ಸೋಮವಾರ, ಆಗಸ್ಟ್ 15, 2022
22 °C

ಇಂಗ್ಲೆಂಡ್ ವಿರುದ್ಧ ಜಯಭೇರಿ ಮೊಳಗಿಸಿ ಅಗ್ರಸ್ಥಾನಕ್ಕೇರಿದ ಆಸ್ಟ್ರೇಲಿಯಾ

ಎಪಿ Updated:

ಅಕ್ಷರ ಗಾತ್ರ : | |

Prajavani

ಸೌತಾಂಪ್ಟನ್: ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿದ ಪ್ರವಾಸಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಎದುರಿನ ಮೂರನೇ ಹಾಗೂ ಅಂತಿಮ ಟ್ವೆಂಟಿ–20 ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿ ಸಮಾಧಾನಪಟ್ಟುಕೊಂಡಿತು. 

ರೋಸ್‌ಬೌಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ವಿಕೆಟ್ ಕೀಪರ್ ಜಾನಿ ಬೇಸ್ಟೊ (55; 44 ಎಸೆತ, 3 ಸಿಕ್ಸರ್, 3 ಬೌಂಡರಿ) ಅವರ ಅರ್ಧಶತಕದ ಹೊರತಾಗಿಯೂ ಆತಿಥೇಯರಿಗೆ ಆರು ವಿಕೆಟ್‌ಗಳಿಗೆ 145 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. 

ಗುರಿ ಬೆನ್ನತ್ತಿದ ಆ್ಯರನ್ ಫಿಂಚ್ ಬಳಗ 19.3 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 146 ರನ್ ಗಳಿಸಿತು. ಫಿಂಚ್ ಮತ್ತು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಮೊದಲ ವಿಕೆಟ್‌ಗೆ 31 ರನ್ ಸೇರಿಸಿದರು. ವೇಡ್ ಔಟಾದ ನಂತರ ನಾಯಕನ ಜೊತೆಗೂಡಿದ ಮಾರ್ಕಸ್ ಸ್ಟೊಯಿನಿಸ್ 39 ರನ್‌ಗಳ ಜೊತೆಯಾಟ ಆಡಿದರು. 

ನಂತರ ಟಾಮ್ ಕರನ್ ಮತ್ತು ಆದಿಲ್ ರಶೀದ್ ಅವರ ಪರಿಣಾಮಕಾರಿ ದಾಳಿಯಿಂದಾಗಿ ಸತತ ವಿಕೆಟ್‌ಗಳನ್ನು ಕಳೆದುಕೊಂಡ ತಂಡ 13ನೇ ಓವರ್ ಮುಕ್ತಾಯಗೊಂಡಾಗ ಐದು ವಿಕೆಟ್‌ಗಳಿಗೆ 100 ರನ್ ಎಂಬ ಸ್ಥಿತಿಗೆ ತಲುಪಿತು. ಆದರೆ ಮಿಷೆಲ್ ಮಾರ್ಶ್ ಮತ್ತು ಆ್ಯಷ್ಟನ್ ಅಗರ್ 46 ರನ್‌ಗಳ ಜೊತೆಯಾಟದ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಸರಣಿ 2–1ರಲ್ಲಿ ಇಂಗ್ಲೆಂಡ್ ಪಾಲಾಯಿತು.  

ಭಾನುವಾರ ನಡೆದಿದ್ದ ಎರಡನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಇಂಗ್ಲೆಂಡ್ ಟ್ವೆಂಟಿ–20 ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೆ ಏರಿತ್ತು. ಅದನ್ನು ಉಳಿಸಿಕೊಳ್ಳಬೇಕಾದರೆ ಈ ಪಂದ್ಯದಲ್ಲಿ ಜಯ ಗಳಿಸಬೇಕಾಗಿತ್ತು. ಆದರೆ ತಂಡದ ಸವಾಲನ್ನು ಮೆಟ್ಟಿನಿಂತ ಆಸ್ಟ್ರೇಲಿಯಾ ಪಂದ್ಯ ಗೆಲ್ಲುವುದರೊಂದಿಗೆ ಅಗ್ರಸ್ಥಾನವನ್ನು ಮತ್ತೆ ತನ್ನದಾಗಿಸಿಕೊಂಡಿತು. 

ವೇಗಿಗಳಾದ ಮಿಷೆಲ್ ಸ್ಟಾರ್ಕ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರ ದಾಳಿಗೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಜಾನಿ ಬೇಸ್ಟೊ ಒಬ್ಬರೇ ಪ್ರತಿರೋಧ ತೋರಿದರು. ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್ ತಲಾ ನಾಲ್ಕು ಓವರ್‌ಗಳಲ್ಲಿ ಕ್ರಮವಾಗಿ 20 ಮತ್ತು 23 ರನ್ ನೀಡಿದರು. ಇಬ್ಬರೂ ಒಂದೊಂದು ವಿಕೆಟ್ ಉರುಳಿಸಿದರು. ಅಂತಿಮ ಓವರ್‌ಗಳಲ್ಲಿ ಜೋ ಡೆನ್ಲಿ ಮಿಂಚಿ 19 ಎಸೆತಗಳಲ್ಲಿ 29 ರನ್ ಗಳಿಸಿದರು. 

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 20 ಓವರ್‌ಗಳಲ್ಲಿ 6ಕ್ಕೆ 145 (ಜಾನಿ ಬೇಸ್ಟೊ 55, ಡೇವಿಡ್ ಮಲಾನ್ 21, ಮೊಯಿನ್ ಅಲಿ 23, ಜೋ ಡೆನ್ಲಿ 29; ಮಿಷೆಲ್ ಸ್ಟಾರ್ಕ್ 20ಕ್ಕೆ1, ಜೋಶ್ ಹ್ಯಾಜಲ್‌ವುಡ್ 23ಕ್ಕೆ1, ಕೇನ್ ರಿಚರ್ಡ್ಸನ್ 31ಕ್ಕೆ1, ಆ್ಯಷ್ಟನ್ ಅಗರ್ 35ಕ್ಕೆ1, ಆ್ಯಡಂ ಜಂಪಾ 34ಕ್ಕೆ2); ಆಸ್ಟ್ರೇಲಿಯಾ: 19.3 ಓವರ್‌ಗಳಲ್ಲಿ 5ಕ್ಕೆ 146 (ಮ್ಯಾಥ್ಯೂ ವೇಡ್ 14, ಆ್ಯರನ್ ಫಿಂಚ್ 39, ಮಾರ್ಕಸ್ ಸ್ಟೊಯಿನಿಸ್ 26, ಮಿಷೆಲ್ ಮಾರ್ಶ್ ಔಟಾಗದೆ 39, ಆ್ಯಷ್ಟನ್ ಅಗರ್ ಔಟಾಗದೆ 16). ಫಲಿತಾಂಶ: ಆಸ್ಟ್ರೇಲಿಯಾಗೆ 5 ವಿಕೆಟ್ ಜಯ; ಇಂಗ್ಲೆಂಡ್‌ಗೆ 2–1ರಲ್ಲಿ ಸರಣಿ ಗೆಲುವು. ಪಂದ್ಯಶ್ರೇಷ್ಠ: ಮಿಷೆಲ್ ಮಾರ್ಶ್ (ಆಸ್ಟ್ರೇಲಿಯಾ). ಸರಣಿಯ ಶ್ರೇಷ್ಠ ಆಟಗಾರ: ಜೋಸ್ ಬಟ್ಲರ್ (ಇಂಗ್ಲೆಂಡ್). 

ಉಭಯ ತಂಡಗಳ ಏಕದಿನ ಸರಣಿ ಸೆಪ್ಟೆಂಬರ್ 11ರಂದು ಮ್ಯಾಂಚೆಸ್ಟರ್‌ನಲ್ಲಿ ಆರಂಭ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು