ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC | AUS vs PAK: ಪಾಕ್ ಓಟಕ್ಕೆ ತಡೆಯೊಡ್ಡುವ ಛಲ

ಬಾಬರ್ ಆಜಂ–ಆ್ಯರನ್ ಫಿಂಚ್‌ ಬಳಗದ ಸೆಮಿಫೈನಲ್ ಮುಖಾಮುಖಿ ನಾಳೆ
Last Updated 10 ನವೆಂಬರ್ 2021, 11:26 IST
ಅಕ್ಷರ ಗಾತ್ರ

ದುಬೈ: ಆಲ್‌ರೌಂಡ್ ಆಟದ ಮೂಲಕ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯ ಸೂಪರ್ 12 ಹಂತದ ಎಲ್ಲ ಪಂದ್ಯಗಳನ್ನು ಗೆದ್ದುಕೊಂಡಿರುವ ಪಾಕಿಸ್ತಾನಕ್ಕೆ ಸೆಮಿಫೈನಲ್‌ನಲ್ಲಿ ಗುರುವಾರ ಆಸ್ಟ್ರೇಲಿಯಾ ಸವಾಲೊಡ್ಡಲಿದೆ.

ಡೇವಿಡ್ ವಾರ್ನರ್ ಒಳಗೊಂಡ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವಿಭಾಗ ಲಯ ಕಂಡುಕೊಂಡಿರುವುದು ಮತ್ತು ಲೆಗ್ ಸ್ಪಿನ್ನರ್‌ ಆ್ಯಡಂ ಜಂಪಾ ಬೌಲಿಂಗ್‌ನಲ್ಲಿ ಮಿಂಚುತ್ತಿರುವುದು ಆ್ಯರನ್ ಫಿಂಚ್‌ ಬಳಗದಲ್ಲಿ ಭರವಸೆ ಮೂಡಿಸಿದೆ. ಸೂಪರ್ 12ರ ಎಲ್ಲ ಪಂದ್ಯಗಳಲ್ಲಿ ಭಾರತವೂ ಒಳಗೊಂಡಂತೆ ಎದುರಾಳಿಗಳನ್ನು ಮಣಿಸಿರುವುದು ಪಾಕಿಸ್ತಾನ ತಂಡದಲ್ಲಿ ನಿರೀಕ್ಷೆ ಗರಿಗೆದರುವಂತೆ ಮಾಡಿದೆ.

ನಾಲ್ಕು ಪಂದ್ಯಗಳಲ್ಲಿ ಗೆದ್ದು ರನ್ ರೇಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕುವ ಮೂಲಕ ಆಸ್ಟ್ರೇಲಿಯಾ ಸೆಮಿಫೈನಲ್‌ ಪ್ರವೇಶಿಸಿತ್ತು. 2012ರ ಬಳಿಕ ಈ ತಂಡ ಆಡಲಿರುವ ನಾಲ್ಕರ ಘಟ್ಟದ ಮೊದಲ ಹಣಾಹಣಿ ಇದು.

ಹ್ಯಾಟ್ರಿಕ್ ಸೇರಿದಂತೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಒಮ್ಮೆಯೂ ಪ್ರಶಸ್ತಿ ಗೆದ್ದುಕೊಂಡಿಲ್ಲ.

ಆರಂಭಿಕ ಬ್ಯಾಟರ್‌ ಡೇವಿಡ್ ವಾರ್ನರ್ ಮೊದಲ ಪಂದ್ಯಗಳಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಿರಲಿಲ್ಲ. ಆದರೆ ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿ ಕ್ರಮವಾಗಿ 89 ಮತ್ತು 65 ರನ್ ಕಲೆ ಹಾಕಿ ಟೀಕಾಕಾರರಿಗೆ ಉತ್ತರ ನೀಡಿದ್ದರು. ಸೆಮಿಫೈನಲ್‌ನಲ್ಲಿ ಶಹೀನ್ ಶಾ ಅಫ್ರಿದಿ ನೇತೃತ್ವದ ಪ್ರಬಲ ವೇಗದ ದಾಳಿಯನ್ನು ಎದುರಿಸುವ ಸವಾಲು ಅವರ ಮುಂದೆ ಇದೆ.

ಆ್ಯಡಂ ಜಂಪಾ ಸ್ಪಿನ್ ದಾಳಿಗೆ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್ ಮತ್ತು ಶೋಯೆಬ್ ಮಲಿಕ್ ಅವರು ಹೇಗೆ ಉತ್ತರಿಸುತ್ತಾರೆ ಎಂಬುದು ಕೂಡ ಈ ಪಂದ್ಯದಲ್ಲಿ ಕುತೂಹಲ ಕೆರಳಿಸಿದೆ. ಪಾಕಿಸ್ತಾನದ ಬ್ಯಾಟಿಂಗ್‌ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್‌ ಮ್ಯಾಥ್ಯೂ ಹೇಡನ್ ಇದ್ದಾರೆ ಎಂಬುದು ಕೂಡ ಕುತೂಹಲದ ಸಂಗತಿ.

‍ಪಾಕಿಸ್ತಾನದ ಆರಂಭಿಕ ಜೋಡಿ ಬಾಬರ್ ಆಜಂ ಮತ್ತು ಮೊಹಮ್ಮದ್ ರಿಜ್ವಾನ್‌ ಟೂರ್ನಿಯಲ್ಲಿ ಅಮೋಘ ಆಟವಾಡಿದ್ದಾರೆ. ಭಾರತ ಎದುರಿನ ಪಂದ್ಯದಲ್ಲಿ 152 ರನ್‌ಗಳ ಜೊತೆಯಾಟದ ಮೂಲಕ 10 ವಿಕೆಟ್‌ಗಳ ಜಯಕ್ಕೆ ಅವರು ಕಾರಣರಾಗಿದ್ದರು. ಆಸಿಫ್ ಅಲಿ ರೂಪದಲ್ಲಿ ತಂಡಕ್ಕೆ ಉತ್ತಮ ಫಿನಿಷರ್ ಕೂಡ ಲಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT