ಮಂಗಳವಾರ, ಜನವರಿ 28, 2020
23 °C
ನ್ಯೂಜಿಲೆಂಡ್‌ ಎದುರಿನ ಮೂರನೇ ಟೆಸ್ಟ್‌: ಆಸ್ಟ್ರೇಲಿಯಾ ಬಿಗಿ ಹಿಡಿತ

ಸಿಡ್ನಿಯಲ್ಲಿ ಗರ್ಜಿಸಿದ ‘ಲಯನ್‌’

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸಿಡ್ನಿ: ಆಫ್‌ ಸ್ಪಿನ್ನರ್‌ ನೇಥನ್‌ ಲಯನ್‌ ಭಾನುವಾರ ಸಿಡ್ನಿ ಮೈದಾನದಲ್ಲಿ ಗರ್ಜಿಸಿದರು. ಅವರ ದಾಳಿಯ ಎದುರು ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್‌ಗಳು ಪರದಾಡಿದರು.

ಲಯನ್‌ ಅವರ ಸ್ಪಿನ್ ಮೋಡಿಯ ಬಲದಿಂದ ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.

ವಿಕೆಟ್‌ ನಷ್ಟವಿಲ್ಲದೆ 63ರನ್‌ಗಳಿಂದ ಮೂರನೇ ದಿನದಾಟ ಮುಂದುವರಿಸಿದ ಟಾಮ್‌ ಲಥಾಮ್‌ ಸಾರಥ್ಯದ ನ್ಯೂಜಿಲೆಂಡ್‌, ಮೊದಲ ಇನಿಂಗ್ಸ್‌ನಲ್ಲಿ 95.4 ಓವರ್‌ಗಳಲ್ಲಿ 251ರನ್‌ಗಳಿಗೆ ಆಲೌಟ್‌ ಆಯಿತು.

ಲಯನ್‌ 68ರನ್‌ಗಳಿಗೆ 5 ವಿಕೆಟ್‌ ಉರುಳಿಸಿ ಗಮನ ಸೆಳೆದರು. ಪ್ಯಾಟ್‌ ಕಮಿನ್ಸ್‌ (44ಕ್ಕೆ3) ಕೂಡಾ ಪ್ರವಾಸಿ ಪಡೆಯ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು.

ದ್ವಿತೀಯ ಇನಿಂಗ್ಸ್‌ ಶುರುಮಾಡಿರುವ ಆಸ್ಟ್ರೇಲಿಯಾ ದಿನದಾಟದ ಅಂತ್ಯಕ್ಕೆ 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 40ರನ್‌ ಗಳಿಸಿದೆ. ಇದರೊಂದಿಗೆ ಒಟ್ಟು ಮುನ್ನಡೆಯನ್ನು 243ಕ್ಕೆ ಹೆಚ್ಚಿಸಿಕೊಂಡಿದೆ.

ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ ತಂಡ ಶನಿವಾರದ ಮೊತ್ತಕ್ಕೆ ಐದು ರನ್‌ ಸೇರಿಸುವಷ್ಟರಲ್ಲಿ ಟಾಮ್‌ ಬ್ಲಂಡಲ್‌ (34; 105ಎ, 4ಬೌಂ) ವಿಕೆಟ್‌ ಕಳೆದುಕೊಂಡಿತು. ದಿನದ ಐದನೇ ಓವರ್‌ನಲ್ಲಿ ವಿಕೆಟ್ ಪಡೆದ ಲಯನ್‌ ಸಂಭ್ರಮಿಸಿದರು.

ನಾಯಕ ಲಥಾಮ್‌ (49; 133ಎ, 4ಬೌಂ) ಮತ್ತು ಜೀತ್‌ ರಾವಲ್‌ (31; 58ಎ, 4ಬೌಂ) ಎರಡನೇ ವಿಕೆಟ್‌ಗೆ 49ರನ್‌ ಸೇರಿಸಿದ್ದರಿಂದ ತಂಡದ ಮೊತ್ತ ಶತಕದ ಗಡಿ ದಾಟಿತು. ಮೂರು ಎಸೆತಗಳ ಅಂತರದಲ್ಲಿ ಇವರಿಬ್ಬರೂ ಪೆವಿಲಿಯನ್‌ ಸೇರಿದ್ದರಿಂದ ಕಿವಿಸ್‌ ಬಳಗದ ಮೇಲೆ ಆತಂಕ ಆವರಿಸಿತ್ತು.

ಚೊಚ್ಚಲ ಟೆಸ್ಟ್‌ ಆಡುತ್ತಿರುವ ಗ್ಲೆನ್‌ ಫಿಲಿಪ್ಸ್‌ (52; 115ಎ, 6ಬೌಂ, 1ಸಿ) ಅರ್ಧಶತಕ ದಾಖಲಿಸಿ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಅವರಿಗೆ ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಹೀಗಾಗಿ ತಂಡ ಅಲ್ಪ ಮೊತ್ತಕ್ಕೆ ಕುಸಿಯಿತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌: 150.1 ಓವರ್‌ಗಳಲ್ಲಿ 454 ಮತ್ತು 16 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 40 (ಡೇವಿಡ್‌ ವಾರ್ನರ್‌ ಬ್ಯಾಟಿಂಗ್‌ 23, ಜೋ ಬರ್ನ್ಸ್‌ ಬ್ಯಾಟಿಂಗ್‌ 16).

ನ್ಯೂಜಿಲೆಂಡ್‌: ಪ್ರಥಮ ಇನಿಂಗ್ಸ್‌; 95.4 ಓವರ್‌ಗಳಲ್ಲಿ 251 (ಟಾಮ್‌ ಲಥಾಮ್‌ 49, ಟಾಮ್‌ ಬ್ಲಂಡಲ್‌ 34, ಜೀತ್ ರಾವಲ್‌ 31, ರಾಸ್‌ ಟೇಲರ್‌ 22, ಗ್ಲೆನ್‌ ಫಿಲಿಪ್ಸ್‌ 52, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 20, ಟಾಡ್‌ ಆ್ಯಷ್ಲೆ ಔಟಾಗದೆ 25; ಮಿಷೆಲ್‌ ಸ್ಟಾರ್ಕ್‌ 57ಕ್ಕೆ1, ಪ್ಯಾಟ್‌ ಕಮಿನ್ಸ್‌ 44ಕ್ಕೆ3, ನೇಥನ್‌ ಲಯನ್‌ 68ಕ್ಕೆ5).

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು