಧ ಶತಕಗಳನ್ನು ದಾಖಲಿಸಿದ್ದರು. ಇಲ್ಲಿ 25 ವರ್ಷದ ಆಟಗಾರ ಮೊದಲ ಬಾರಿ ಅರ್ಧ ಶತಕವನ್ನು ಭರ್ಜರಿ ಶತಕವಾಗಿ ಪರಿವರ್ತಿಸಿದರು. 279 ಎಸೆತಗಳನ್ನು ಎದುರಿಸಿ 20 ಬೌಂಡರಿ ಬಾರಿಸಿದರು.

ಸ್ಕೋರುಗಳು: ಪಾಕಿಸ್ತಾನ: 240 ಮತ್ತು 3 ವಿಕೆಟ್‌ಗೆ 64 (ಷಾನ್‌ ಮಸೂದ್‌ ಬ್ಯಾಟಿಂಗ್‌ 27, ಬಾಬರ್ ಆಜಂ ಬ್ಯಾಟಿಂಗ್ 20; ಸ್ಟಾರ್ಕ್ 25ಕ್ಕೆ2, ಕಮಿನ್ಸ್ 16ಕ್ಕೆ1); ಆಸ್ಟ್ರೇಲಿಯಾ: 580 (ವಾರ್ನರ್‌ 154, ಲಾಬುಚಾನ್‌ 185, ಮ್ಯಾಥ್ಯೂ ವೇಡ್‌ 60, ಟ್ರಾವಿಸ್‌ ಹೆಡ್‌ 24; ಯಾಸಿರ್‌ ಷಾ 205ಕ್ಕೆ4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT